Thursday, 19th September 2024

ಗಡಿ ಸಂಘರ್ಷ ದಿಟ್ಟ ನಿಲುವು ಅಗತ್ಯ

ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಗಳು ಅಗಾಗ್ಗೆ ಮಹತ್ವ ಪಡೆದುಕೊಳ್ಳುತ್ತಿರುತ್ತವೆ. ಮಹಾರಾಷ್ಟ್ರದಲ್ಲಿ ರಾಜಕೀಯ ಸಂಘರ್ಷಗಳು ಆರಂಭಗೊಳ್ಳುತ್ತಿದ್ದಂತೆಯೇ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಗಡಿ ವಿವಾದಗಳು ಪರಿಣಾಮಕಾರಿ ಯಾಗಿದೆ ಎನ್ನಲಾಗುತ್ತದೆ.

ಇತ್ತೀಚೆಗೆ ಕೋಲ್ಹಾಪುರದಲ್ಲಿ ನಡೆದಿದ್ದ ಗಲಾಟೆ ಹಿನ್ನೆಲೆಯಲ್ಲಿ ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಬಸ್ ಸಂಚಾರವನ್ನು ಪುನರಾರಂಭಿಸಲಾಗಿದೆ.ಈ ಬೆಳವಣಿಗೆಯನ್ನು
ಸ್ವಾಗತಿಸುವ ಮೊದಲೇ ಮತ್ತೆ ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತಿದೆ ಗಡಿಸಮಸ್ಯೆ.

ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ಮಾ.20ರೊಳಗೆ ತೆರವುಗೊಳಿಸದಿದ್ದರೆ ಕೊಲ್ಲಾಪುರ, ಸಾಂಗ್ಲಿ, ಸತಾರ ಜಿಲ್ಲೆಗಳಲ್ಲಿರುವ ಕನ್ನಡಿಗರ ವ್ಯಾಪಾರಗಳನ್ನು ತಡೆಹಿಡಿದು ಬಂದ್ ನಡೆಸುವುದಾಗಿ ಶಿವಸೇನೆ ಬೆದರಿಕೆ ಯೊಡ್ಡಿದೆ. ಕೊಲ್ಹಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ನಾಮಫಲಕಗಳಿಗೆ ಮಸಿಬಳಿದ ಕಾರಣ ಉಂಟಾಗಿದ್ದ ಈ ಸಂಘರ್ಷ ನಿವಾರಣೆಯಾಗುವುದರ ಒಳಗಾಗಿ ಧ್ವಜ ತೆರವುಗೊಳಿಸುವ ವಿಷಯ ಮತ್ತೊಂದು ಸಂಘರ್ಷಕ್ಕೆ ಎಡೆಮಾಡಿ ಕೊಡುತ್ತಿದೆ.

ಇದೇ ವೇಳೆ ಸೋಮವಾರದಂದು ಮಹಾರಾಷ್ಟ್ರದ ಸಂಸದ ಅರವಿಂದ್ ಸಾವಂತ್ ಸಂಸತ್ತಿನಲ್ಲಿ ಮತ್ತೊಮ್ಮೆ ಗಡಿ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಕನ್ನಡಿಗರು ದೌರ್ಜನ್ಯ ಎಸಗುತ್ತಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿನ
ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಬೆಳಗಾವಿ ಗಡಿಭಾಗದಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ವಿವಾದ ಇದೀಗ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಒಟ್ಟಾರೆ ಬೆಳಗಾವಿಯು ನಿರಂತರವಾಗಿ ಎರಡು ರಾಜ್ಯಗಳ ನಡುವಿನ ಸಂಘರ್ಷ ಕೇಂದ್ರವಾಗಿಯೇ ಸಂಕಷ್ಟಕ್ಕೀಡಾಗಿರುವುದು ದುರಂತ. ಇಂಥ ಸಂದರ್ಭದಲ್ಲಿ ರಾಜ್ಯದ ರಾಜಕಾರಣಿಗಳೂ ದಿಟ್ಟತನ ಪ್ರದರ್ಶಿಸಬೇಕಿರುವುದು ಇಂದಿನ ಅಗತ್ಯ.