ರಾಜ್ಯದಲ್ಲಿ ನೂತನವಾಗಿ ಉದ್ಯಮಗಳನ್ನು ಆರಂಭಿಸುವವರಿಗಾಗಿ ಸರಕಾರದಿಂದ ಬಹಳಷ್ಟು ಸಹಕಾರ ದೊರೆಯುತ್ತಿದೆ. ಆದರೆ ನೂತನವಾಗಿ ಆರಂಭಗೊಳ್ಳುವ ಉದ್ಯಮಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕಿರುವ ಅವಶ್ಯಕತೆಯಿದೆ.
ಇದೀಗ ಜಾರಿಗೊಳಿಸಿರುವ ಇಂಡಸ್ಟ್ರಿಯಲ್ ಫೆಸಿಲಿಟೇಷನ್ ಆ್ಯಕ್ಟ್ (ಐಎಫ್‌ಎ) ಮತ್ತಷ್ಟು ಅನುಕೂಲ ಒದಗಿಸಿದೆ. ಉದ್ದಿಮೆ ಸ್ಥಾಪನೆಗೆ ಅಗತ್ಯವಿರುವ ಸವಲತ್ತು, ಉತ್ತೇಜನ, ಮೂಲ ಸೌಕರ್ಯ ಹಾಗೂ ಅನುಮತಿಯನ್ನು ತ್ವರಿತವಾಗಿ ಒದಗಿಸುವ ನಿಟ್ಟಿ ನಲ್ಲಿ ಈ ಕಾಯಿದೆಯನ್ನು ಜಾರಿಗೊಳಿಸಲಾಗಿದೆ.
ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸರ್ವಾನುಮತ ದ ಅನುಮತಿ ದೊರೆತಿದ್ದು, ಈ ಕಾಯಿದೆ ಜಾರಿಯಿಂದ ಉದ್ಯಮಿ ಯೊಬ್ಬರು ಅನುಮತಿ ದೊರೆತ ಕೂಡಲೇ ಘಟಕದ ಕಾಮಗಾರಿ ಆರಂಭಿಸಬಹುದಾಗಿದೆ. ಆದರೆ ನೂತನವಾಗಿ ಉದ್ಯಮಗಳನ್ನು
ಆರಂಭಿಸುವವರು ಸರಕಾರದ ಮಾರ್ಗಸೂಚಿಗಳ ಹೊರತಾಗಿಯೂ ಸ್ವಯಂಪ್ರೇರಕವಾಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಕೊಳ್ಳುವುದು ಮುಖ್ಯ. ಬೆಳೆಯುತ್ತಿರುವ ಕೈಗಾರಿಕೆಗಳಿಗೆ ಅನುಗುಣವಾಗಿ ಸುರಕ್ಷತಾ ಅಧಿಕಾರಿಗಳ ನೇಮಕವಾಗಬೇಕಿದೆ.
ಕೈಗಾರಿಕಾ ಘಟಕಗಳಲ್ಲಿ ಹಾಗೂ ಅವುಗಳ ನಿರ್ಮಾಣ ಕಾರ್ಯದಲ್ಲಿ ಸುರಕ್ಷತಾ ಅಧಿಕಾರಿ ಗಳನ್ನು ಬಳಸಿಕೊಳ್ಳಬೇಕಿದೆ. ಏಕೆಂದರೆ ಇತ್ತೀಚೆಗೆ ವಿಶಾಖ ಪಟ್ಟಣಂನ ಆರ್.ಆರ್.ವೆಂಕಟಾಪುರ ಗ್ರಾಮದ ಎಲ್.ಜಿ. ಪಾಲಿಮರ್‌ಸ್ ನಲ್ಲಿ ಸಂಭವಿಸಿದ ಅನಿಲದುರಂತ, ಜೆ.ಎನ್.ಪಾರ್ಮಸಿಟಿ ಅನಿಲ ದುರಂತ, ಮಹಾರಾಷ್ಟ್ರದ ರಾಯ್ ಗಡ ಜಿಲ್ಲೆಯ ರಾಸಾಯನಿಕ ಕಂಪನಿಯಲ್ಲಿ ಸಂಭವಿಸಿದ ಸ್ಫೋಟ ಹಾಗೂ ಬೆಂಗಳೂರಿನ ಹೊಸಗುಡ್ಡದಹಳ್ಳಿಯ ರಾಸಾಯನಿಕ ಕಂಪನಿಯಲ್ಲಿ ಸಂಭವಿಸಿದ ಅವಘಡಗಳು ಉದ್ಯಮಗಳ ಸ್ಥಾಪನೆಗಳ ಜತೆಗೆ ಸುರಕ್ಷತೆಯ ಮಹತ್ವವನ್ನು ಸಾರುತ್ತಿದೆ.
ರಾಜ್ಯದಲ್ಲಿ ಹಲವು ನೂತನ ಉದ್ಯಮಗಳ ಆರಂಭದ ಜತೆಗೆ 6ಕಡೆ ಕೈಗಾರಿಕೆ ಟೌನ್‌ಶಿಪ್‌ಗಳನ್ನೂ ನಿರ್ಮಿಸಲಾಗುತ್ತಿದೆ. ಉದ್ಯಮ ಗಳ ಸ್ಥಾಪನೆಗೆ ವೇಗ ದೊರೆತಿರುವ ಇಂದಿನ ದಿನಗಳಲ್ಲಿ ಉದ್ಯಮಿಗಳು ಸ್ವಯಂಪ್ರೇರಿತವಾಗಿ ಸುರಕ್ಷತೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ.