Saturday, 2nd November 2024

ಸಾಧನಕೇರಿಯಲ್ಲಿ ಬೇಂದ್ರೆ ಬದುಕು ಮರುಸೃಷ್ಟಿ

ಬೇಂದ್ರೆಯಜ್ಜನ ನೆನಪಲ್ಲಿ ನಡೆದ ಪ್ರಿ ವೆಡ್ಡಿಂಗ್ ಫೋಟೊ ಶೂಟ್

ಸುಷ್ಮಾ ಸಿ. ಕಡಲೂರು ಬೆಂಗಳೂರು

‘ಒಲವೇ ನಮ್ಮ ಬದುಕು’ ಎಂದು ಹಾಡಿದ ವರಕವಿ ನಡೆದಾಡಿದ್ದ ಮನೆಯಂಗಳದಲ್ಲಿ ಅವರದೇ ಭಾವ ಭಂಗಿಯಲಿ ನಲಿದು ಅವರ ಬದುಕನ್ನು ಮರುಸೃಷ್ಟಿ ಮಾಡುವ ಮೂಲಕ ಧಾರವಾಡದ ನವಜೋಡಿಯೊಂದು ಸುದ್ದಿ ಮಾಡಿದೆ.

‘ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು, ಬಳಸಿಕೊಂಡವದನೆ ನಾವು ಅದುಕು, ಇದಕು ಎದಕು, ಆತ ಕೊಟ್ಟ ವಸ್ತು ವಡವೆ ನನಗೆ ಅವಗೆ ಗೊತ್ತು, ತೋಳ ತುಂಬಾ ತೋಳ ಬಂಧಿ, ಕೆನ್ನೆ ತುಂಬ ಮುತ್ತು… ಎಂದು ಹರಿಯುವ ಪ್ರೇಮ ಲಹರಿಯ ಸಾಲುಗಳ ಸಾಕ್ಷಾತ್ಕಾರದ ಮೂಲಕ ಒಲವಿನ ಬಾಳುವೆಗೆ ಅಡಿಯಿಡುವ ಜೋಡಿಗಳು ಮದುವೆ ಮುಂಚಿನ ತಮ್ಮ ಫೋಟೊ ಶೂಟ್ ಅನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ದ. ರಾ.ಬೇಂದ್ರೆ ಅವರ ಬದುಕಿನ ಪರಿಕಲ್ಪನೆಯನ್ನು ಪುನರ್ ಸೃಷ್ಟಿಸುವ ಮೂಲಕ ನವಜೋಡಿಯಿಂದ ಮಾಡಿಸಿರುವ ಪ್ರಿ ವೆಡ್ಡಿಂಗ್ ಪೋಟೊ ಶೂಟ್ ಈಗ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗುತ್ತಿದೆ. ಏ.23ಕ್ಕೆ ವಿವಾಹವಾಗುತ್ತಿರುವ ಧಾರವಾಡದ ಚೇತನಾ ದೇಸಾಯಿ ಮತ್ತು ನಿಖಿಲ್ ಮಗ್ಗಾವಿ ಜೋಡಿಯು ಬೇಂದ್ರೆ ಅವರ ಪರಂಪರೆ ಉಳಿಸಲು ಹಾಗೂ ಕವಿತೆಗಳನ್ನಾಧರಿಸಿ ಹಳೇ ಶೈಲಿಗೆ ಮರುಜೀವ  ನೀಡಬೇಕು ಎಂಬ ಉದ್ದೇಶದಿಂದ ಉತ್ತರ ಕರ್ನಾಟಕದ ಜೀವನ ಶೈಲಿಯಲ್ಲಿ ಫೋಟೊ ಶೂಟ್ ಮಾಡಿಸಿದ್ದಾರೆ. ಚೇತನಾ ದೇಸಾಯಿ ಅವರು ಬೇಂದ್ರೆ ಅವರ ಮನೆಯ ನೆರೆಯವರಾಗಿದ್ದು, ಸಾಧನಕೇರಿಯಲ್ಲಿ ನೆಲೆಸಿರುವ ಕುಟುಂಬದ ಹೆಣ್ಣು ಮಗಳು. ಈ ಕಾರಣಕ್ಕೆ ಬೇರೆ ಪ್ರವಾಸಿ ತಾಣಗಳಲ್ಲೋ, ಸಮುದ್ರ, ನದಿ ತೀರದಲ್ಲೋ ಫೋಟೊ ಶೂಟ್ ಮಾಡಿಸುವ ಬದಲು, ಸಾಧನಕೇರಿಯ ಸಾಧಕರ ಅಂಗಳದಲ್ಲಿಯೇ ತಮ್ಮ ಅವಿಸ್ಮರಣೀಯ ಕ್ಷಣಗಳನ್ನು ದಾಖಲಿಸಲು ಮುಂದಾದರು. ಈ ಕುಟುಂಬ ಗಳು ತಲೆಮಾರುಗಳಿಂದ ಆತ್ಮೀಯ ಒಡನಾಟ ಹೊಂದಿದ್ದು, ಚೇತನಾ ಅವರು ತಾವು ಬೇಂದ್ರೆ ಯವರ ಬಗ್ಗೆ ಕಥೆಗಳನ್ನು ಕೇಳಿ ಬೆಳೆದಿದ್ದಾಗಿ ಹೇಳಿಕೊಂಡಿದ್ದಾರೆ.

ಜತೆಗೆ ‘ನಾನು ಬೇಂದ್ರೆ ಅಜ್ಜನ ಸೊಸೆಯನ್ನು ಕಾಕು ಎಂದು ಕರೆಯುತ್ತಿದ್ದೆ. ಬೇಂದ್ರೆ ಅಜ್ಜನ ಸ್ಫೂರ್ತಿಯಿಂದ ಅವರಂತೆಯೆ ಪೋಟೋಶೂಟ್ ಮಾಡಿಸಿಕೊಂಡಿದ್ದು ಹೆಮ್ಮೆೆಯ ಸಂಗತಿ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬೇಂದ್ರೆಯವರ ವಸ್ತುಗಳ ಬಳಕೆ: ಫೋಟೋಶೂಟ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಉಡುಗೆ ತೊಡುಗೆಗಳನ್ನು ಬಳಸ ಲಾಗಿದೆ. ಜತೆಗೆ, ಇಡೀ ಫೋಟೋ ಗಳಿಗೆ ಹಿಂದಿನ ಕಾಲದ ರೀತಿಯಲ್ಲಿ ಕಪ್ಪು ಬಿಳಿಪಿನ ಲೇಪವನ್ನೇ ನೀಡಲಾಗಿದೆ. ಜತೆಗೆ, ಫೋಟೋಗೆ ಪರಿಕರಗಳಾಗಿ ಬೇಂದ್ರೆಯವರು ಬಳಸುತ್ತಿದ್ದ ಸಾಂಪ್ರದಾ ಯಿಕ ಟೋಪಿ, ಛತ್ರಿ, ಗ್ರಾಮೋಫೋನ್, ರೇಡಿಯೋಗಳನ್ನು ಬಳಕೆ ಮಾಡಿಕೊಳ್ಳ ಲಾಗಿದೆ. ಇದಕ್ಕೆಲ್ಲ ಅವರ ಕುಟುಂಬಸ್ಥರ ಅನುಮತಿ ಪಡೆದಿದ್ದು, ನಂತರವೇ ಚಿತ್ರಿಕರಣ ಮಾಡಲಾಗಿದೆ.

ಯುವ ಆರ್ಟ್ ಸ್ಟೂಡಿಯೋ ಸ್ಥಾಪಕ ಮತ್ತು ಧಾರವಾಡದ ಛಾಯಗ್ರಾಹಕ ಹರ್ಷದ್ ಉದಯ್ ಕಾಮತ್, ಇಂತಹ ವಿಭಿನ್ನ ಫೋಟೋಶೂಟ್ ಮೂಲಕ ಬೇಂದ್ರೆ ಅವರ ಜೀವನ ಶೈಲಿ ಮರು ಸೃಷ್ಟಿಸಿದ್ದಾರೆ. ಕವಿತೆಗಳೇ ಥೀಮ್‌ನ ಸ್ಫೂರ್ತಿ: ‘ನಾನು ಬಡವಿ, ಆತ ಬಡವ ಒಲವೆ ನಮ್ಮ ಬದುಕು. ಬಳಸಿಕೊಂಡೆ ವದನೆ ನಾವು ಅದಕು ಇದಕು ಎದಕು.’ ಮತ್ತು ‘ತಂದೇನಿ ನಿನಗೆಂದ ತುಂಬಿ ತುರುಬಿನವಳ, ಕಾಮ ಕಸ್ತೂರಿಯಾ ತೆನಿಯೊಂದ..’ ಎಂಬ ಕವಿತೆಗಳ ಮುಖ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು, ಸಾಹಿತ್ಯ ಜಗತ್ತಿನ ವ್ಯಕ್ತಿಯನ್ನು ಆಧಾರವಾಗಿಟ್ಟುಕೊಂಡು ಚಿತ್ರಿಕರಿಸಿದ್ದು ಛಾಯಾಗ್ರಾಹಕ ತಂಡಕ್ಕೂ ಹೊಸ ಸಂಗತಿಯಾಗಿದೆ.

ಬೇಂದ್ರೆಯವರು ರಚನೆ ಮಾಡಿರುವ ಕವಿತೆಗಳನ್ನೇ ಆಧಾರವಾಗಿಟ್ಟುಕೊಂಡು ಥೀಮ್ ಸೃಷ್ಟಿಸಿದ್ದು, ಅವರ ಜೀವನದ ಮಾದರಿ ಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ಛಾಯಾಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾ ಗಿದ್ದು, ಯುವ ಜೋಡಿ ಮತ್ತು ಅವರ ಕುಟುಂಬಕ್ಕೆ ಸಂತಸವಾಗಿದೆ ಹಾಗೂ ಜೋಡಿಯು ಪೋಟೋಗ್ರಫಿ ತಂಡಕ್ಕೆ ಕೃತಜ್ಞತೆ ತಿಳಿಸಿದ್ದಾರೆ.

***

ಛಾಯಾಚಿತ್ರಗಳ ಕುರಿತು ಉತ್ತರ ಕರ್ನಾಟಕ ಜೀವನ ಶೈಲಿ ಪ್ರದರ್ಶಿಸುವ ಥೀಮ್ ಮಾಡಲು ಯುವ ಜೋಡಿ ನಿರ್ಧರಿಸಿದರು. ಚೇತನಾ ಅವರು ಬೇಂದ್ರೆ ಅಜ್ಜನ ನೆರೆಮನೆಯವರಾಗಿದ್ದರಿಂದ ಬೇಂದ್ರೆ ಬರೆದಿರುವ ಕವಿತೆಗಳ ಆಧಾರದ ಮೇಲೆ ವಿಷಯ ಆಯ್ಕೆೆ ಮಾಡಲು ನಿರ್ಧರಿಸಿದರು. ಅದರಂತೆಯೇ ನಾವು ಫೋಟೋಗ್ರಫಿ ಮಾಡಿದೆವು. ಈಗ ಅದಕ್ಕೆ ವ್ಯಕ್ತವಾಗುತ್ತಿರುವ ಬೆಂಬಲ ಖುಷಿ ನೀಡಿದೆ.

– ಹರ್ಷದ್ ಉದಯ್ ಕಾಮತ್ ಛಾಯಾಗ್ರಾಹಕ