Friday, 13th December 2024

ಸವಾಲಿನ ಬಜೆಟ್

‘ಮಹತ್ವಕಾಂಕ್ಷೆಯ ಭಾರತ’ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಬಾರಿಯ ಬಜೆಟ್ ಮಂಡಿಸಿ ಯಶಸ್ವಿಗೊಂಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿಯ ಬಜೆಟ್ ಸವಾಲಿನದ್ದಾಗಿ ಪರಿಣಮಿಸಿದೆ.

ಈ ಬಾರಿ ನಿರೀಕ್ಷೆಗಳು ಹೆಚ್ಚಾಗಿರುವುದೇ ಸವಾಲಿಗೆ ಕಾರಣ. ಕಳೆದ ಬಾರಿಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದನ್ನು ಸ್ಮರಿಸಬಹುದು. 112 ಜಿಲ್ಲೆಗಳಲ್ಲಿ ಆಸ್ಪತ್ರೆಗಳ ನಿರ್ಮಾಣ, 12 ಕಾಯಿಲೆಗಳಿಗೆ ಇಂದ್ರ ಧನುಷ್ ಯೋಜನೆ ವಿಸ್ತರಣೆ, ಹೆಚ್ಚುವರಿಯಾಗಿ 100 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಆಸ್ಪತ್ರೆಗಳ ಸೌಲಭ್ಯ, ಕ್ಷಯ ರೋಗ ನಿರ್ಮೂಲನೆ ಯೋಜನೆಗಳಿಗೆ ಆದ್ಯತೆ ನೀಡಿದ್ದು, ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ನೀಡಲಾಗಿತ್ತು.

ಆದರೆ ಕರೋನಾ ಉಂಟುಮಾಡಿರುವ ಅನಾಹುತಗಳನ್ನು ಗಮನಿಸಿದಾಗ ಈ ಬಾರಿಯ ಆರೋಗ್ಯ ಕ್ಷೇತ್ರದ ನಿರೀಕ್ಷೆಗಳು ಹೆಚ್ಚಾಗಿದೆ. ಉಳಿದಂತೆ ಗಡಿ ರಕ್ಷಣೆಗೆ 3.37 ಲಕ್ಷ ಕೋಟಿ ನೀಡಲಾಗಿತ್ತು. ಆರೋಗ್ಯ ಮತ್ತು ದೇಶ ರಕ್ಷಣೆ ಜತೆಗೆ ಕೃಷಿಗೆ ಹೆಚ್ಚಿನ
ಪ್ರಧಾನ್ಯತೆ ನೀಡಲಾಗಿತ್ತು. ಎಲ್ಲರ ಆರ್ಥಿಕ ಅಭಿವೃದ್ಧಿ ಎಂಬ ಆಶಯದಿಂದ ಕರದಾತರಿಗೆ ನಿರಾಳತೆ ಒದಗಿಸುವಂಥ ಬಜೆಟ್ ಮಂಡಿಸಿದ್ದರು. ಆದರೆ ಈ ಬಾರಿ ಆರ್ಥಿಕ ಸಂಕಷ್ಟ ಉಂಟಾಗಿರುವುದರ ಜತೆಗೆ ನಿರೀಕ್ಷೆಗಳು ಹೆಚ್ಚಿವೆ.

ಆದ್ದರಿಂದ ಈ ಬಾರಿಯೂ ಸಮತೋಲನದ ಬಜೆಟ್ ಮಂಡಿಸಲು ಸಾಧ್ಯವೇ ಎಂಬುದು ಎಲ್ಲರ ನಿರೀಕ್ಷೆ. ಕಳೆದ ಬಾರಿ ಬಜೆಟ್‌ ನಲ್ಲಿ ಮುಖ್ಯವಾಗಿ ತೆರಿಗೆದಾರರಿಗೂ ಸಮಾಧಾನದ ಅಂಶಗಳನ್ನು ಪ್ರಕಟಿಸಿದ್ದರು. 2019-20ರಲ್ಲಿ ಶೇ.3.8ರಷ್ಟು ವಿತ್ತೀಯ ಕೊರತೆಯನ್ನು ಒಪ್ಪಿಕೊಂಡಿದ್ದ ಕೇಂದ್ರ ಸರಕಾರ 2020-21 ನೇ ಸಾಲಿನ ಬಜೆಟ್ ನಲ್ಲಿ ಶೇ.3.5ಕ್ಕೆ ಇಳಿಸುವ ಸಂಕಲ್ಪವನ್ನು ಹೊಂದಿತ್ತು.

ಆದರೆ ಅನಿರೀಕ್ಷಿತವಾಗಿ ಎದುರಾದ ಕೋವಿಡ್ ಸಮಸ್ಯೆ, ಕೆಲವು ರಾಜ್ಯಗಳಲ್ಲಿನ ನೆರೆ, ಗಡಿ ಸಮಸ್ಯೆಗಳು ಆರ್ಥಿಕ ಕ್ರೋಡೀಕರಣಕ್ಕೆ ತೊಡಕುಗಳಾಗಿ ಪರಿಣಮಿಸಿ, ಜಿಡಿಪಿ ಕುಸಿತಕ್ಕೆ ಕಾರಣವಾಯಿತು. ಈ ಎಲ್ಲ ಬೆಳವಣಿಗೆ ನಡುವೆ ಪ್ರಸ್ತುತ 2020-21ನೇ ಸಾಲಿನ ಬಜೆಟ್ ಸವಾಲಿನ ಬಜೆಟ್ ಆಗಿ ಪರಿಣಮಿಸಿದೆ.