Saturday, 30th November 2024

‌Prakash Shesharaghavachar Column: ಪ್ರಧಾನಿ ಮೋದಿಯವರ ಮುಕುಟಕ್ಕೆ ಮತ್ತೊಂದು ಗರಿ

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವು ಕಾಂಗ್ರೆಸ್ ನೇತೃತ್ವದ ‘ಮಹಾವಿಕಾಸ್ ಅಘಾಡಿ’ ಮೈತ್ರಿಕೂಟಕ್ಕೆ ಬಲವಾದ ಆಘಾತ ನೀಡಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಸ್ಥಾನಗಳ ಪೈಕಿ ಎನ್‌ಡಿಎ ಒಕ್ಕೂಟಕ್ಕೆ ಕೇವಲ 18 ಸ್ಥಾನ ದಕ್ಕಿದರೆ, 30 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಅಘಾಡಿ’ ಮೈತ್ರಿಕೂಟ ಬೀಗಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ, 288 ಸ್ಥಾನಗಳ ಪೈಕಿ 233ನ್ನು ಗೆಲ್ಲುವ ಮೂಲಕ ‘ಮಹಾಯುತಿ’ ಒಕ್ಕೂಟವು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವನ್ನು ಧೂಳೀಪಟ ಮಾಡಿದೆ. ‘ಇನ್ನೇನು ಅಧಿಕಾರಕ್ಕೆ ಬಂದಂತೆಯೇ’ ಎಂದು ಕನಸು ಕಾಣುತ್ತಿದ್ದ ಕಾಂಗ್ರೆಸ್‌ಗೆ ಈ ಸೋಲಿನ ಆಘಾತದಿಂದ ಇನ್ನೂ ಹೊರಬರಲಾಗಿಲ್ಲ.

ಲೋಕಸಭಾ ಚುನಾವಣೆಯ ನಂತರ ನಡೆದ ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯು ಮೋದಿಯವರ ಜನಪ್ರಿಯ ತೆಗೆ ಅಗ್ನಿಪರೀಕ್ಷೆಯಾಗಿತ್ತು. ಚುನಾವಣಾ ಸಮೀಕ್ಷೆಗಳನ್ನು ಸುಳ್ಳಾಗಿಸಿ ಬಿಜೆಪಿಯು ಹರಿಯಾಣದಲ್ಲಿ ಸ್ವಂತಬಲದ ಮೇಲೆ ಬಹುಮತವನ್ನು ಪಡೆಯಿತು, ಪಕ್ಷದ ಗೆಲುವಿನ ಪತಾಕೆ ಮತ್ತೆ ಹಾರಿತು. ನಂತರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂತು.

ಶಿವಸೇನೆ ಮತ್ತು ಎನ್‌ಸಿಪಿ ಎರಡೂ ಹೋಳಾಗಿ ರಚನೆಯಾಗಿದ್ದ ಸರಕಾರವನ್ನು ಜನರು ಬೆಂಬಲಿಸುವರಾ? ಮೋದಿಯವರ ಜನಪ್ರಿಯತೆಯು ಮತ್ತೆ ‘ಮಹಾಯುತಿ’ ಮೈತ್ರಿಕೂಟದ ಕೈಹಿಡಿಯುವುದಾ? ‘ಇಂಡಿಯಾ’ ಮೈತ್ರಿಕೂಟವು ಲೋಕಸಭಾ ಚುನಾವಣಾ ಗೆಲುವಿನ ಮುನ್ನಡೆಯ
ಲಾಭ ಪಡೆಯುವುದಾ? ಎಂಬಿತ್ಯಾದಿ ಪ್ರಶ್ನೆಗಳೂ ಸಹಜವಾಗಿ ಎದ್ದವು. ಲೋಕಸಭಾ ಚುನಾವಣೆಯಲ್ಲಾದ ಹಿನ್ನಡೆಯಿಂದ ಬಿಜೆಪಿ ಕುಗ್ಗಲಿಲ್ಲ, ಬದಲಿಗೆ ತನ್ನ ತಂತ್ರಗಾರಿಕೆಯಲ್ಲಿ ಬದಲಾವಣೆಯನ್ನು ತಂದುಕೊಂಡಿತು.

ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ ಹಾಗೂ ಚರ್ಚಾ ವಿಷಯಗಳ ಮೇಲೆ ಸೆಣಸುವ ನಿರ್ಧಾರ
ಬಹುದೊಡ್ಡ ಲಾಭ ನೀಡಿತು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 23 ಸಾರ್ವಜನಿಕ ಸಭೆಯನ್ನು ಮಾಡಿದ್ದ ಮೋದಿಯವರು ಮಹಾರಾಷ್ಟ್ರದಲ್ಲಿ ಆ ಸಂಖ್ಯೆಯನ್ನು 10ಕ್ಕೆ ಸೀಮಿತಗೊಳಿಸಿದರು. ಚುನಾವಣಾ ಪ್ರಚಾರ ಅಂತ್ಯವಾಗುವ 2 ದಿನ ಮುನ್ನವೇ ಮೋದಿಯವರು ಜಿ-೨೦ ಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್‌ಗೆ ತೆರಳಿದ್ದು ಗೆಲುವಿನ ಬಗ್ಗೆ ಅವರಿಗಿದ್ದ ಆತ್ಮವಿಶ್ವಾಸದ ಸಂಕೇತವಾಗಿತ್ತು.

ಮೂರು ಪಕ್ಷಗಳ ನಡುವೆ ಹೊಂದಾಣಿಕೆ ಸಾಧಿಸುವುದು ಚುನಾವಣಾ ಗೆಲುವಿಗೆ ಅತ್ಯವಶ್ಯವಾಗಿತ್ತು. ಇದನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿದ್ದು ಗೆಲುವಿಗೆ ಪ್ರಮುಖ ಕಾರಣವಾಯಿತು. ಪಕ್ಷದೊಳಗೆ, ಸಂಘ ಪರಿವಾರದೊಂದಿಗೆ ಹಾಗೂ ಮಿತ್ರಪಕ್ಷಗಳೊಂದಿಗೆ ಹೀಗೆ 3 ಸ್ತರದಲ್ಲಿ
ಹೊಂದಾಣಿಕೆ ತರಲಾಯಿತು. ಮೈತ್ರಿಕೂಟದ ಪಕ್ಷಗಳೊಂದಿಗೆ ಬೂತ್ ಮಟ್ಟದಲ್ಲಿಯೂ ಹೊಂದಾಣಿಕೆ ಅತ್ಯಾವಶ್ಯಕವಾಗಿತ್ತು. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದೆ ಇದರಲ್ಲಿ ಸಫಲರಾದೆವು ಎನ್ನುತ್ತಾರೆ ಪುಣೆ ನಗರದ ಉಸ್ತುವಾರಿಯಾಗಿದ್ದ ಬಿಜೆಪಿ ನಾಯಕ ಸಿ.ಟಿ.ರವಿಯವರು.
ಅನ್ಯರಾಜ್ಯಗಳ ಕಾರ್ಯಕರ್ತರು 288 ವಿಧಾನಸಭಾ ಕ್ಷೇತ್ರಗಳ ಹೊಣೆ ಹೊತ್ತು ಬೂತ್ ಮಟ್ಟದಲ್ಲಿ ಮನೆಮನೆಯ ಮತದಾರರನ್ನು ತಲುಪುವ ಕೆಲಸವನ್ನು ಮಾಡಿದ್ದರು. ವಿಶೇಷವೆಂದರೆ, ಮಹಾರಾಷ್ಟ್ರದ 60 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ರಾಜ್ಯದ 100 ಪ್ರಮುಖ ಕಾರ್ಯಕರ್ತರು
ಜವಾಬ್ದಾರಿ ತೆಗೆದುಕೊಂಡು 2 ತಿಂಗಳಿಂದ ತಳಮಟ್ಟದಲ್ಲಿ ಕೆಲಸ ಮಾಡಿದ್ದರು, ಮನೆಮನೆ ಪ್ರಚಾರದಲ್ಲಿ ಕಾರ್ಯಕರ್ತರನ್ನು ತೊಡಗಿಸುವಲ್ಲಿ ಸ-ಲರಾಗಿದ್ದರು.

‘ಮಹಾಯುತಿ’ ಮೈತ್ರಿಕೂಟವು ಯಾವುದೇ ಗೊಂದಲವಿಲ್ಲದಂತೆ ಸೀಟು ಹಂಚಿಕೆಯನ್ನು ನಿರ್ವಹಿಸಿತು. 157 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸ ಬೇಕಿತ್ತು, ಆದರೆ ಸಣ್ಣ ಪುಟ್ಟ ಪಕ್ಷಗಳ ಬೇಡಿಕೆ ಮನ್ನಿಸಿ ಅವಕ್ಕೆ 8 ಸೀಟುಗಳನ್ನು ಬಿಟ್ಟುಕೊಡಲಾಯಿತು. ದೇವೇಂದ್ರ ಫಡ್ನವಿಸ್‌ರವರು ಎಲ್ಲಿಯೂ ಹಠಕ್ಕೆ ಬೀಳದೆ ಎಲ್ಲರನ್ನೂ ಜತೆಗೆ ಕರೆದೊಯ್ದು ಜಾಣ್ಮೆ ಮೆರೆದರು. ತತ್ಪರಿಣಾಮವಾಗಿ, 149 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ
132 ರಲ್ಲಿ ಜಯ ಸಾಧಿಸಿ, ಶೇ.89ರಷ್ಟು ಪ್ರಮಾಣದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಸಾಧ್ಯವಾಯಿತು. ಬಿಜೆಪಿಯ ಪ್ರಚಾರಕ್ಕೆ ಬಹುದೊಡ್ಡ ಶಕ್ತಿಯಾಗಿದ್ದು ಸಂಘ ಪರಿವಾರದ ಸಂಘಟನೆಗಳು.

ಲೋಕಸಭಾ ಚುನಾವಣೆಯ ವೇಳೆ, ಬಿಜೆಪಿಯ ಸ್ವಯಂಕೃತ ಅಪರಾಧದಿಂದಾಗಿ ‘ಅಘಾಡಿ’ ಮೈತ್ರಿಕೂಟವು 30 ಸ್ಥಾನಗಳನ್ನು ಗೆಲ್ಲುವಂತಾ ಯಿತು. ಆದರೆ, ವಿಧಾನಸಭಾ ಚುನಾವಣೆಯ ವೇಳೆಗೆ ಈ ತಪ್ಪನ್ನು ಸರಿಪಡಿಸಿಕೊಳ್ಳಲಾಯಿತು. ಪುಣೆಯ ಕಸಬಾಪೇಟ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, “ಚುನಾವಣೆಗೆ 3 ತಿಂಗಳು ಮೊದಲೇ ಸಂಘ ಪರಿವಾರದ ಕಾರ್ಯಕರ್ತರು, ವಿವಿಧ ವರ್ಗಗಳ ಜನರನ್ನು ಸಂಪರ್ಕಿಸಲು ಆರಂಭಿಸಿದ್ದರು. ಪರಿವಾರದ ವಿವಿಧ ಸಂಘಟನೆಗಳು ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಸಣ್ಣ ಸಣ್ಣ ಸಭೆಗಳನ್ನು ಆಯೋಜಿಸಿದ್ದು ಬಿಜೆಪಿಯ ಗೆಲುವಿಗೆ ಮಹತ್ವದ ಕೊಡುಗೆ ನೀಡಿತು. ಮಹಾರಾಷ್ಟ್ರದಾದ್ಯಂತ ಆರೆಸ್ಸೆಸ್ ಕೈಗೊಂಡ ‘ಸಜಗ್ ರಹೋ’ ಅಭಿಯಾನವು ಹಿಂದೂ ಸಮಾಜವನ್ನು ಬಡಿದೆಬ್ಬಿಸಿ ಚುನಾವಣೆಯ ದಿಕ್ಕನ್ನೇ ಬದಲಾಯಿಸಿತು” ಎನ್ನುತ್ತಾರೆ. “ರಾಜ್ಯದ ಉದ್ದಗಲಕ್ಕೂ ‘ಹಿಂದೂ- ಏಕತೆ’ಯ ಸಂದೇಶವನ್ನು ಹರಡಲು ಕೀರ್ತನಕಾರರು ಮತ್ತು ಭಜಂಕರಿಗಳನ್ನು ಆರೆಸ್ಸೆಸ್ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಮರಾಠಿ ಸಮಾಜದಲ್ಲಿ ಅಪಾರ ಗೌರವವಿರುವ ವಾರಕರಿಗಳೂ ಈ ಸಂದೇಶವನ್ನು ಸಾರಲು ತೊಡಗಿದರು” ಎನ್ನುತ್ತಾರೆ ರಾಜಕೀಯ ನಿರೂಪಕಿ ಸ್ಮಿತಾ ದೇಶ್‌ಮುಖ್.

ರಾಹುಲ್ ಗಾಂಧಿಯವರ ಜಾತಿಯಾಧಾರಿತ ಪ್ರಚಾರಕ್ಕೆ ಪ್ರತ್ಯುತ್ತರವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ‘ಬಟೇಂಗೆ ತೋ ಕಟೇಂಗೆ’ ಮತ್ತು ಪ್ರಧಾನಿ ಯವರ ‘ಏಕ್ ಹೈ ತೋ ಸೇಫ್ ಹೈ’ ಘೋಷವಾಕ್ಯಗಳು ಜನರನ್ನು ಒಗ್ಗೂಡಿಸಲು ಸಹಕಾರಿಯಾದವು. ಈ ಮಧ್ಯೆ‌ ಮೌಲಾನಾ ಸಜ್ಜದ್ ನೋಮಾನಿ ಅವರು, “ಮುಸಲ್ಮಾನರು ಮಹಾವಿಕಾಸ್ ಅಘಾಡಿಗೆ ಮತನೀಡಬೇಕು” ಎಂದು ತಾಕೀತು ಮಾಡಿದರು. ಇದಲ್ಲದೆ, ಮುಸ್ಲಿಮರ ಮತ ಪಡೆಯಲು ‘ಉಲೇಮಾ ಬೋರ್ಡ್’ ಹನ್ನೆರಡು ಬೇಡಿಕೆಗಳನ್ನು ಮುಂದಿಟ್ಟಿತು. ಈ ಎರಡು ವಿಷಯಗಳು ಮಹಾ ರಾಷ್ಟ್ರದಲ್ಲಿ ಹಿಂದೂ ಮತಗಳ ಕ್ರೋಡೀಕರಣಕ್ಕೆ ಅಪಾರವಾಗಿ ನೆರವಾದವು.

ದೇವೇಂದ್ರ ಫಡ್ನವಿಸ್‌ರವರು ಮಾಡಿದ “ವೋಟ್ ಜಿಹಾದ್ ವಿರುದ್ಧದ ಧರ್ಮಯುದ್ಧ ನಮ್ಮದು” ಎಂಬ ಆಕ್ರಮಣಕಾರಿ ಪ್ರಚಾರ ಭಾಷಣವು ಮತದಾರರನ್ನು ಜಾಗೃತಗೊಳಿಸಿತು. ಹರಿಯಾಣ ಚುನಾವಣೆಯಲ್ಲಿನ ಸೋಲಿನ ನಂತರವಾದರೂ ರಾಹುಲ್ ಗಾಂಧಿಯವರು ತಮ್ಮ ತಂತ್ರ ಗಾರಿಕೆಯನ್ನು ಬದಲಿಸಬೇಕಿತ್ತು, ಆದರೆ ಅವರು ಇಲ್ಲಿಯೂ “ಬಿಜೆಪಿ ಯವರು ಸಂವಿಧಾನವನ್ನು ಬದಲಾಯಿಸುತ್ತಾರೆ. ಅವರದು ಅಂಬಾನಿ- ಅದಾನಿಗಳ ಸರಕಾರ. ನಾವು ಅಽಕಾರಕ್ಕೆ ಬಂದರೆ ಜಾತಿಗಣತಿ ಮಾಡುತ್ತೇವೆ, ಮೀಸಲಾತಿ ಮಿತಿಯನ್ನು ಹೆಚ್ಚಿಸುತ್ತೇವೆ” ಎಂಬ ಅದೇ ಹಳೆಯ ರಾಗವನ್ನೇ ಹಾಡಿದರು. ಇದರ ಹೊರತು ಅವರ ಬಳಿ ಬೇರೇನೂ ಸರಕೇ ಇರಲಿಲ್ಲ. ಉದ್ಯಮಪತಿಗಳನ್ನು ಗುರಿಯಾಗಿಸಿ ದಾಳಿ ಮಾಡುವ ತಂತ್ರಗಾರಿಕೆಯು ಯಾವಾಗಲೂ ಫಲ ಕೊಡುವುದಿಲ್ಲ ಎಂದು ಮಿತ್ರಪಕ್ಷಗಳು ಸಲಹೆ ನೀಡಿದರು ಕೂಡ ರಾಹುಲ್ ತಮ್ಮ ವರಸೆ ಬದಲಾಯಿಸದೆ ಹಳೆಯ ರಾಗಕ್ಕೇ ಜೋತುಬಿದ್ದರು.

ಹೀಗಾಗಿ ಪರ್ಯಾಯ ಅಭಿವೃದ್ಧಿಯ ಅಜೆಂಡಾವನ್ನು ಮಹಾರಾಷ್ಟ್ರದ ಮುಂದಿಡಲು ಅವರು ವಿಫಲರಾದರು. ಕೇವಲ ವಿಭಜನೆಯ ತಂತ್ರಗಾರಿಕೆ ಯಿಂದ ಗೆಲುವು ಸಾಽಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಅರ್ಥವಾಗಲೇ ಇಲ್ಲ. ಜನಸಾಮಾನ್ಯರ ಮೇಲೆ ಪರಿಣಾಮ ಬೀರದ ‘ಅದಾನಿಯನ್ನು ಗುರಿಯಾಗಿಸಿದ ಪ್ರಚಾರ’ ವಿಫಲವಾಯಿತು; ಕಾಂಗ್ರೆಸ್ ತಾನು ಮುಳುಗಿ ದ್ದಲ್ಲದೆ, ಮೈತ್ರಿಕೂಟದ ಪಕ್ಷಗಳನ್ನೂ ಮುಳುಗಿಸಿತು. ‘ಅಘಾಡಿ’ ಮೈತ್ರಿಕೂಟದ ಚುನಾವಣಾ ಸಿದ್ಧತೆ ಎಷ್ಟು ದುರ್ಬಲವಾಗಿತ್ತು ಎಂಬುದಕ್ಕೆ ಕಾಂಗ್ರೆಸ್ ವಕ್ತಾರೆ ಶಮಾ ಮುಹಮದ್ ಆಡಿರುವ ಮಾತೇ ಸಾಕ್ಷಿ. ಆಕೆ ‘ಇಂಡಿಯಾ ಟುಡೆ’ ವಾಹಿನಿಯಲ್ಲಿ ಮಾತನಾಡುತ್ತ, “ಕಾಂಗ್ರೆಸ್‌ನಲ್ಲಿ ಹೊಂದಾಣಿಕೆಯೇ ಇರಲಿಲ್ಲ, ಎಲ್ಲವೂ ಗೊಂದಲಮಯವಾಗಿತ್ತು. ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ತಮ್ಮ ಸ್ಥಾನವನ್ನು ಗೆಲ್ಲುವೆಡೆಗೆ ಗಮನ ಹರಿಸಿದರೇ ವಿನಾ, ರಾಜ್ಯಾದ್ಯಂತ ಪ್ರಚಾರ ಮಾಡಲಿಲ್ಲ” ಎಂದಿದ್ದುಂಟು.

ಇದಲ್ಲದೆ, ಕಾಂಗ್ರೆಸ್ ನಾಯಕರ ಹೆಚ್ಚಿನ ಗಮನವು ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದ ಕೇರಳದ ವಯನಾಡ್ ಕ್ಷೇತ್ರದ ಮೇಲಿತ್ತು ಎಂಬುದು ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಕಾಂಗ್ರೆಸ್‌ನ ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚವ್ಹಾಣ್, ಯಶೋಮತಿ ಠಾಕೂರ್ ಮತ್ತು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಬಾಳಾಸಾಹೇಬ್ ತೋರಾಟ್ ಹೀನಾಯವಾಗಿ ಸೋತರೆ, ನಾನಾ ಪಟೋಲೆ ಅವರು ಅಂಚೆ ಮತಗಳ ಸಹಾಯದಿಂದಾಗಿ 208 ಮತಗಳ ಅಂತರದಿಂದ ಗೆದ್ದರು. ‘ಮಹಾಯುತಿ’ ಮೈತ್ರಿಕೂಟದ ಸರಕಾರವು ವಿಧಾನಸಭಾ ಚುನಾವಣೆಯ ಘೋಷಣೆಗೆ 6 ತಿಂಗಳು ಮುನ್ನ ಮಹಿಳೆಯರ ಸಬಲೀಕರಣಕ್ಕೆಂದು ‘ಲಡಕಿ ಬಾಹೀಣ್’ ಯೋಜನೆಯಡಿ ಮಾಸಿಕ 1500 ರು. ನೀಡಲು ಮುಂದಾಯಿತು.

ಈ ಯೋಜನೆಯು ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ಶೇ.6ರಷ್ಟು ಹೆಚ್ಚು ಮಹಿಳೆಯರಿಂದ ಮತದಾನವಾಗಿರುವುದೇ ದೃಢಪಡಿಸುತ್ತದೆ. ಬಿಜೆಪಿಯಲ್ಲಿ ತಾರಾ ಪ್ರಚಾರಕರಿಗೆ ಕೊರತೆಯೇ ಇರಲಿಲ್ಲ. ಸ್ವತಃ ಮೋದಿಯವರು, ಅಮಿತ್ ಶಾ, ನಿತಿನ್ ಗಡ್ಕರಿ, ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವಿಸ್, ಪವನ್ ಕಲ್ಯಾಣ್ ಹೀಗೆ ದೊಡ್ಡ ದಂಡೇ ‘ಮಹಾಯುತಿ’ ಪರ ಪ್ರಚಾರದಲ್ಲಿ ತೊಡಗಿದ್ದರೆ, ಕಾಂಗ್ರೆಸ್ ಪಾಲಿಗೆ ರಾಹುಲ್ ಗಾಂಧಿಯವರೊಬ್ಬರೇ ಆಸರೆಯಾಗಿದ್ದರು.

ಮಲ್ಲಿಕಾರ್ಜುನ ಖರ್ಗೆಯವರಿಗೆ ವೋಟು ದಕ್ಕಿಸಿಕೊಡುವ ಸಾಮರ್ಥ್ಯವಿರಲಿಲ್ಲ, ಶರದ್ ಪವಾರ್ ಮೊದಲಿನ ಆಕರ್ಷಣೆಯನ್ನು ಕಳೆದು ಕೊಂಡಿದ್ದರು, ಉದ್ಧವ್ ಠಾಕ್ರೆ ತಮ್ಮ ಮೂಲಸಿದ್ಧಾಂತವಾದ ‘ಹಿಂದುತ್ವ’ವನ್ನು ಢೋಂಗಿ ಜಾತ್ಯತೀತವಾದಕ್ಕೆ ಅಡವಿಟ್ಟು ನೈತಿಕ ಶಕ್ತಿಯನ್ನು ಕಳೆದುಕೊಂಡಿದ್ದರು.

ತನ್ನ ಪರಾಭವಕ್ಕೆ ಪ್ರಾಮಾಣಿಕ ಆತ್ಮಾವಲೋಕನ ಮಾಡಿಕೊಳ್ಳಲಾಗದ ಕಾಂಗ್ರೆಸ್, ತನ್ನ ನೇತೃತ್ವದ ಮೈತ್ರಿಕೂಟದ ಸೋಲಿಗೆ ಇವಿಎಂ ಕಾರಣ ಎಂದು ಆಪಾದಿಸುತ್ತಿರುವುದು ಹಾಸ್ಯಾಸ್ಪದವಾಗಿದೆ; ಸೋಲಿನ ಕಾರಣವನ್ನು ತಿಳಿದುಕೊಂಡು ತಪ್ಪನ್ನು ಸರಿಪಡಿಸಿಕೊಳ್ಳುವ ಗೋಜಿಗೆ ಅದು ಹೋಗುತ್ತಿಲ್ಲ. ಮತ್ತೊಂದೆಡೆ, ಇವಿಎಂ ರದ್ದುಪಡಿಸುವಂತೆ ಕೋರಿದ್ದ ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಬಲವಾದ ತಪರಾಕಿ ನೀಡಿದ್ದರೂ, “ಇವಿಎಂ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುತ್ತೇವೆ” ಎಂದು ಘೋಷಿಸುವ ಮೂಲಕ ಖರ್ಗೆಯವರು ಗೇಲಿಗೊಳಗಾದರು.

ಒಟ್ಟಾರೆ ಹೇಳುವುದಾದರೆ, ಹರಿಯಾಣದ ನಂತರ ಮಹಾರಾಷ್ಟ್ರದಲ್ಲೂ ದಕ್ಕಿರುವ ಗೆಲುವು ಮೋದಿಯವರ ವರ್ಚಸ್ಸಿಗೆ ಮತ್ತೊಮ್ಮೆ ಹೊಳಪು ತಂದಿರುವುದಲ್ಲದೆ, ‘ಮೋದಿ-ಮೋಡಿ’ ಕರಗುತ್ತಿದೆ ಎಂದು ಟೀಕಿಸುತ್ತಿದ್ದವರ ಬಾಯಿಯನ್ನು ಬಂದ್ ಮಾಡಿದೆ. ಮೋದಿಯವರ ಮುಕುಟಕ್ಕೆ ಮತ್ತೊಂದು ಗರಿಯು ಸೇರಿಕೊಂಡಂತಾಗಿದೆ.

(ಲೇಖಕರು ಬಿಜೆಪಿಯ ವಕ್ತಾರರು)

ಇದನ್ನೂ ಓದಿ: Prakash Shesharaghavachar Column: ಮಹಿಳಾ ಸುರಕ್ಷತೆ ಮೊದಲ ಆದ್ಯತೆಯಾಗಲಿ