ಮೈಸೂರು: ಸಾಲದ ಹಣ ಹಿಂದಿರುಗಿಸಲು ಮೈಕ್ರೋಫೈನಾನ್ಸ್‌ನವರು (Micro finance) ನೀಡುತ್ತಿದ್ದ ಒತ್ತಡ ಸಹಿಸಲಾಗದೆ ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ (Mysore crime News) ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ಸಮೀಪದ ಕಿರಿಜಾಜಿ ಗ್ರಾಮದಲ್ಲಿ ಸಣ್ಣಕಾಳಯ್ಯ ಎಂಬವರ ಪತ್ನಿ ಸುಶೀಲ (48) ಎಂಬ ಮಹಿಳೆ ಕಾಳಿನ ಕ್ರಿಮಿನಾಶಕ ಮಾತ್ರೆ ನುಂಗಿ ಸಾವನಪ್ಪಿದ್ದಾರೆ. ಮೃತರಿಗೆ ಪತಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಸುಶೀಲ ಅವರು ಹುಣಸೂರಿನ ಫಾರ್ಚುನ್ ಮೈಕ್ರೋ ಫೈನಾನ್ಸ್‌ನವರಿಂದ ಸಾಲ ಪಡೆದಿದ್ದು, ಸಾಲದ ಮರುಪಾವತಿಯನ್ನು ಸಕಾಲದಲ್ಲಿ ಪಾವತಿ ಮಾಡುತ್ತಾ ಬಂದಿದ್ದಾರೆ. ಆದರೆ ಈ ವಾರದ ಮರುಪಾವತಿಯನ್ನು ಪಾವತಿಸಲು ಸಾಧ್ಯವಾಗದ ಕಾರಣ ನಾಳೆ ಕಟ್ಟುತ್ತೇನೆ ಸಮಯ ಕೊಡಿ ಎಂದು ಕೇಳಿದ್ದಾರೆ. ಆದರೆ ಮರುಪಾವತಿಗೆ ಬಂದಿದ್ದ ಉಮೇಶ್ ಮತ್ತು ಆತನ ನಾಲ್ಕು ಮಂದಿ ಸಹಚರರು ಸುಶೀಲ ಅವರಿಗೆ ಈಗಲೇ ಹಣ ಕೊಡಿ ಎಂದು ಬೆದರಿಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಇದರಿಂದ ಮನನೊಂದ ಸುಶೀಲ ಮಧ್ಯಾಹ್ನ ಕ್ರಿಮಿನಾಶಕ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಬಿದ್ದಿರುವುದನ್ನು ಕಂಡ ಮನೆಯವರು ಹುಣಸೂರು ಡಿ ದೇವರಾಜ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಕಳೆದ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಸುಶೀಲ ಮೃತ ಪಟ್ಟಿದ್ದಾರೆ. ಈ ಬಗ್ಗೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪುತ್ರ ನವೀನ್ ದೂರು ದಾಖಲಿಸಿದ್ದಾರೆ.
ನಮ್ಮ ತಾಯಿ ಸಾಲವನ್ನು ನಿಯಮಿತವಾಗಿ ಕಟ್ಟಿಕೊಂಡು ಬಂದಿದ್ದರು. ಈ ತಿಂಗಳಿನ ಸಾಲ ಪಾವತಿಯಲ್ಲಿ ವಿಳಂಬವಾಗಿತ್ತು. ಆದರೆ ಫೈನಾನ್ಸ್ ಕಡೆಯವರು ಬಂದು ಅವಮಾನ ಮಾಡಿದ್ದಕ್ಕೆ ಬೇಸರಗೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಈ ರೀತಿ ಮಾಡಿಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಅವರ ಪುತ್ರ ಹೇಳಿದ್ದಾರೆ.
ಇದನ್ನೂ ಓದಿ: Crime News: ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸಂಶಯಪಿಶಾಚಿ!