Thursday, 19th September 2024

ಅಧಿಕಾರ ಲಾಲಸೆಯಲ್ಲಿ ಜನಹಿತ ಮರೆ ಆಯಿತೇ?

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಬಹಳಷ್ಟು ಕುತೂಹಲ ಏರ್ಪಟ್ಟಿದೆ. ಆದರೆ ಈ ಬೆಳವಣಿಗೆ ಕುತೂಹಲದ ಸಂಗತಿಯಲ್ಲ, ರಾಜ್ಯದ ಪಾಲಿಗೆ ಬಹುದೊಡ್ಡ ದುರಂತ ಸಂಗತಿ. ಕೋವಿಡ್ ಎರಡನೆ ಅಲೆಯ ಪರಿಹಾರ ಕಾರ್ಯಗಳ ಸಂದರ್ಭದಲ್ಲಿ ಕೆಲವೇ ಜನಪ್ರತಿನಿಧಿಗಳ ಸೇವೆ ಶ್ಲಾಘನೀಯವಾಗಿದ್ದು, ಉಳಿದವರ ನಡೆಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಇಂಥ ಸನ್ನಿವೇಶದಲ್ಲಿ ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯ ನಡೆ ಕಳವಳಕಾರಿ. ಇದರಿಂದ ಪ್ರಸ್ತುತ ಆಡಳಿತ ಪಕ್ಷದ ನಡೆ ಜನಹಿತವನ್ನು ಮರೆಯುತ್ತಿದೆಯೇ ಎಂಬ ಭಾವನೆ ಬಲಗೊಳ್ಳುತ್ತಿದೆ. ನಾಯಕತ್ವ ಬದಲಾವಣೆ ಎಂಬುದು ಪಕ್ಷದ ಆಂತರಿಕ
ಸಂಗತಿಯಾದರೂ, ಈ ನಡೆ ಜನತೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಚಿಂತನೆ ನಡೆಸದಿರುವುದು ನಿಜಕ್ಕೂ ದುರ್ವೈವದ ಸಂಗತಿ.

ಎರಡನೆ ಅಲೆಯ ಸಂದರ್ಭದಲ್ಲಿ ಪ್ರತಿ ಪಕ್ಷಗಳು ಆಡಳಿತ ಪಕ್ಷದ ಮೇಲೆ ಹಲವಾರು ಆರೋಪಗಳನ್ನು ಮಾಡಿದರೂ, ಜನತೆಯಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಡಿಮೆ. ಏಕೆಂದರೆ ಕೋವಿಡ್‌ನಂಥ ಸಂಕಷ್ಟದ ಸ್ಥಿತಿಯಲ್ಲಿ ಸರಕಾರಕ್ಕೂ ಪ್ರತಿಯೊಂದು ಸಮಸ್ಯೆಗಳ ನಿವಾರಣೆ ಕಷ್ಟ ಎಂಬ ಅರಿವು ಜನತೆಯಲ್ಲಿ ಮೂಡಿತ್ತು. ಕಳೆದ ಕೆಲವು ದಿನಗಳ ಹಿಂದೆ ನಾಯಕತ್ವ
ಬದಲಾಯಿಸಿ ಎಂಬ ಕೂಗಿನ ಜತೆ, ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಬೇಕೆಂಬ ಕೂಗು ಕೇಳಿಬಂದಾಗ ಜನತೆ ಗಂಭೀರವಾಗಿ ಪರಿಗಣಿಸಲಿಲ್ಲ.

ನಂತರ ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ವಿವಾದವನ್ನು ಸೃಷ್ಟಿಸಿದೆ. ನಾಯಕತ್ವ ಬಿಕ್ಕಟ್ಟು ಶಮನಕ್ಕಾಗಿ ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳು ಮಹತ್ವ ಪಡೆಯುತ್ತಿರುವುದನ್ನು ಗಮನಿದರೆ ಕೋವಿಡ್ ನಿವಾರಣೆ ನಿಟ್ಟಿನಲ್ಲಿಯೂ ಜನಪ್ರತಿನಿಧಿಗಳು ಇಷ್ಟೊಂದು ಆಸಕ್ತಿ ತೋರಿರಲಿಲ್ಲ. ಸಾಲು ಸಾಲು ಸಾವುಗಳಿಗಿಂತಲೂ ಸರಕಾರಕ್ಕೆ ಪರಿಹಾರ ಘೋಷಣೆ ಹಾಗೂ ಸಹಾಯಧನ ವಿತರಣೆಯೇ ದೊಡ್ಡ ಸಾಧನೆ ಆಯಿತೇ ಎಂಬ ಭಾವನೆ ವ್ಯಕ್ತವಾಗುತ್ತಿದ್ದು, ಆಡಳಿತ ಪಕ್ಷದ ನಡೆ ದುರಂತ ಸಂಗತಿ.