ಡರ್ಬಾನ್: ಅರವತ್ತು ಲಕ್ಷ ಆಫ್ರಿಕನ್ ರಾಂಡ್ (3.22 ಕೋಟಿ ರೂ.) ವಂಚನೆ ಮತ್ತು ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಡರ್ಬಾನ್ ನ್ಯಾಯಾಲಯ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ 56 ವರ್ಷ ವಯಸ್ಸಿನ ಆಶೀಶ್ ಲತಾ ರಾಮ್‌ಗೋಬಿನ್ ತಪ್ಪಿತಸ್ಥೆ ಎಂದು ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಉದ್ಯಮಿ ಎಸ್.ಆರ್. ಮಹಾರಾಜ ಎಂಬವರನ್ನು ವಂಚಿಸಿದ ಆರೋಪ ಈಕೆಯ ಮೇಲಿತ್ತು. ಭಾರತ ದಿಂದ ಸರಬರಾಜು ಆಗದ ಸರಕಿನ ಮೇಲಿನ ಆಮದು ಮತ್ತು ಕಸ್ಟಮ್ಸ್ ಸುಂಕವನ್ನು ತುಂಬುವ ಸಲುವಾಗಿ ಮಹಾರಾಜ್ 62 ಲಕ್ಷ ರಾಂಡ್ ಮುಂಗಡ ವನ್ನು ಆರೋಪಿಗೆ ನೀಡಿದ್ದರು ಎನ್ನಲಾಗಿದೆ.
ಲತಾ ರಾಂಗೋಬಿನ್, ಮಾನವ ಹಕ್ಕುಗಳ ಹೋರಾಟಗಾರ್ತಿ ಇಳಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್‌ಗೋಬಿಂದ್ ಅವರ ಪುತ್ರಿ.
ಲತಾ ವಿರುದ್ಧದ ವಿಚಾರಣೆ 2015ರಲ್ಲಿ ಆರಂಭವಾಗಿತ್ತು. ಭಾರತದಿಂದ ಮೂರು ಕಂಟೈನರ್ ಲೆನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಂಬಿಸಿ ಸಂಭಾವ್ಯ ಹೂಡಿಕೆದಾರರ ಮನವೊಲಿಸುವ ಸಲುವಾಗಿ ಆರೋಪಿ ನಕಲಿ ಇನ್‌ವೈಸ್ ಮತ್ತು ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ರಾಷ್ಟ್ರೀಯ ಅಭಿಯೋಜನಾ ಪ್ರಾಧಿಕಾರ (ಎನ್‌ಪಿಎ)ಯ ಬ್ರಿಗೇಡಿಯರ್ ಹಂಗ್ವಾನಿ ಮುಲಾವುದ್‌ಜಿ ಆರೋಪಿಸಿದ್ದರು.
ತನಗೆ ಹಣಕಾಸು ಮುಗ್ಗಟ್ಟು ಇದ್ದು, ಆಮದು ಸುಂಕ ಮತ್ತು ಕಸ್ಟಮ್ಸ್ ಸುಂಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಂದರಿನಲ್ಲಿ ಇದನ್ನು ತುಂಬಲು ಹಣದ ಅವಶ್ಯಕತೆ ಇದೆ ಎಂದ ಆರೋಪಿ, ಸುಳ್ಳು ಇನ್‌ವೈಸ್ ತೋರಿಸಿ ಮಹಾರಾಜ್ ಅವರನ್ನು ನಂಬಿಸಿದ್ದರು.