ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀತಿ ಸಂಹಿತೆ ಇರುವಾಗ ಅಧಿಕೃತ ಘೋಷಣೆ ಸಾಧ್ಯವೇ?
ವಿಶೇಷ ವರದಿ: ರಾಜಶೇಖರ ಮೂರ್ತಿ
ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಸಾರಿಗೆ ನೌಕರರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ವೇತನ ಹೆಚ್ಚಳ, ಆರನೇ ವೇತನ ಆಯೋಗದ ಶಿಫಾರಸು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಈ ಧರಣಿ ಎಂದು ಪ್ರತಿಭಟನಾ ನಿರತ ಸಂಘಟನೆ ಗಳು ಹೇಳಿಕೊಂಡಿವೆ. ಆದರೆ ಈಗಾಗಲೇ ಸರಕಾರ ಬಹುತೇಕ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ, ಈ ಧರಣಿ ಮುಂದು ವರಿಸುತ್ತಿರುವ ಹಿಂದಿನ ಕಾರಣವೇನು ಎನ್ನುವ ಪ್ರಶ್ನೆ ಶುರುವಾಗಿದೆ.
ರಾಜ್ಯ ಸರಕಾರ, ಡಿಸಿಎಂ ಲಕ್ಷ್ಮಣ ಸವದಿ, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿ ಈಗಾಗಲೇ ಉಪಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ವೇತನ ಹೆಚ್ಚಳ ಮಾಡಿ ಅಧಿಕೃತ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಆದರೂ ಸಾರಿಗೆ ನೌಕರರು ಮಾತ್ರ ಈಗಲೇ ಘೋಷಣೆ ಮಾಡಬೇಕು ಎನ್ನುವ ಮೊಂಡುತನಕ್ಕೆ ಬಿದ್ದಿರುವುದು ಇದೀಗ ಸಾರ್ವಜನಿಕರಿಗೆ ಭಾರಿ ಸಮಸ್ಯೆಯಾಗಲಿದೆ.
ಸಾರಿಗೆ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದರೆ ಬಂದ್ ಮಾಡುವುದಕ್ಕೆ ಎರಡು ದಿನಗಳ ಮೊದಲೇ, ಡಿಸಿಎಂ ಸವದಿ ಅವರು ನೌಕರರ ಬೇಡಿಕೆ ಈಡೇರಿಸುವುದರೊಂದಿಗೆ, ಶೇ.8ರಷ್ಟು ವೇತನ ಹೆಚ್ಚಿಸುವ ಭರವಸೆ
ನೀಡಿದ್ದಾರೆ. ಆದರೆ ಇದಕ್ಕೆ ಬಗ್ಗದೇ ಬಂದ್ ಮುಂದುವರಿಸಿದ್ದಾರೆ. ಆದರೆ ಇದೀಗ ರಾಜ್ಯದಲ್ಲಿ ನೀತಿ ಸಂಹಿತೆ ಇರುವುದರಿಂದ ವೇತನ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಮಾಡಿದರೆ, ಸರಕಾರದ ವಿರುದ್ದ ಕೇಸ್ ದಾಖಲಾಗಲಿದೆ.
ಇದನ್ನೇಕೆ ಸಾರಿಗೆ ನೌಕರರು ಅಥವಾ ಅವರ ಸಂಘಟನೆಯವರು ಅರ್ಥೈಸಿಕೊಳ್ಳುತ್ತಿಲ್ಲ? ಈಗಾಗಲೇ ರಾಜ್ಯದಲ್ಲಿ ಕರೋನಾ ಸೋಂಕು ಹೆಚ್ಚಳವಾಗುತ್ತಿದೆ. ಇದನ್ನು ನಿಯಂತ್ರಿಸುವುದಕ್ಕೆ ಸಾಮಾಜಿಕ ಅಂತರ ಅತ್ಯಗತ್ಯ. ಆದರೆ ಬಸ್‌ಗಳ ಸಂಖ್ಯೆ ಕ್ಷೀಣಿಸಿ ರುವುದರಿಂದ ಸಾರ್ವಜನಿಕರು ಸೀಟ್‌ಗಳು ಭರ್ತಿಯಾಗಿದ್ದರೂ ಆ ಬಸ್‌ಗಳಲ್ಲಿಯೇ ಪ್ರಯಾಣಿಸುತ್ತಿದ್ದಾರೆ. ಒಂದು ವೇಳೆ ಈ ರೀತಿ ಪ್ರಯಾಣಿಸುವ ಒಬ್ಬರಿಗೆ ಕರೋನಾ ಇದ್ದರೆ ಎಲ್ಲರಿಗೂ ಹಬ್ಬುವ ಆತಂಕವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.
ಹೀಗೆ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನೇ ಉದ್ಯೋಗ ಮಾಡಿಕೊಂಡು ಆಗಾಗ ಬಂದ್ ಮಾಡುವ ಅಗತ್ಯವೇನಿದೆ.
ಸಾರಿಗೆ ಸಿಬ್ಬಂದಿಯ ಪ್ರತಿಭಟನೆ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಸರಕಾರ ನೌಕರರ ಬೇಡಿಕೆಗೆ ಈಡೇರಿಕೆಗೆ ಮುಂದಾಗಿದ್ದರೂ, ಪ್ರತಿಭಟನೆ ಮುಂದುವರಿಸಿ ಉದ್ದಟತನ ಮರೆಯುತ್ತಿದ್ದಾರೆ. ಸಾರಿಗೆ ಇಲಾಖೆ ಸಿಬ್ಬಂದಿ ಅಲ್ಲದಿದ್ದರೂ, ಇಡೀ ಇಲಾಖೆಯ ಸಿಬ್ಬಂದಿಯನ್ನು ನಿಯಂತ್ರಿಸುತ್ತಿರುವ ಕೋಡಿಹಳ್ಳಿ ಅವರು ರಾಜ್ಯದ ಜನತೆ
ಸಾರಿಗೆ ಸಂಕಷ್ಟ ಅನುಭವಿಸುವ ಸ್ಥಿತಿಯನ್ನು ತಂದೊಡ್ಡುತ್ತಿದ್ದಾರೆ. ಸರಕಾರದ ಮೇಲಿನ ತಮ್ಮ ಸಿಟ್ಟನ್ನು ಜನರ ಮೇಲೆ ತೀರಿಸಿ ಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕದೆ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಇಲಾಖೆ ಇಂತಹದ್ದಕ್ಕೆಲ್ಲ ಸಿದ್ದ ಎಂಬುದನ್ನು ಸಾಬೀತು ಮಾಡಬೇಕು.