Saturday, 23rd November 2024

ಕರೋನಾ ಕೆಟ್ಟದ್ದಾದರೂ, ಒಂದರ್ಥದಲ್ಲೊ ಒಳಿತೇ ಮಾಡಿತು !

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಕರೋನಾದ ಅವಧಿಯ ಈ ಎಂಟು ಹತ್ತು ತಿಂಗಳು ಎಂಥವರಿಗಾದರೂ ಬೇಸರ ತರಿಸಿವೆ. ಅಸಹಾಯಕತೆ ಮೂಡಿದೆ. ಏಕತಾನ ತೆಯ ದಿನಚರಿ ರೇಜಿಗೆ ಹುಟ್ಟಿಸಿದೆ ಎಂಬುದು ನಿಜವಾದರೂ ನನಗೆ ಮಾತ್ರ ಒಂದು ರೀತಿಯಿಂದ ಸಂತಸವನ್ನೆ ತಂದಿದ್ದು ನಿಜ, ಹೇಗೆಂದರೆ ನನ್ನ ಓದುವ ಹವ್ಯಾಸ, ಓದಿದ್ದನ್ನು ನೋಟ್ಸ್ ಮಾಡುವ, ಪಾಯಿಂಟ್ಸ್‌ಗಳನ್ನು ಬರೆದಿಟ್ಟುಕೊಳ್ಳುವ ಕೆಲಸ ವನ್ನು ನಾನು ತುಂಬಾ ಎನ್‌ಜಾಯ್ ಮಾಡಿದೆ ಆಧ್ಯಾತ್ಮದ ವಿಷಯಗಳನ್ನು ಹೆಚ್ಚು ಓದಿದೆ. ವಯಸ್ಸಿನ ಪರಿಣಾಮವೋ ಏನೋ, ಆಧ್ಯಾತ್ಮದ ವಿಷಯಗಳೇ ಹೆಚ್ಚು ರುಚಿಸುತ್ತಿವೆ, ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ ಅನಿಸುತ್ತಿದೆ. ಪ್ರೇಮ, ಪತ್ತೇದಾರಿಗಳನ್ನು ನಾನು ಓದುವುದು ಬಿಟ್ಟೇ ದಶಕಗಳ ಮೇಲಾಯಿತು.

ಕರೋನಾಕ್ಕಿಂತ ಮುಂಚೆ, ಕಳೆದ ಹತ್ತುವರ್ಷಗಳಲ್ಲಿ ಬೆನ್ನು ನೋಯುವಷ್ಟು ಊರೂರು ತಿರುಗಿಬಿಟ್ಟೆ, ಪ್ರತಿ ತಿಂಗಳು ಹಾಸ್ಯ ಸಂಜೆಗಳಿಗಾಗಿ ಹತ್ತುಸಾವಿರ ಕಿ.ಮೀ ಸುತ್ತಿ ಬಿಟ್ಟೆ. ಒಂದು ಊರೇ, ಹಳ್ಳಿಯೇ, ಪಟ್ಟಿಣವೇ ಓಹ್, ಹೀಗೆ ಕರೋನಾ ಭಯಕ್ಕೆ ಕೂತಾಗ ತಿರುಗಿದ್ದು ನೆನೆದು ಗಾಬರಿಗೊಂಡಿದ್ದೇನೆ. ‘ಅಬ್ಬಾ, ಭಾರಿ ಸುತ್ತೋರು ಕಣ್ರಿ ನೀವೂ ನಮಗೆ ಒಂದು ದಿನ ಪ್ರಯಾಣ ಮಾಡಿದರೆ, ಸಾಕಪ್ಪಾ ಸಾಕು, ಇನ್ನೆಲಿಗೂ ಹೋಗಬಾರದು ಎನಿಸುತ್ತದೆ, ಅದು ಹೇಗಪ್ಪಾ ನೀವು ಹೀಗೆ ಸುತ್ತುತ್ತೀರಿ ಕಾಲಿಗೆ ಚಕ್ರ ಕಟ್ಟಿಕೊಂಡು? ಎಂದಾಗ’ ಇಲ್ಲ ಇಲ್ಲ ನನ್ನ ಕಾಲಿಗಲ್ಲ, ಕಾರಿಗೆ ಚಕ್ರಗಳಿವೆ ಎಂದಿದ್ದೇನೆ, ಕರ್ನಾಟಕದ ಮುಕುಟ ಮಣಿ ಬೀದರ್‌ ದಿಂದ ಹಿಡಿದು ಕರ್ನಾಟಕ ನಕ್ಷೆಯ ಕೆಳಗಿನ ಚಾಮರಾಜನಗರ, ಪಿರಿಯಾಪಟ್ಟಣದವರೆಗೂ ಒಂದೆರೆಡು ಬಾರಿ ಅಲ್ಲ ಮಿನಿ
ಮಮ್ ಒಂದೊಂದು ಊರಿಗೆ ನಾಲ್ಕೈದು ಸಾರಿ ಹೋಗಿದ್ದೇ ನೆ. ಕೆಲವು ತಿಂಗಳಂತೂ ತಿಂಗಳಿಗೆ ಹದಿನೆಂಟರಿಂದ ಇಪ್ಪತ್ತು
ಕಾರ್ಯಕ್ರಮಗಳು, ಇತ್ತೀಚೆಗೆ ನನಗೂ ರೋಸಿ ಹೋಗಿತ್ತು.

ನಗಿಸಲು ಸ್ಟೇಜ್ ಏರುವ ಮುನ್ನ ಪಯಣಿಸಿ ಬಂದ ದೂರಕ್ಕೆ, ಅಳುಬರುತ್ತಿತ್ತು ಇಂಥಹ ಬಿಜಿ ಶೆಡ್ಯೂಲ್ ಅನುಭವಿಸಿದ ನನಗೆ ಕರೋನಾದ ಈ ಅನಿವಾರ್ಯ ಸುತ್ತಾಟದ ನಿರ್ಬಂಧ ಖುಷಿ ಕೊಟ್ಟಿತೆನ್ನಬಹುದು. ದಶರಥ ಮಹಾರಾಜನಿಗೆ ಶ್ರವಣಕುಮಾರನ ತಂದೆತಾಯಿಗಳು ‘ನೀನೂ ನಮ್ಮ ಹಾಗೆ ಪುತ್ರ ಶೋಕದಲ್ಲೇ ಪ್ರಾಣ ಬಿಡು’ ಎಂದಾಗ ದಶರಥನಿಗೆ ಸಂತೋಷವೇ ಆಯಿತಂತೆ, ಏಕೆಂದರೆ ಆತನಿಗೆ ಆಗಿನ್ನು ಮಕ್ಕಳೇ ಆಗಿರಲಿಲ್ಲವಂತೆ, ಈ ಮುನಿಯ ಶಾಪದಂತೆ ನನಗೆ ಸಾವು ಬರುವದು ನನ್ನ ಮಕ್ಕಳಿಂದ ಅಂದ ಹಾಗಾಯಿತು, ನನ್ನನ್ನು ಕೊಲ್ಲಲಾದರೂ ನನಗೆ ಮಕ್ಕಳು ಹುಟ್ಟುತ್ತಾರೆ ಅಂದ ಹಾಗಾಯಿತು ಎಂದು ಹಿಗ್ಗಿದ್ದನಂತೆ, ಹಾಗೆಯೇ, ಈ ಕರೋನಾ ವ್ಯಾಧಿ ಕೆಟ್ಟದ್ದಾದರೂ ಸರಿ ನನಗೆ ಊರೂರು ಸುತ್ತಾಡುವ ನಿರ್ಬಂಧ ತಪ್ಪಿಸಿತಲ್ಲ ಎಂದು ನನಗೂ ಸಂತೋಷವೇ ಆಗಿತ್ತು ಎನ್ನಿ!.

ಆದರೆ, ಮನವೆಂಬ ಮರ್ಕಟಕ್ಕೆ ಎಲ್ಲವೂ ಬೇಸರ, ಕರೋನಾ ನಿರ್ಭಂದ ಆರಾರು ತಿಂಗಳುಗಟ್ಟಲೆ ಮುಂದುವರಿಯುತ್ತದೆ ಎಂದು ತಿಳಿದಾಗ ಎದೆ ಒಡೆಯಲಾರಂಭಿಸಿತು, ಆಗ ಮತ್ತೆ ನನ್ನ ಓದುವ ಹವ್ಯಾಸ ಗರಿಗೆದರಿತು. ಬೆಂಗಳೂರಿನ ಕನ್ನಡ ಲೋಕ ( ಕನ್ನಡ ಪುಸ್ತಕಗಳನ್ನು ಭಾರತದೆಲ್ಲೆಡೆ ನೆಲೆಸಿರುವ ಕನ್ನಡ ಓದುಗರಿಗೆ ತಲುಪಿಸುವ ಆನ್‌ಲೈನ್ ತಾಣ)  (Kannadlokakarnataka@gmail.com) ಗೆಳೆಯ ವಸಂತಗೆ ಹೇಳಿದೆ ಅನೇಕ ಪುಸ್ತಕಗಳನ್ನ ಕಳಿಸಿದರು, ಬಯಸಿದ ಪುಸ್ತಕಗಳನ್ನು ಯಾವ ಮೂಲೆಯಲ್ಲೇ ಇರಲಿ, ಹುಡುಕಿ ಕಳಿಸುತ್ತಾರೆ.

ಹಾಗೆಯೇ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮಿತ್ರ ಸುಬ್ರಹ್ಮಣ್ಣ, ಶ್ರೀವತ್ಸ ಜೋಶಿಯವರ ಅಂಕಣ ಬರಹಗಳ ತಿಳಿರು ತೋರಣ ಐದು ಪುಸ್ತಕಗಳನ್ನು ಕಳಿಸಿದರು. ಹಾಗೆಯೇ ದಿ|| ಭದ್ರಗಿರಿ ಅಚ್ಯುತದಾಸರ ಹರಿಕಥಾಮೃತ ಸಿಂಧು ಪುಸ್ತಕ ಸಿಕ್ಕಿತು, ಅದರಲ್ಲಿ ರಾಮಾಯಣ, ಭಾಗವತಗಳಲ್ಲದೇ ಅಚ್ಯುತದಾಸರು ತಮ್ಮ ಹರಿಕಥೆಗಳಲ್ಲಿ ಹೇಳುತ್ತಿದ್ದ ಅಡ್ಡ ಕಥೆಗಳೆಲ್ಲ ನನಗೆ ಸಿಕ್ಕು ಸಂದೇಶ ಯುಕ್ತ, ಮೌಲ್ಯಯುತ , ರಾಜ ಹಾಸ್ಯವೆಲ್ಲ ಸಿಕ್ಕಿತು. ಪುಸ್ತಕಗಳು ಆಪತ್ಭಾಂಧವರು ನಿಜವಾದ ಸ್ನೇಹಿತರು ಅನಿಸಿತು.

ಹಾಗೆಯೇ, ಹಿರಿಯ ಲೇಖಕರಾದ ಶ್ರೀಯುತ ಗ.ನಾ.ಭಟ್ ನನಗೆ ಎಂದಿನಿಂದಲೂ ಆತ್ಮೀಯರು, ಅವರ ಪುಸ್ತಕಗಳನ್ನು ಅವರೇ ನನಗೆ ಓದುವ ಪ್ರೀತಿಗಾಗಿ ಕಳಿಸುವಷ್ಟು, ಹಿರಿತನವನ್ನು ತೋರಿ ನನ್ನನ್ನು ಮೂಕನನ್ನಾಗಿ ಮಾಡಿಬಿಟ್ಟರು. ಅವರ ಸಂಚಲನ ಎಂಬ ವಿಚಾರ ವೈವಿಧ್ಯಗಳು ಪುಸ್ತಕವನ್ನು ಓದಿ ನಾನವರಿಗೆ ಫೋನು ಮಾಡಿ ನನ್ನ ಸಂತಸವನ್ನು ಹಂಚಿಕೊಂಡಿದ್ದನ್ನ ನೆನಪಿಟ್ಟುಕೊಂಡ ಗ.ನಾಭಟ್ಟರು ಆ ಮೇಲೆ ಹಿರಿಯ ಸ್ನೇಹಿತರಾಗಿ ಬಿಟ್ಟರು. (ಆ ಸಂಚಲನ ಪುಸ್ತಕವು ನನಗೆ ಡಾ. ಎಸ್. ಎಲ್. ಭೈರಪ್ಪನವರ ಹೊಸ ಕಾದಂಬರಿ ಯಾನ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ನೀಡಿದ ನೆನಪಿನ ಕಾಣಿಕೆ ಪುಸ್ತಕವಾಗಿತ್ತು). \

ಅದನ್ನು ಓದಿದ ಮೇಲೆ ಗ.ನಾ.ಭಟ್ಟರ ಎಲ್ಲ ಪುಸ್ತಕಗಳನ್ನು ಓದುವ ಅಭಿಲಾಷೆ, ಕುತೂಹಲ ಹುಟ್ಟಿಸಿದವು. ಗ.ನಾ.ಭಟ್ಟರು ಪುಸ್ತಕಗಳ ವೈಶಿಷ್ಟವೆಂದರೆ ಅವರ ಒಂದು ಪುಸ್ತಕವನ್ನು ಓದಿದರೆ, ಅವರು ಅದರಲ್ಲಿ ಬರೆದಿರುವ ಒಂದೇ ಒಂದು ಲೇಖನದದಲ್ಲಿ ತಾವು ಓದಿದ, ಕೇಳಿದ ಅನೇಕ ಉಕ್ತಿಗಳನ್ನು, ಉದಾಹರಣೆಗಳನ್ನು ಶ್ಲೋಕಗಳನ್ನು ಕೋಟ್ ಮಾಡುವುದರ ಮೂಲಕ ಆ ಪುಸ್ತಕಗಳನ್ನೂ ಓದುವ ಕುತೂಹಲವನ್ನು ಹುಟ್ಟು ಹಾಕುತ್ತಾರೆ.

ಅವರ ಓದಿನ ಆಳ, ವಿಸ್ತಾರ, ಹರಹು ಅಂಥದು. ಪ್ರತಿ ಲೇಖನದ ಒಂದೊಂದು ಪೇಜಿನಲ್ಲೂ ಈ ತರಹ ಉಪಯುಕ್ತ ಮಾಹಿತಿಗಳು ಸಿಕ್ಕುವದರಿಂದ ನಮ್ಮ ಓದಿನ ವಿಸ್ತಾರವನ್ನೂ ಬೆಳೆಸುವ ಅವರ ಶೈಲಿ ನನಗೆ ತುಂಬಾ ಮೆಚ್ಚಿಕೆಯಾಯಿತು. ಶ್ರೀಯುತ ಗ.ನಾ. ಭಟ್ಟರ ಒಂದು ಪುಸ್ತಕ ಹಿಡಿದರೆ ಅತ್ಯಾಧುನಿಕವಾದ ಮೋರ್‌ನಂಥಹ ಶಾಪಿಂಗ್ ಮಾಲ್ ಹೊಕ್ಕ ಅನುಭವ. ಬಗೆ ಬಗೆಯ ವಸ್ತುಗಳ ಶಾಪಿಂಗ್ ಮಾಲ್‌ನಲ್ಲಿ ಯಾವುದೋ ಒಂದು ಸಾಮಾನಿಗಾಗಿ ಒಳಹೊಕ್ಕರೆ ಹೇಗೆ ನಾವು ಮಿನಿಮಮ್ ಎಂಟು ಹತ್ತು ವಸ್ತುಗಳನ್ನು ಹಿಡಿದು ಹೊರಬರುತ್ತೇವೆಯೋ ಹಾಗೆ ‘ತೀರದ ಹೊಳಹುಗಳು’ ಪುಸ್ತಕ ತೆರೆದಾಗ ನನಗಾದ ಅನುಭವ ಇದು.

ಈ ಪುಸ್ತಕದಲ್ಲಿ ಪ್ರಾರ್ಥನೆಯ ಸೊಬಗು ಎಂಬ ಲೇಖನವು ಮನೋಜ್ಞವಾಗಿ . ಪ್ರಾರ್ಥನೆ ಎಂದರೆ ಮೂಗು ಮುರಿಯುವ ಇಂದಿನ
ಪೀಳಿಗೆಗೆ ಪ್ರಾರ್ಥನೆಯನ್ನು ಏಕೆ ಮಾಡಬೇಕೆಂದು ಋಷಿ ಮುನಿಗಳ ಹಿನ್ನೆಲೆಗಳೊಂದಿಗೆ ವಿವರಿಸಿರುವ ಬಗೆ ಅನನ್ಯವಾದುದು.
‘ಶಾಲೆಗೆ ಬುದ್ದಿವಂತ ಮಕ್ಕಳು ಬರಲಿ’ ಎಂಬ ಲೇಖನವನ್ನು ಶಿಕ್ಷಕರಿಗೆ, ಮಕ್ಕಳಿಗೆ ಸೇರಿಸಿಯೇ ಪಠ್ಯವನ್ನಾಗಿಸಬೇಕು ಎನಿಸುತ್ತದೆ ‘ ಶಿಕ್ಷಕರ ದಿನಾಚರಣೆ-ಶಿಕ್ಷಕರ ಆತ್ಮಾವಲೋಕನ ದಿನ’ಎಂಬ ಲೇಖನವಂತೂ ಶಾಲೆಗಳ ಗೋಡೆಗಳ ಮೇಲೆ ಬರೆಸಬೇಕು. ಶಿಕ್ಷಣ ಮಂತ್ರಿಗಳಾದವರಿಗಂತೂ ಹಣೆಯ ಮೇಲೆ ಬರೆಸುವಂತಿದೆ ಎನಿಸುತ್ತದೆ.

ಹಾಗೆಯೇ ‘ಆರ್ಷ ವಿದ್ಯೆಯ ಅಧಿಕೃತ ವಕ್ತಾರ ಕೆ.ಎಸ್.ನಾರಾಯಣಾಚಾರ್ಯ’ ಲೇಖನ ಓದಿ, ಅವರ ಎಲ್ಲ ಪುಸ್ತಕಗಳನ್ನು ಖರೀದಿಸಲು ಮುಂದಾಗಿ, ಖರೀದಿಸಿ, ಬಿಡದೇ ಓದಿಬಿಟ್ಟೆ, ಇದು ಒಬ್ಬ ಲೇಖಕ ತನ್ನ ಓದುಗನಿಗೆ ನೀಡಬಹುದಾದ, ಮಾಡಬಹು
ದಾದ ಉಪಕಾರವೆನಿಸಿಬಿಟ್ಟಿತು. ತನ್ನ ಬಗ್ಗೆಯೇ, ತನ್ನ ಕೃತಿಗಳ ಬಗ್ಗೆಯೇ ಬರೆದುಕೊಳ್ಳುವ ಹಲವಾರು ಲೇಖಕರನ್ನು ಬಹುಬೇಗ ಓದುಗ ಪಕ್ಕಕ್ಕೆ ಸರಿಸುತ್ತಾನೆ ತನ್ನ ಲೇಖನದ ಮೂಲಕ ಹಲವಾರು ಲೇಖಕರನ್ನು ಪರಿಚಯಿಸುವ ಗ.ನಾ.ಭಟ್ಟರಂಥವರು ನಮ್ಮನ್ನು ತಮ್ಮ ಪಕ್ಕದಲ್ಲಿಯೇ ನಿಲ್ಲಿಸಿ ಕೊಳ್ಳುತ್ತಾರೆ. ತಮ್ಮ ಕಣ್ಣುಗಳಿಂದಲೇ ಬೇರೆ ಲೇಖಕರನ್ನೂ ನಮಗೆ ತೋರಿಸುತ್ತಾರೆ. ಅನೇಕ ವಿದ್ಯಾರ್ಥಿಗಳು, ಮಿತ್ರರು, ಯುವಕರು ಯಾವುದಾದರೂ ನಮಗೆ ಒಳ್ಳೆ ಪುಸ್ತಕ ಹೇಳಿ ಸರ್ ಓದಲು ಎನ್ನುತ್ತಿರುತ್ತಾರೆ, ಅವರಿಗೆ ಶ್ರೀ ಗ.ನಾ.ಭಟ್ಟರ ಪುಸ್ತಕಗಳನ್ನು ಓದಿ ಎನ್ನಬೇಕೆನಿಸಿದೆ.

ಇನ್ನು ಕೆಲವು ಸೋಮಾರಿ ಯುವಕರಂತೂ ‘ಸರ್ ಯಾವ ಒಂದು ಪುಸ್ತಕ ಓದಿದರೆ, ಹಲವಾರು ಪುಸ್ತಕಗಳನ್ನು ಓದಿದಂತಾಗು ತ್ತದೆ’ ಎಂದು ಕೇಳುವವರಿಗೂ ಗ.ನಾ.ಭಟ್ಟರ ಪುಸ್ತಕಗಳನ್ನು ಓದಿ ಎಂದೇ ಹೇಳಬೇಕೆನಿಸುತ್ತಿದೆ. ಒಂದು ವಾರದ ಹಿಂದೆ ತಾನೇ ಗ.ನಾ.ಭಟ್ಟರು ಕಳಿಸಿದ್ದ ಪುಸ್ತಕ ನುಡಿ ಚಿತ್ತಾರ ಚಿತ್ರಗಳು -ಸಮೀಕ್ಷೆಗಳು ಇದರಲ್ಲಿ ನಾಡಿನ, ದೇಹದ ಮಹಾನ್ ಚೇತನಗಳ ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. ಇದಂತೂ ಯುವಕರ, ಹಿರಿಯರ ಅಷ್ಟೆ ಏಕೆ ಆಬಾಲ ವೃದ್ಧರಿಗೂ ನಿತ್ಯಪಠಿಸಬೇಕಾದ ಗ್ರಂಥದಷ್ಟೆ ಪವಿತ್ರವಾಗಿದೆ. ಇಂಥವುಗಳೇಕೆ ನಮ್ಮ ಕಾಲೇಜು ಶಿಕ್ಷಣ ಇಲಾಖೆ ಪಠ್ಯವಾಗಿಸುವುದಿಲ್ಲ ಎಂಬ ಜಿಜ್ಞಾಸೆ ಮೂಡುತ್ತದೆ.

ಸುಭಾಷಚಂದ್ರಬೋಸ್, ಲಾಲ್‌ಬಹಾದ್ದೂರ ಶಾಸೀ, ವಿವೇಕಾನಂದರು, ಸರ್.ವಿಶ್ವೇಶ್ವರಯ್ಯರ ಜೊತೆಗೆ ಮೊನ್ನೆ ಮೊನ್ನೆಯ ವರೆಗೂ ನಾವು ಕಾಣುತ್ತಿದ್ದ, ಓದುತ್ತಿದ್ದ ಡಾ| ಹಾ.ಮಾ.ನಾ, ಎ.ಎನ್. ಮೂರ್ತಿರಾಯರು, ಬಿ.ವಿ.ವೈಕುಂಠರಾಜು, ಡಿ.ವಿ.ಜಿ. ಮುಂತಾದವರ ಬಗೆಗಿನ ಲೇಖನಗಳಲ್ಲಿನ ಹೊಸತನ, ಅವರ ಬಗ್ಗೆ ಗೌರವ ಹುಟ್ಟಿಸುವ ಶೈಲಿ ಎರಡೆರಡು ಬಾರಿ ಲೇಖನವನ್ನು ಓದಲು ಪ್ರೇರೇಪಿಸುತ್ತದೆ.

ಆ ಲೇಖನಗಳಿಗೆ ಕೊಟ್ಟ ಶೀರ್ಷಿಕೆ, ಹೆಡ್ಡಿಂಗ್‌ಗಳು ಅಷ್ಟೆ ಅತ್ಯಂತ ರೋಚಕ, ಆಕರ್ಷಕ, ಓದಲೇಬೇಕೆಂಬ ಉಮೇದು
ಹುಟ್ಟಿಸುವ ಉಪಾಧಿಗಳು. ಉದಾಹರಣೆಗೆ ಪ್ರೊ. ಕೀರ್ತಿ ನಾಥ ಕುರ್ತುಕೋಟಿಯವರನ್ನು ವಿದ್ವತ್ಪ್ರಪಂಚದ ದೈತ್ಯ ವಿಮರ್ಶಕ ಎಂದು ಕರೆದಿರುವದು. ಎಚ್.ವಿ.ನಾಗರಾಜರಾವ್‌ಗೆ ಅನುವಾದ ಯುಗದ ಕೊಂಡಿ ಎಂದಿರುವುದು, ಹಾಗೆಯೇ ವಿವೇಕಾನಂದ ರನ್ನು ಜ್ವಾಲೆಯ ನಾಲಗೆ ಎಂದಿರುವುದು, ಡಾ. ಕೆ.ಎಸ್.ನಾರಾಯಣಾಚಾರ್ಯರನ್ನು ಸನಾತನ ಸಂಸ್ಕೃತಿಯ ವೀರಧ್ವಜ ಎಂದು ಕರೆದಿರುವುದು, ಹಾ.ಮಾ.ನಾಯಕರನ್ನು ಅಂಕಣದ ಅರಸು ಎಂದಿರುವುದು ಚೇತೋಹಾರಿಹಾಗಿದೆ, ಕನ್ನಡ ಎನೆ ಕುಣಿದಾಡುದೆನ್ನೆದೆ ಎಂಬ ಮಾತು ಅಕ್ಷರಶಃ ಸತ್ಯ ಎಂಬುದರ ಅರಿವಾಗುತ್ತದೆ.

‘ಏನಿದೆ ಕನ್ನಡದಲ್ಲಿ?’ ಎಂಬ ಕುನ್ನಿಗಳಿಗೆ, ಕನ್ನಡದಲ್ಲಿ ಕಲಿತನವಿದೆ ಎಂದು ತೋರಿಸಲು ಗ.ನಾ.ಭಟ್ಟರ ಪುಸ್ತಕಗಳು, ಅವರು ಬಳಸಿರುವ ಭಾಷೆ ಜೀವಂತ, ಚಿರಂತನ ಉದಾಹರಣೆಯಾಗಿದೆ. ಹಾಗೆಯೇ, ನಾಟಕ ವಿಮರ್ಶೆಗಳಿರುವ ‘ರಂಗಸ್ಪಂದ’ ಪುಸ್ತಕವು ನಾಟಕದ ಲೇಖಕ, ನಿರ್ದೇಶಕರನ್ನೂ ಮೀರಿಸಿದ ಜಾಣರು ಪ್ರೇಕ್ಷಕ ವರ್ಗದಲ್ಲಿ ಕುಳಿತಿರುತ್ತಾರೆ ಎಂಬುದನ್ನು ಎತ್ತಿ ತೋರಿಸು ವಂತಿದೆ ನೋಡಿದ ನಾಟಕವನ್ನು ಗ.ನಾ.ಭಟ್ಟರು ವಿಮರ್ಶಿಸಿದ ಪರಿಯಿದೆಯಲ್ಲ ಅದು ನನ್ನಂಥ ಸಾಮಾನ್ಯ, ನಾಟಕ ನೋಡಿದ ಪ್ರೇಕ್ಷಕನಿದ್ದರೆ, ನಾಟಕದಲ್ಲಿ ಹೀಗೂ ಇತ್ತಾ ನಾನು ನೋಡಲೇ ಇಲ್ಲವಲ್ಲ ಎನಿಸಿ ಬಿಡುವಂತಿದೆ, ರವಿ ಕಾಣದ್ದನ್ನ ಕವಿ ಕಾಣ್ತಾನೆ, ಕವಿಕಾಣದ್ದನ್ನು? ರಸಜ್ಞ ಕಾಣುತ್ತಾನೇನೋ ಎನಿಸುವಂತೆ ಇಲ್ಲಿನ ನಾಟಕ ವಿಮರ್ಶೆಗಳಿವೆ.

ಉಷಾಹರಣ ನಾಟಕದ ಈ ಸಂಭಾಷಣೆಯನ್ನು ಪಾರ್ವತಿ ಹೇಳುವಳು’ ನಿನ್ನ ಮನೋರಥವಿದ್ದಂತೆ ನಿನ್ನ ಕೋಮಲ ಕಾಯ ವೆಂಬ ಮಾನಸ ಸರೋವರದೊಳಗಿನ ಘನ ತಾರುಣ್ಯವೆಂಬ ಮುಕ್ತಾಫಲ ಫಲವನ್ನು ಅತ್ಯಾದರದಿಂದ ಸ್ವೀಕಾರ ಮಾಡುವದಕ್ಕೆ ಯೋಗ್ಯನಾದ ತರುಣ ಪುರುಷನೆಂಬ ರಾಜ ಹಂಸನು ನಿಶ್ಚಯವಾಗಿ ನಿನಗೆ ಪ್ರಾಪ್ತನಾಗುವನು.’ಅಬ್ಬಾ, ಎಷ್ಟು ಅದ್ಭುತ ಕನ್ನಡ ವಿದು, ಹೆಣ್ಣನ್ನು ವರ್ಣ ನೆಗೆ ಎಷ್ಟು ತಕ್ಕುದಾದ ಪದಗಳಿವು! ಈಗೆಲ್ಲಿದೆ? ಹೆಣ್ಣನ್ನು ಮಾಲು, ಪೀಸು, ಢಗಾರ್ ಎಂದು ವರ್ಣಿಸುವ ಹಾಡು, ಸಂಭಾಷಣೆ ಕೇಳಿದರೆ ಮೈ ಉರಿಯುತ್ತದೆ. ಇದೇ ಪುಸ್ತಕದಲ್ಲಿ ಭಟ್ಟರ ಮಗಳು ಮತ್ತು ಮಂಜುಳಾ ನಾಟಕದ ಬಗ್ಗೆ ಬರೆ
ಯುತ್ತಾ, ಭಟ್ಟರನ್ನು ಕಣ್ವ ಮಹರ್ಷಿಗೆ ಹೋಲಿ ಸುತ್ತಾ ಕಣ್ವರ ಮಾತು’ ಸುದೈವದಿಂದ ಯಜಮಾನನ ದೃಷ್ಟಿಯು ಹೊಗೆಯಿಂದ ಮಸುಕಾಗಿದ್ದರೂ ಅಗ್ನಿಯಲ್ಲಿಯೇ ಆಹುತಿಯು ಬಿದ್ದಿದೆ’ ಇದನ್ನು ಕಾಳಿದಾಸ ಅಭಿಜ್ಞಾನ ಶಾಕುಂತಲದಿಂದ ಉದಾಹರಿಸಿದ್ದಾರೆ. ಓದಿ ಮೈ ಜುಮ್ಮೆಂದಿತು.

ಈಗ ನೋಡಿ, ಕಾಳಿದಾಸನ ಅಭಿಜ್ಞಾನ ಶಾಕುಂತಲ ಓದಬೇಕೆಂಬ ತುಡಿತ ನನ್ನಲ್ಲಿ ಉಂಟಾಯಿತು. ಗ.ನಾ.ಭಟ್ಟರ ಬರಹಗಳ
ಬಗ್ಗೆ ನಾ ಹೇಳಲಿಲ್ಲವೆ, ಅವರ ಒಂದು ಕೃತಿಯನ್ನು ಕೈಗೆತ್ತಿಕೊಂಡರೆ ಇಡೀ ಪುಸ್ತಕದ ಅಂಗಡಿಯನ್ನೆ ಕೊಳ್ಳುವ ಬಯಕೆ
ಹುಟ್ಟಿಸುತ್ತಾರೆ. ಮಾರಾಯ್ರೆ’ ಎಂದು ಮಂಗಳೂರು ಭಾಷೆಯ ಶೈಲಿಯಲ್ಲಿ ಅನ್ನಲೇಬೇಕಾಗುತ್ತದೆ. ಲೇಖಕ ಓದುಗನಿಗೆ ಹಚ್ಚಿಕೊಡ ಬೇಕಾದ ಕೆಲಸ ಇದೆ. ಇದನ್ನು ಲೇಖಕ ಮಾಡುವ ಕೃಪೆ ಎಂದು ಕೂಡಾ ನಾನು ಭಾವಿಸಿದ್ದೇನೆ.