ತಿಪಟೂರು ; ತುಮಕೂರು ದಸರಾದ ಜಿಲ್ಲಾ ಉಸ್ತುವಾರಿ ಸಚಿವರು, ಸಜ್ಜನರೂ ಆದ ಡಾಕ್ಟರ್ ಜಿ ಪರಮೇಶ್ವರ್ ರವರ ನಾಯಕತ್ವದಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ಆದರೆ ಜಿಲ್ಲೆಯ ಹಿರಿಯ ಸಾಹಿತಿಗಳು, ರಂಗಭೂಮಿ ಕಲಾವಿದರು, ಚಲನಚಿತ್ರ ಮತ್ತು ಕಿರುತೆರೆ ಕಲಾವಿದರನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಆಹ್ವಾನ ಪತ್ರಿಕೆಯನ್ನು ನೀಡದೆ ಕಡೆಗಣಿಸಿರುವುದು ಖಂಡನೀಯವಾಗಿದೆ ಎಂದು ಕಿರುತರೆ ನಟ ತಿಪಟೂರಿನ ದಯಾನಂದ್ ಸಾಗರ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ವ ನಿಯೋಜಿತ ಸಭೆಗೆ ಆಹ್ವಾನಿಸದೆ, ಕೆಲವೇ ಕೆಲವು ಆಸಕ್ತರ ಸಭೆ ಕರೆದು ಯಾರ ಸಲಹೆ ಸೂಚನೆಗಳನ್ನು ಪರಿಗಣಿಸದೇ ಇರುವುದನ್ನು ನೋಡಿದರೆ, ಜನಸಾಮಾನ್ಯರ ದಸರಾ ಆಗುವುದಕ್ಕಿಂತ ಅಧಿಕಾರಿಗಳ ದಸರಾ ದರ್ಬಾರ್ ನಡೆಯುವ ಹಾಗೆ ಕಾಣುತ್ತಿದೆ. ಏಕೆಂದರೆ ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿ ಸಿದ ಕಲಾವಿದರು ಇದ್ದರೂ, ನೆಪಮಾತ್ರಕ್ಕೆ ಕೆಲ ಕಲಾವಿದರನ್ನು ಗುರುತಿಸಿರುವುದನ್ನು ಬಿಟ್ಟರೆ, ಈ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಕಲಾವಿದರೂ ಹಾಗೂ ಕಲಾತಂಡವನ್ನು ಗುರುತಿಸಿ, ಗೌರವಿಸಿ.
ಹಿರಿಯ ನಟ ಡಾ. ಶಿವರಾಜ್‌ಕುಮಾರ್ ರವರನ್ನು ಕರೆದಿರುವುದು ಸಂತೋಷವೇ, ಆದರೆ ನಮ್ಮ ತುಮಕೂರು ಜಿಲ್ಲೆಯ ನಾಟಕರತ್ನ ಗುಬ್ಬಿ ವೀರಣ್ಣ, ಹಾಸ್ಯ ಚಕ್ರವರ್ತಿ ನರಸಿಂಹರಾಜು, ಮಾಸ್ಟರ್ ಹಿರಣ್ಣಯ್ಯ, ಕಂಠೀರವ ಸ್ಟುಡಿಯೋ ಸ್ಥಾಪಕರಾಗಿದ್ದ ತಿಪಟೂರು ಕರಿಬಸವಯ್ಯ, ಚಿ. ಉದಯಶಂಕರ್ ಇವರುಗಳ ಕುಟುಂಬದವರನ್ನು ಮರೆತಿರುವುದು ಶೋಚನೀಯ. ಉಮಾಶ್ರೀ, ಜಗ್ಗೇಶ್, ಅರ್ಜುನ್‌ಸರ್ಜಾ, ದ್ರುವಸರ್ಜಾ, ಕೋಮಲ್, ರಚಿತರಾಮ್, ಸುಧಾ ನರಸಿಂಹರಾಜು, ಅಚ್ಯುತ್‌ಕುಮಾರ್, ಧರ್ಮೇಂದ್ರ ಅರಸ್, ಚಿ ಗುರುದತ್, ರಂಗಭೂಮಿ ಕಲಾವಿದೆ ಹೇಮಲತಾ, ಸಂಜಯ್ ಸೂರಿ, ಪಿ. ಶೇಷಾದ್ರಿ, ಲಿಂಗದೇವರು ಹಳೇಮನೆ, ಹನುಮಂತೇಗೌಡ, ರವಿಗರಣಿ, ಭೂಮಿ ಸತೀಶ್, ಬುಕ್ಕಾಪಟ್ಟಣ ವಾಸು ಇನ್ನು ಹಲವಾರು ಕಲಾವಿದರು, ನಿರ್ದೇಶಕರು ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿ ರಾಜ್ಯ ಮತ್ತು ರಾಷ್ತೃಮಟ್ಟದಲ್ಲೂ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಲು ಕಾರಣೀಭೂತರಾಗಿದ್ದಾರೆ.
ಅಂತಹವರನ್ನು ತುಮಕೂರು ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಮತ್ತಷ್ಟು ಮೆರಗು ಉಂಟಾಗುತ್ತದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾದರೂ ಉದಾಸೀನ ಮಾಡದೆ, ಗಮನ ಹರಿಸುವುದು ಸೂಕ್ತ. ಇದರಿಂದ ಜಿಲ್ಲೆಗೂ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಗೌರವ ತರುತ್ತೀರೆಂದು ಆಶಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.