ಮಾಸ್ಕೊ: ವಿರೋಧ ಪಕ್ಷದ ನಾಯಕ ಅಲೆಕ್ಸಿ ನಾವಲ್ನಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಭಾನುವಾರ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಕ್ರೆಮ್ಲಿನ್‌ನಲ್ಲಿ ಗದ್ದಲ ಮಾಡಿದ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಕಳೆದ ವಾರ ವಾರಾಂತ್ಯದಲ್ಲಿ ದೇಶ ದಾದ್ಯಂತ ಸಾವಿರಾರು ಮಂದಿ ರ‍್ಯಾಲಿಗಳು ನಿರಂತರವಾಗಿ ನಡೆದವು.
ಇದು ಇತ್ತೀಚೆಗಿನ ವರ್ಷಗಳಲ್ಲಿ ದೇಶ ಕಂಡ ಆಡಳಿತದ ವಿರುದ್ಧದ ಅತಿ ದೊಡ್ಡ ಪ್ರತಿಭಟನೆ ಮತ್ತು ರ್‍ಯಾಲಿಯಾಗಿದೆ. ರಷ್ಯಾದ ವಿವಿಧ ನಗರಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿರೋಧಿ ಅಲೆಕ್ಸಿ ನವಾಲ್ನಿ ಅವರನ್ನು ಜ 17ರಂದು ಬಂಧಿಸಲಾಯಿತು. ಜರ್ಮನಿ ಯಿಂದ ರಷ್ಯಾಗೆ ಪ್ರಯಾಣಿಸುವ ವೇಳೆಯಲ್ಲಿ ನವಾಲ್ನಿ ಅವರು ವಿಷ ಪದಾರ್ಥ ಸೇವಿಸಿ, ಅಸ್ವಸ್ಥರಾಗಿದ್ದರು. ಅದರಿಂದ ಚೇತರಿಸಿ ಕೊಳ್ಳಲು ಐದು ತಿಂಗಳ ಬೇಕಾಗಿತ್ತು.
ಪುಟಿನ್ ಅವರ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವಂತೆ ನವಾಲ್ನಿ ಕರೆ ನೀಡಿದ್ದರು. ಹೀಗಾಗಿ ಮಾಸ್ಕೊದಲ್ಲಿ ಸಾವಿರಾರು ಮಂದಿ ಬೀದಿಗಿಳಿದಿದ್ದರು.