Thursday, 19th September 2024

ಪ್ರಸ್ತುತದ ಮಹತ್ವ ಹಸಿರು ಬೆಂಗಳೂರು

ರಾಜ್ಯ ಅಥವಾ ರಾಷ್ಟ್ರ ರಾಜಧಾನಿಗಳಿಗೆ ದುಡಿಮೆ ಹಾಗೂ ವ್ಯವಹಾರದ ನಿಟ್ಟಿನಲ್ಲಿ ಆಗಮಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದಾಗಿ ವಾಹನಗಳ ಸಂಖ್ಯೆಯೂ ಹೆಚ್ಚಳ. ವಾಹನಗಳ ಹೆಚ್ಚಳದಿಂದಾಗಿ ಮಾಲಿನ್ಯವೂ ಹೆಚ್ಚುತ್ತದೆ. ವಾಹನಗಳ ಹೆಚ್ಚಳ ಹಾಗೂ ತ್ಯಾಜ್ಯ ಸುಡುವಿಕೆಯಿಂದ ಮಾಲಿನ್ಯಕ್ಕೆ ಒಳಗಾಗುವಲ್ಲಿ ರಾಜಧಾನಿ ಗಳು, ಪ್ರಮುಖ ನಗರಗಳು ಮೊದಲ ಸಾಲಿನಲ್ಲಿರುತ್ತವೆ. ಈ ಮಾತಿಗೆ ದೆಹಲಿ ಅತ್ಯುತ್ತಮ ಉದಾಹರಣೆ. ಜಾಗತಿಕ ವಾಯು ಗುಣಮಟ್ಟ ವರದಿ-೨೦೨೦ರ ಪ್ರಕಾರ ಜಗತ್ತಿನ ಮಲಿನ ನಗರಗಳ ಪೈಕಿ ದೆಹಲಿ ಜಗತ್ತಿನ ನಂ. ಮಲಿನ ನಗರ ಎಂಬ ಅಪಖ್ಯಾತಿಗೆ ಪಾತ್ರವಾಗಿದ್ದು ದುರಂತ ಸಂಗತಿ. ಜಗತ್ತಿನ ೩೦ ಅತಿ ಮಲಿನ ನಗರಗಳ ಪೈಕಿ ಭಾರತದ ೨೨ ನಗರಗಳಿರುವುದು ಮತ್ತೊಂದು ದುರಂತ ಸಂಗತಿ.

ರಾಷ್ಟ್ರ ರಾಜಧಾನಿ ಅನುಭವಿಸುತ್ತಿರುವ ಸ್ಥಿತಿ ರಾಜ್ಯ ರಾಜಧಾನಿ ಬೆಂಗಳೂರು ಅನುಭವಿಸದೆ ತಡೆಯಲು ಅನೇಕ ಅಗತ್ಯ ಕ್ರಮಗಳನ್ನು ಅನುಸರಿಸುವುದು ಮುಖ್ಯ ಎಂಬ ಕೂಗು ಕೇಳಿಬರುತ್ತಿದೆ. ಬೆಂಗಳೂರು ಐಟಿ ಉದ್ಯಮದ ಮೂಲಕ ಜಾಗತಿಕವಾಗಿ ಮನ್ನಣೆಗಳಿಸಿರುವುದರ ಜತೆಗೆ ಸುಂದರ ಹಾಗೂ ಸುರಕ್ಷಿತ ನಗರವನ್ನಾಗಿ
ರೂಪಿಸುವಲ್ಲಿ ಸರಕಾರದ ಜವಾಬ್ದಾರಿ ಬಹಳಷ್ಟಿದೆ. ಈ ಮಾತನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ರಾಜ್ಯ ಸರಕಾರ ಇದೀಗ ಹಸಿರು ಬೆಂಗಳೂರು ಯೋಜನೆ ರೂಪಿಸಿರುವುದು ಶ್ಲಾಘನೀಯ. ಬೆಂಗಳೂರನ್ನು ವಿಶ್ವದರ್ಜೆಯ ನಗರವಾಗಿ ರೂಪಿಸುವುದರ ಜತೆಗೆ ಹಸಿರು ಬೆಂಗಳೂರು ಎಂಬ ಹೆಗ್ಗಳಿಕೆಯನ್ನು ಕಾಪಾಡಿಕೊಳ್ಳಲು ರಾಜ್ಯ ಸರಕಾರ ಬದ್ಧವಾಗಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಬೆಂಗಳೂರು ಮಿಷನ್ – ೨೦೨೨ರಲ್ಲಿ ಬೆಂಗಳೂರು ನಾಗರಿಕರಿಗೆ ಉತ್ತಮ ಹಸಿರು ಪರಿಸರವನ್ನು ಒದಗಿಸುವುದಾಗಿ ರಾಜ್ಯ ಸರಕಾರ ನೀಡಿರುವ ವಚನಕ್ಕೆ ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಕಾಡುಗೋಡಿಯ ಟ್ರೀ-ಪಾರ್ಕ್, ಕನ್ನಮಂಗಲದ ಸಸ್ಯೋದ್ಯಾನ, ಅಭಿವೃದ್ಧಿ ಪಡಿಸಲಾದ ಕನ್ನಮಂಗಲ ಕೆರೆಗಳಿಗೆ ಚಾಲನೆ ನೀಡಿದ್ದು, ಮತ್ತಷ್ಟು ಕಾರ್ಯಗಳು ಪ್ರಗತಿಯಲ್ಲಿವೆ. ಪ್ರಸ್ತುತ ದಿನಗಳಲ್ಲಿ ಹಸಿರು ಬೆಂಗಳೂರು ಯೋಜನೆ ಎಂಬುದು ಮಹತ್ವದ ಕಾರ್ಯ.