Saturday, 14th December 2024

ನೇರ ಬಂಡವಾಳ ಹೂಡಿಕೆ ಪ್ರಗತಿಯತ್ತ ಭಾರತ

ಭಾರತ ಬಹಳಷ್ಟು ಸಾಮರ್ಥ್ಯ ಹೊಂದಿರುವ ದೇಶ. ಆದರೆ ಮೊದಲಿನಿಂದಲೂ ಜಾಗತಿಕವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಗಮನ ಸೆಳೆದ ರಾಷ್ಟ್ರಗಳೆಂದರೆ ಅಮೆರಿಕ, ನೆದರ್‌ಲ್ಯಾಂಡ್, ಚೀನಾ, ಹಾಂಗ್‌ಕಾಂಗ್.

ಪ್ರಸ್ತುತ ಸಂದರ್ಭದಲ್ಲಿ ಭಾರತವೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಗಮನಸೆಳೆಯುತ್ತಿದೆ. ಇದೊಂದು ಉತ್ತಮ
ಬೆಳವಣಿಗೆಯಾದರೂ, ಭಾರತದ ಪಾಲಿಗೆ ಆರಂಭಿಕ ಹಾದಿ. ಡಿಜಿಟಲ್ ಮೂಲಸೌಕರ್ಯ ಮತ್ತು ಸೇವೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಐಸಿಟಿ ಉದ್ಯಮವನ್ನು ಕೇಂದ್ರವಾಗಿ ಇರಿಸಿಕೊಂಡು ಪ್ರಮುಖ ಕಂಪನಿಗಳು ಬೇರೆ ದೇಶಗಳಲ್ಲಿ ಅಂಗಸಂಸ್ಥೆಗಳನ್ನು ಸ್ಥಾಪಿಸುವ ಬೆಳವಣಿಗೆ ಹೆಚ್ಚಾದವು. ಈ ಸಂದರ್ಭದಲ್ಲಿ ಐಸಿಟಿ ಸ್ವಾಧೀನ ವಹಿವಾಟುಗಳಿಂದಾಗಿ ಒಳಹರಿವು ಹೆಚ್ಚಾಗಿದ್ದರಿಂದ ಎಫ್ಡಿಐ ಒಳಹರಿವು ಹೆಚ್ಚಿರುವ ದೇಶಗಳ ಸಾಲಿನಲ್ಲಿ ಭಾರತ ಐದನೇ ಸ್ಥಾನ ತಲುಪಿತು.

ಕರೋನಾ ಸಂಕಷ್ಟದಿಂದ ಕಂಗೆಟ್ಟಿದ್ದ ದಿನಗಳಲ್ಲಿ ಆರ್ಥಿಕ ಚೇತರಿಕೆಗೆ ಪೂರಕವಾಗಿರುವುದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಉದ್ಯಮ. 2019ರಲ್ಲಿ ಭಾರತಕ್ಕೆ 3.78 ಲಕ್ಷ ಕೋಟಿ ಎಫ್ಡಿಐ ಹರಿದುಬಂದಿತ್ತು. 2020ರಲ್ಲಿ 4.74 ಲಕ್ಷ ಕೋಟಿಗೆ ಏರಿಕೆ ಆಗಿದೆ. ಈ ಮಾಹಿತಿಯನ್ನು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನದ (ಯುಎನ್‌ಸಿಟಿಎಡಿ) 2021ರ ದಿ ವಲ್ಡ ಇನ್ವೆಸ್ಟ್ಮೆಂಟ್ ರಿಪೋರ್ಟ್‌ನಲ್ಲಿ ಪ್ರಕಟಿಸಿದೆ. ಇಂಥದೊಂದು ಬೆಳವಣಿಗೆಯಿಂದ ಭಾರತವು ಜಾಗತಿಕವಾಗಿ
ಮಹತ್ವ ಪಡೆದುಕೊಂಡಿದೆ.

ದೇಶದಂತೆಯೇ ಅನೇಕ ರಾಜ್ಯಗಳು ಸಹ ಹೂಡಿಕೆಯ ತಾಣಗಳಾಗಿ ಮಾರ್ಪಾಟಾಗಲು ಸಜ್ಜುಗೊಳ್ಳುತ್ತಿವೆ. ಬಲಿಷ್ಠರಾಷ್ಟ್ರ ಎಂಬ ಹೆಗ್ಗಳಿಕೆಯ ಅಮೆರಿಕ, ಉದ್ಯಮಗಳ ಕಾರಣದಿಂದ ಗಮನ ಸೆಳೆದಿದ್ದ ಚೀನಾ ನೇರ ಬಂಡವಾಳ ಹೂಡಿಕೆಗೆ ಪೂರಕ ತಾಣಗಳು ಎಂಬ ಮಾತು ಜನಜನಿತ. ಆದರೆ ಇದೀಗ ಭಾರತವೂ ಇಂಥದೊಂದು ಹೆಗ್ಗಳಿಕೆಗೆ ಪಾತ್ರವಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿ ಸಿರುವುದು ಉತ್ತಮ ಬೆಳವಣಿಗೆ.