Saturday, 23rd November 2024

Special Campaign 4.0: ಗುಜರಿ ಮಾರಾಟ ಮಾಡಿ ಬರೋಬ್ಬರಿ 2,364 ಕೋಟಿ ರೂ. ಆದಾಯ ಗಳಿಸಿದ ಕೇಂದ್ರ ಸರ್ಕಾರ

Special Campaign 4.0

ಹೊಸದಿಲ್ಲಿ: ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿಶೇಷ ಸ್ವಚ್ಛತಾ ಅಭಿಯಾನ (Special Campaign 4.0)ದ ಮೂಲಕ ಕೋಟಿ ಕೋಟಿ ಆದಾಯ ಹರಿದು ಬರುತ್ತಿದೆ. 2021-24ರ ಅವಧಿಯಲ್ಲಿ ಈ ಸ್ವಚ್ಛತಾ ಆಂದೋಲದ ಮೂಲಕ ಸಂಗ್ರಹಿಸಲಾದ ಗುಜರಿ ವಸ್ತುಗಳನ್ನು ಮಾರಾಟ ಮಾಡಿ ಕೇಂದ್ರ ಸುಮಾರು 2,364 ಕೋಟಿ ರೂ. ಆದಾಯ ಗಳಿಸಿದೆ. ಇನ್ನು ಅಕ್ಟೋಬರ್‌ನಲ್ಲಿ ಮುಕ್ತಾಯಗೊಂಡ ವಿಶೇಷ ಸ್ವಚ್ಛತಾ ಆಂದೋಲನದಲ್ಲಿ ಸಂಗ್ರಹಿಸಲಾದ ಗುಜರಿಯಿಂದ 650 ಕೋಟಿ ರೂ. ಹರಿದು ಬಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಮಾಹಿತಿ ನೀಡಿದ್ದಾರೆ. ʼʼಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದ ಭಾರತದ ಅತಿದೊಡ್ಡ ಅಭಿಯಾನವಾದ ವಿಶೇಷ ಅಭಿಯಾನ 4.0 ಮೂಲಕ ಸ್ಕ್ರ್ಯಾಪ್ ವಿಲೇವಾರಿ ಮಾಡುವ ಮೂಲಕ 2,364 ಕೋಟಿ ರೂ. (2021ರಿಂದ) ಆದಾಯ ಸಂಗ್ರಹವಾಗಿದೆʼʼ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಅಭಿಯಾನ 4.0 ಕುರಿತು ಜಿತೇಂದ್ರ ಸಿಂಗ್ ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿದ ಮೋದಿ, “ಶ್ಲಾಘನೀಯ! ದಕ್ಷ ನಿರ್ವಹಣೆ ಮತ್ತು ಪೂರ್ವಭಾವಿ ಕ್ರಮದ ಮೂಲಕ ಈ ಪ್ರಯತ್ನವು ಉತ್ತಮ ಫಲಿತಾಂಶಗಳನ್ನು ಸಾಧಿಸಿದೆ. ಸಾಮೂಹಿಕ ಪ್ರಯತ್ನಗಳು ಸುಸ್ಥಿರ ಫಲಿತಾಂಶಗಳಿಗೆ ಹೇಗೆ ಕಾರಣವಾಗಬಹುದು, ಸ್ವಚ್ಛತೆ ಮತ್ತು ಆರ್ಥಿಕ ವಿವೇಚನೆ ಎರಡನ್ನೂ ಉತ್ತೇಜಿಸಬಹುದು ಎಂಬುದನ್ನು ಇದು ಸಾರಿ ಹೇಳಿದೆʼʼ ಎಂದು ಮೋದಿ ಹೇಳಿದ್ದಾರೆ.

ಅಭಿಯಾನವನ್ನು ವಿಶೇಷ ಪೋರ್ಟಲ್ ಮೂಲಕ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಸರ್ಕಾರಿ ಸಚಿವಾಲಯಗಳು ಗುರಿಗಳನ್ನು ಶೇ. 90-100ರಷ್ಟು ಪೂರ್ಣಗೊಳಿಸಿವೆ ಎಂದು ವರದಿ ತಿಳಿಸಿದೆ. ಅ. 31ರಂದು ಮುಕ್ತಾಯಗೊಂಡ ವಿಶೇಷ ಅಭಿಯಾನ 4.0, ‘ರಾಮಾಯಣ’ ಹಸ್ತಪ್ರತಿಯ ಸಂರಕ್ಷಣೆ ಮತ್ತು ಗುಜರಿಯಿಂದ ಕಲಾ ಶಿಲ್ಪಗಳನ್ನು ರಚಿಸುವಂತಹ ಹೊಸ ಯೋಜನೆಯನ್ನೂ ಒಳಗೊಂಡಿತ್ತು.

ಸರ್ಕಾರಿ ಕಚೇರಿಗಳಲ್ಲಿ ಜಾಗವನ್ನು ಆಕ್ರಮಿಸಿಕೊಂಡಿದ್ದ ಸುಮಾರು 131.4 ಲಕ್ಷ ಭೌತಿಕ ಕಡತಗಳು ಮತ್ತು ಇತರ ಬಳಕೆಯಲ್ಲಿಲ್ಲದ ವಸ್ತುಗಳನ್ನು ತೊಡೆದುಹಾಕಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸುಮಾರು 643.8 ಲಕ್ಷ ಚದರ ಅಡಿ ಜಾಗವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೈಲ್ವೆ ನಿಲ್ದಾಣಗಳು, ಅಂಚೆ ಕಚೇರಿಗಳು, ಬ್ಯಾಂಕುಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಕಲ್ಲಿದ್ದಲು ಕ್ಷೇತ್ರಗಳು ಮತ್ತು ಗಣಿಗಳು ಸೇರಿದಂತೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಾಗರೋತ್ತರ ಮಿಷನ್‌ಗಳು ಈ ಬಾರಿಯ ಸ್ವಚ್ಛತಾ ಅಭಿಯಾನದ ಭಾಗವಾಗಿತ್ತು. ಸ್ವಚ್ಛತಾ ತಾಣಗಳ ಸಂಖ್ಯೆಯ ದೃಷ್ಟಿಯಿಂದ ಪ್ರಸ್ತುತ ಅಭಿಯಾನವು 4 ವರ್ಷಗಳ ಹಿಂದಿನ ಮೊದಲ ಅಭಿಯಾನದ ವ್ಯಾಪ್ತಿಗಿಂತ 97 ಪಟ್ಟು ಹೆಚ್ಚಾಗಿದೆ. 2.9 ಲಕ್ಷ ಶಾಲೆಗಳು, 1 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳು, 56,000ಕ್ಕೂ ಹೆಚ್ಚು ರೈಲ್ವೆ ಆಸ್ತಿಗಳು ಈ ಬಾರಿ ಇದರ ಭಾಗವಾಗಿದ್ದವು.

4 ವರ್ಷಗಳ ಹಿಂದೆ ಮೊದಲ ಅಭಿಯಾನದಲ್ಲಿ 82 ಕೋಟಿ ರೂ., ಎರಡನೇ ಅಭಿಯಾನದಲ್ಲಿ 373 ಕೋಟಿ ರೂ., ಮೂರನೇ ಅಭಿಯಾನದಲ್ಲಿ 556 ಕೋಟಿ ರೂ. ಆದಾಯ ಹರಿದು ಬಂದಿದೆ. ಮೊದಲ ಹಂತದ ಅಭಿಯಾನದಲ್ಲಿ 12 ಲಕ್ಷ ಚದರ ಅಡಿಯನ್ನು ಸ್ವಚ್ಛಗೊಳಿಸಿದ್ದರೆ ಈ ಬಾರಿ ಸುಮಾರು 190 ಲಕ್ಷ ಚದರ ಅಡಿಗಳನ್ನು ಶುಚಿಗೊಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಭಾಷಣಕ್ಕೆ ಬಿಜೆಪಿ ಪ್ರಾಂಪ್ಟರ್! ಸಿಎಂ ಏಕನಾಥ್ ಶಿಂಧೆ ವಿಡಿಯೋ ವೈರಲ್