Saturday, 23rd November 2024

Ravi Hunz Column: ಪ್ರತ್ಯೇಕ ಧರ್ಮ ಕೇಳುತ್ತೇವೆ ಎನ್ನುವುದು ಬಸವ ರಾಜಕಾರಣ !

ಬಸವ ಮಂಟಪ

ರವಿ ಹಂಜ್

(ಭಾಗ – 2)

ಪ್ರೊ.ಎಂ.ಎಂ. ಕಲಬುರ್ಗಿಯವರು ಆಕರವಾಗಿ ಉಲ್ಲೇಖಿಸಿರುವ ‘ನಾಥ’ ಎನ್ನುವ, ಮುಕ್ತಿಮುನಿ ಎನ್ನುವ ವ್ಯಕ್ತಿಯ ಚಿತ್ರಣ ಚೆನ್ನಬಸವ ಪುರಾಣದ ೬೨ನೆಯ ಸಂಧಿಯಲ್ಲಿ ಪುಟ 435ರಿಂದ 437ರವರೆಗೆ ಬರುವ ಕಾವ್ಯಗಳಲ್ಲಿ ವರ್ಣಿಸ ಲಾಗಿದೆ. ಅದರ ಸಂಪೂರ್ಣ ನಡುಗನ್ನಡ ಪಾಠ ಹೀಗಿದೆ: 36. ಅಕ್ಕ ನಾಗಾಂಬಿಕೆಯು ಸಹವಾಗಿ ನಾವಲ್ಲಿ ಮಿಕ್ಕ ಶರಣರನಿರದೆ ನಿರವಯವನೈದಿಸಿ ಬಳಿಕ್ಕಾವು ನಿರವಯವನ್ಶೆ ದು ವೆವು ಸಿದ್ಧ ರಾಮೇಶ ನೀಂ ಕೇಳ್ವುದಿನ್ನು ಲಕ್ಕದಿಂ ಮೇಲೆ ತೊಂಬತ್ತಾರು ಸಾವಿರದ ಲೆಕ್ಕದಿಂ ಮಿಗಿಲಾದ ಜಂಗಮಂ ಚರಿಸುವೊಡೆ ದಿಕ್ಕುದಿಕ್ಕಿಗೆ ಪೋಪರುಳಿದ ಚರಪತಿಗಳೇ ಕಲ್ಯಾಣಕ್ಕೆ ತರುವರು.

37. ಬಂದನಿಬರತಿಗೋಪ್ಯದಿಂದಿರುತೆ ರುದ್ರಮುನಿ ತಂದೆ ತನ್ನಯ ಶಿಷ್ಯ ಮುಕ್ತಿಮುನಿಯೊಡನೆ ನೀ ನಿಂದೈದಿ ಸಕಲದೇಶಂಗಳಂ ಚರಿಸುತುಂ ದುಷ್ಪಪರವಾದಿಗಳನು ಕೊಂದು ಶರಣರ ಪೊರೆವುದೆಂದುಸಿರಿ ಕಳುಹಲಾನಂದ ದಿಂದ ಖಿಳದೇಶಂಗಳಂ ಚರಿಸುತಾ ನಿಂದು ಶ್ರೀಗಿರಿಯ ಸಿಂಹಾಸನದೆ ಸಕಲ ಸದ್ಭಕ್ತರಂ ಪಾಲಿಸುವನು.

38. ಇರುತಲೈವತ್ತಾರು ದೇಶಕ್ಕೆ ತಾವು ಸದ್ವರಗಣಾಚಾರಿಗಳ ಕಳುಹಿ ತಮ್ಮಾಜ್ಞೆಯಿಂದಿರದೆ ಮಾರಿದರ ಕೈಯಿಂದ ಲಪರಾಧಕಾಣೈಗಳ ತಾಂ ತರಿಸಿಕೊಳುತೆ ಪರವಾದಿಗಳನಿರದೆ ಸಂಹರಿಸುತಾಗಲತಿ ಹರುಪದಿಂದಿರಲತ್ತ ಮಲೆ ರಾಜ್ಯದೊಳ್ ದುರುಳ ದೊರೆ ಜೈನರೇ ಪೆರ್ಚಿ ಶಿವಮತವ ಜರೆದು ವೀರೇಶನಂ ಕಿತ್ತು ಬಿಸುಡೆ.

39. ಈ ವಾರ್ತೆಯಂ ಕೇಳ್ದು ಬಳಿಕಲಾ ಮುಕ್ತಿಮುನಿ ದೇವರಾಜಾತಭಿಕ್ಷಾವರ್ತಿಯೆಂದೆಂಬ ದೇವರ್ಗೆ ಪಟ್ಟಮಂ ಕಟ್ಟಿ ಕಾಣ್ಕೆಯನ್ನಿತ್ತು ತನ್ನ ಪರಶಿಷ್ಯನಾದ ಕೋವಿದ ದಿಗಂಬರ ಸುಮುಕ್ತಿ ಮುನಿಯೆಂದೆಂಬ ದೇವರಂ ಕರೆದು ನೀನೀಗ ಮಲೆರಾಜ್ಯದೊಳ್ ತೀವಿರ್ದ ಪರವಾದಿಗಳನಿರದೆ ಸಂಹರಿಸು ಹೋಗೆಂದು ಪೇಳ್ದು ತಾವು.

40. ಮಲ್ಲಿಕಾರ್ಜುನಲಿಂಗದಲ್ಲಿ ನಿರವಯವಾಗೆ ನಿಲ್ಲದೆ ದಿಗಂಬರ ಸುಮುಕ್ತಿಮುನಿಚರಪತಿಗಳಲ್ಲಿ ಕೆಲಬರ್, ಸಹಿತೆ ಮಲ ದೇಶಕೈತಂದು ಖಾಂಡೆಯದಿ ಬಂದು ನಿಂದು ಖುಲ್ಲ ಪರವಾದಿ ಜೈನರನಿರದೆ ಸಂಹರಿಸಿ ಹಲ್ಲುಗಳ ಕಳೆದು ಮಣುವಿನ ಮೂರು ಖಂಡುಗವನಲ್ಲಿ ಕಣಜಂ ಕಟ್ಟಿ ತುಂಬಿಸುವರೆಲೆ ಸಿದ್ಧರಾಮೇಶ ಕೇಳೆಂದನು.

41. ಬಳಿಕಲ್ಲಿ ವೀರೇಶನಂ ಕಿತ್ತು ಜೈನರಾ ಹೊಳೆಯಲ್ಲಿ ಹಾಯ್ಕಿರಲ್ ತೆಗೆದು ಬಾಳೆಯದೊಂದು ಎಲೆಯದಂಡಿಗೆ ಯ ಮೇಲೊಲಿದು ಬಿಜಯಂಗೆಯ್ಸಿ ತಂದಾಗ ಹೊನ್ನೂರಿನ ಬಳಿಯಲ್ಲಿ ಗುಡಿಯ ಕಟ್ಟಿಸಿ ಪ್ರತಿಷ್ಠಿಸಿ ತಾವು ನೆಲೆಯಾಗಿ ನಿಂದು ದುರ್ಜನರ ಸಂಹರಿಸುವೊಡೆ ಸ್ಥಳಮಿದೀಗೆಂದು ಬಾಳೆಯಹಳ್ಳಿಯೆಂಬ ಪುರಮಂ ಬೇಗ ಕಟ್ಟಿಸುವರು.

42. ಹರುಷದಿಂದಲ್ಲಿ ಸಿಂಹಾಸನಾಸೀನನಾಗಿರುತಾ ದಿಗಂಬರ ಸುಮುಕ್ತಿನಾಥನಾ ಚರಪತಿಗಳರ್ವ ಯೋಗ್ಯರು ನೋಡಿ ಪಟ್ಟವಗಟ್ಟಿ ಬಳಕವರೊಳು ಪರವಾದಿಗಳನಿರದೆ ಸಂಹರಿಸುವುದು ತಮ್ಮ ಶರಣರು ಪಾಲಿಸುವು ದೆಂದುಸುರಿ ತಾವಾಗ ಪರಮ ಶಿವಯೋಗದಿಂ ನಿಜಸಮಾಧಿಯೊಳಿರ್ಪರೆಲೆ ರಾಮ ಕೇಳೆಂದನು. ಇದರ ಗದ್ಯಾನುವಾದ ಹೀಗಿದೆ:

36. ಅಕ್ಕ ನಾಗಲಾಂಬಿಕೆಯೊಡನೆ ಮಿಕ್ಕ ಶರಣರನ್ನು ನಾವು ಬಯಲಾಗಿಸಿ ನಾವೂ ಬಯಲಾಗುವೆವು. ಸಿದ್ಧರಾಮೇಶ್ವರ ನೀನು ಕೇಳು, ಲಕ್ಷ ತೊಂಬತ್ತಾರು ಸಾವಿರ ಲೆಕ್ಕಕ್ಕೂ ಅಧಿಕವಾಗಿ ಜಂಗಮರು ಚದುರಿಹೋಗುವರು. ಉಳಿದವರು ಕಲ್ಯಾಣಕ್ಕೆ ಬರುವರು.

37. ಬಂದ ಅಷ್ಟು ಜನರೂ ಅತಿ ಗೋಪ್ಯವಾಗಿರುತ್ತ ರುದ್ರಮುನಿತಂದೆಯು ತನ್ನ ಶಿಷ್ಯ ಮುಕ್ತಿಮುನಿಯೊಡನೆ ಹೀಗೆನ್ನುವನು, ನೀನು ಈ ದಿನ ಹೊರಟು ಎಲ್ಲ ದೇಶಗಳನ್ನೂ ಸಂಚಾರ ಮಾಡುತ್ತ ದುಷ್ಟರಾದ ಅನ್ಯಮತೀ ಯರನ್ನು ಕೊಂದು ಶರಣರನ್ನು ಕಾಪಾಡು ಎಂದು ಹೇಳಿ ಕಳಿಸಿಕೊಡಲು ಆವನು ಆನಂದದಿಂದ ಅಖಿಲದೇಶಗಳ ಸುತ್ತುತ್ತಾ ಶ್ರೀಗಿರಿಯ ಸಿಂಹಾಸನದಲ್ಲಿ ನಿಂತು ಸಕಲ ಸದ್ಭಕ್ತರನ್ನೂ ಕಾಪಾಡುವನು.

38. ಹೀಗಿರುತ್ತ ಐವತ್ತಾರು ದೇಶಕ್ಕೆ ತಾವು ಶ್ರೇಷ್ಠಗಣಾಚಾರಿಗಳನ್ನು ಕಳಿಸಿ ತಮ್ಮಾಜ್ಞೆಯನ್ನು ಮಾರಿದವರ ಕೈಯಿಂದ ತಪ್ಪು ಕಾಣಿಕೆಗಳನ್ನು ತರಿಸಿಕೊಳ್ಳುತ್ತಾ ಅನ್ಯಮತೀಯರನ್ನು ಸಂಹರಿಸುತ್ತ ಆಗ ಬಹಳ ಸಂತೋಷ ದಿಂದ ಇರಲು ಇತ್ತಕಡೆ ಮಲೆನಾಡಿನಲ್ಲಿ ದುಷ್ಟ ಜೈನದೊರೆಗಳೇ ಆಧಿಕರಾಗಿ ಶಿವಮತವನ್ನು ಹೀಯಾಳಿಸಿ ವೀರೇಶನನ್ನು ಕಿತ್ತು ಬಿಸಾಡಿದರು.

39. ಈ ಸುದ್ದಿಯನ್ನು ಕೇಳಿ ಅನಂತರ ಆ ಮುಕ್ತಿಮುನಿದೇವರು ಅಜಾತ ಭಿಕ್ಷಾವರ್ತಿ ಎಂಬ ದೇವರಿಗೆ ಪಟ್ಟವನ್ನು ಕಟ್ಟಿ ಕಾಣಿಕೆ ಯನ್ನಿತ್ತು ತನ್ನ ಶ್ರೇಷ್ಠ ಶಿಷ್ಯನಾದ ಕೋವಿದ ದಿಗಂಬರ ಸುಮುಕ್ತಿ ಮುನಿಯೆಂಬುವನನ್ನು ಕರೆದು ನೀನೀಗ ಮಲೆನಾಡಿನಲ್ಲಿ ತುಂಬಿರುವ ಅನ್ಯಮತೀಯರನ್ನು ಕೂಡಲೆ ಸಂಹರಿಸು ಹೋಗು ಎಂದು ಹೇಳಿ ತಾವು

40. ಮಲ್ಲಿಕಾರ್ಜುನಲಿಂಗದಲ್ಲಿ ಬಯಲಾಗಲು ದಿಗಂಬರ ಸುಮುಕ್ತಿಮುನಿಯು ಜಂಗಮರು ಕೆಲವರೊಡಗೂಡಿ ಮಲೆನಾಡಿಗೆ ಬಂದು ಖಾಂಡ್ಯವೆಂಬಲ್ಲಿ ನಿಂತು ಕ್ಷುಲ್ಲಕ ಅನ್ಕಮತೀಯರಾದ ಜೈನರನ್ನು ನಾಶಮಾಡಿ ಅವರ ಹಲ್ಲುಗಳನ್ನು ಕಿತ್ತು ಬಂದು ಮಣದ ಮೇಲೆ ಮೂರು ಖಂಡುಗದಷ್ಟು ತೂಕವಿದ್ದ ಕಣಜವನ್ನು ಕಟ್ಟಿ ತುಂಬಿಸು ವರು, ಎಲೆ ಸಿದ್ಧರಾಮೇಶ ಕೇಳು ಎಂದನು.

41. ಆನಂತರ ಆಲ್ಲಿ ವೀರೇಶನನ್ನು ಕಿತ್ತು ಜೈನರು ಹೊಳೆಯಲಿ ಹಾಕಿರಲು ಅದನ್ನು ತೆಗೆದು ಬಾಳೆಎಲೆಯ ಪಲ್ಲಕ್ಕಿಯಲ್ಲಿ ಪ್ರೀತಿಯಿಂದ ಕರೆತಂದು ಹೊನ್ನೂರಿನ ಬಳಿ ಗುಡಿ ಕಟ್ಟಿಸಿ, ಪ್ರತಿಷ್ಠಾಪನೆ ಮಾಡುವರು. ತಾವು ಅ ನೆಲೆನಿಂತು ದುಷ್ಟರನ್ನು ಸಂಹರಿಸಲು ಇದೀಗ ಸರಿಯಾದ ಸ್ಥಳವೆಂದು ಆಲೋಚಿಸಿ ಬಾಳೆಯಹಳ್ಳಿ ಎಂಬ ಊರನ್ನು ಬೇಗನೆ ಕಟ್ಟಿಸುವರು.

42. ಸಂತೋಷದಿಂದ ಅಲ್ಲಿ ಸಿಂಹಾಸನಾರೂಢರಾಗಿರುತ್ತ ಆ ದಿಗಂಬರ ಸುಮುಕ್ತಿ ಮುನಿನಾಥನು ಆ ಜಂಗಮರಲ್ಲಿ ಒಬ್ಬ ಯೋಗ್ಯರನ್ನು ನೋಡಿ ಅವರಿಗೆ ಪಟ್ಟವನ್ನು ಕಟ್ಟಿ ಆನಂತರ ಅವರೊಡನೆ ಅನ್ಯಮತೀಯರನ್ನು ನಾಶಮಾಡಿ ನಮ್ಮ ಶರಣರನ್ನು ಕಾಪಾಡಿ ಎಂದು ಹೇಳಿ ತಾವು ಆಗ ಪರಮಶಿವಯೋಗದಿಂದ ತಮ್ಮ ಸಮಾಧಿಯಲ್ಲಿರುವರು, ಎಲೆ ಸಿದ್ಧರಾಮ ಕೇಳು ಎಂದನು.

ಹೀಗೆ ಕಾವ್ಯವು ಸಾಗುತ್ತಾ ನಂತರದ ಶ್ಲೋಕದಲ್ಲಿ, “… ಶ್ರೇಷ್ಠನಾದ ಸುಮುಕ್ತಿಮುನಿದೇವರ ಆಜ್ಞೆಯಂತೆ ಸುಕುಮಾರ
ಚೆನ್ನಬಸವೇಶ್ವರನು ಶರಣ ಸಮೂಹವನ್ನು ಕಾಪಾಡುತ್ತಾ ಅನ್ಯಮತೀಯರನ್ನು ಸಂಹರಿಸುತ್ತ ಇರಲು ಇತ್ತ ಕಲ್ಯಾಣದಲ್ಲಿ…..” ಎಂದು ವರ್ತಮಾನಕ್ಕೆ ಬರುವನು. ಇಲ್ಲಿ ಚೆನ್ನಬಸವಣ್ಣನು ಆರಂಭದಲ್ಲಿ ತನ್ನ ವರ್ತಮಾನದ ಕಥೆಯನ್ನು ಹೇಳುತ್ತಾ ಪುರಾತನರು ತಮಗೊದಗಿದ್ದ ಇಂಥ ವಿಪ್ಲವ ಸನ್ನಿವೇಶವನ್ನು ಹೇಗೆ ನಿಭಾಯಿಸಿದ್ದರು ಎಂದು ಪುರಾತನರ ಸ್ಪೂರ್ತಿದಾಯಕ ಕಥೆಯನ್ನು ವಿವರಿಸುತ್ತಾನೆ. ಅಂದರೆ ಪುರಾತನರು ಹಾಗೆ ಮಾಡಿದ ಸಿದ್ಧ ನಮೂನೆ ಯಾ ಸ್ಪೂರ್ತಿ ನಮಗೆ ಇರುವ ಕಾರಣ ನಾವು ಅದನ್ನೇ ಇಂದಿನ ವಿಪ್ಲವ ಕಾಲದಲ್ಲಿ ಅನುಸರಿಸಬೇಕು
ಎಂಬ ಉದ್ದೇಶದಿಂದ ಈ ಕಥೆಯನ್ನು ಸಿದ್ಧರಾಮನಿಗೆ ಬೋಧನೆಯ ರೂಪವಾಗಿ ಹೇಳಿದ್ದಾನೆ.

ಚೆನ್ನಬಸವ ಪುರಾಣದ ಈ ಮೇಲಿನ ಪುಟಗಳಲ್ಲಿ ವರ್ತಮಾನ-ಪುರಾತನ ಬೆಸೆಯುವ ಪುರಾಣದ ಶೈಲಿ ಸುಸ್ಪಷ್ಟ ವಾಗಿದೆ. ಆರಂಭದಲ್ಲಿ ಹೇಗೆ ತನ್ನ ವರ್ತಮಾನದ “ಅಕ್ಕ ನಾಗಲಾಂಬಿಕೆಯೊಡನೆ ಮಿಕ್ಕ…” ಎನ್ನುತ್ತ ಸುಮುಕ್ತಿ ಮುನಿಯ ಪುರಾತನ ಕಥೆಗೆ ಅನುವಾದನೋ ಹಾಗೆಯೇ ಕಥೆಯ ಅಂತ್ಯದ ನಂತರ “ಇತ್ತ ಕಲ್ಯಾಣದಲ್ಲಿ…”
ಎನ್ನುತ್ತಾ ವರ್ತಮಾನಕ್ಕೆ ಬರುತ್ತಾನೆ. ಹೀಗೆ ವರ್ತಮಾನಕ್ಕೂ ಪುರಾಣ ಕಥನಕ್ಕೂ ಕಥಾ ಸಂಯೋಜನೆಯನ್ನು ಮಾಡುವ ಕ್ರಿಯಾಶೀಲತೆಯೇ ಇಂದಿನ ದೃಶ್ಯ ಮಾಧ್ಯಮದಲ್ಲಿ ‘ಫ್ಲ್ಯಾಷ್ ಬ್ಯಾಕ್’ ತಂತ್ರವಾಗಿದೆ.

ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣ ನಾಗಲಾಂಬಿಕೆ ಮತ್ತಿತರರ ಜತೆ ಕಲ್ಯಾಣದಿಂದ ಬೇರೆಲ್ಲಿಗೋ ಚರಿಸಿರುವ ವರ್ತಮಾನ, ಸುಮುಕ್ತಿಮುನಿಯ ಪುರಾತನ ಎರಡೂ ಹೇಗೆ ಈ ಕಥಾಶೈಲಿಯಲ್ಲಿ ತಳುಕು ಹಾಕಿ ಕೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ. ಇಡೀ ಚೆನ್ನಬಸವ ಪುರಾಣವು ಇದೇ ಶೈಲಿಯಲ್ಲಿ ಸಾಗುತ್ತದೆ.
ಇರಲಿ, ಈಗ ಘನ ಸಂಶೋಧಕ ಪ್ರೊಫೆಸರರು ಹೇಳಿದ ಮುಕ್ತಿ ಮುನಿ‘ನಾಥ’ ಎನ್ನುವ ವ್ಯಕ್ತಿ ಮೇಲಿನ ಪುರಾಣ ಪ್ರಸಂಗದಲ್ಲಿ ಎಲ್ಲಿದ್ದಾನೆ?!

ಕವಿಯು ಪದ್ಯ 39ರಲ್ಲಿ ಮುಕ್ತಿಮುನಿಯನ್ನು ಮುಕ್ತಿಮುನಿ ‘ದೇವರಾಜ’ ಎಂದು, ಪದ್ಯ 40ರಲ್ಲಿ ಮುಕ್ತಿಮುನಿ ‘ಚರಪತಿ’ ಎಂದು, ಪದ್ಯ 42ರಲ್ಲಿ ಸುಮುಕ್ತಿಮುನಿ‘ನಾಥ’ ಎಂದು ಸಂಬೋಧಿಸಿದ್ದಾನೆ. ಇಲ್ಲಿ ಸುಮುಕ್ತಿಮುನಿಗೆ ದೇವ, ದೇವರು, ದೇವರಾಜ ಎಂಬ ಗೌರವಸೂಚಕಗಳನ್ನು ಸೇರಿಸಿದಂತೆಯೇ ‘ನಾಥ’ ಎಂದು ಬಳಸಿರುವುದು ಅತ್ಯಂತ ಸುಸ್ಪಷ್ಟವಾಗಿದೆ.

ಇಂಥ ಸುಸ್ಪಷ್ಟ ಗೌರವ ಸೂಚಕವಾಗಿ ಕೇವಲ ಒಮ್ಮೆ ಮಾತ್ರ ಬಳಸಿರುವ ‘ನಾಥ’ ಪದವನ್ನು ಹಿಡಿದು “ನಾಥಪಂಥದ ಕೇಂದ್ರವಾಗಿ ಸುಮುಕ್ತಿನಾಥರು ಇದರ ಪ್ರವರ್ಥಕರೆಂದು ಚೆನ್ನಬಸವ ಪುರಾಣವು ಹೇಳುತ್ತದೆ” ಎಂದು ‘ಷರಾ’ ಬರೆದಿರುವುದು ಪ್ರೊ.ಕಲಬುರ್ಗಿಯವರ ಸಂಶೋಧನಾ ಚಾತುರ್ಯವಿರಲಿ ಅವರ ಕನಿಷ್ಠ ಬುದ್ಧಿಮತ್ತೆಯನ್ನೇ ಅತ್ಯಂತ ಪ್ರಶ್ನಾರ್ಹವಾಗಿಸುತ್ತದೆ! ಅಥವಾ ಇದು ಅವರು ಉದ್ದೇಶಪೂರ್ವಕವಾಗಿ ತಮ್ಮ ವೃತ್ತಿಗೆ
ಬಗೆದ ಮಹಾದ್ರೋಹ ಎನಿಸುತ್ತದೆ.

ಇರಲಿ, ಈ ಪುರಾಣದ ಪ್ರಮುಖ ಅಂಶದ ಪ್ರಕಾರ ಅಲ್ಲಿ ಅದಾಗಲೇ ಇದ್ದ ‘ವೀರೇಶ’ನನ್ನು ಅನ್ಯಮತೀಯ ಜನರು ಕಿತ್ತು ಬಿಸಾಡಿದ್ದಾರೆ. ನೀನು ಹೋಗಿ ಅದನ್ನು ಮರುಸ್ಥಾಪಿಸು ಎಂದ ಗುರುವಿನ ಆಜ್ಞೆಯಂತೆ ಸುಮುಕ್ತಿಮುನಿಯು ವೈರಿಗಳನ್ನು ಸದೆಬಡಿದು ಹೊಳೆಯಲ್ಲಿ ಮುಳುಗಿದ್ದ ವೀರೇಶನನ್ನು ಪುನರ್ ಸ್ಥಾಪಿಸಿದನು ಎಂಬುದು ಇಲ್ಲಿನ ಕಥೆ. ಇಲ್ಲಿ ವೀರೇಶ ಎಂದರೆ ‘ವೀರಸಿಂಹಾಸನ’. ವೀರಶೈವ ರಂಭಾಪುರಿ ಸಂಸ್ಥಾನವು ವೀರಸಿಂಹಾಸನ ಎಂದೇ ಗುರುತಿಸ ಲ್ಪಟ್ಟಿದೆ. ಇದರ ಈಗಿನ ಗುರುಗಳ ಹೆಸರು ‘ವೀರ’ಸೋಮೇಶ್ವರ, ಅಂತೆಯೇ ಹಿಂದಿನ ಗುರುಗಳು ‘ವೀರ’ಗಂಗಾಧರ!

ಇಲ್ಲಿ ಪೀಠವನ್ನು ಪುನರ್ ಸ್ಥಾಪಿಸಿದ ಸುಮುಕ್ತಿಮುನಿಯು ಅಲ್ಲಿ ಬಾಳೆಹಳ್ಳಿ ಎಂಬ ಪಟ್ಟಣವನ್ನು ಕಟ್ಟುತ್ತಾನೆಯೇ ಹೊರತು ಯಾವುದೋ ಹೊಸ ಪೀಠವನ್ನಲ್ಲ ಎಂಬುದು ಈ ಪುರಾಣದ ಅಧ್ಯಾಯದಲ್ಲಿ ತಿಳಿದುಬರುವ ಅತಿ ಸಾಮಾನ್ಯ ಸಂಗತಿ. ಕೇವಲ ಓರ್ವ ಕುತೂಹಲಿಯಾದ ಅತಿ ಸಾಮಾನ್ಯ ಕನ್ನಡ ಭಾಷಾ ತಿಳಿವಳಿಕೆಯ ನನ್ನಂಥವನ ಓದಿಗೆ ಸರಳವಾಗಿ ದಕ್ಕಿದ ಈ ವಿರೂಪಾಕ್ಷ ಪಂಡಿತನ ನಡುಗನ್ನಡ ಕಾವ್ಯವು, ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಪಡೆದು “ಕವಿರಾಜಮಾರ್ಗದ ಪರಿಸರದಲ್ಲಿ ಕನ್ನಡ ಸಾಹಿತ್ಯ” ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದು ಕನ್ನಡ ಪ್ರೊ-ಸರರಾಗಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಾಡಿನ ಸಂಶೋಧನಾ
ಪಿತಾಮಹ ಎನಿಸಿಕೊಂಡ ಪ್ರೊ. ಕಲಬುರ್ಗಿಯವರಿಗೆ ಏಕೆ ದಕ್ಕಲಿಲ್ಲ ಎಂಬುದು, ಅವರ ಕನ್ನಡ ವಿಶ್ವವಿದ್ಯಾಲಯ ದಲ್ಲಿ ನೂರು ಪಿಎಚ್‌ಡಿಗಳಿಗೆ ಸಂಶೋಧನಾ ತೌಲನಿಕ ಅಧ್ಯಯನದ ಸರಕಾಗಬಹುದು!

ಓರ್ವ ಸಂಶೋಧಕನಿಗೆ ಇರಬೇಕಾದ ತಟಸ್ಥ ನಿಲುವು, ಮಾನವಿಕ ನೆಲೆ, ಸಮಗ್ರ ಗ್ರಹಿಕೆ ಮತ್ತು ಸೂಕ್ಷ್ಮ ಅವಲೋಕನ
ದಿಂದ ಸತ್ಯದ ಪರಂಪರೆಯನ್ನು ಎತ್ತಿಹಿಡಿಯುವುದಕ್ಕೆ ತರ್ಪಣ ಬಿಟ್ಟು ಪೂರ್ವಗ್ರಹಪೀಡಿತರಾಗಿ ಸ್ವಪಂಥಪ್ರೇಮ, ಪರಪಂಥ ದ್ವೇಷ, ವೈಯಕ್ತಿಕ ದ್ವೇಷ, ಸಿದ್ಧಾಂತ ಮೌಢ್ಯಕ್ಕೆ ಮಾದರಿ ಎನ್ನಿಸಬಹುದಾದ ಇಂಥ ಸಂಶೋಧಕರು ನಾಡಿನ ‘ಸಂಶೋಧನೆಯ ಪಿತಾಮಹ’ ಎನಿಸಿದ್ದು ಕನ್ನಡ ನಾಡಿನ ದುರಂತ!

ಇಂಥ ಅರಿಷಡ್ವರ್ಗಗಳ ವ್ಯಕ್ತಿರೂಪವು ಸೃಷ್ಟಿಸಿದ ‘ವೀರಶೈವ ಬೇರೆ, ಲಿಂಗಾಯತ ಬೇರೆ’ ಎನ್ನುವ ಕ್ಷುಲ್ಲಕ ಸುಳ್ಳಿಗೆ ಮರುಳಾಗಿ ‘ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು’ ಎನ್ನುತ್ತ ‘ನಾವು ಹಿಂದೂ ಅಲ್ಲ, ವೀರಶೈವ ಅಲ್ಲ’ ಎಂದು ಬೋಽಸುವುದು ೨೧ನೇ ಶತಮಾನದ ಜಗತ್ತಿನ ಬಹುದೊಡ್ಡ ಜೋಕು! ಇಂಥ ದುರಂತ ಸಂಶೋಧನೆಗಳನ್ನು ಪ್ರಮುಖ ಆದರ್ಶ ಮಾಡಿಕೊಂಡು ಬಸವಣ್ಣನನ್ನು ಗೋಮಾತೆಯಂತೆ ಹಿಂಡಿ ಹಿಂಡಿ ‘ದೂಧ್ ಸಾಗರ’ಗಳನ್ನೇ ಕಟ್ಟಿಕೊಂಡಿರುವ ಬಸವ ಸೆಂಟರ್, ಬಸವ ವೇ, ಬಸವ ಬ್ರಿಗೇಡ್, ಬಸವ ಅಸೋಸಿಯೇಷನ್, ಬಸವ ಫಿಲಾಸಫಿ,
ಬಸವ ಬ್ರದರ್‌ಹುಡ್, ಬಸವ ಕಮಿಟಿ, ಬಸವ ಸರ್ವಿಸ್, ಬಸವ ಮೊರಾಲಿಟಿ, ಬಸವ ವುಮೆನ್, ಬಸವ ಮೆನ್, ಬಸವ
ನ್ಯೂಟ್ರಲ, ಬಸವ ರಿಲಿಜಿಯನ್, ಬಸವ ದಟ್, ಬಸವ ದಿಸ್ (ತೀವ್ರ ನಾಣ್ಯಗಳ ಸುರಿಮಳೆಯ ಸದ್ದನ್ನು ಊಹಿಸಿ ಕೊಳ್ಳಿ)… ಎಲ್ಲವೂ ಬಸವ ಆರ್ಥಿಕತೆ!

ಇನ್ನು, ನಾಡಿನ ಸಾಕ್ಷಿಪ್ರe ಚಿಂತಕರಿಗೆ, ಅದರಲ್ಲೂ ರಾಜ್ಯದ ಓರ್ವ ಮುಖ್ಯಮಂತ್ರಿಗಳು ರಚಿಸಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿಗೆ ಇಂಥ ಸಂಶೋಧನೆಗಳೇ ಆಧಾರವಾಗಿ ಇದೇ ಸಂಶೋಧಕರು ಪ್ರಮುಖ ಸ್ತಂಭವಾಗಿದ್ದರು ಎಂದರೆ ಈ ಸಮಿತಿಯ ಸದಸ್ಯರ ವಿದ್ಯಾರ್ಹತೆ, ವೃತ್ತಿಪರತೆ, ನೈತಿಕತೆ, ಸತ್ಯಶೋಧನೆ ಎಲ್ಲವೂ ಏನೆನಿಸುತ್ತದೆ (ತೀವ್ರ ಡೊಳ್ಳು ಬಡಿತದ ಸದ್ದನ್ನು ಊಹಿಸಿಕೊಳ್ಳಿ)… ಎಲ್ಲವೂ ಬಸವ ಅವಕಾಶ! ಇದೆಲ್ಲಕ್ಕೂ ಹೆಚ್ಚಾಗಿ ಈ ಸಂಶೋಧನಾ ಪಿತಾಮಹರ ಪರಂಪರೆಯ ಶಿಷ್ಯಪಡೆಯೇ ಸಾಸಿರಮಡಿಯಾಗಿ ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರರಾಗಿ ಸರಕಾರಿ ಅನುದಾನ, ವೇತನ, ಕಚೇರಿ ಸೌಲಭ್ಯಗಳನ್ನು ಬಳಸಿಕೊಂಡು ಭಾರತೀಯ ಸಾಂಸ್ಕೃತಿಕ ಸಂಶೋಧನಾ ಪರಂಪರೆಗೆ ಎಲ್ಲಿಯೂ ಚಲಾವಣೆಯಿರದ ಕಮ್ಯುನಿ ಬಣ್ಣ ಬಳಿದು ವಿದ್ಯಾರ್ಥಿ ಸಮೂಹವನ್ನು ಶಿಲಾಯುಗದತ್ತ
ತೆಗೆದುಕೊಂಡು ಹೋಗಲು ದಾಪುಗಾಲಿಟ್ಟು ದೌಡಾಯಿಸುತ್ತಿರುವುದು (ತೀವ್ರ ತಮಟೆಯ ಬಡಿತದ ಸದ್ದನ್ನು ಊಹಿಸಿಕೊಳ್ಳಿ)… ಎಲ್ಲವೂ ಬಸವ ಸಮಾಜವಾದಿ ತತ್ವಜ್ಞಾನ!

ಒಂದು ಸುಭದ್ರ ಪರಂಪರೆಯನ್ನು ಅಳಿಸಿ ಇಂತಪ್ಪ ತೆಳುತೇಲು ಅಡಿಪಾಯದ ಮೇಲೆ ಪ್ರತ್ಯೇಕ ಧರ್ಮ ಕೇಳುತ್ತೇವೆ ಎನ್ನುವುದು (ನಾಣ್ಯ, ಡೊಳ್ಳು, ತಮಟೆಯ ಜತೆಗೆ ಕಹಳೆ, ಕೊಂಬು ತುತ್ತೂರಿಗಳ ಅತಿ ತೀವ್ರ ಸದ್ದನ್ನು ಒಟ್ಟೊಟ್ಟಿಗೆ ಊಹಿಸಿಕೊಳ್ಳಿ)… ಬಸವ ರಾಜಕಾರಣ!

ವಿ.ಸೂ: ಅಂದ ಹಾಗೆ, ಈ ಬರಹ ಅತ್ಯಂತ ತೀಕ್ಷ್ಣ ಎನ್ನಿಸಿದರೆ ಅದಕ್ಕೆ ಕಾರಣ ನಾನು ಮಾನ್ಯ ಸಂಶೋಧಕರ ಪುಸ್ತಕ ದಲ್ಲಿರುವ ದಸ್ತಕತ್ತಿನ ಶೈಲಿಯ ಕೇವಲ ಎರಡು ಪೈಸೆಯಷ್ಟನ್ನು ನನ್ನ ಬರಹದಲ್ಲಿ ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡಿದ್ದೇನಷ್ಟೇ. ಉಳಿದಂತೆ ನನ್ನದು ವೈಚಾರಿಕ ಸತ್ಯದ ಮಾನವಧರ್ಮದ ಹಿಂದೂ ಕಾಳಾಮುಖ ವೀರಶೈವ ಲಿಂಗಾಯತ ಬಸವನ ಬ್ರಹ್ಮಾಂಡ ಬೆಳಕು!

(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)

ಇದನ್ನೂ ಓದಿ: Ravi Hunz: ತಿರಸ್ಕರಿಸಿದ್ದು ಏನನ್ನು, ಸೇರಿದ್ದು ಯಾವುದನ್ನು?