Sunday, 10th November 2024

ವ್ಯಾವಹಾರಿಕ ಮಾದರಿಗಳಿಲ್ಲದೆ ಸೊರಗಿದೆ ಘನತ್ಯಾಜ್ಯ ನಿರ್ವಹಣೆ

ಅಭಿವ್ಯಕ್ತಿ

ಅರುಣ್‌ ಕೋಟೆ

ಘನತ್ಯಾಜ್ಯ ನಿರ್ವಹಣೆ ಪುಕ್ಕಟೆಯಾಗಿ ಆಗುವ ಕೆಲಸವಲ್ಲ. ಕೇವಲ ಭಾವನಾತ್ಮಕ ಪ್ರತಿಕ್ರಿಯೆ ಕೆಲಸಕ್ಕೆ ಬರುವಂತದ್ದಲ್ಲವೇ ಅಲ್ಲ. ನಾವು ಕಾಡನ್ನು, ಕಾಡು ಪ್ರಾಣಿಗಳನ್ನು, ಬೆಟ್ಟ ಗುಡ್ಡಗಳನ್ನು, ಜಲಪಾತಗಳನ್ನು, ಹಕ್ಕಿಗಳನ್ನು ಪ್ರೀತಿಸುತ್ತೇವೆ. ಅವುಗಳ ಸುಂದರ ಚಿತ್ರವನ್ನು ಕೆಮರಾದಲ್ಲಿ ಸೆರೆ ಹಿಡಿಯುತ್ತೇವೆ.

ಇತ್ತೀಚೆಗೆ ವಾರಾಂತ್ಯದಲ್ಲಿ ಉತ್ತಮ ಉದ್ಯೋಗಸ್ಥರು ತಮ್ಮ ಸ್ವಂತ ವಾಹನಗಳಲ್ಲಿ ಭರ್ತಿ ಸಾಮಾನುಗಳನ್ನು ತುಂಬಿಕೊಂಡು ನಗರ ಪ್ರದೇಶದಿಂದ ದೂರಕ್ಕೆ ಪ್ರವಾಸ ಹೋಗಿ ಬರುತ್ತಾರೆ. ಎರಡು ದಿನ ನಿಸರ್ಗದ ಸೌಂದರ್ಯವನ್ನು ಸವಿದು ದುಬಾರಿ ಸ್ಟೇ ಹೋಮುಗಳಲ್ಲಿ ತಂಗಿದ್ದು ಒಲ್ಲದ ಮನಸ್ಸಿನಲ್ಲೇ ಕೆಲಸಕ್ಕೆ ಹಿಂದಿರುಗಲು ತಮ್ಮ ಊರುಗಳಿಗೆ ಮರಳುತ್ತಾರೆ.

ಈ ಪ್ರವಾಸಿ ತಾಣಗಳಲ್ಲಿ ಆಗುವ ಬೇರೊಂದು ರೀತಿಯಾ ಅನುಭೂತಿಯಿಂದಾಗಿ ನಾವು ಅಲ್ಲಿನ ಪರಿಸರಕ್ಕೆ ಗಾಢವಾಗಿ
ಆಕರ್ಷಿತರಾಗುತ್ತೇವೆ. ಇದು ನಮ್ಮ ನಿತ್ಯದ ಸ್ಥಳವಾಗಿರುವುದಿಲ್ಲ. ಆದರೆ ನಾವು ಬದುಕುವ ಜಾಗಗಳಲ್ಲಿನ ನಾನಾ ಬಗೆಯ
ಒತ್ತಡಗಳಿಂದ ನಮ್ಮ ಪರಿಸರ ಪ್ರೇಮ ದೂರದ ಪ್ರವಾಸಿ ತಾಣಗಳ ಸೌಂದರ್ಯರಾಧನೆಗೆ ಮಾತ್ರ ಸೀಮಿತವಾಗುವುದು ಹೀಗೆ
ಎನ್ನಬಹುದು. ನಾಗರಿಕ ಸಮಾಜದಲ್ಲಿ ಪರಿಸರ ಪ್ರೇಮಕ್ಕಿಂತ ಹೆಚ್ಚು ಅರ್ಥಪೂರ್ಣವಾದ್ದು ಪರಿಸರ ಕಾಳಜಿ. ಪರಿಸರ ಪ್ರೇಮವೆಂಬುದು ಸ್ಥಾವರವಾದರೆ, ಪರಿಸರ ಕಾಳಜಿ ಜಂಗಮ ಶಕ್ತಿಯುಳ್ಳದ್ದು.

ಈ ಕಾಳಜಿಯೇ ಮುಂದಕ್ಕೆ ನಿರ್ವಹಣೆಯ ಅನುಷ್ಠಾನದ ಹಂತವನ್ನು ತಲುಪುವುದು. ನಮ್ಮಲ್ಲಿ ನಿಜಕ್ಕೂ ಅಂತಹ ಕಾಳಜಿ ಯಿದ್ದರೆ ಕನಿಷ್ಠ ವರುಷಕ್ಕೊಮ್ಮೆಯಾದರೂ ನಮ್ಮ ಊರುಗಳ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗಿಬರುವ  ರೂಢಿ ಮಾಡಿಕೊಳ್ಳುವುದು ಒಳ್ಳೆಯದು.

ಕಳೆದ ವರುಷ ದೆಹಲಿಯ ಘಾಜೀಪುರದ ಘನತ್ಯಾಜ್ಯ ವಿಲೇವಾರಿಯಾಗುವ ಸ್ಥಳ ದೇಶಾದ್ಯಂತ ಸುದ್ದಿಯಾಯಿತು. ಅಲ್ಲಿನ ತಾಜ್
ಮಹಲ್ ಎತ್ತರವನ್ನು ಮೀರಿಸಿದ 213 ಅಡಿಗಳ 140 ಲಕ್ಷ ಟನ್ ಪ್ರಮಾಣದ ಕಸದ ಗುಡ್ಡವೊಂದರ ಫೋಟೋ ಎಲ್ಲೆಡೆ ಹರಿದಾಡಿದ್ದೇ ತಡ ಅದಕ್ಕೆ ಏಷ್ಯಾದ ಬೃಹತ್ ಘನತ್ಯಾಜ್ಯ ಪರ್ವತವೆಂಬ ಪಟ್ಟವೂ ದೊರಕಿತು. ದೇಶದ ರಾಜಧಾನಿಯಲ್ಲೇ ಇಂತಹ ಪರ್ವತವನ್ನು ಹೊಂದಿರುವುದು ನಮ್ಮಲ್ಲಿರುವ ಘನತ್ಯಾಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಯ  ಬೇಜವಾಬ್ದಾರಿತನ ವನ್ನೇ ಸೂಚಿಸುತ್ತದೆ.

ಇದು ಕೇವಲ ದೆಹಲಿಯ ಘಾಜೀಪುರಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಇಡೀ ದೇಶದ ಘನತ್ಯಾಜ್ಯ ವಿಲೇವಾರಿ ಘಟಕಗಳ
ಅವ್ಯವಸ್ಥೆಯಾಗಿದೆ. ಸ್ವಚ್ಛ ಭಾರತ ಕಾರ್ಯಕ್ರಮದಡಿಯಲ್ಲಿ ಏನೆಲ್ಲಾ ಯೋಜನೆಗಳನ್ನು ಹಮ್ಮಿಕೊಂಡರೂ ಅವು ಸರಿಯಾಗಿ ಅನುಷ್ಠಾನವಾಗದೆ ಸದ್ಯಕ್ಕೆ ವಿಸ್ತೃತ ಯೋಜನಾ ವರದಿಗಳ ಪುಟಗಳಲ್ಲಿ ಅಕ್ಷರ ರೂಪದಲ್ಲಿವೆ. ಇಷ್ಟಲ್ಲದೆ ಸ್ವಚ್ಛತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಧಾರಾಳವಾಗಿ ಅನುದಾನ ನೀಡುತ್ತಿದ್ದರೂ ನಿರ್ದಿಷ್ಟವಾಗಿ ಘನತ್ಯಾಜ್ಯ ನಿರ್ವಹಣೆ ಏಕೆ ಸುಧಾರಿಸುತ್ತಿಲ್ಲ? ಈ ಕುರಿತು ತುರ್ತಾಗಿ ಒಂದು ಗ್ಯಾಪ್ ಅನಾಲಿಸಿಸ್ ಆಗಬೇಕು.

ನಗರವಾಸಿಗಳಿಂದ ಉತ್ಪಾದನೆಯಾಗುವ ಘನತ್ಯಾಜ್ಯವನ್ನು ನಿರ್ವಹಿಸಬೇಕಾದ್ದು ಅಲ್ಲಿನ ಪಾಲಿಕೆಗಳ ಜವಾಬ್ದಾರಿಯಾಗುತ್ತದೆ.
((Municipal Solid Waste Manage-ment and Handling Rules 2000). ಅದು ಪಟ್ಟಣ ಪಂಚಾಯ್ತಿಯೋ ಅಥವಾ ಬೃಹತ್ ಮಹಾನಗರಪಾಲಿಕೆಯೋ ಒಟ್ಟಿನಲ್ಲಿ ಅಲ್ಲಿ ಉತ್ಪಾದನೆಯಾಗುವ ಕಸದ ನಿರ್ವಹಣೆಯ ಜವಾಬ್ದಾರಿ ಆಯಾ ಸ್ಥಳೀಯ ಸಂಸ್ಥೆಗಳದ್ದೆ. ಹಾಗಂತ ಇದು ಪಾಲಿಕೆಯ ಜವಾಬ್ದಾರಿಯೆಂದು ನಾಗರಿಕರು ತಮ್ಮಿಂದ ಉತ್ಪಾದನೆಯಾಗುವ ಕಸವನ್ನು
ರಸ್ತೆಗೆ ಎಸೆದುಬಿಡುವುದಲ್ಲ, ಬದಲಾಗಿ 2016 ಘನತ್ಯಾಜ್ಯ ನಿಯಮದ ಅನ್ವಯ ಪಾಲಿಕೆಯ ಗಾಡಿಗಳಿಗೆ ಹಸಿ ಕಸ, ಒಣ ಕಸ,
ಗೃಹಬಳಕೆಯ ಅಪಾಯಕಾರಿ ತ್ಯಾಜ್ಯವನ್ನು ವಿಂಗಡಿಸಿ ಕೊಡಬೇಕು.

ಕಸವನ್ನು ಈ ರೀತಿ ಮೂಲದಲ್ಲೇ ವಿಂಗಡಿಸುವುದರಿಂದ ವಿಲೇವಾರಿ ಹಾಗೂ ಸಂಸ್ಕರಣೆಯ ಹಂತಗಳು ಹೆಚ್ಚು ತಲೆನೋವಿಲ್ಲದೆ ಸರಾಗವಾಗುತ್ತವೆ. ಆದರೆ ನಮ್ಮ ತಾತ್ಸಾರದಿಂದ ನಾವು ದಿನನಿತ್ಯದ ಕಸವನ್ನು ವಿಂಗಡಿಸುವುದಿಲ್ಲ, ಅವರದನ್ನು ಸಂಸ್ಕರಿಸುವು ದಿಲ್ಲ. ಪಾಲಿಕೆಯವರು ಕಸವನ್ನು ಸಂಗ್ರಹಿಸುವುದು, ನಾವು ಅದನ್ನು ಅವರ ಕೈಗೊಪ್ಪಿಸುವುದು ಇದೊಂದು ಮೇಲ್ನೋಟಕ್ಕೆ
ದಿನವೂ ನಡೆಯುವ ನಾಟಕೀಯ ಪ್ರಕ್ರಿಯೆಯಾಗಿದೆ.

ವಿಂಗಡನೆಯಿಲ್ಲದ ಸಂಗ್ರಹಣೆ, ಸಂಸ್ಕರಣೆಯಿಲ್ಲದ ವಿಲೇವಾರಿಯಲ್ಲಿ ಸಾಕಷ್ಟು ವಾಹನಗಳ ಅನುಕೂಲವಿರುವುದರಿಂದ ಸಾಗಾಣಿಕೆಯ ಕೆಲಸ ಜೋರಾಗಿ ನಡೆಯುತ್ತದೆ. ಈ ಒಂದು Integrated Waste Management  ವ್ಯವಸ್ಥೆಯಲ್ಲಿ ನಾವು ಅರೆಬರೆ ಯಾಗಿ ಪಾಲ್ಗೊಂಡಿರುವುದರಿಂದ ಊರ ತಿಪ್ಪೆಗಳೇನೋ ಮಾಯವಾದವು, ಹೊರವಲಯದಲ್ಲಿ ಕಸದ ಪರ್ವತಗಳು ಎದ್ದು ನಿಂತವು.

ದೆಹಲಿಯ ಘಾಜಿಪುರದಲ್ಲಿ ಘನತ್ಯಾಜ್ಯ ಪರ್ವತವಿದ್ದರೆ, ಬೆಂಗಳೂರಿನಲ್ಲಿ ದಿನನಿತ್ಯ ಉತ್ಪಾದನೆಯಾಗುವ ಕಸ ನೂರಾರು ಅಡಿ
ಆಳದ ಕ್ವಾರಿ ಗುಂಡಿಗಳಲ್ಲಿ ಲಕ್ಷಾಂತರ ಟನ್ ಪ್ರಮಾಣದಲ್ಲಿ ಹೂತು ಹೋಗಿದೆ. ಸ್ವಚ್ಛ ಸರ್ವೇಕ್ಷಣದಲ್ಲಿ ಪ್ರತಿ ವರುಷವೂ ಉತ್ತಮ ಶ್ರೇಯಾಂಕಕ್ಕೆ ಪಾತ್ರವಾಗುವ ಮೈಸೂರು ನಗರದ ವಿದ್ಯಾರಣ್ಯಪುರದ ತ್ಯಾಜ್ಯಘಟಕದಲ್ಲೂ ಸಾಲು ಸಾಲು ಕಸದ ಗುಡ್ಡಗಳನ್ನು ಕಾಣಬಹುದು. ಇನ್ನು ನಮ್ಮ ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಬೀಗುತ್ತಿರುವ ಅನೇಕ ಊರುಗಳ ಕಥೆಯೂ ಇದೆ. ನಮ್ಮ ಪಾಲಿಕೆಗಳ ಬಳಿ ಯಾವಾಗಲೂ ಯೋಜನೆಗಳಿರುತ್ತವೆ, ಅನುಷ್ಠಾನವಿರುವುದಿಲ್ಲ.

ಘನತ್ಯಾಜ್ಯ ವಿಲೇವಾರಿ ಘಟಕಗಳು ಸ್ಮಶಾನಕಳೆಯಿಂದ ಹೊರಬರಬೇಕು. ಅವುಗಳು ಕಾರ್ಖಾನೆಗಳ ಹಾಗೆ ಕಾರ್ಯಪ್ರವೃತ್ತ
ವಾಗಬೇಕು. ಘನತ್ಯಾಜ್ಯವನ್ನು ಸಂಪನ್ಮೂಲವೆಂದು ಸುಮ್ಮನೆ ಬಾಯಿ ಮಾತಿಗೆ ಹೇಳಿದರೆ ಆಗುವುದಿಲ್ಲ, ಅದರ ಉತ್ಪಾದನೆಯೇನು ಎಂಬುದನ್ನು ಸಾಧಿಸಿ ತೋರಿಸಬೇಕು. ಇದೊಂದು ಲಾಭದಾಯಕ ಉದ್ಯಮವಾಗಿ ನಿಲ್ಲುವ ಸಾಧ್ಯತೆಗಳ ಕುರಿತು ಗಂಭೀರವಾಗಿ ಅಲೋಚಿಸಬೇಕು. ಆದರೆ ಸ್ವತಃ ಪಾಲಿಕೆಗಳೇ ಘನತ್ಯಾಜ್ಯವನ್ನು ಸಂಪನ್ಮೂಲವೆಂದು ನಂಬುವುದಿಲ್ಲ. ಅದು ಅವರಿಗೆ ಹೊರೆ ಮಾತ್ರ.

ಹಾಗಾಗೇ ವಿಲೇವಾರಿ ಘಟಕಗಳು ನೂರಾರು ನಾಯಿಗಳ ರಣಹದ್ದುಗಳ ಒಬ್ಬನೇ ಮನುಷ್ಯನಿಗೆ ಕಾಲಿಡಲೂ ಧೈರ್ಯಸಾಲದ
ಗಬ್ಬುನಾರುವ ಭೀಕರ ಪ್ರದೇಶಗಳಾಗಿವೆ. ಕೇಂದ್ರೀಕೃತ ಘನತ್ಯಾಜ್ಯ ನಿರ್ವಹಣೆಯಲ್ಲಿ ಪಾಲಿಕೆಗಳು ಈಗಾಗಲೇ ಬಹಳಷ್ಟು ವೈಫಲ್ಯವನ್ನು ಅನುಭವಿಸಿವೆ. ಇಲ್ಲಿ ಹೊಸಬಗೆಯ ವ್ಯವಹಾರಿಕ ಮಾದರಿಯ ಅಗತ್ಯವಿದೆ. ಇತ್ತೀಚೆಗೆ ಘನತ್ಯಾಜ್ಯ ನಿರ್ವಹಣೆಯ ವಲಯದಲ್ಲಿ Circular Economy Concept  ಕುರಿತು ಹಲವು ಚಿಂತನೆಗಳು ನಡೆಯುತ್ತಿವೆ.

ಕೇವಲ ಬೆರಳೆಣಿಕೆಯಷ್ಟು ಕಂಪನಿಗಳು ಈ ದಾರಿಯಲ್ಲಿ ಧೈರ್ಯವಾಗಿ ಹೆಜ್ಜೆ ಹಾಕಿ ಲಾಭದಾಯಕ ಉದ್ಯಮವನ್ನು ನಡೆಸುತ್ತಿವೆ. ತ್ಯಾಜ್ಯವನ್ನು ಸಂಪನ್ಮೂಲವಾಗಿ ಕಾಣುವುದೇ ಈ ಪರಿಕಲ್ಪನೆಯ ಪರಮ ಗುರಿ, ಇಲ್ಲಿ ಕಸವನ್ನು ಗುಡ್ಡೆ ಹಾಕಿಕೊಳ್ಳುವಂತಿಲ್ಲ, ಬದಲಾಗಿRecycle ಗೆ ಹೆಚ್ಚಿನ ಆದ್ಯತೆ ನೀಡುವುದಾಗಿರುತ್ತದೆ.

ಉತ್ಪಾದನೆಯಾದ ಒಂದು ವಸ್ತು ಬಳಕೆಯಾಗಬೇಕು, ಮರುಬಳಕೆಯಾಗಬೇಕು ನಂತರ ತ್ಯಾಜ್ಯವಾಗಬೇಕು, ಆದರೆ ತ್ಯಾಜ್ಯ ಬುದು ಒಂದು ಹೊಸ ವಸ್ತುವಿನ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುವಾಗಿರಬೇಕು. ತ್ಯಾಜ್ಯ ಎಂದ ಮಾತ್ರಕ್ಕೆ ಅದು ವಿಲೇವಾರಿ ಘಟಕದಲ್ಲಿ ಹೋಗಿ ಬೀಳುವ ನಿರುಪಯುಕ್ತ ವಸ್ತುವಲ್ಲ. ಹಸಿಕಸ, ಒಣಕಸ, ಎಲೆಕ್ಟ್ರಾನಿಕ್ ತ್ಯಾಜ್ಯ, Construction and Demolition ತ್ಯಾಜ್ಯಗಳನ್ನು ನಿಯಮಾನುಸಾರ ನಿರ್ವಹಿಸಬೇಕಾದರೆ ಲಾಭದಾಯಕ ವ್ಯವಾಹಾರಿಕ ಮಾದರಿಗಳ ಅಳವಡಿಕೆ ಅತ್ಯಗತ್ಯ.

ನಮ್ಮ ಪಾಲಿಕೆಗಳು ಇಂದಿಗೂ ಪಾಲಿಸುತ್ತಿರುವುದು Linear System of Waste Manage-ment,  ಅಂದರೆ ಸಂಗ್ರಹವಾದ ಕಸ ವಿಲೇವಾರಿ ಮಾಡುವುದಷ್ಟೇ, Material recovery ಆಗದೆ ತ್ಯಾಜ್ಯವೂ ಭಾರಿ ಪ್ರಮಾಣದಲ್ಲಿ ನೆಲೆಭರ್ತಿಯಾಗುತ್ತಲೇ ಇದೆ. ಹಾಗೆ ನೋಡಿದರೆ ನಿಯಮದ ಪ್ರಕಾರ ದಿನನಿತ್ಯದ ತ್ಯಾಜ್ಯದಲ್ಲಿ Sanitary Land Fill ಗೆ ಕಳುಹಿಸಬಹುದಾದ ನಿರುಪಯುಕ್ತ ತ್ಯಾಜ್ಯ
ಪ್ರಮಾಣ ಶೇ.20ರಷ್ಟು ಮೀರಬಾರದು. ಆದರೆ ದಿನದಲ್ಲಿ ಶೇ.20ರಷ್ಟು ಕಸ ಸಂಸ್ಕರಣೆಯಾಗುತ್ತಿದ್ದರೆ ಅದೇ ಹೆಚ್ಚು.

ಒಂದೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಯೂ ಕೇಂದ್ರೀಕೃತ ವ್ಯವಸ್ಥೆಯಾಗಿದ್ದರೆ ಪಾಲಿಕೆಯೂ ಆ ಘಟಕವನ್ನು ಹೆಚ್ಚಿನ ತತ್ಪರತೆ
ಯುಳ್ಳ ಚಟುವಟಿಕೆಯ ಸ್ಥಿತಿಯಲ್ಲಿಡಬೇಕು. ಹಸಿ ಕಸದಿಂದ ಗೊಬ್ಬರವಾಗಬೇಕು, ಪ್ಯಾಕಿಂಗ್ ಆಗಬೇಕು, ಮಾರುಕಟ್ಟೆಯಲ್ಲಿ
ಮಾರಾಟವಾಗುವ ಹಾಗೆ ಅಥವಾ ರೈತರಿಗೆ ತಲುಪುವ ಹಾಗೆ ಆ ಗೊಬ್ಬರದ ಗುಣಮಟ್ಟವನ್ನು ಕಾಯ್ದುಕೊಂಡು ಆದಾಯ
ತೆಗೆಯಬೇಕು.

ಒಣ ಕಸದ Calorific value ಅಂದರೆ ಅದು ದಹಿಸುವ ಕ್ಷಮತೆಯ ಆಧಾರದ ಮೇಲೆ Refused Derived Fuel (RDF) ಇಂಧನವಾಗಿ ಬಳಸಲು ಹತ್ತಿರದ ಉಷ್ಣಶಕ್ತಿಯ ಅಗತ್ಯವಿರುವ ಕಾರ್ಖಾನೆಗೆ ತಕ್ಕ ಬೆಲೆಗೆ ಮಾರಾಟವಾಗುವ ವ್ಯವಸ್ಥೆಯಾಗಬೇಕು. ಇಲ್ಲವಾದರೆ ಒಣತ್ಯಾಜ್ಯವನ್ನು ಬ್ಯಾಗು, ಬಟ್ಟೆ, ಬೋರ್ಡು, ಟೋಪಿಗಳಂಥ Functional product ಗಳ ತಯಾರಿಕೆಗೆ ಕಚ್ಚಾ ವಸ್ತುಗಳಾಗಿ ಸಾಗಿಸಬೇಕು.

ನಾವು ದಿನನಿತ್ಯ ಕೊಳ್ಳುವ ಅನೇಕ ಸಾಮಗ್ರಿಗಳು Multilayer Plastic  ಅಥವಾ Polyethylene terephthalete (PET) ವಸ್ತುಗಳಿಂದ ಪ್ಯಾಕ್ ಆಗಿರುತ್ತವೆ. ಎಲೆಕ್ಟ್ರಾನಿಕ್ ಉಪಕರಣಗಳಂತೂ ವಿವಿಧ ಬಗೆಯ Heavy Metal ಗಳನ್ನು ಒಳಗೊಂಡಿರು ತ್ತದೆ. ಈ ವಸ್ತುಗಳ ಉತ್ಪಾದಕರು ಯಾವುದೇ ತಮ್ಮ ಉತ್ಪಾದನೆಯನ್ನು ಕೇವಲ ಮಾರಾಟ ಮಾಡಿ ಕೈ ತೊಳೆದು ಕೊಳ್ಳುವ ಹಾಗಿಲ್ಲ, ಬದಲಾಗಿ ತಮ್ಮ ಉತ್ಪಾದನೆಯಿಂದ ಹೊಮ್ಮುವ ತ್ಯಾಜ್ಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು Extended Producer Responsibility  ನಿಯಮದ ಅನ್ವಯ ಪಾಲಿಸಬೇಕು. ಆಯಾ ಕಂಪನಿಗಳಿಗೆ ಈ ಜವಾಬ್ದಾರಿಯನ್ನು ಪಾಲಿಸಲು ತಲೆನೋವಾದರೆ ಆ ಕೆಲಸ ಮಾಡಲೆಂದೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನೋಂದಾಯಿತ Producer Responsibility Organization (PRO) ಗಳಿವೆ. ಆದರೆ ಅವುಗಳಿಗೆ ನಮ್ಮಲ್ಲಿ ಪ್ರೋತ್ಸಾಹವಿಲ್ಲ, ತಮ್ಮ ಉತ್ಪಾದನೆಯನ್ನು ಮಾರಾಟ ಮಾಡಿ ಲಾಭ ಮಾಡುವ ಕಂಪನಿಗಳು ಈ EPR ನಿಯಮಗಳನ್ನು ಪಾಲಿಸುವುದಿಲ್ಲ, PROಗಳ ಜೊತೆ ಕೈ ಜೋಡಿಸುವು ದಿಲ್ಲ, ಬದಲಿಗೆ ಸಂಬಂಧಪಟ್ಟ ಅಧಿಕಾರಿಗಳ ಜೇಬನ್ನು ತುಂಬಿಸಿ ಸುಮ್ಮನಾಗುತ್ತವೆ.

ಸದ್ಯದ ತಾತ್ಸಾರಭರಿತ linear waste management ಒಂದು ಉದ್ಯಮದ ಹಾಗೆ Circular Economy ಪರಿಕಲ್ಪನೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯೋನ್ಮುಖವಾದಾಗ ಮಾತ್ರ ಘನತ್ಯಾಜ್ಯ ನಿರ್ವಹಣೆಯ ಎಲ್ಲಾ ನಿಯಮಗಳನ್ನು ಪಾಲಿಸಬಹುದಾಗಿದೆ. ಇನ್ನು ಮಹಾನಗರಗಳಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪರಿಸರಾಸಕ್ತ ನೈಜ ಖಾಸಗಿ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ಕೆಲಸ ಮಾಡುವುದೇ ಅತ್ಯುತ್ತಮ ಘನತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರವಾಗಿದೆ.

ಇಂದು ನಮಗೆ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆಗೆ ಹೊಸ ಜಾಗಗಳು ಸಿಗುವುದೇ ಕಷ್ಟವಾಗಿದೆ. ಯಾವ ಜಾಗವನ್ನು
ಗುರುತಿಸಿದರೂ ಅಲ್ಲಿನ ಜನಗಳು ಕ್ಯಾತೆ ತೆಗೆಯುವ ಸಂಭವವೇ ಹೆಚ್ಚು. ಏಕೆಂದರೆ ಜನರಿಗೆ ಘನತ್ಯಾಜ್ಯ ವಿಲೇವಾರಿ
ಘಟಕದ ಕಾರ್ಯ ಕ್ಷಮತೆಯ ಕುರಿತು ನಂಬಿಕೆಯಿಲ್ಲ.

ಈಗಿರುವ ಘಟಕಗಳು ಗಬ್ಬುನಾರುವ Legacy Waste ಗುಡ್ಡಗಳಿಂದ ಇಡೀ ಪ್ರದೇಶದ ಹೆಸರನ್ನೇ ಹಾಳುಮಾಡಿವೆ. ಎಕರೆ ಜಾಗಕ್ಕೆ ಕೋಟಿ ಎನ್ನುವ ಈ ಕಾಲದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಹಳೆಯ ಘಟಕದಲ್ಲಿರುವ Legacy Waste ಸಂಸ್ಕರಿಸದೆ ಹತ್ತಾರು ಎಕರೆ ಹೊಸ ಜಾಗಗಳನ್ನು ಕೋಟಿಗಟ್ಟಲೆ ಖರ್ಚು ಮಾಡಿ ಖರೀದಿಗಾಗಿ ಹುಡುಕುವುದು ಮೂರ್ಖತನವಲ್ಲವೇ.