ದೇಹ, ಮನಸ್ಸನ್ನು ಶುದ್ದಗೊಳಿಸುವ ಸ್ನಾನಗೃಹಗಳು (Bathroom) ವಾಸ್ತು (Vastu Tips) ಪ್ರಕಾರ ಇದ್ದರೆ ಮಾತ್ರ ಅದರ ಪ್ರಯೋಜನ ನಮಗೆ ಸಿಗಲು ಸಾಧ್ಯ. ಕೆಲವು ವಾಸ್ತು ನಿಯಮಗಳನ್ನು ಅನುಸರಿಸುವುದು ಮನೆಯೊಳಗೆ ಸಮತೋಲಿತ ಮತ್ತು ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಸಹಾಯ ಮಾಡುತ್ತದೆ.
ಹಿಂದೂಗಳ ಮನೆಗಳಲ್ಲಿ ವಾಸ್ತು ಶಾಸ್ತ್ರ, ವಾಸ್ತುಶಿಲ್ಪದ ಪ್ರಾಚೀನ ವಿಜ್ಞಾನವು ಸಾಮರಸ್ಯ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕೆ ಮಾರ್ಗದರ್ಶನ ಮಾಡುತ್ತದೆ. ಸ್ನಾನಗೃಹಗಳು ಶುದ್ದೀಕರಣ ಮತ್ತು ನವೀಕರಣಕ್ಕೆ ಸಂಬಂಧಿಸಿದ ಪ್ರದೇಶವಾಗಿದೆ. ಹೀಗಾಗಿ ಇದರಲ್ಲಿ ವಾಸ್ತು ಮಾರ್ಗಸೂಚಿಗಳನ್ನು ಅನುಸರಿಸುವುದು ಮುಖ್ಯವಾಗಿದೆ.
ಕಳಪೆ ವಿನ್ಯಾಸದ ಸ್ನಾನಗೃಹಗಳು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವಿಗೆ ಅಡ್ಡಿ ಉಂಟು ಮಾಡುತ್ತದೆ. ಇದು ಮನೆಯವರ ಆರೋಗ್ಯ, ಸಂಬಂಧ ಮತ್ತು ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ಸಮತೋಲಿತ ಮತ್ತು ಸಾಮರಸ್ಯದ ವಾಸಸ್ಥಳವನ್ನು ರಚಿಸಲು ಸ್ನಾನ ಗೃಹದಲ್ಲಿ ಈ ಎಂಟು ತಪ್ಪುಗಳನ್ನು ಮಾಡಬೇಡಿ.
ಈಶಾನ್ಯ ದಿಕ್ಕು ಸೂಕ್ತವಲ್ಲ
ವಾಸ್ತು ಪ್ರಕಾರ ಈಶಾನ್ಯ ದಿಕ್ಕನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ದೈವಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ಈ ದಿಕ್ಕಿನಲ್ಲಿ ಸ್ನಾನಗೃಹ ಇರಿಸುವುದರಿಂದ ಮನೆಯ ಧನಾತ್ಮಕ ಶಕ್ತಿ ನಾಶವಾಗುತ್ತದೆ. ಸ್ನಾನಗೃಹಗಳು ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು. ಒಂದು ವೇಳೆ ಈಶಾನ್ಯ ದಿಕ್ಕಿನಲ್ಲಿ ಸ್ನಾನಗೃಹವನ್ನು ಇರಿಸಲೇಬೇಕಾದರೆ ವಾಸ್ತು ಪ್ರಕಾರ ನಿರ್ದಿಷ್ಟ ಬಣ್ಣಗಳನ್ನು ಬಳಸುವುದು ಅಥವಾ ಆ ಪ್ರದೇಶದಲ್ಲಿ ವಾಸ್ತು ಪಿರಮಿಡ್ ಅನ್ನು ಇರಿಸುವುದು ಸೂಕ್ತ.
ಗಾಢ ಅಥವಾ ದಪ್ಪ ಬಣ್ಣಗಳನ್ನು ಬಳಸಬೇಡಿ
ಕಪ್ಪು, ಗಾಢ ನೀಲಿ ಅಥವಾ ಕೆಂಪು ಬಣ್ಣಗಳಂತಹ ಗಾಢ ಅಥವಾ ದಪ್ಪ ಬಣ್ಣಗಳನ್ನು ಸ್ನಾನಗೃಹದಲ್ಲಿ ಬಳಸಬಾರದು. ಇದು ನಕಾರಾತ್ಮಕ ಶಕ್ತಿಯ ಹರಿವನ್ನು ಉಂಟು ಮಾಡಬಹುದು. ತಿಳಿ ಬಣ್ಣಗಳಾದ ಬಿಳಿ, ಕೆನೆ, ನೀಲಿ, ಹಸಿರು ಬಣ್ಣಗಳಿಗೆ ಆದ್ಯತೆ ನೀಡಿ. ಇವುಗಳು ಶಾಂತ, ಸಕಾರಾತ್ಮಕತೆ ಮತ್ತು ಮುಕ್ತತೆಯ ಭಾವವನ್ನು ತರುತ್ತವೆ ಹಾಗೂ ಧನಾತ್ಮಕ ಶಕ್ತಿಯ ಹರಿವನ್ನು ವರ್ಧಿಸುತ್ತದೆ
ಬಾಗಿಲಿನ ಮುಂಭಾಗದಲ್ಲಿ ಕನ್ನಡಿಗಳನ್ನು ಇಡಬೇಡಿ
ವಾಸ್ತು ತತ್ತ್ವಗಳ ಪ್ರಕಾರ ಸ್ನಾನ ಗೃಹದ ಬಾಗಿಲಿನ ಎದುರು ಕನ್ನಡಿಯನ್ನು ಇಡಬಾರದು. ಕನ್ನಡಿಗಳು ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಬಾಗಿಲಿನ ಎದುರು ಅದನ್ನು ಇರಿಸಿದಾಗ ಸ್ನಾನ ಗೃಹದಿಂದ ಹರಿಯುವ ನಕಾರಾತ್ಮಕ ಶಕ್ತಿಯನ್ನು ವರ್ಧಿಸಬಹುದು. ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಶಾಂತ ವಾತಾವರಣವನ್ನು ಉಂಟು ಮಾಡಲು ಸ್ನಾನಗೃಹದ ಒಳ ಗೋಡೆಗಳ ಮೇಲೆ ಕನ್ನಡಿಗಳನ್ನು ಇರಿಸಿ.
ಬಾತ್‌ರೂಮ್ ಬಾಗಿಲು ಮುಚ್ಚಿ
ಸ್ನಾನಗೃಹವು ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುವ ಸ್ಥಳವಾಗಿದೆ. ಹೀಗಾಗಿ ಬಾತ್ ರೂಮ್ ಬಾಗಿಲು ಸದಾ ತೆರೆದಿರುವುದು ಆ ಶಕ್ತಿಯು ಮನೆಯ ಉಳಿದ ಭಾಗಗಳಿಗೆ ಹರಿಯುವಂತೆ ಮಾಡುತ್ತದೆ. ಇದು ಕುಟುಂಬದ ಯೋಗಕ್ಷೇಮ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಬಾತ್ ರೂಮ್ ಬಳಕೆಯಲ್ಲಿಲ್ಲದಿದ್ದಾಗ ಬಾಗಿಲು ಮುಚ್ಚುವುದನ್ನು ರೂಢಿಸಿಕೊಳ್ಳಿ.
ಟಾಯ್ಲೆಟ್ ಸೀಟ್ ಈ ದಿಕ್ಕಿನಲ್ಲಿ ಇಡಬೇಡಿ
ವಾಸ್ತು ಪ್ರಕಾರ ಟಾಯ್ಲೆಟ್ ಸೀಟ್ ಗೆ ನಿರ್ದಿಷ್ಟ ದಿಕ್ಕು ಮುಖ್ಯವಾಗಿದೆ. ಇದನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಟಾಯ್ಲೆಟ್ ಸೀಟ್ ಅನ್ನು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸಬಹುದು. ಇದು ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಡುಗೆ ಅಥವಾ ಪೂಜಾ ಕೊಠಡಿಯ ಮೇಲೆ ಸ್ನಾನಗೃಹ ಇಡಬೇಡಿ
ಸ್ನಾನಗೃಹವು ಎಂದಿಗೂ ನೇರವಾಗಿ ಅಡುಗೆ ಅಥವಾ ಪೂಜಾ ಕೋಣೆಯ ಮೇಲೆ ಅಥವಾ ಕೆಳಗೆ ಇರಬಾರದು. ಪೂಜಾ ಕೋಣೆಯನ್ನು ಮನೆಯಲ್ಲಿ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಅಡುಗೆಮನೆಯು ಆರೋಗ್ಯ ಮತ್ತು ಪೋಷಣೆಯನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶಗಳ ಮೇಲಿರುವ ಸ್ನಾನಗೃಹವನ್ನು ವಾಸ್ತು ದೋಷವನ್ನು ಉಂಟು ಮಾಡುತ್ತದೆ. ಇದು ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಈ ಸ್ಥಳಗಳಲ್ಲಿ ಸ್ನಾನ ಗೃಹ ಹೊಂದಿದ್ದಾರೆ ವಾಸ್ತು ಹರಳುಗಳನ್ನು ಇರಿಸುವುದು ಅಥವಾ ಅಡುಗೆ ಅಥವಾ ಪೂಜಾ ಕೋಣೆಯಲ್ಲಿ ನಿರ್ದಿಷ್ಟ ಬಣ್ಣಗಳನ್ನು ಬಳಸಬೇಕು.
ನೀರು ಸೋರಿಕೆ ತಪ್ಪಿಸಿ
ಬಾತ್ ರೂಮ್ ನಲ್ಲಿ ಸೋರುವ ನಲ್ಲಿ ಅಥವಾ ಪೈಪ್ ಗಳು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ನೀರು ಸಂಪತ್ತನ್ನು ಸಂಕೇತಿಸುತ್ತದೆ ಮತ್ತು ನೀರು ಸೋರಿಕೆಯು ಹಣಕಾಸಿನ ನಷ್ಟ ಮತ್ತು ಅನಗತ್ಯ ವೆಚ್ಚಗಳನ್ನು ಪ್ರತಿನಿಧಿಸುತ್ತದೆ. ಸ್ನಾನದ ಕೋಣೆಯಲ್ಲಿ ಯಾವುದೇ ಸೋರಿಕೆ ಇದ್ದಾರೆ ಅದನ್ನು ತಕ್ಷಣ ಸರಿಪಡಿಸಿ. ಉತ್ತಮ ಶಕ್ತಿಯ ಹರಿವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
Vastu Tips: ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ಸುಲಭವಾಗಿ ದೂರ ಮಾಡುವುದು ಹೇಗೆ?
ಸ್ನಾನಗೃಹದಲ್ಲಿ ಈ ವಸ್ತುಗಳನ್ನು ಇಡಬೇಡಿ
ವಾಸ್ತು ಪ್ರಕಾರ ಸ್ನಾನಗೃಹದಲ್ಲಿ ಮೊಪ್ಸ್, ಪೊರಕೆ ಮತ್ತು ಬಕೆಟ್‌ಗಳಂತಹ ಶುಚಿಗೊಳಿಸುವ ವಸ್ತುಗಳನ್ನು ಇಡುವುದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಯಾಕೆಂದರೆ ಈ ವಸ್ತುಗಳು ನಕಾರಾತ್ಮಕತೆಯನ್ನು ತೊಡೆದುಹಾಕಲು ಸಂಬಂಧಿಸಿವೆ. ಹೀಗಾಗಿ ಅವುಗಳನ್ನು ಪ್ರತ್ಯೇಕ ಪ್ರದೇಶದಲ್ಲಿ ಸಂಗ್ರಹಿಸುವುದು ಉತ್ತಮ.