Thursday, 19th September 2024

ಪುರಿ ಜಗನ್ನಾಥ ಸ್ವಾಮಿ ದೇವಾಲಯ ಪ್ರವೇಶಕ್ಕೆ ನೆಗೆಟಿವ್ ವರದಿ ಕಡ್ಡಾಯ

ಪುರಿ (ಒಡಿಶಾ): ವಿಶ್ವಪ್ರಸಿದ್ಧ ಪುರಿ ಜಗನ್ನಾಥ ಸ್ವಾಮಿಯ ದೇವಾಲಯಕ್ಕೆ ಕರೊನಾ ಬಿಕ್ಕಟ್ಟಿನ ನಡುವೆಯೇ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವರ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ತರಬೇಕು. ಇದನ್ನು ದೇವಾಲಯ ಪ್ರವೇಶಕ್ಕೂ ಮುನ್ನ ತೋರಿಸಬೇಕಾಗಿದೆ. ತರದೇ ಹೋದರೆ ದೇವಾಲಯದಲ್ಲಿ ಪ್ರವೇಶವಿಲ್ಲ. ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

ಇಂದಿನಿಂದ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ರಾಜ್ಯದ ಇತರ ಭಾಗಗಳ ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಏನೇನು ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು, ಕೈಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಸಾಮಾನ್ಯ ಕೋವಿಡ್​ ನಿಯಮಗಳೂ ಇವೆ.

ನೆಗೆಟಿವ್​ ರಿಪೋರ್ಟ್​ ಮಾತ್ರವಲ್ಲದೇ, ಭಕ್ತರು ಆಧಾರ್ ಕಾರ್ಡ್‌ಗಳನ್ನು ದೇವಾಲಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ಪ್ರವೇಶ ದ್ವಾರದಲ್ಲಿ ಭಕ್ತಾದಿಗಳ ಉಷ್ಣ ತಾಪಮಾನವನ್ನು ಪರಿಶೀಲಿಸಲಾಗುತ್ತಿದೆ.