Saturday, 30th November 2024

SSLC Exam Time Table: ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

SSLC exam

ಬೆಂಗಳೂರು: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC exam date 2025) ತಾತ್ಕಾಲಿಕ ವೇಳಾಪಟ್ಟಿಯನ್ನು (time table) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಬಿಡುಗಡೆ ಮಾಡಿದೆ. ಆಕ್ಷೇಪಣೆಗಳಿದ್ದಲ್ಲಿ ತಿಳಿಸಲು ಕಾಲಾವಕಾಶ ನೀಡಿದ್ದು, ಇಲ್ಲದಿದ್ದಲ್ಲಿ ಈ ವೇಳಾಪಟ್ಟಿಯೇ ಅಂತಿಮವಾಗಲಿದೆ.

ಮಾರ್ಚ್‌ ಹಾಗೂ ಏಪ್ರಿಲ್‌ ನಡುವೆ ನಡೆಸಬೇಕಾದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಸಂಬಂಧ, ಇದೀಗ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ತಮ್ಮ ಉತ್ತಮ ಪೂರ್ವ ಸಿದ್ಧತೆಗೆ ಈ ದಿನಾಂಕಗಳನ್ನು ಒಮ್ಮೆ ತಿಳಿದುಕೊಳ್ಳುವುದು ಉತ್ತಮ.

ಪರೀಕ್ಷಾ ಮಂಡಳಿಯು ಮಾರ್ಚ್‌ 24 ರಿಂದ ಏಪ್ರಿಲ್ 17 ರವರೆಗೂ ಪರೀಕ್ಷೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿದೆ. ಈ ಪರೀಕ್ಷೆ ದಿನಾಂಕಗಳಿಗೆ ಯಾವುದೇ ಆಕ್ಷೇಪಣೆ ಬರದಿದ್ದಲ್ಲಿ, ಹಾಗೂ ಸರ್ಕಾರದ ಆಡಳಿತಾತ್ಮಕ ಕಾರಣಗಳು, ಇತರೆ ಸಮಸ್ಯೆಗಳು ಎದುರಾಗದಿದ್ದಲ್ಲಿ ಇದೇ ದಿನಾಂಕಗಳ ನಡುವೆ ಪರೀಕ್ಷೆ ನಡೆಸಲಾಗುತ್ತದೆ. ಮೇ ತಿಂಗಳ ವೇಳೆಗೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ.

ಮಂಡಳಿ ಪ್ರಸ್ತುತ ಬಿಡುಗಡೆ ಮಾಡಿರುವ ಈ ಮೇಲಿನ ಪರೀಕ್ಷೆ ದಿನಾಂಕಗಳಿಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 2ನೇ ವಾರದ ವೇಳೆಗೆ ಅಂತಿಮ ವೇಳಾಪಟ್ಟಿಯನ್ನು ವಿಷಯವಾರು ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಾಲಾ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಡಿಸೆಂಬರ್ ವೇಳೆಗೆ ಪರೀಕ್ಷೆ 1ರ ಜತೆಗೆ ಪರೀಕ್ಷೆ-2, ಪರೀಕ್ಷೆ-3 ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಪರೀಕ್ಷೆ 2 ಅನ್ನು ಜೂನ್‌ ವೇಳೆಗೆ, ಪರೀಕ್ಷೆ 3 ಅನ್ನು ಜುಲೈ ಮತ್ತು ಆಗಸ್ಟ್‌ ವೇಳೆಗೆ ನಡೆಸುವ ಸಾಧ್ಯತೆಗಳಿವೆ.

ಮೊದಲ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ:

2025 ರ ಮಾರ್ಚ್‌ 24 ಸೋಮವಾರ ಗಣಿತಶಾಸ್ತ್ರ
2025 ರ ಮಾರ್ಚ್‌ 28 ಶುಕ್ರವಾರ ಇಂಗ್ಲೀಷ್‌( ದ್ವಿತೀಯ ಭಾಷೆ)
2025 ರ ಏಪ್ರಿಲ್‌ 1 ಮಂಗಳವಾರ ವಿಜ್ಞಾನ
2025 ರ ಏಪ್ರಿಲ್‌ 4 ಶುಕ್ರವಾರ ಸಮಾಜಶಾಸ್ತ್ರ
2025 ರ ಏಪ್ರಿಲ್‌ 7 ಸೋಮವಾರ ಕನ್ನಡ (ಮೊದಲ ಭಾಷೆ)
2025 ರ ಏಪ್ರಿಲ್‌ 11 ಶುಕ್ರವಾರ ಹಿಂದಿ(ತೃತೀಯ ಭಾಷೆ)

ಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ ( ಎನ್‌ಸಿಇಆರ್‌ಟಿ), ಸಂಸ್ಕೃತ
ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್‌ಎಸ್‌ಕ್ಯೂಎಫ್‌ ವಿಷಯಗಳು.

ಮಾರ್ಚ್‌ನಲ್ಲಿ ಆರಂಭ

ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ನಲ್ಲಿ ಆರಂಭಗೊಂಡು ಏಪ್ರಿಲ್‌ವರೆಗೂ ನಡೆಯುತ್ತವೆ.ಮುಖ್ಯ ವಿಷಯಗಳು, ಭಾಷಾ ವಿಷಯಗಳು, ಕೋರ್‌ ವಿಷಯಗಳು ಸೇರಿ ಒಟ್ಟು ಪರೀಕ್ಷೆಗೆ ಮೂರು ವಾರಗಳ ಸಮಯವನ್ನು ಮೀಸಲಿಡಲಾಗುತ್ತದೆ. ಕನಿಷ್ಠ ಒಂದು ಅಥವಾ ಎರಡು ದಿನಗಳ ಬಿಡುವು ನೀಡಿ ಪರೀಕ್ಷೆ ನಿಗದಿ ಮಾಡಲಾಗುತ್ತದೆ. ಹದಿನೈದು ದಿನಗಳ ಕಾಲ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕ ಅಂತಿಮ ವೇಳಾ ಪಟ್ಟಿ ಪ್ರಕಟಿಸಲಾಗುತ್ತದೆ. ಆದರೆ ಮೊದಲು ನಿಗದಿಯಾಗುವ ವೇಳಾಪಟ್ಟಿಯೇ ಅಂತಿವಾಗುವುದೇ ಹೆಚ್ಚು.

ಪರೀಕ್ಷೆ-1ಕ್ಕೆ ಗೈರುಹಾಜರಾದವರು ಪರೀಕ್ಷೆ-2 ಅಥವಾ ಪರೀಕ್ಷೆ-3 ಅನ್ನು ಪರೀಕ್ಷೆ-1ಕ್ಕೆ ನೋಂದಾವಣೆ ಕಡ್ಡಾಯ. ವಿದ್ಯಾರ್ಥಿಗಳು ತಾವು ಇಚ್ಛಿಸಿದ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯಬಹುದು. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಪರೀಕ್ಷೆ-1 ಸೇರಿದಂತೆ ಒಟ್ಟು ಸತತ 6 ಅವಕಾಶಗಳಿರುತ್ತವೆ. ಈ 6 ಪ್ರಯತ್ನ ಮುಗಿದ ನಂತರವೂ ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾವಣೆ ಮಾಡಬಹುದು. ಆ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಪಠ್ಯಕ್ರಮವನ್ನು ವ್ಯಾಸಂಗ ಮಾಡಿ ಪರೀಕ್ಷೆಗೆ ಹಾಜರಾಗಬೇಕು.

ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುವ ಶಾಲಾ ವಿದ್ಯಾರ್ಥಿಗಳಿಗೆ ಶೇಕಡ 75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ. ಪರೀಕ್ಷೆ-1 ರಲ್ಲಿ ಎಲ್ಲಾ ವಿಷಯಗಳಲ್ಲಿ ಪಾಸಾದವರು ಕೂಡ ಇಚ್ಛಿಸಿದಲ್ಲಿ ಮತ್ತಿನ ಎರಡು ವರ್ಷಗಳ ಅವಧಿಯಲ್ಲಿ ಪುನಃ ಪರೀಕ್ಷೆಗೆ ಹಾಜರಾಗಿ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಬಹುದಾಗಿದೆ. ಅಂತಿಮವಾಗಿ ವಿದ್ಯಾರ್ಥಿ ಗಳಿಸುವ ಅತ್ಯುತ್ತಮ ಅಂಕಗಳನ್ನು ಅಂಕಪಟ್ಟಿಯಲ್ಲಿ ಪಡೆಯಲು ಅವಕಾಶ ಇದೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಶೇ.71.08 ಫಲಿತಾಂಶ