Thursday, 19th September 2024

ಮಹತ್ವ ದಿವಸ್

ಇಂದು ದೇಶದಲ್ಲಿ ಆಚರಿಸಲಾಗುತ್ತಿರುವ ಪ್ರವಾಸಿ ಭಾರತೀಯ ದಿವಸ್ ಹಿಂದೆಂದಿಗಿಂತಲೂ ಪ್ರಸ್ತುತ ಮಹತ್ವವೆನಿಸುತ್ತದೆ. ಅನೇಕ ರಾಷ್ಟ್ರಗಳನ್ನು ಆಕರ್ಷಿಸುವಲ್ಲಿ ಭಾರತ ಇದೀಗ ಮಹತ್ವದ್ದನ್ನು ಸಾಧಿಸಿರುವ ಈ ವೇಳೆಯಲ್ಲಿ ಇಂಥ ಸಮಾವೇಶಗಳು ಅಗತ್ಯ ಹಾಗೂ ಅರ್ಥಪೂರ್ಣ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸುವ ಅತ್ಯಂತ ಮಹತ್ವದ ಕಾರ್ಯಕ್ರಮ ಹಾಗೂ ಅನಿವಾಸಿ ಭಾರತೀಯ ರೊಂದಿಗೆ ಸಂಪರ್ಕ ಬೆಸೆಯುವ ಅತ್ಯಂತ ಪ್ರಮುಖ ವೇದಿಕೆಯೇ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ). ಆತ್ಮನಿರ್ಭರ ಭಾರತಕ್ಕೆ ಕೊಡುಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಸಮಾವೇಶವನ್ನು ಆಚರಿಸಲಾಗುತ್ತಿದೆ. ಭಾರತ ಮತ್ತು ಅನಿವಾಸಿ ಭಾರತೀಯ ಯುವ ಸಾಧಕರನ್ನು ಒಗ್ಗೂಡಿಸುವ ಧ್ಯೇಯವನ್ನು ಹೊಂದಿದೆ ಈ ಸಮಾವೇಶ.

ಭಾರತೀಯ ಸಮುದಾಯದ ಕೊಡುಗೆಗಳನ್ನು ಗುರುತಿಸಲು ಹಾಗೂ ಗೌರವಿಸಲು ಪ್ರತಿ ವರ್ಷ ಜನವರಿ 9ರಂದು ಆಚರಿಸುವ ಈ ಕಾರ್ಯಕ್ರಮ, ಭಾರತೀಯರ ಸಾಧಕರ ಸಮ್ಮಿಲನದ ಪ್ರತೀಕ. 2003ರಲ್ಲಿ ವಿದೇಶ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿಯ ಒಕ್ಕೂಟ, ಇಂಡಿಯನ್ ಇಂಡಸ್ಟ್ರೀಸ್ ಒಕ್ಕೂಟ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮ ಪ್ರತಿ ವರ್ಷ ಒಂದು ಧ್ಯೇಯದೊಂದಿಗೆ ಆಚರಿಸಲಾಗುತ್ತದೆ.

1915ರ ಜನವರಿ 9ರಂದು ಮಹಾತ್ಮಾಗಾಂಧಿ ದಕ್ಷಿಣಾ ಆಫ್ರಿಕಾದಿಂದ ಮುಂಬೈಗೆ ಹಿಂದಿರುಗಿದ್ದ ನೆನಪಿಗಾಗಿ ಈ ಆಚರಣೆಯನ್ನು ಸ್ಥಾಪಿಸಲಾಗಿದ್ದರೂ, ಇಂದು ಭಾರತೀಯ ಸಾಧಕರನ್ನು ಸಮ್ಮಿಿಲನಗೊಳಿಸುವ ಹಾಗೂ ಗೌರವಿಸುವ ಕಾರ್ಯಕ್ರಮವಾಗಿ ರೂಪು ಪಡೆದಿರುವುದು ಮಹತ್ವದ ಸಂಗತಿ.