ಬೆಂಗಳೂರು: ಸರ್ಕಾರದ ವತಿಯಿಂದ ಬೆಂಗಳೂರಿನ (Bengaluru news) ಆಸ್ತಿ ತೆರಿಗೆ ಪಾವತಿ ಬಾಕಿದಾರರಿಗೆ (BBMP property Tax) ನೀಡಲಾಗಿರುವ ಒಂದು ಬಾರಿ ಪರಿಹಾರ (OTS) ಯೋಜನೆಗೆ ಇಂದೇ ಕೊನೆಯ ದಿನವಾಗಿದೆ. ಇಂದು ಕಟ್ಟದಿದ್ದರೆ ನಾಳೆಯಿಂದ ಎರಡು ಪಟ್ಟು ಆಸ್ತಿ ತೆರಿಗೆ ಪಾವತಿಸಬೇಕಾಗಲಿದೆ.
ಬಿಬಿಎಂಪಿಯಲ್ಲಿ ದಿನಾಂಕ 30-11-2024 ರವರೆಗೆ ಒಟಿಎಸ್ ಅವಕಾಶ ಒದಗಿಸಲಾಗಿತ್ತು. ಬಿಬಿಎಂಪಿ ನೀಡಿರುವ ಐತಿಹಾಸಿಕ ಒಂದು ಬಾರಿ ಪರಿಹಾರ (OTS) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ.
ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ನವೆಂಬರ್ 30 ರ ಇಂದು ಮುಕ್ತಾಯಗೊಳ್ಳಲಿದ್ದು, ಆ ವೇಳೆಗೆ ಒಟ್ಟು ₹4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಬಡ್ಡಿ ಮತ್ತು ದಂಡಕ್ಕೆ ವಿನಾಯಿತಿ ನೀಡಲಾಗಿರುವ ಒಟಿಎಸ್ ಯೋಜನೆಯನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಡಿಸೆಂಬರ್ 1ರಿಂದ ಸುಮಾರು ಎರಡು ಪಟ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಆದರೆ ಆಸ್ತಿ ತೆರಿಗೆ ಬಾಕಿ ಇರುವ ನಾಗರೀಕರು ಇದರ ಲಾಭವನ್ನು ಸರಿಯಾಗಿ ಪಡೆಯುತ್ತಿಲ್ಲ. 250 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ 1,6000ಕ್ಕೂ ಹೆಚ್ಚು ಪರಿಷ್ಕರಣೆ ಪ್ರಕರಣಗಳು ಮತ್ತು 400 ಕೋಟಿ ರೂ.ಗಿಂತ ಹೆಚ್ಚು ಬಾಕಿ ಇರುವ ಸುಮಾರು 2.4 ಲಕ್ಷ ಸುಸ್ತಿದಾರರ ಪ್ರಕರಣಗಳು ಪಾವತಿಸುವುದು ಬಾಕಿಯಿರುತ್ತದೆ.OTS ಯೋಜನೆಯಡಿ ತಕ್ಷಣವೇ ಬಾಕಿ ಆಸ್ತಿ ತೆರಿಗೆ ಪಾವತಿಸುವ ಸಲುವಾಗಿ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಯೋಜಿಸಿದೆ.
ಮಾರ್ಚ್ ವೇಳೆಗೆ 5,210 ಕೋಟಿ ರೂ. ವಸೂಲಿ ಮಾಡುವ ಗುರಿ ಹೊಂದಿರುವ ಪಾಲಿಕೆಗೆ ಇದೀಗ ಒಟಿಎಸ್ ಮುಕ್ತಾಯವಾಗೋಕೆ ಕೌಂಟ್ ಡೌನ್ ಶುರುವಾಗಿರೋದು ಬಾಕಿ ಹಣ ವಸೂಲಿ ಮಾಡುವ ಕ್ರಮಗಳ ಬಗ್ಗೆ ಚಿಂತೆ ತಂದಿಟ್ಟಿದೆ. ಈಗಾಗಲೇ ಹಲವು ತೆರಿಗೆ ಬಾಕಿದಾರರಿಗೆ ನೋಟಿಸ್ ನೀಡಿ ಸುಸ್ತಾಗಿರುವ ಪಾಲಿಕೆಗೆ ಇದೀಗ ಮಾರ್ಚ್ ಒಳಗೆ ಉಳಿದ ಬಾಕಿ ತೆರಿಗೆ ವಸೂಲಿಯ ಟಾಸ್ಕ್ ಎದುರಾಗಿದೆ.
ಸದ್ಯ ಆಸ್ತಿ ತೆರಿಗೆ ಪಾವತಿ ಮಾಡದ ಕಾರಣಕ್ಕಾಗಿ ಈವರೆಗೆ 6381 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಸೀಜ್ ಮಾಡಿ ವಸೂಲಿ ಮಾಡುವ ಕೆಲಸ ಮಾಡಿದ್ದಾರೆ. ಜತೆಗೆ ಅತಿ ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಸತಿ ಹಾಗೂ ಇನ್ನಿತರೆ ಆಸ್ತಿಗಳ ಮಾಲೀಕರ 82 ಸಾವಿರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿದೆ. ಇದೀಗ ಒಟಿಎಸ್ ಅವಕಾಶ ಕೂಡ ಮುಗಿಯುತ್ತಿರೋದರಿಂದ ಇನ್ನೂ ತೆರಿಗೆ ಬಾಕಿ ಕಟ್ಟದವರ ವಿರುದ್ಧ ಪಾಲಿಕೆ ಮತ್ತೆ ಯಾವ ಕ್ರಮ ಕೈಗೊಳ್ಳುತ್ತೆ ನೋಡಬೇಕಿದೆ.
ಇಂದೇ ಓದಿ: Job news: ಸಿಹಿ ಸುದ್ದಿ, ಕಂದಾಯ ಇಲಾಖೆಯಲ್ಲಿ 1000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ