Friday, 18th October 2024

‘ಮೇಕೆ’ಗೆ ಚಿಕಿತ್ಸೆ ಅಗತ್ಯ

ಪ್ರಸ್ತುತ ಬೆಂಗಳೂರು ನಗರಕ್ಕೆ ದಿನವೊಂದಕ್ಕೆ 1350 ಮಿಲಿಯನ್ ಲೀಟರ್ ಕಾವೇರಿ ನೀರು ಪೂರೈಯಾಗುತ್ತಿದೆ.

2030ರ ವೇಳೆಗೆ 2285 ಮಿಲಿಯನ್ ಲೀಟರ್ ನೀರಿನ ಅವಶ್ಯಕತೆ ಇದೆ. ಈ ಕಾರಣದಿಂದ ಮೇಕೆದಾಟು ಯೋಜನೆಯ ಅನುಷ್ಠಾನ ಮುಖ್ಯ. ಆದರೆ ಯೋಜನೆ ಆರಂಭದಲ್ಲಿಯೇ ತಮಿಳುನಾಡು ಆರಂಭಿಸಿದ ಕ್ಯಾತೆಯಿಂದಾಗಿ ಯೋಜನೆ ಅನುಷ್ಠಾನ ಕುಂಟುತ್ತ ಸಾಗುತ್ತಿದೆ. ತಮಿಳುನಾಡಿಗೆ ದೊರೆಯಬೇಕಾದ 177 ಟಿಎಂಸಿ ನೀರನ್ನು ನೀಡಿ, ಉಳಿದ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗದಂತೆ ತಡೆಯುವುದು ಜಲಾಶಯ ನಿರ್ಮಾಣದ ಉದ್ದೇಶ. ಆದರೆ ತಮಿಳುನಾಡು ಸರಕಾರ ಯೋಜನೆ ವಿರೋಧಿಸಿ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದೆ.

ಕೇಂದ್ರ ಜಲ ಆಯೋಗ ನೀಡಿರುವ ಅನುಮತಿ ವಾಪಸ್ ಪಡೆಯಬೇಕು, ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಬೇಕೆಂಬುದು ತಮಿಳುನಾಡು ಒತ್ತಾಯ. ಈ ಕಾರಣದಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ರಾಮನಗರದ ಮೇಕೆದಾಟು ಪರಿಸರದ
ಜಲಾಶಯದಲ್ಲಿ 65-66 ಟಿಎಂಸಿ ನೀರು ಸಂಗ್ರಹಿಸುವುದು ಯೋಜನೆಯ ಮುಖ್ಯ ಉದ್ದೇಶ.

ನಂತರ ಜಲ ವಿದ್ಯುತ್ ಕೇಂದ್ರ ಸ್ಥಾಪನೆಗೂ ಪ್ರಯತ್ನಗಳು ಆರಂಭಗೊಂಡಿವೆ. 2013 ರಲ್ಲಿ ರಾಜ್ಯ ಸರಕಾರ ಯೋಜನೆಯ ಮೊದಲ ಪ್ರಸ್ತಾಪ ಆರಂಭಿಸಿತು. 9 ಸಾವಿರ ಕೋಟಿ ಮೊತ್ತದ ಯೋಜನಾ ವರದಿ ತಯಾರಿಸಲಾಗಿದ್ದು, 2019ರ ಜನವರಿ 18 ರಂದು ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಯೋಜನೆಗೆ 5221 ಹೆಕ್ಟೇರ್ ಜಮೀನಿನ ಅವಶ್ಯಕತೆ ಇದ್ದು, 6-7 ಕಿ.ಮೀ ವ್ಯಾಪ್ತಿಯೊಳಗೆ 6 ಜನವಸತಿ ಪ್ರದೇಶಗಳು, 6 ಧಾರ್ಮಿಕ ಸ್ಥಳಗಳು ಮುಳುಗಡೆಯಾಗಲಿದೆ.

ಪರ್ಯಾಯ ವ್ಯವಸ್ಥೆ ಒದಗಿಸಿದರೆ ಗ್ರಾಮ ತೊರೆಯಲು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಸರ ಇಲಾಖೆ, ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ಸಿದ್ಧತೆ ನಡೆಸುತ್ತಿರುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಕಟಿಸಿದ್ದಾರೆ. ಇದರಿಂದ ಮೇಕೆ ದಾಟು ಅನುಷ್ಠಾನದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯ ಸರಕಾರ ಇದೀಗ ಮತ್ತಷ್ಟು ಆದ್ಯತೆ ಮೂಲಕ ಇರುವ ಅಡೆತಡೆಗಳನ್ನು ನಿವಾರಿಸಿ, ಕುಂಟುತ್ತಾ ಸಾಗುತ್ತಿರುವ ಯೋಜನೆಗೆ ವೇಗ ದೊರಕಿಸುವ ಅವಶ್ಯಕತೆಯಿದೆ.