ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
1971ರಲ್ಲಿ ಬಾಂಗ್ಲಾ ವಿಮೋಚನಾ ಸಮಯದಲ್ಲಿ ಪಾಕಿಸ್ತಾನಿ ಸೈನ್ಯವು ಪೂರ್ವ ಪಾಕಿಸ್ತಾನದಲ್ಲಿ ನರಮೇಧವನ್ನು ನಡೆಸುತ್ತಿತ್ತು. ಆ ಸೈನ್ಯದ
ವಿರುದ್ಧ ಹೋರಾಡಲು ಬಾಂಗ್ಲಾದ ಸ್ಥಳೀಯ ನಾಯಕರಿಗೆ ಹಣದ ಅವಶ್ಯಕತೆ ಇತ್ತು. ಪೂರ್ವ ಪಾಕಿಸ್ತಾನದ ರಸ್ತೆಗಳಲ್ಲಿ ಪಾಕಿ ಸೈನಿಕರ ಅಟ್ಟಹಾಸಕ್ಕೆ ಲಕ್ಷಾಂತರ ಜನರ ಕಗ್ಗೊಲೆಯಾಗಿತ್ತು. ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಲ್ಲಲಾಗಿತ್ತು. ಲಕ್ಷಾಂತರ ಜನರು ನಿರಾಶ್ರಿತರಾಗಿ ಉಟ್ಟಬಟ್ಟೆಯಲ್ಲಿ ತಮ್ಮ ಮನೆಗಳನ್ನು ಬಿಟ್ಟು ಬೀದಿಗೆ ಬಿದ್ದಿದ್ದರು.
ಬಾಂಗ್ಲಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಲ್ಲಿನ ಜನರಿಗೆ ಬೇಕಿದ್ದ ಹಣಕಾಸನ್ನು ಸಂಗ್ರಹಿಸಲು ಅಮೆರಿಕದ ಪ್ರಸಿದ್ಧ ಗಿಟಾರ್ ವಾದಕ ಜಾರ್ಜ್ ಹ್ಯಾರಿಸನ್ ಮತ್ತು ಭಾರತದ ಪ್ರಸಿದ್ಧ ಸಿತಾರ್ ವಾದಕ ರವಿಶಂಕರ್ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೊಡ್ಡದೊಂದು ಸಂಗೀತ ಕಛೇರಿಯನ್ನು ಏರ್ಪಡಿಸಿದ್ದರು. ಅದರಿಂದ ಸಂಗ್ರಹವಾದ ಹಣವನ್ನು ಬಾಂಗ್ಲಾದ ನಿರಾಶ್ರಿತರಿಗೆ ನೀಡುವುದು ಅವರ ಉದ್ದೇಶವಾಗಿತ್ತು.
ಸಂಗೀತ ಕಛೇರಿಯಲ್ಲಿ ಸುಮಾರು 40000 ಜನರು ಭಾಗವಹಿಸಿದ್ದರು. ಮೊದಲ ಕಛೇರಿಯಿಂದ ಸುಮಾರು 250000 ಡಾಲರ್ ಹಣ ಸಂಗ್ರಹವಾಗಿತ್ತು. ತದನಂತರ ಅನೇಕ ಕಛೇರಿಗಳನ್ನು ನಡೆಸಿದ ತಂಡ ಸುಮಾರು 12 ಮಿಲಿಯನ್ ಡಾಲರ್ ಸಂಗ್ರಹಿಸಿ ಬಾಂಗ್ಲಾದೇಶಕ್ಕೆ ಕಳುಹಿಸಿತ್ತು. ಈ ಸಂಗೀತ ಕಛೇರಿಯ ಹಿಂದೆ ‘ಇಸ್ಕಾನ್’ ಸಂಸ್ಥೆಯ ಪಾತ್ರವಿತ್ತು. ಗಿಟಾರ್ ವಾದಕ ಹ್ಯಾರಿಸನ್ ಇಸ್ಕಾನ್ ಸಂಸ್ಥೆಯ ಅನುಯಾಯಿ, ಶ್ರೀಕೃಷ್ಣನ ಭಕ್ತ. ಜೀವನದಲ್ಲಿ ತಾವು ಕಂಡ ಯಶಸ್ಸಿನ ಮೂಲ ಇಸ್ಕಾನ್ ಹಾಗೂ ಶ್ರೀಕೃಷ್ಣನ ಪ್ರೇರಣೆಯೆಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ.
ಇದು, 1971ರಲ್ಲಿ ನಡೆದ ನರಮೇಧದಿಂದ ತತ್ತರಿಸಿದ್ದ ಬಾಂಗ್ಲಾದ ಜನರಿಗೆ ಇಸ್ಕಾನ್ ಸಂಸ್ಥೆಯು ನೆರವಾದ ಪರಿ. ‘ಹರೇ ಕೃಷ್ಣ’ ಆಂದೋಲನದ ಮೂಲಕ ಜನಪ್ರಿಯವಾದ ಇಸ್ಕಾನ್ ಸಂಸ್ಥೆಯು ಆಧ್ಯಾತ್ಮಿಕತೆ, ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಯಿಂದಾಗಿ ಜನರ ಪಾಲಿಗೆ ದಾರಿದೀಪ ವಾಗಿ ನಿಂತಿದೆ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಂದ 1966ರಲ್ಲಿ ಸ್ಥಾಪಿಸಲ್ಪಟ್ಟ ಇಸ್ಕಾನ್, ಶಾಂತಿ-ಸಾಮರಸ್ಯ- ಸಾರ್ವತ್ರಿಕ ಸೋದರತ್ವದ ತತ್ತ್ವಗಳನ್ನು ಪ್ರಚಾರ ಮಾಡಲು ಬದ್ಧವಾಗಿರುವ ಭಕ್ತರ ಜಾಗತಿಕ ಜಾಲವಾಗಿ ಬೆಳೆದಿದೆ.
ಆಧ್ಯಾತ್ಮಿಕತೆ ಮತ್ತು ಮಾನವೀಯತೆಗೆ ಒತ್ತು ನೀಡುವುದರೊಂದಿಗೆ ಬಾಂಗ್ಲಾದೇಶದಲ್ಲಿ ಇಸ್ಕಾನ್ ಸಂಸ್ಥೆಯ ಉಪಸ್ಥಿತಿ ಗಮನಾರ್ಹವಾಗಿದೆ. ಅಲ್ಲಿ ಹಲವು ಉಪಕ್ರಮಗಳಿಗೆ ಆಧ್ಯಾತ್ಮಿಕತೆಯನ್ನು ಸಂಯೋಜಿಸಿ, ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಇಸ್ಕಾನ್ ಪ್ರಬಲ
ಶಕ್ತಿಯಾಗಿದೆ. ಹಸಿವನ್ನು ನೀಗಿಸಲು, ಶಿಕ್ಷಣವನ್ನು ಬೆಂಬಲಿಸಲು ಮತ್ತು ವಿಪತ್ತಿನ ಸಂದರ್ಭದಲ್ಲಿ ಜನರಿಗೆ ಪರಿಹಾರ ಒದಗಿಸಲು ಇಸ್ಕಾನ್ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಬಾಂಗ್ಲಾದ ಬಡ ಪ್ರದೇಶಗಳನ್ನು ಒಳಗೊಂಡಂತೆ, ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಉಚಿತ ಸಸ್ಯಾಹಾರಿ ಊಟ ಒದಗಿಸುವ ‘ಜೀವನಕ್ಕಾಗಿ ಆಹಾರ’ ಕಾರ್ಯಕ್ರಮವು ಅದರ ಪ್ರಶಂಸನೀಯ ಪ್ರಯತ್ನಗಳಲ್ಲಿ ಒಂದಾಗಿದೆ. ಜಾತಿ-ಧರ್ಮವನ್ನು ಲೆಕ್ಕಿಸದೆ ಹಸಿವನ್ನು ನೀಗಿಸುವ ಕಾರ್ಯಕ್ರಮವಿದು. ಬಾಂಗ್ಲಾದ ಢಾಕಾ, ಚಟ್ಟೋಗ್ರಾಮ್ ಮತ್ತು ಇತರೆಡೆಗಳಲ್ಲಿನ ಇಸ್ಕಾನ್
ದೇವಾಲಯಗಳು, ಅಂತರ್ಧರ್ಮೀಯ ಸಂವಾದಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೈವಿಧ್ಯಮಯ ಹಿನ್ನೆಲೆಯ ಜನರನ್ನು ಒಗ್ಗೂಡಿ ಸುವ ಉತ್ಸವಗಳನ್ನು ನಿಯತವಾಗಿ ಆಯೋಜಿಸುತ್ತವೆ. ಒಟ್ಟಾರೆಯಗಿ, ಇಸ್ಕಾನ್ ಸಂಘಟನೆಯು ಸಹಬಾಳ್ವೆ ಮತ್ತು ಪರಸ್ಪರ ಗೌರವದ
ಮಹತ್ವವನ್ನು ಒತ್ತಿಹೇಳುತ್ತದೆ.
2022ರಲ್ಲಿ ಭಾರಿ ಮಳೆಯಿಂದಾಗಿ ಬಾಂಗ್ಲಾದ ಹಲವು ಜಿಲ್ಲೆಗಳಲ್ಲಿ ವಿನಾಶಕಾರಿ ಪ್ರವಾಹ ಎದುರಾಗಿತ್ತು. ಲಕ್ಷಾಂತರ ಜನರು ಮನೆ, ಬೆಳೆ ಮತ್ತು ಜಾನುವಾರುಗಳನ್ನು ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥೆಯು, ಭಕ್ತಿ ಅದ್ವೈತ ನವದೀಪ ಸ್ವಾಮಿ ಮಹಾರಾಜ್ ಅವರ
ಮಾರ್ಗದರ್ಶನದಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ತನ್ನ ಸಂಪನ್ಮೂಲಗಳನ್ನು ತ್ವರಿತವಾಗಿ ಸಜ್ಜುಗೊಳಿಸಿತ್ತು.
ಇಸ್ಕಾನ್ನ ಸ್ವಯಂಸೇವಕರು, ಸಿಲ್ಹೆಟ್ ಮತ್ತು ನೆರೆಯ ಜಿಲ್ಲೆಗಳಲ್ಲಿ ಪ್ರತಿದಿನ 3-4 ಸಾವಿರ ಜನರಿಗೆ ಆಹಾರ ವಿತರಿಸಿದ್ದರು. ಮಾತ್ರವಲ್ಲದೆ, ಪ್ರವಾಹಪೀಡಿತರಿಗೆ ಔಷಧಿ, ನೀರು ಶುದ್ಧೀಕರಣ ಮಾತ್ರೆಗಳು, ವೈದ್ಯಕೀಯ ಆರೈಕೆ, ಬಟ್ಟೆ ಮುಂತಾದ ಅಗತ್ಯ ವಸ್ತುಗಳನ್ನು ಉಚಿತವಾಗಿ ಒದಗಿಸಿದ್ದರು. ೨೦೨೪ರಲ್ಲಿ ಸಂಭವಿಸಿದ ಮತ್ತೊಂದು ಬೃಹತ್ ಪ್ರವಾಹವು ಬಾಂಗ್ಲಾದ ಹಲವು ಜಿಲ್ಲೆಗಳನ್ನು ನೀರಿನಲ್ಲಿ ಮುಳುಗಿಸಿದಾಗ ಇಸ್ಕಾನ್ ಸಂಸ್ಥೆಯು ಮತ್ತೊಮ್ಮೆ ಆಹಾರ, ನೀರು, ಬಟ್ಟೆ, ಔಷಧಿ ಸೇರಿದಂತೆ ಅನೇಕ ಪರಿಹಾರ ಸಾಮಗ್ರಿಗಳೊಂದಿಗೆ ತನ್ನ ಸ್ವಯಂಸೇವಕರನ್ನು ಪ್ರವಾಹಪೀಡಿತ ಪ್ರದೇಶಗಳಿಗೆ ಕಳಿಸಿತ್ತು.
ವೈದ್ಯಕೀಯ ಸೌಲಭ್ಯಗಳ ಕೊರತೆ ಇರುವವರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು, ಬಾಂಗ್ಲಾದ ಗ್ರಾಮೀಣ ಮತ್ತು ಪ್ರವಾಹಪೀಡಿತ ಪ್ರದೇಶಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಇಸ್ಕಾನ್ ಆಯೋಜಿಸಿತ್ತು. ಈ ಶಿಬಿರಗಳಲ್ಲಿ ಉಚಿತ ಸಮಾಲೋಚನೆ, ಔಷಧಿ ವಿತರಣೆ ಮಾತ್ರವಲ್ಲದೆ, ರೋಗ ತಡೆಗಟ್ಟುವಿಕೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಿಕೆಯ ಬಗೆಗಿನ ಜನಜಾಗೃತಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.
ಬಡತನ ನಿರ್ಮೂಲನೆಯಲ್ಲಿ ಶಿಕ್ಷಣಕ್ಕಿರುವ ಮಹತ್ವವನ್ನು ಗುರುತಿಸಿ, ಆಧುನಿಕ ಪಠ್ಯಕ್ರಮದೊಂದಿಗೆ ಆಧ್ಯಾತ್ಮಿಕ ಬೋಧನೆಗಳನ್ನು ಸಂಯೋಜಿಸುವ ಶಾಲೆಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಇಸ್ಕಾನ್ ಬೆಂಬಲಿಸುತ್ತಾ ಬಂದಿದೆ. ನೈತಿಕ ಮೌಲ್ಯಗಳನ್ನು ಹುಟ್ಟುಹಾಕುವ, ಉತ್ತಮ ಭವಿಷ್ಯಕ್ಕೆ ಅಗತ್ಯವಿರುವ ಕೌಶಲಗಳೊಂದಿಗೆ ಮಕ್ಕಳನ್ನು ಸಜ್ಜುಗೊಳಿಸುವ ಕಾರ್ಯದ ಮೇಲೆ ಇಸ್ಕಾನ್ ಸಂಸ್ಥೆಯು ಗಮನವನ್ನು ಕೇಂದ್ರೀಕರಿಸುತ್ತದೆ. ಬಾಂಗ್ಲಾದ ಪ್ರವಾಹಪೀಡಿತ ಜಾಗಗಳಲ್ಲಿ ನಷ್ಟವಾದ ಮನೆಗಳ ಮರುನಿರ್ಮಾಣದಲ್ಲಿ ಮತ್ತು ಪ್ರಕೃತಿ ವಿಕೋಪಗಳಿಂದಾಗಿ ಸ್ಥಳಾಂತರಗೊಂಡವರಿಗೆ ಆಶ್ರಯ ಕಲ್ಪಿಸುವ ಕಾರ್ಯದಲ್ಲಿ ನೆರವಾಗಿರುವ ಹೆಗ್ಗಳಿಕೆ ಇಸ್ಕಾನ್ ಸಂಸ್ಥೆಯದ್ದು. ಕೋವಿಡ್ ತಲೆದೋರಿದಾಗ ಜಾರಿಮಾಡಲಾದ ಲಾಕ್ ಡೌನ್ ಅನೇಕರ ಜೀವನೋಪಾಯದ ಮೇಲೆ, ವಿಶೇಷವಾಗಿ ದಿನಗೂಲಿ ನೌಕರರು ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು. ಈ ತುರ್ತುಸ್ಥಿತಿಯನ್ನು ಗುರುತಿಸಿದ ಇಸ್ಕಾನ್, ಹಸಿವನ್ನು ಎದುರಿಸಲು ವ್ಯಾಪಕ ಆಹಾರ ವಿತರಣಾ ಅಭಿಯಾನವನ್ನು ಪ್ರಾರಂಭಿಸಿತು.
‘ಜೀವನಕ್ಕಾಗಿ ಆಹಾರ’ ಉಪಕ್ರಮದ ಮೂಲಕ, ಗ್ರಾಮೀಣ ಪ್ರದೇಶಗಳು ಮತ್ತು ಢಾಕಾದಂಥ ನಗರ ಕೇಂದ್ರಗಳಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಉಚಿತ ಊಟವನ್ನು ಅದು ಒದಗಿಸಿತ್ತು. ಊಟ ಮತ್ತು ಅಗತ್ಯದ ದಿನಸಿಗಳನ್ನು ತಲುಪಿಸುವಾಗ ಇಸ್ಕಾನ್ನ ಸ್ವಯಂಸೇವಕರು
ಕಟ್ಟುನಿಟ್ಟಾದ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸುತ್ತಾರೆ. ಯಾವುದೇ ಕುಟುಂಬವು ಹಸಿವಿನಿಂದ ಬಳಲದಂತೆ ಖಾತ್ರಿ ಪಡಿಸಿಕೊಳ್ಳುತ್ತಿದ್ದ ಇಸ್ಕಾನ್, ಕೊಳೆಗೇರಿ ನಿವಾಸಿಗಳು, ವಲಸೆ ಕಾರ್ಮಿಕರು ಮತ್ತು ಒಂಟಿಯಗಿ ವಾಸಿಸುವ ಹಿರಿಯ ನಾಗರಿಕರು ಸೇರಿದಂತೆ ಸಮಾಜದಲ್ಲಿ ಮೂಲೆಗುಂಪಾಗಿರುವ ಅನೇಕ ಸಮುದಾಯಗಳ ಪರವಾಗಿ ಕೆಲಸ ಮಾಡಿತ್ತು. ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಕೋವಿಡ್ ಪ್ರಕರಣ ಗಳಿಂದ ತುಂಬಿ ತುಳುಕುತ್ತಿದ್ದಂತೆ, ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ವ್ಯವಸ್ಥೆಗೆ ತನ್ನ ಬೆಂಬಲವನ್ನು ವಿಸ್ತರಿಸಿತು ಇಸ್ಕಾನ್. ಈ ಶಿಬಿರಗಳು ಮೂಲಭೂತ ಆರೋಗ್ಯ ಸೇವೆಗಳು, ಅಗತ್ಯ ಔಷಧಿಗಳನ್ನು ಒದಗಿಸಿದ್ದರ ಜತೆಗೆ ಕೋವಿಡ್ ಪರೀಕ್ಷೆ ಮತ್ತು ಲಸಿಕಾ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿದವು.
ಬಾಂಗ್ಲಾದೇಶದ ಹುಟ್ಟಿನಿಂದಲೂ ಇಸ್ಕಾನ್ ಸಂಸ್ಥೆ ಅಲ್ಲಿನ ನಾಗರಿಕರಿಗೆ ಸತತವಾಗಿ ನೆರವಾಗುತ್ತಾ ಬಂದಿದೆ, ಜಾತಿ- ಧರ್ಮಗಳನ್ನೂ ಮೀರಿ ಬಾಂಗ್ಲಾದ ಸಂಕಷ್ಟ ನಿವಾರಣೆಗೆ ಸದಾಕಾಲ ಸಹಾಯಕ್ಕೆ ನಿಂತಿದೆ. ಆದರೆ, ಹೀಗೆ ಬಾಂಗ್ಲಾದ ಜನರಿಗೆ ಒತ್ತಾಸೆಯಾಗಿ ನಿಂತ ಸಂಸ್ಥೆಯನ್ನೇ ದೇಶದಿಂದ ನಿಷೇಧಿಸುವಂತೆ ಅಲ್ಲಿನ ವಕೀಲನೊಬ್ಬ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. ‘ಹಾವಿಗೆ ಹಾಲೆರೆದರೂ ಮರಳಿ ಕಚ್ಚುವು ದನ್ನು ಬಿಡುವುದಿಲ್ಲ’ ಎಂಬಂತೆ, ಇಸ್ಕಾನ್ ಸಂಸ್ಥೆಯ ಸಹಾಯ ಪಡೆದಿದ್ದ ಬಾಂಗ್ಲಾದ ಜನರೇ ಇಸ್ಕಾನ್ನ ವಿರುದ್ಧ ಬೀದಿಗಿಳಿದಿದ್ದಾರೆ. ಬಾಂಗ್ಲಾದಲ್ಲಿನ ಸಮಸ್ತ ಹಿಂದೂಗಳನ್ನು ಇಸ್ಕಾನ್ ಸಂಸ್ಥೆಗೆ ಸೇರಿರುವವರೆಂದು ತಿಳಿದು ಸಿಕ್ಕಸಿಕ್ಕಲ್ಲಿ ಬಡಿಯುತ್ತಿದ್ದಾರೆ.
ಶೇಖ್ ಹಸೀನಾ ದೇಶಬಿಟ್ಟ ನಂತರ ಕಮ್ಯುನಿಸ್ಟ್ ಆಡಳಿತದ ಕೈಗೊಂಬೆಯಾಗಿರುವ ಬಾಂಗ್ಲಾದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ನೂತನ ಆಡಳಿತಾಽಕಾರಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಯೂನಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲಿನ
ದಾಳಿಗಳು ಹೆಚ್ಚಾಗಿವೆ. ಬಾಂಗ್ಲಾವನ್ನು ಸಂಪೂರ್ಣ ಇಸ್ಲಾಂ ದೇಶವೆಂದು ಘೋಷಿಸಬೇಕೆಂಬ ಕೂಗು ಹೆಚ್ಚುತ್ತಿದೆ.
ಪ್ರಪಂಚದ ಇತರ ದೇಶಗಳಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಾಗುವ ದಾಳಿಗಳ ವಿರುದ್ಧ ದನಿಯೆತ್ತುವ ಎಡಚರ ಬೆಂಬಲಿತ ಹೋರಾಟಗಾರರು, ಬಾಂಗ್ಲಾದ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಭಾರತದಲ್ಲಿ ಸುಮಾರು 20 ಕೋಟಿಯಷ್ಟಿರುವ ಮುಸಲ್ಮಾ
ನರನ್ನು ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಲ್ಲಿರಿಸಿ, ಸಣ್ಣ ವಿಷಯಕ್ಕೂ ಅವರ ಪರವಾಗಿ ದನಿಯೆತ್ತುವವರು, ಬಾಂಗ್ಲಾ ಹಿಂದೂಗಳ ಪರವಾಗಿ ಮಾತನಾಡುತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ಭಾರತದಲ್ಲಿ ಪೌರತ್ವ ನೀಡಲು ಮುಂದಾದಾಗ ಬೀದಿಗಿಳಿದವರು, ಬಾಂಗ್ಲಾದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಬೀದಿಗಿಳಿಯುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಬಾಂಗ್ಲಾದ ಜನರ ಜೀವವುಳಿಸಿದ್ದ ‘ಇಸ್ಕಾನ್’ ಅನ್ನು ಮೂಲಭೂತವಾದಿ ಸಂಸ್ಥೆಯೆಂದು ಪರಿಗಣಿಸಿ ನಿಷೇಧಿಸಬೇಕೆಂದು ಬಾಂಗ್ಲಾದ ಜನರು ಬೀದಿಗಿಳಿದಿ ದ್ದಾರೆ.
ಅಲ್ಲಿನ ಇಸ್ಕಾನ್ ಘಟಕದ ಚಿನ್ಮಯ್ ಕೃಷ್ಣದಾಸ್ ಅವರು ಬಾಂಗ್ಲಾಧ್ವಜಕ್ಕೆ ಅವಮಾನಿಸಿದ್ದಾರೆಂಬ ಆರೋಪ ಹೊರಿಸಿ, ಅವರನ್ನು ಜೈಲಿನಲ್ಲಿರಿಸ
ಲಾಗಿದೆ. ಕೃಷ್ಣದಾಸ್ ಅವರ ಬಂಧನವನ್ನು ವಿರೋಧಿ ಬಾಂಗ್ಲಾದ ಹಿಂದೂಗಳು ಬೀದಿಗಿಳಿದು ಹೋರಾಡುತ್ತಿದ್ದಾರೆ. ಇಸ್ಕಾನ್ ಸಂಸ್ಥೆಯನ್ನು ನಿಷೇಽಸಬೇಕೆಂದು ಕೋರಿ ಅಲ್ಲಿನ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯನ್ನು ತಡೆಹಿಡಿಯಲಾಗಿದೆ. ಭಾರತದಲ್ಲಿರುವ ಅನೇಕ ಮುಸ್ಲಿಮರು, “ಅಂಬೇಡ್ಕರರ ಸಂವಿಧಾನಕ್ಕಿಂತಲೂ ನಮ್ಮ ಧರ್ಮವೇ ಮುಖ್ಯ” ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟ ನಂತರವೂ ನಮ್ಮ ಸಮಾಜದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.
ಸಂವಿಧಾನವಿರೋಧಿ ‘ವಕ್ಫ್’ ಕಾನೂನಿನ ಮೂಲಕ ಹಿಂದೂಗಳ ಭೂಮಿಯನ್ನು ಕಬಳಿಸಿದ ನಂತರವೂ, “ಭಾರತದಲ್ಲಿ ನಮಗೆ ಅನ್ಯಾಯ ವಾಗುತ್ತಿದೆ” ಎಂದು ಇವರು ಬೀದಿಗಿಳಿದು ಹೋರಾಟ ಮಾಡುತ್ತಾರೆ.
1971ರಲ್ಲಿ, ಬಾಂಗ್ಲಾದೇಶದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಭಾರತೀಯ ಸೇನೆ. ಬಾಂಗ್ಲಾದಲ್ಲಿ ಪಾಕಿಸ್ತಾನಿ ಸೈನಿಕರು ಹಿಂಸಾಚಾರ ನಡೆಸಿದಾಗ ಅವರಿಂದ ಬಾಂಗ್ಲಾದ ಜನರನ್ನು ರಕ್ಷಿಸಿ, ಕೇವಲ 14 ದಿನಗಳ ಯುದ್ಧದಲ್ಲಿ ಪಾಕಿಗಳನ್ನು ಓಡಿಸಿದ್ದು ಭಾರತ. ಈ ಸಹಾಯವನ್ನು ಬಾಂಗ್ಲಾದ ವಿವಿಧ ಪೀಳಿಗೆಯವರು ಎಂದಿಗೂ ಮರೆಯುವ ಹಾಗಿಲ್ಲ. ಬಾಂಗ್ಲಾದಲ್ಲಿನ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಭಾರತವು ದೊಡ್ಡಮಟ್ಟದಲ್ಲಿ ದನಿಯೆತ್ತಿದೆ. ಒಟ್ಟಿನಲ್ಲಿ, 1971ರಲ್ಲಿ ಇಸ್ಕಾನ್ ಸಂಸ್ಥೆಯು ತಮಗೆ ಮಾಡಿದ ಸಹಾಯವನ್ನೂ ಮರೆತಿರುವ ಬಾಂಗ್ಲಾದ ಜನರು ಬೀದಿಗಿಳಿದು ಹಿಂದೂಗಳ ಮೇಲೆ ದಾಳಿ ಮಾಡುತ್ತಿರುವುದು ಹಾಗೂ ಬಾಂಗ್ಲಾದಲ್ಲಿ ಇಸ್ಕಾನ್ ಸಂಸ್ಥೆಯನ್ನು ನಿಷೇಧಿಸುವಂತೆ ಬೇಡಿಕೆ ಇಟ್ಟಿರುವುದು ಅವರದೇ ವಿನಾಶದ ಮುನ್ಸೂಚನೆಯಷ್ಟೇ!
ಇದನ್ನೂ ಓದಿ: Mohan Vishwa Column: ಅಮೆರಿಕದ ʼಇಕಾನಾಮಿಕ್ ಹಿಟ್ ಮ್ಯಾನ್ʼ