ಅಭಿಮತ
ಬೈಂದೂರು ಚಂದ್ರಶೇಖರ ನಾವಡ
ಕರ್ನಾಟಕದ ಹೊರಗೆ ಯಾವುದೋ ಸುಂದರ ಪ್ರವಾಸಿ ತಾಣವೋ-ಧಾರ್ಮಿಕ ಮಹತ್ವದ ಸ್ಥಳದ ಜನಜಂಗುಳಿಯ ನಡುವೆ ಕನ್ನಡದ ನುಡಿ ಕೇಳಿದರೆ ಸಂತೋಷವೆನಿಸುತ್ತದೆ.
ಉತ್ತರ ಭಾರತದಲ್ಲಿ ಎಲ್ಲೋ ರೈಲ್ವೆ ಸ್ಟೇಷನ್‌ನ ಜನಸಂದಣಿಯ ನಡುವೆ ಕನ್ನಡದ ಕಂಠ ಮೊಳಗಿದರೆ ಅದೆಲ್ಲಿಂದ ಎಂದು ಕತ್ತೆತ್ತಿ ನೋಡುತ್ತೇವೆ. ೯೦ರ ದಶಕದಲ್ಲಿ ಸೈನ್ಯ ಸೇವೆಯಲ್ಲಿದ್ದಾಗ ಜಮ್ಮು ಕಾಶ್ಮೀರದ ಎತ್ತರದ ಗುಡ್ದಬೆಟ್ಟದಲ್ಲಿ ಎಲ್ಲೋ ಯಾರೋ ಎಸೆದ ಗಣೇಶ ಬೀಡಿಯ ರೇಪರ್‌ನಲ್ಲಿ ಕನ್ನಡದ ಅಕ್ಷರ ಕಂಡು ಮೇರೆ ಮೀರಿದ ಸಂತಸವಾಗುತ್ತಿತ್ತು. ಅದನ್ನೆತ್ತಿಕೊಂಡು ಮತ್ತೆ ಮತ್ತೆ ಓದಿ ರೋಮಾಂಚಿತಗೊಳ್ಳುತ್ತಿದ್ದೆ. ಹೈದರಾಬಾದ್‌ನಲ್ಲಿ ಸರ್ದಾರಜೀಯೋರ್ವ ನಾವು ಕನ್ನಡಿಗರೆಂದು ತಿಳಿದು ಕನ್ನಡದ ಮಾತನಾಡಿ ದಾಗ ಪುಳಕಗೊಂಡಿದ್ದೆವು.
ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂದು ರಾಷ್ಟ್ರಕವಿ ಕುವೆಂಪುರವರು ತಾಯ್ನುಡಿಯ ಭಾವನಾತ್ಮಕ ಮಹತ್ವವನ್ನು ಸುಂದರವಾಗಿ ವರ್ಣಿಸಿದ್ದಾರೆ. ತಾಯ್ನಾಡಿನಿಂದ ದೂರವಿರುವವರಲ್ಲಿ ಸಹಜವಾಗಿಯೇ ಭಾಷಾಭಿಮಾನ ಗುಪ್ತಗಾಮಿನಿಯಾಗಿ ಹರಿಯುತ್ತಿರುತ್ತದೆ. ಕರ್ನಾಟಕದ ಹೊರಗೆ ವಿದೇಶಗಳಲ್ಲಿ ಕನ್ನಡಿಗರು ಹೆಚ್ಚು ಸಂಘಟಿತರಾಗುತ್ತಿದ್ದಾರೆ.
ಕನ್ನಡ ಸಂಘ- ಸಮ್ಮೇಳನಗಳು ವಿದೇಶಗಳಲ್ಲೂ ನಡೆಯುತ್ತಿವೆ. ಜಾಗತೀಕರಣದ ಇಂದಿನ ಯುಗದಲ್ಲಿ ಒಂದೆಡೆ ಕನ್ನಡದ ಪತಾಕೆ ವಿಶ್ವದಾದ್ಯಂತ ಮೊಳಗುತ್ತಿದ್ದರೂ ಇನ್ನೊಂದೆಡೆ ಕರ್ನಾಟಕದ ಕನ್ನಡ ತನ್ನ ಕಸುವು ಕಳೆದುಕೊಳ್ಳುತ್ತಿದೆಯೇನೋ ಎನ್ನುವ ಕಳವಳ ಕನ್ನಡಾಭಿಮಾನಿಗಳನ್ನು ಕಾಡುತ್ತಿದೆ. ಬದುಕಿನ ಹೋರಾಟದ ವಿವಿಧ ಮಜಲುಗಳಲ್ಲಿ ಯಶಸ್ಸುಮತ್ತು
ಸಾಧನೆ ಗಾಗಿ ವಿವಿಧ ಭಾಷೆಗಳನ್ನು ಕಲಿಯಬೇಕಾಗುತ್ತದೆ ನಿಜ.
ಪರ-ಭಾಷೆ, ಪರ-ದೇಶ ದುಡಿಯುವ ಕೈಗೆ ಕೆಲಸ ಕೊಟ್ಟಿರಬಹುದು ಹೊಟ್ಟೆಗೆ ಹಿಟ್ಟು ಕೊಟ್ಟಿರಬಹುದು. ಯಾವ ರೀತಿಯಲ್ಲಿ ಹೆತ್ತ
ತಾಯಿಯನ್ನು ಮರೆಯಲು ಸಾಧ್ಯವಿಲ್ಲವೋ, ಅದೇ ರೀತಿ ಈ ನೆಲದಲ್ಲಿ ಜನಿಸಿದವರು ಹೃದಯದ ಭಾಷೆಯಾದ ಕನ್ನಡವನ್ನು ಕೊನೆಯುಸಿರಿನ ತನಕವೂ ಮರೆಯಲು ಸಾಧ್ಯವಿಲ್ಲ. ಕನ್ನಡವನ್ನು ಮರೆತರೆ ತಮ್ಮತನವನ್ನು ಮರೆತಂತೆಯೇ ಸರಿ. ಎದರೂ ಇರು ನೀ ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕವಿವಾಣಿಯನ್ನು ದಿವ್ಯವಾಣಿಯೆಂದು ನಾವೆಲ್ಲ ಸ್ವೀಕರಿಸಿ ನಮ್ಮ ಮುಂದಿನ ಪೀಳಿಗೆಯಲ್ಲಿ ತುಂಬಬೇಕಾಗಿದೆ.
ಭಾಷಾ ಸಾಮರಸ್ಯಕ್ಕೆ ಹೆಸರಾದ ಸೌಮ್ಯ ಸ್ವಭಾವದ ಕನ್ನಡಿಗರು ಸೌಹಾರ್ದತೆ, ಸಹಿಷ್ಣುತೆಯ ದೃಷ್ಟಿಯಿಂದ ಅನ್ಯ ಭಾಷೆಯನ್ನು
ಸಹೃದಯತೆಯಿಂದ ಸಹಿಸಿಕೊಳ್ಳುತ್ತೇವೆ. ಕನ್ನಡದ ಅಸ್ತಿತ್ವಕ್ಕೆ ಕೊಡಲಿಯೇಟು ಬೀಳುತ್ತಿರುವುದನ್ನು ನೋಡಿ ಸಹಿಸಿಕೊಳ್ಳುವುದು ತರವಲ್ಲ. ವಿನಯಪೂರ್ವಕವಾಗಿಯೇ ಸರಿ ನೆಲದ ಭಾಷೆಯನ್ನು ಗೌರವಿಸುವಂತೆ ಅಗ್ರಹಿಸುವುದು ಕನ್ನಡದ ಉಳಿವಿಕೆಗಾಗಿ ಅನಿವಾರ್ಯವೂ ಹೌದು ನಮ್ಮ ಕರ್ತವ್ಯವೂ ಹೌದು. ಅದನ್ನು ಕನ್ನಡಾಂಬೆಯ ಋಣ ಸಂದಾಯವೆಂದೇ ತಿಳಿದು ಮಾಡ ಬೇಕಾಗಿದೆ. ಹಿಂದಿ, ಇಂಗ್ಲಿಷ್ ಸಹಿತ ಅನ್ಯ ಸಂಪರ್ಕ ಭಾಷೆಗಳನ್ನು ಗೌರವಿಸೋಣ ಜತೆಯಲ್ಲಿ ಕನ್ನಡದ ಬಾವುಟವನ್ನು ಎತ್ತಿ
ಹಿಡಿಯೋಣ.
ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡಿಗರಾದ ನಾವೇ ಸ್ವತಃ ಮಾತೃ ಭಾಷೆಯನ್ನು ಬಳಸದಿದ್ದರೆ ಹೇಗೆ? ನಮ್ಮ ಕನ್ನಡ ಪ್ರೇಮ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ದೈನಂದಿನ ವ್ಯವಹಾರಗಳಲ್ಲಿ-ಕಚೇರಿಗಳಲ್ಲಿ ನಮ್ಮ ಸಂಪರ್ಕದಲ್ಲಿರುವ ಅನ್ಯ ಭಾಷೆಯವರಿಗೆ ಕನ್ನಡ ಕಲಿಸೋಣ,ಕನ್ನಡ ಬಳಸುವಂತೆ ಪ್ರೋತ್ಸಾಹಿಸೋಣ, ನಮ್ಮ ಮಕ್ಕಳಲ್ಲಿ ಕನ್ನಡ ಪ್ರೇಮದ ಎರಕ
ಹೊಯ್ಯೋಣ. ಕನ್ನಡ ಸಾಹಿತ್ಯದ ಸೊಬಗನ್ನು ಆಸ್ವಾದಿಸುವ, ಸಂಗೀತದ ಸುಧೆಯನ್ನು ಸವಿಯುವರ ಸಂಖ್ಯೆ ವೃದ್ಧಿಸಲಿ. ಕನ್ನಡದ ಪುಸ್ತಕ-ಪತ್ರಿಕೆಗಳನ್ನು ಓದುವ ಹವ್ಯಾಸಕ್ಕೆ ನೀರೆರೆಯೋಣ. ಕನ್ನಡವನ್ನು ಉಳಿಸಿ-ಬೆಳೆಸುವ ಕೈಂಕರ್ಯ ಕನ್ನಡಿಗರೆಲ್ಲ ಎರಲ್ಲಿ ಉದಿಸಲಿ. ಸಿರಿಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.