Saturday, 30th November 2024

Job news: ಸಿಹಿ ಸುದ್ದಿ, ಕಂದಾಯ ಇಲಾಖೆಯಲ್ಲಿ 1000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

krishna byre gowda

ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ (Job news) ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 34 ಭೂ ದಾಖಲೆಯ ಸಹಾಯಕ ನಿರ್ದೇಶಕರು, 746 ಸರ್ಕಾರಿ ಸರ್ವೆಯರ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ 1191 ಪರವಾನಿಗೆ ಹೊಂದಿದ ಸರ್ವೆಯರ್ ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ ಒಂದು ಸಾವಿರ ಪರವಾನಿಗೆ ಹೊಂದಿದ ಸರ್ವೆಯರ್ ಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 1,96,000 ಸರ್ಕಾರಿ ಸರ್ವೇ ನಂಬರ್ ಇದ್ದು, ನಾನಾ ಸರ್ಕಾರಿ ಯೋಜನೆಗಳ ಅಡಿ ಕಳೆದ 30-40 ವರ್ಷಗಳಿಂದ ಲಕ್ಷಾಂತರ ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ. ಆದರೆ, 30-40 ವರ್ಷ ಆಗಿದ್ದರೂ ಜಮೀನಿಗೆ ಪೋಡಿ ದುರಸ್ತಿ ಆಗಿಲ್ಲ. ದಾಖಲೆ ಪಕ್ಕ ಆಗಿಲ್ಲ. ಇಂತಹ ಪ್ರಕರಣಗಳೇ ರಾಜ್ಯದಲ್ಲಿ ಕನಿಷ್ಟ 25 ಲಕ್ಷ ಇರಬಹುದು. ಪಕ್ಕಾ ಪೋಡಿ ದುರಸ್ತಿ ಮಾಡಲು ನಮೂನೆ 1 ರಿಂದ 5 ಹಾಗೂ 5 ರಿಂದ 10 ದಾಖಲೆ ಲಭ್ಯವಿರಬೇಕು. ಆದರೆ, ಈ ದಾಖಲೆಗಳಿಲ್ಲದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾದ್ದಾರೆ. ಸರ್ಕಾರಿ ಕಚೇರಿಗಳಿಗೆ ದಶಕಗಳಿಂದ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಲಭ್ಯವಾಗಿಲ್ಲ ಎಂದು ವಿಷಾದಿಸಿದರು.

ಕಳೆದ ಒಂದು ವರ್ಷಗಳಿಂದ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿ, ಚರ್ಚಿಸಿ ಕೊನೆಗೂ ನಮೂನೆ 1 ರಿಂದ 5 ಪೋಡಿ ದುರಸ್ತಿ ಕೆಲಸವನ್ನು ಸರಳೀಕರಣಗೊಳಿಸಿ ಇದೀಗ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆನ್ಲೈನ್‌ನಲ್ಲಿ ಡಿಜಿಟಲ್ ಪ್ರಕ್ರಿಯೆಗಾಗಿ ಆಪ್ ರೂಪಿಸಲಾಗಿದೆ. 1,96,000 ಸರ್ಕಾರಿ ಸರ್ವೇ ನಂಬರ್ಗಳನ್ನೂ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಗುರಿ. ಮೊದಲ ಹಂತದಲ್ಲಿ ಈಗಾಗಲೇ 27,107 ಫೈಲ್ ಸೃಷ್ಟಿಸಲಾಗಿದೆ. ಈ ಸಂಬಂಧ ಡಾಟಾ ಎಂಟ್ರಿ ಕೆಲಸವೂ ನಡೆಯುತ್ತಲೇ ಇದೆ. ಇದರ ಜೊತೆ ಜೊತೆಗೆ ನಮೂನೆ 6 ರಿಂದ 10 ರ ಸರ್ವೇ ಕೆಲಸಕ್ಕೆ ಶನಿವಾರದಿಂದಲೇ (ನವೆಂಬರ್ 30) ಹಾಸನದಿಂದ ವಿದ್ಯುಕ್ತ ಚಾಲನೆ ನೀಡಲಾಗುವುದು ಎಂದರು.