Friday, 18th October 2024

Ravi Hunz: ತಿರಸ್ಕರಿಸಿದ್ದು ಏನನ್ನು, ಸೇರಿದ್ದು ಯಾವುದನ್ನು?

ಬಸವ ಮಂಟಪ

ರವಿ ಹಂಜ್

(ಭಾಗ – ೧)

ಲಿಂಗಾಯತ ಧರ್ಮ ವೀರಶೈವವಲ್ಲ, ಹಿಂದೂ ಅಲ್ಲ” ಎನ್ನುವ ನವ್ಯ ಲಿಂಗಾಯತರು ತಮ್ಮೆಲ್ಲ ವಾದಗಳಿಗೆ ಸ್ಪೂರ್ತಿ ಮಾನ್ಯ ಮಾದರಿ ವ್ಯಕ್ತಿಯಲ್ಲದೆ ಆಕರ, ಪುರಾವೆ, ಮತ್ತೆಲ್ಲಕ್ಕೂ ಕರುನಾಡಿನ ಸಂಶೋ ಧನಾಪ್ರಜ್ಞೆ ಡಾ.ಎಂ.ಎಂ.ಕಲಬುರ್ಗಿಯವರ ಸಂಶೋಧನೆಗಳ ಕಡೆ ಬೆರಳು ತೋರುತ್ತಾರೆ. ಅವರ ಪುರಾವೆಗಳಲ್ಲಿನ ತಪ್ಪುಗಳನ್ನು ಈ ಹಿಂದೆಯೇ ತೋರಿಸಿದ್ದೇನಷ್ಟೇ. ಈಗ ಅವರ ಇನ್ನಷ್ಟು ಸಂಶೋಧನೆಗಳ ಸ್ವಲ್ಪವೇ ಸ್ವಲ್ಪ ಆಳಕ್ಕಿಳಿದು ಅವುಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸೋಣ.

ನಾಡಿನ ಖ್ಯಾತ ಸಂಶೋಧಕರಾದ ಪ್ರೊ. ಎಂ.ಎಂ.ಕಲಬುರ್ಗಿಯವರು ತಮ್ಮ ‘ವೀರಶೈವದ ಇತಿಹಾಸ ಮತ್ತು
ಭೂಗೋಲ’ ಕೃತಿಯ ‘ಜಗದಾಚಾರ್ಯ (ಪಂಚಾಚಾರ್ಯ) ಸಂಪ್ರದಾಯದ ಮೂಲ ಮತ್ತು ಬೆಳವಣಿಗೆ’ ಅಧ್ಯಾಯ ದಲ್ಲಿ “ಭಾರತದಲ್ಲಿ ಶಿವೋಪಾಸನೆ ತುಂಬಾ ಹಳೆಯದು. ಇವರಲ್ಲಿ ವೈದಿಕ ಶೈವಬ್ರಾಹ್ಮಣರು, ಆಗಮಿಕ ಶೈವ ಬ್ರಾಹ್ಮಣರು ಎಂಬ ಎರಡು ಬಗೆಯ ಬ್ರಾಹ್ಮಣರು ಕಂಡುಬರುತ್ತಾರೆ. ಕಾಶ್ಮೀರ ಮೂಲದ ಈ ಆಗಮಿಕ ಶೈವ ಬ್ರಾಹ್ಮಣರಲ್ಲಿ ಪಾಶುಪತ, ನಕುಲೀಶ (ಕಾಳಾಮುಖ), ಕಾಪಾಲಿಕ, ಶುದ್ಧಶೈವವೆಂಬ ನಾಲ್ಕು ಶಾಖೆಗಳಿದ್ದು, ಇವುಗಳಲ್ಲಿಯ ಶುದ್ಧಶೈವವು ವೈದಿಕದ ಶ್ರೇಷ್ಠತೆಯನ್ನು ಅಗತ್ಯಮೀರಿ ಒಪ್ಪಿಕೊಂಡ ಕಾರಣ, ಇದು ಶೈವರ ಭಕ್ತಿ, ವೈದಿಕರ ಕರ್ಮಗಳ ಮಿಶ್ರಶಾಖೆ ಎನಿಸಿತು.

ಈ ಶುದ್ಧಶೈವ ಬ್ರಾಹ್ಮಣ ಸಂಪ್ರದಾಯದ ಬಾಲಕ ಬಸವಣ್ಣ ತನ್ನ ಮನೆಯಲ್ಲಿ ಜರುಗುತ್ತಲಿದ್ದ ಈ ಬಗೆಯ ಭಕ್ತಿ ಮತ್ತು ಕರ್ಮಗಳ ಮಿಶ್ರಣದ ಆಚರಣೆಗೆ ಜುಗುಪ್ಸೆಗೊಂಡು, ಆ ಧರ್ಮ ಬಿಟ್ಟು ಬರುವಾಗ ಜನಿವಾರ ತಿರಸ್ಕರಿಸಿದ ನೆಂದರೆ, ಅದನ್ನು ಇಡಿಯಾಗಿ ತಿರಸ್ಕರಿಸಿದನೆಂದೇ ಅರ್ಥ. ಹೀಗೆ ತಿರಸ್ಕರಿಸಿ ಹೊರಬಂದು, ನಾಥಪಂಥವನ್ನು ಸೇರಿ, ಬೆಳಕಿನಲ್ಲಿ ಹೊಸಬಗೆಯ ಭಕ್ತಿ ಮಾರ್ಗದ ಲಿಂಗಾಯತ ಹೆಸರಿನ ಧರ್ಮವನ್ನು ಸ್ಥಾಪಿಸಿದನು. ಕೇವಲ ‘ಸೋಹಂ’ ಸಿದ್ಧಾಂತಕ್ಕೆ ನಿಂತಿದ್ದ ಭಾರತೀಯ ತತ್ತ್ವಜ್ಞಾನವನ್ನು ‘ದಾಸೋಹಂ’ ಸಿದ್ಧಾಂತವೆಂಬ ಸಮಾಜವಾದಿ ತತ್ತ್ವಜ್ಞಾನ ದವರೆಗೆ ವಿಸ್ತರಿಸಿದನು” ಎಂದಿದ್ದಾರೆ.

ಅಂದರೆ ಎಂ.ಎಂ.ಕಲಬುರ್ಗಿಯವರ ಪ್ರಕಾರ, ಬಸವಮೂಲ ಭಾರತದ ಒಂದು ಸನಾತನ ಶೈವಪಂಥ ಎಂದಾ ಯಿತು. ವೀರಶೈವರನ್ನು ‘ಲಿಂಗಿ ಬ್ರಾಹ್ಮಣರು’ ಎನ್ನುತ್ತಿದ್ದರು ಎಂದು ಇವರೇ ಹೇಳಿರುವ ಪ್ರಕಾರವೂ ಬಸವಣ್ಣನ ಮೂಲ ವೀರಶೈವ ಎಂದಾಯಿತು. ಆದರೆ ಅವರು ಇನ್ನೊಂದೆಡೆ ಹೇಳುವಂತೆ ಬಸವಣ್ಣನ ಹುಟ್ಟುಜಾತಿ ಇಂದಿನ ಜಾತಿ ಪದ್ಧತಿಯ ಬ್ರಾಹ್ಮಣ ಎನ್ನುವುದಕ್ಕೆ ಪುರಾಣದ ವಿನಾ ಯಾವುದೇ ಸಂಶೋಧನಾ-ಮಾನ್ಯ ಪುರಾವೆಗಳಿಲ್ಲ.

ಬಸವಣ್ಣನ ಕುರಿತಿರುವ ಸಂಶೋಧನಾ-ಮಾನ್ಯ ಪುರಾವೆಗಳಾದ ಅರ್ಜುನವಾಡ ಮತ್ತು ಮುನವಳ್ಳಿ ಶಿಲಾಶಾಸನ ಗಳು ಬಸವಣ್ಣನು ಕಾಳಾಮುಖ ಮಾಹೇಶ್ವರ ಜಂಗಮ ಎನ್ನುತ್ತವೆ. ಇನ್ನು ಅವರೇ ಮೇಲೆ ತಿಳಿಸಿದಂತೆ, “…ಬಸವಣ್ಣನು ತಿರಸ್ಕರಿಸಿ ಹೊರಬಂದು, ನಾಥಪಂಥವನ್ನು ಸೇರಿ, ಬೆಳಕಿನಲ್ಲಿ ಹೊಸಬಗೆಯ ಭಕ್ತಿಮಾರ್ಗದ ಲಿಂಗಾಯತ ಹೆಸರಿನ ಧರ್ಮವನ್ನು ಸ್ಥಾಪಿಸಿದನು” ಎಂದರೆ ಹುಟ್ಟು ಶೈವಪಂಥದ ಬಸವಣ್ಣನು ಶೈವಪಂಥವನ್ನು ತ್ಯಜಿಸಿ ಮತ್ತದೇ ಸನಾತನ ಶೈವಪಂಥದ ನಾಥಪಂಥವನ್ನು ಅಪ್ಪಿ ಒಪ್ಪಿ ಅದನ್ನು ಸುಧಾರಿಸಿ ವಿಸ್ತರಿಸಿದನು ಎಂದಾಯಿತು.

ಅಲ್ಲಿಗೆ ಬಸವಣ್ಣನು ತಿರಸ್ಕರಿಸಿದ್ದು ಯಾವುದನ್ನು? ಸೇರಿದ್ದು ಯಾವುದನ್ನು? ಸುಧಾರಿಸಿದ್ದು ಯಾವುದನ್ನು? ಬೆಳಕಿನಲ್ಲಿ ಸ್ಥಾಪಿಸಿದ್ದು ಯಾವುದನ್ನು? ಆ ಬೆಳಕು ಯಾವುದು? “ಸುವ್ವಿ ಬಾ ಸಂಗಯ್ಯಾ ಸುವ್ವಿ ಬಾ ಸಂಗಯ್ಯಾ… ಎಲ್ಲಿಗೆ ಬಂತು ಸಂಗಯ್ಯ? ಇಲ್ಲಿಗೆ ಬಂತು ಸಂಗಯ್ಯ!” ಎಂದಂತೆ ಬಸವಮೂಲ 360 ಡಿಗ್ರಿ ಸುತ್ತಿ ಮತ್ತದೇ ಸನಾತನ ಶೈವಕ್ಕೆ ಬಂದಿತು.

ಈಗ ಅವರ ಇದೇ ಪುಸ್ತಕದ ‘ಪಂಚಾಚಾರ್ಯಪೀಠಗಳು ಬಸವೋತ್ತರ ಕಾಲೀನವು’ ಎಂಬ ಅಧ್ಯಾಯವನ್ನು ಗಮನಿ
ಸೋಣ. ಇದರಲ್ಲಿ ಕಲಬುರ್ಗಿಯವರು, “…ಈ ನಾಲ್ಕು ಪೀಠಗಳಲ್ಲಿ ಮೂರು ಪೀಠಗಳು ಕೇದಾರ, ಶ್ರೀಶೈಲ, ಉಜೈನಿ ಗಳಲ್ಲಿ ನೆಲೆ ನಿಂತರೆ, ಕೆಳದಿಯ ಶೈವ ಅರಸರ ನೆರವನ್ನು ಬಯಸಿ ರೇವಣಾರಾಧ್ಯಪೀಠವು ಆ ರಾಜ್ಯದ ರಂಭಾಪುರಿಗೆ ನಡೆಯಿತು. ಈ ರಂಭಾಪುರಿ ಕ್ಷೇತ್ರ ಮೂಲತಃ ನಾಥ ಸಂಪ್ರದಾಯಕ್ಕೆ ಸೇರಿದ್ದಿತು. ಮುಕ್ತಿಮುನಿನಾಥ, ದಿಗಂಬರ ಮುಕ್ತಿಮುನಿನಾಥರು (‘ನಾಥ’ ಗಮನಿಸಿರಿ) ಇದರ ಪ್ರವರ್ತಕರೆಂದು ಚೆನ್ನಬಸವ ಪುರಾಣ ತಿಳಿಸುತ್ತದೆ. ಇವರ ಉತ್ತರಾಧಿಕಾರಿ ಕುಮಾರಚೆನ್ನಬಸವ.

ಇವರೆಲ್ಲರ ಶಾಸನಗಳು 15-16ನೇ ಶತಮಾನಕ್ಕೆ ಸಂಬಂಧಿ ಸಿರುವ ಕಾರಣ ಅಲ್ಲಿ ಈ ಕಾಲದವರೆಗೆ ನಾಥಪೀಠ ಅಸ್ತಿತ್ವದಲ್ಲಿದ್ದಿತೆಂದೂ, ಬಳಿಕ ರಂಭಾಪುರಿ ಪೀಠದವರು ಇದನ್ನು ವಶಪಡಿಸಿಕೊಂಡರೆಂದೂ ಸ್ಪಷ್ಟವಾಗುತ್ತದೆ (ನೋಡಿ: ಬಾಳೆಹಳ್ಳಿಯಲ್ಲಿ ರಂಭಾಪುರಿ ಪೀಠ ಸ್ಥಾಪನೆಯ ಕಾಲ; ಮಾರ್ಗ-3. ಪು-299). ಮೇಲೆ ಹೇಳಿದ ಕುಮಾರ ಚೆನ್ನಬಸವನು ತನ್ನ ‘ಬಸವಪುರಾಣದ ಶರಣರ ಕಥೆಗಳು’ ಕೃತಿಯಲ್ಲಿ ತನ್ನ ಪೀಠಪರಂಪರೆಯ ಮುಕ್ತಿಮುನಿ ನಾಥನನ್ನು, ಕಲ್ಯಾಣದ ಶರಣರನ್ನು ನೆನೆದಿರುವನೇ ಹೊರತು ರೇವಣಾರಾಧ್ಯನನ್ನು ನೆನೆದಿಲ್ಲ.

ಇದೆಲ್ಲವನ್ನು ನೋಡಿದರೆ ಕುಮಾರಚೆನ್ನಬಸವನ ಕಾಲದವರೆಗೂ ರೇವಣಾರಾಧ್ಯಪೀಠ ರಂಭಾಪುರಿಯಲ್ಲಿ
ಅಸ್ತಿತ್ವಕ್ಕೆ ಬಂದಿಲ್ಲವೆಂದು ಖಚಿತವಾಗಿ ಹೇಳಬಹುದು. ಹೀಗಿದ್ದೂ ಪಂಚಾಚಾರ್ಯ ಪೀಠಗಳಿಗೆ ಬಸವಪೂರ್ವದ
ಕಾಲಮಾನವನ್ನು ಕಲ್ಪಿಸುವ ಉದ್ದೇಶದಿಂದ ಅನೇಕ ಕೃತಕ ಆಕರಗಳನ್ನು ಸೃಷ್ಟಿಸಲಾಗಿದೆ” ಎನ್ನುತ್ತಾರೆ.
“ಮುಕ್ತಿಮುನಿನಾಥ, ದಿಗಂಬರ ಮುಕ್ತಿಮುನಿನಾಥರು (‘ನಾಥ’ ಗಮನಿಸಿರಿ)” ಎಂಬ ದಿವ್ಯ ಹೊಳಹನ್ನು ಹಿಡಿದು
ಕಲಬುರ್ಗಿಯವರು ಬಸವನು ಹೇಗೆ ತಾನು ಸೇರಿದ ನಾಥಪಂಥವನ್ನು ಸುಧಾರಿಸಿ ತನ್ನದೇ ಆದ ಲಿಂಗಾಯತ ಧರ್ಮವನ್ನು ಸ್ಥಾಪಿಸಿದನು ಎಂದಿzರೆಯೋ ಅಂತೆಯೇ ನಾಥಪಂಥದ ಪೀಠವೊಂದನ್ನು ರಂಭಾಪುರಿ ಪೀಠದವರು
ವಶಪಡಿಸಿಕೊಂಡರು ಎನ್ನುತ್ತಾರೆ.

ಇಲ್ಲಿ ‘ಬಸವಪ್ರಿಯ ಪ್ರೊಫೆಸರರು’ ಬಸವಣ್ಣ ನಾಥಪಂಥವನ್ನು ಸುಧಾರಿಸಿದ ಎಂಬುದು, ‘ವೀರಶೈವದ್ವೇಷಿ’ಯಾಗಿ ರಂಭಾಪುರಿ ಪೀಠದ ವರು ನಾಥಪೀಠವನ್ನು ವಶಪಡಿಸಿಕೊಂಡರು ಎಂಬುದು ಗಮನಿಸಬೇಕಾದ ಸಂಶೋಧಕರ ಪೂರ್ವಗ್ರಹ ಅಂಶ. ಅವರು ಇಲ್ಲಿ ತಮ್ಮ ಸಂಶೋಧನೆಗೆ ಆಕರವಾಗಿ ಚೆನ್ನಬಸವ ‘ಪುರಾಣ’ವನ್ನು ಪರಿಗಣಿಸಿರುವ ಕಾರಣ ಅದರಲ್ಲಿ ಏನಿದೆ ಎಂದು ನೋಡೋಣ.

ವಿರೂಪಾಕ್ಷ ಪಂಡಿತ ಎಂಬ ಕಾವ್ಯನಾಮದ (?) ಪಂಡಿತಾರಾಧ್ಯನು ‘ಚೆನ್ನಬಸವ ಪುರಾಣ’ದ ಕರ್ತೃ. ಈತನ
ಕಾಲ 16ನೇ ಶತಮಾನ. ನಿಖರವಾಗಿ 1506ರಲ್ಲಿ ಇವನು ಈ ಕಾವ್ಯವನ್ನು ಬರೆದಿದ್ದಾನೆ ಎಂದೇ ಕೆಲವು ಸಂಶೋ ಧಕರು ಹೇಳುತ್ತಾರೆ. ನಡುಗನ್ನಡದ ಈ ಪುರಾಣವನ್ನು ಹೊಸಗನ್ನಡಕ್ಕೆ ಗದ್ಯಾನುವಾದಿಸಿರುವವರು ಎಂ.ಚಂದ್ರಶೇಖರ್. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು 1979ರಲ್ಲಿ ಮುದ್ರಿಸಿದೆ.

ಈ ಅವತರಣಿಕೆಯ ಮುನ್ನುಡಿಯಲ್ಲಿ ವಿ.ಕೃ.ಗೋಕಾಕ್ ಅವರು, “ಈ ಪುರಾಣವು ಸಾಹಿತ್ಯಿಕವಾಗಿ ವಿಶಿಷ್ಟ ಎನ್ನಿಸುವುದು ಇದರ ಕಥಾಹಂದರದ ಶೈಲಿಯಿಂದಾಗಿ ಎಂದು ಕನ್ನಡ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿzರೆ. …12- 13ನೇ ಶತಮಾನದಲ್ಲಿ ಆರಂಭವಾದ ಷಟ್ಪದಿ ಪ್ರಕಾರಗಳಲ್ಲಿ ‘ಭಾಮಿನಿ ವಾರ್ಧಕ ಷಟ್ಪದಿ’ಗಳು ಕವಿಪ್ರಿಯ ವಾದವು ಮತ್ತು ಜನಪ್ರಿಯವೂ ಆದವು. ಭಾಮಿನಿಗೆ ಕುಮಾರವ್ಯಾಸ, ವಾರ್ಧಕಕ್ಕೆ ರಾಘವಾಂಕ, ಲಕ್ಷ್ಮೀಶರು ಒಡೆಯರಾದರು.

ಅವರಂತೆಯೇ ವಾರ್ಧಕ ಷಟ್ಪದಿಯನ್ನು ಬಳಸಿಕೊಂಡ ಮತ್ತೊಬ್ಬ ಕವಿ ವಿರೂಪಾಕ್ಷ ಪಂಡಿತ. ಅವನ ಕಾವ್ಯ
ಚೆನ್ನಬಸವ ಪುರಾಣ” ಎನ್ನುತ್ತ ಈ ಕಾವ್ಯವು, “ಸಿದ್ಧರಾಮನಿಗೆ ಚೆನ್ನಬಸವಣ್ಣನು ಶಿವನ ಲೀಲಾ ಮಹಾತ್ಮ್ಯವನ್ನು
ಹೇಳುವ ಕಥಾ ವಿವರಣೆ, ಶಿವನ ಬಹುವಿಧ ಲೀಲೆಗಳು ಇಲ್ಲಿನ ಪುರಾಣ ವಸ್ತು” ಎಂದಿದ್ದಾರೆ. ಅಂದರೆ ಚೆನ್ನ
ಬಸವಣ್ಣನು ತನ್ನ ವರ್ತಮಾನ ಕಾಲದಲ್ಲಿ ಕಲ್ಯಾಣ ಕ್ರಾಂತಿಯ ಅವಸಾನದ ನಂತರ ಸಿದ್ಧರಾಮನನ್ನು ತನ್ನೊಟ್ಟಿಗೆ
ಕುಳ್ಳಿರಿಸಿಕೊಂಡು ಎಂದೋ ನಡೆದು ಹೋದ ಪುರಾತನರ ಮಹಿಮೆಯ ಪುರಾಣವನ್ನು ಹೇಳಿದ್ದಾನೆ.

ಅಂದರೆ ಇದರ ಕಥಾವಸ್ತುವು ಆತನ ಕಾಲಮಾನಕ್ಕಿಂತ ‘ಎಷ್ಟೋ’ ವರ್ಷಗಳ ಹಿಂದಿನ ಸಂಕಥನ ಎಂದಾಗುತ್ತದೆಯೇ ಹೊರತು ಚೆನ್ನಬಸ ವಣ್ಣನ ಮುಂದಿನ 2 ಶತಮಾನಗಳ ನಂತರದ ಕಥೆಯಂತೂ ಅಲ್ಲವೇ ಅಲ್ಲ ಎಂದಾಗುತ್ತದೆ. ಒಂದು ವೇಳೆ ಇದು ಎಲ್ಲರಿಗೂ ಚಿರಪರಿಚಿತವಿರುವ ಚೆನ್ನಬಸವಣ್ಣ-ಸಿದ್ಧರಾಮ ಅಲ್ಲದಿದ್ದರೆ ಆಗ ಇದು ಬೇರೆಯದೇ ಸಂಕಥನ ಆಗುತ್ತದೆ. ಆದರೆ ಕಲಬುರ್ಗಿ ಯವರೂ ಸೇರಿದಂತೆ ಎ ಸಂಶೋಧಕರೂ ಇದು ಬಸವ ಸಮಕಾಲೀನರಾದ ಚೆನ್ನಬಸವಣ್ಣ- ಸಿದ್ಧರಾಮರದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಈ ಸ್ಪಷ್ಟನೆ ಏಕೆಂದರೆ ಈ ನವ್ಯ ಲಿಂಗಾ ಯತರು ತಮಗೊಪ್ಪದ ಸತ್ಯವನ್ನು ಪ್ರಕ್ಷೇಪವೆಂದೂ ಆಯಾಯ ವ್ಯಕ್ತಿಗಳನ್ನು ಕಾಲ್ಪನಿಕ ಎಂದೂ ತಳ್ಳಿ ಹಾಕುವ ಕಾರಣದಿಂದಾಗಿದೆ.

(ಮುಂದುವರಿಯುವುದು)
(ಲೇಖಕರು ಶಿಕಾಗೋ ನಿವಾಸಿ ಮತ್ತು ಸಾಹಿತಿ)

ಇದನ್ನೂ ಓದಿ: Ravi Hunj Column: ಎಲ್ಲಾ ಕಿಲುಬನ್ನು ತೊಳೆವ ಕಾಲ ಈಗ ಬಂದಿದೆ…