Thursday, 19th September 2024

ದೇಶದ ಗಮನ ಸೆಳೆದ ರಾಜ್ಯದ ಗ್ರಾಪಂ ಮಾದರಿ

ಆಡಳಿತ ಯಂತ್ರಕ್ಕೆ ಚುರುಕು ನೀಡಲು ನಿರ್ಧರಿಸಿದ ರಾಜ್ಯ ಸರಕಾರ ಹಳ್ಳಿಯತ್ತ ಆಡಳಿತಕ್ಕೆ ಸೂಚಿಸಿತು. ಈ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು ಒಂದು ಸಾವಿರದಂತೆ ಮೂರು ತಿಂಗಳಲ್ಲಿ ಮೂವತ್ತು ಸಾವಿರ ಹಳ್ಳಿಗಳನ್ನು ತಲುಪುವುದು ಸರಕಾರದ ಚಿಂತನೆ. ಇದೊಂದು ಮಹತ್ವದ ಆದೇಶ.

ಏಕೆಂದರೆ, ಹಲವು ವರ್ಷಗಳಿಂದ ಬಾಕಿ ಇರುವ ಪೌತಿ ಖಾತೆಯ ೧೦ ಲಕ್ಷ ಅರ್ಜಿಗಳು ಸೇರಿದಂತೆ ಹಕ್ಕುಪತ್ರ ಹಂಚಿಕೆ, ಸ್ಮಶಾನ ಭೂಮಿ ಸಮಸ್ಯೆ, ಪಹಣಿಯಲ್ಲಿನ ವ್ಯತ್ಯಾಸದ ಅರ್ಜಿಗಳು ಶೀಘ್ರ ವಿಲೇವಾರಿಗೊಳ್ಳಲಿವೆ. ಇದರಿಂದ ಜನರ ಸಮಸ್ಯೆಗಳು ನಿವಾರಣೆ ಆಗುವುದರ ಜತೆಗೆ ಸರಕಾರ ಮತ್ತಷ್ಟು ಜನಸ್ನೇಹಿ ಆಗಲಿದೆ. ತಮ್ಮ ಗ್ರಾಮದಲ್ಲಿ, ಮನೆ ಬಳಿಯೇ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಂಡು ದಾಖಲಾತಿಗಳನ್ನು ಪಡೆಯುವುದೆಂದರೆ ಅನುಕೂಲವಲ್ಲವೇ? ಈ ಮಹತ್ವದ ಆದೇಶ ಎಷ್ಟರ ಪರಿಣಾಮ
ಉಂಟುಮಾಡಿದೆ ಎಂಬುದರ ಫಲಿತಾಂಶ ಇನ್ನೂ ಸ್ಪಷ್ಟವಾಗಿಲ್ಲ.

ಸಮಸ್ಯೆಗಳನ್ನು ಎಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂಬುದಕ್ಕಿಂತಲೂ ಜನತೆಗೆ ಅವಶ್ಯವಿರುವುದು ಅಹವಾಲುಗಳ ಇತ್ಯರ್ಥ ಮಾತ್ರ. ಇಂಥದೊಂದು ಕಾರ್ಯ ಯಶಸ್ವಿ ಆಗಬೇಕೆಂದರೆ ಅಗತ್ಯವಿರುವುದು ಅಧಿಕಾರಿಗಳ ಇಚ್ಛಾಶಕ್ತಿ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಯಷ್ಟೇ ಮುಖ್ಯ ಅಹವಾಲುಗಳ ನಿವಾರಣೆ. ಗ್ರಾಮೀಣ ಭಾಗಗಳೆಂದರೆ ಕೇವಲ ಅಹವಾಲುಗಳಿಂದಲೇ ಕೂಡಿದ ಸಮಸ್ಯೆಗಳ ಆಗರವಾಗಬಾರದು. ಜನತೆ, ಸ್ಥಳೀಯ ಆಡಳಿತಗಳ ಮೂಲಕ ಮಹತ್ವವಾದದ್ದನ್ನೂ ಸಾಧಿಸಲು ಅವಕಾಶವಿದೆ.

ಇಂಥದೊಂದು ಮಾತಿಗೆ ಇತ್ತೀಚೆಗೆ ಮಾದರಿಯಾಗಿ ದೇಶದ ಗಮನ ಸೆಳೆದಿದೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧೂಪತ್
ಮಹಾಗಾಂವ್ ಗ್ರಾಮ ಪಂಚಾಯ್ತಿ. ಲಾಕ್ ಡೌನ್ ವೇಳೆ ಉದ್ಯೋಗ ಖಾತ್ರಿ ಯೋಜನೆಯ ೧೦ ಲಕ್ಷ ರುಪಾಯಿಯನ್ನು ಬಳಸಿ ೧.೫ ಎಕರೆ ವಿಸ್ತೀರ್ಣದ ಪುರಾತನ ಕೆರೆಯನ್ನು ಅಭಿವೃದ್ಧಿಪಡಿಸಿದೆ ಈ ಗ್ರಾಪಂ. ಬೋಟಿಂಗ್, ಉದ್ಯಾನವನ, ವಾಕಿಂಗ್ ಪಾಥ್ ನಿರ್ಮಿಸಲಾಗಿದೆ. ಬೀದಿದೀಪಗಳಿಗೆ ಸೋಲಾರ್ ಲೈಟ್ ಅಳವಡಿಸಲಾಗಿದೆ.

೧೨ನೇ ಶತಮಾನದ ಗೊಗ್ಗವ್ವೆ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಿ ದೇಶದ ಗಮನ ಸೆಳೆದಿದೆ. ರಾಜ್ಯದ ಇತರ ಗ್ರಾಪಂಗಳು
ಸಹ ಇಂಥ ನಡೆ ಅನುಸರಿಸಿದರೆ ಅಭಿವೃದ್ಧಿ ಎಂಬುದು ಸುಲಭ ಸಾಧ್ಯ.