Friday, 29th November 2024

Roopa Gururaj Column: ಗಾಯ ಮಾಗದಂತೆ, ಪದೇ ಪದೇ ಕೆರೆದುಕೊಳ್ಳುವುದು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಕೋತಿ ಮರದಿಂದ ಮರಕ್ಕೆ ಹಾರುತ್ತಿರುವಾಗ, ಅದರ ಬಾಲಕ್ಕೆ ಸ್ವಲ್ಪ ತರಚು ಗಾಯವಾಯಿತು. ತನ್ನ ಬಾಲಕ್ಕೆ ಏನೋ ಆಗಬಾರದ್ದು ಆಗಿಬಿಟ್ಟಿದೆ ಎಂದುಕೊಂಡು, ಬಾಲವನ್ನು ಉಜ್ಜಿಕೊಳ್ಳತೊಡಗಿತು. ಅದು ಉಜ್ಜಿಕೊಂಡಷ್ಟೂ, ಗಾಯ ಜಾಸ್ತಿಯಾಗತೊಡಗಿತು. ಆದರೂ ಅದು ಬಿಡದೇ, ಅದೇ ಜಾಗದಲ್ಲಿ ಮತ್ತೆ ಮತ್ತೆ ಉಜ್ಜಿಕೊಳ್ಳತೊಡಗಿತು.

ಅದು ಈ ರೀತಿಯಾಗಿ ಕೆರೆದುಕೊಳ್ಳುವುದನ್ನು ನಿಲ್ಲಿಸಲೇ ಇಲ್ಲ. ಹೀಗೇ ಉಜ್ಜುತ್ತಲೇ ಕೊನೆಗೆ ಮಂಗ ಸತ್ತೇ ಹೋಯಿತು. ಬಹಳ ಸಲ ನಾವು
ಕೂಡ ಈ ಮಂಗನಂತೆ ವರ್ತಿಸುತ್ತೇವೆ. ಯಾರಾದರೂ ನಮಗೆ ಸ್ವಲ್ಪ ಬೇಜಾರು ಅವಮಾನಮಾಡಿ, ಸಿಟ್ಟು ಬರಿಸಿದರೆಂದರೆ ಸಾಕು,
ಮಂಗ ಬಾಲವನ್ನು ಕೆರೆದುಕೊಂಡು ಗಾಯ ಮಾಡಿಕೊಂಡಂತೆ ಪದೇ ಪದೇ ಅದನ್ನೇ ನೆನಪಿಸಿಕೊಂಡು ನಮ್ಮ ನೆಮ್ಮದಿಯನ್ನೇ ಹಾಳು
ಮಾಡಿಕೊಳ್ಳುತ್ತೇವೆ. ಇದರಿಂದ ಕ್ರಮೇಣ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯದಲ್ಲೂ ಏರುಪೇರು ಉಂಟಾಗುತ್ತದೆ.
ಆದರೂ ಕೂಡ ನಾವು ಆ ಘಟನೆಯನ್ನು ನೆನಪಿಸಿಕೊಳ್ಳುವುದನ್ನು ಮಾತ್ರ ಬಿಡುವುದೇ ಇಲ್ಲ. ಅದೇ ನೆನಪಿನಲ್ಲಿ ಒzಡಿ ಮಾನಸಿಕವಾಗಿ
ಕುಗ್ಗಿ ಹೋಗಿ, ಅದರ ಒಂದು ರೀತಿಯ ಖುಷಿಯನ್ನು ಅನುಭವಿಸುವ ಮಟ್ಟಕ್ಕೆ ಹೋಗುತ್ತೇವೆ.

ಹೀಗೆ ಮಾಡುವುದರಿಂದ, ನಾವು ಮಾಡಬೇಕಾದ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಕೆಲಸ ಮಾಡಿದರೂ ಕೂಡಾ ಅದು ಸರಿ ಇರುವುದಿಲ್ಲ. ಇದರಿಂದ ನಾವು ಮಾಡಬೇಕೆಂದುಕೊಂಡ ಕೆಲಸಗಳನ್ನು ಪೂರ್ತಿಗೊಳಿಸಲಾಗದೇ ಭವಿಷ್ಯದಲ್ಲಿ ಬರೀ ತೊಂದರೆಗಳನ್ನೇ ಅನುಭವಿಸಬೇಕಾಗುತ್ತದೆ.

ದೈಹಿಕ ಗಾಯಗಳಿಗಿಂತ ಮಾನಸಿಕ ಗಾಯಗಳು ನಮ್ಮ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ದೈಹಿಕ ಗಾಯಗಳಿಗೆ ಆಸ್ಪತ್ರೆಗೆ
ಹೋಗಿ ಔಷ ಹಚ್ಚಿ ಸರಿಪಡಿಸಿಕೊಂಡು ಬಿಡಬಹುದು. ಆದರೆ ಮಾನಸಿಕ ಗಾಯಗಳು ಮಾಗಲು ವರ್ಷಗಳೇ ಬೇಕಾಗಬಹುದು. ಇಂತಹ ಸಮಯದಲ್ಲಿ ನಾವು ಒಂದು ಸಕಾರಾತ್ಮಕ ಯೋಚನೆಯನ್ನು ಬೆಳೆಸಿಕೊಳ್ಳದೆ ಹೋದರೆ, ಈ ಗಾಯಗಳು ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮವನ್ನು ಬೀರುತ್ತವೆ.

ನಮಗೆ ಮನುಷ್ಯರ ಮೇಲೆ ನಂಬಿಕೆಯೇ ಹೊರಟು ಹೋಗುತ್ತದೆ. ಎಲ್ಲರ ಬಗ್ಗೆಯೂ ಅನುಮಾನ ತಾತ್ಸಾರ ಭಾವನೆಗಳು ಮೂಡಲು ಪ್ರಾರಂಭವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಯಾರು ನಮ್ಮನ್ನು ಪ್ರೀತಿಸಲು ನಮ್ಮ ಹತ್ತಿರವಾಗುತ್ತಾರೋ ಅವರನ್ನು ನಾವು ಅನುಮಾನದ ದೃಷ್ಟಿಯಿಂದ ನೋಡಿ ಅವರಿಗೆ ನೋವುಂಟು ಮಾಡುತ್ತೇವೆ. ಆದ್ದರಿಂದಲೇ ಮಾನಸಿಕ ನೋವುಗಳಿಂದ ಮುಕ್ತಿ ಹೊಂದುವುದು
ಬಹಳ ಮುಖ್ಯ.

ಇದೇನು ಸುಲಭದ ವಿಷಯವಲ್ಲ ಕೆಲವೊಮ್ಮೆ ಇದಕ್ಕೆ ವೈದ್ಯರ ಸಹಾಯ ಕೂಡ ಬೇಕಾಗುತ್ತದೆ. ಮಕ್ಕಳು ದೊಡ್ಡವರು ಯಾವುದೇ ವಯಸ್ಸಿನವರು
ಜೀವನದಲ್ಲಿ ಆದ ಕಹಿ ಘಳಿಗೆಗಳನ್ನು ಮರೆಯಲಾಗದೆ ಹೋದರೆ ಖಿನ್ನತೆಗೆ ಜಾರಬಹುದು. ಕೆಲವೊಮ್ಮೆ ಇದರಿಂದ ಹೊರಬರಲು ಮನೋ ವೈದ್ಯರ ಸಹಾಯ ಕೂಡ ಬೇಕಾಗುತ್ತದೆ. ಸರಿಯಾದ ವೈದ್ಯೋಪಚಾರದಿಂದ ಇಂತಹ ಖಿನ್ನತೆಗಳಿಂದ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ. ಮಾನಸಿಕ ನೋವುಗಳನ್ನು ಎಂದು ಚಿಕ್ಕದಾಗಿ ಪರಿಗಣಿಸಬೇಡಿ. ಅದು ಬಹಳ ವರ್ಷ ಮನಸ್ಸಿನಲ್ಲಿ ಬೇರೂರಿ ನಮ್ಮ ಜೀವನವನ್ನೇ ಹಾಳು ಮಾಡಿಬಿಡಬಹುದು. ಇದೆಲ್ಲದರ ಜೊತೆ ಸದಾ ಕ್ರಿಯಾತ್ಮಕ ವಾದ ಬದುಕನ್ನು ಕಟ್ಟಿಕೊಳ್ಳುತ್ತಾ ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾ ಒಳ್ಳೆಯವರ ಒಡನಾಟ ಇರಿಸಿಕೊಂಡಾಗ ಬದುಕನ್ನು ಆರೋಗ್ಯಕರ ದೃಷ್ಟಿಯಲ್ಲಿ ನೋಡುತ್ತೇವೆ. ಅದೇನೆ ಆದರೂ ಹಳೆಯದನ್ನು ಮರೆತು ಹೊಸ ಜೀವನವನ್ನು ಸ್ವೀಕರಿಸಲು ನಾವು ಸಿದ್ಧರಾಗಬೇಕು.

ಸತ್ತು ಹೋದ ಇಲಿಯನ್ನು ಮನೆಯಲ್ಲಿ ಇಟ್ಟುಕೊಂಡು ಅದನ್ನು ಸಿಕ್ಕಸಿಕ್ಕವರಿಗೆಲ್ಲ ತೋರಿಸದೇ ಅದನ್ನು ಮನೆಯ ಆಚೆಗೆ ಹೇಗೆ ಬಿಸಾಡು ತ್ತೇವೋ, ಹಾಗೆಯೇ ನಮ್ಮ ಮನಸ್ಸಿಗಾದ ನೋವು ಅಸಮಾಧಾನ, ಅವಮಾನಗಳನ್ನು, ಬೇರೆಯವರ ಮುಂದೆ ಹೇಳಿಕೊಂಡು ದುಃಖಿಸುವ ಬದಲು ಅದನ್ನು ಮೊದಲು ನಮ್ಮ ಮನಸ್ಸಿನಿಂದ ಆಚೆಗೆ ಎಸೆಯಬೇಕು. ಗಾಯವಾದ ಬಾಲವನ್ನೇ ಮತ್ತೆ, ಮತ್ತೆ ಕೆರೆದುಕೊಂಡು ದೊಡ್ಡದು ಮಾಡಿಕೊಳ್ಳುವ ಮಂಗನಂತಾಗಬಾರದು.

ಇದನ್ನೂ ಓದಿ: #RoopaGururaj