ಅಭಿಪ್ರಾಯ
ಸೌಮ್ಯ ಗಾಯತ್ರಿ
somsintouch@gmail.com
ಆಧುನಿಕತೆ ಎಷ್ಟಾಗಿ ಬೆಳೆದಿದೆ ಎಂದರೆ ಹೊಸ ಕಾರು ಬಂಗಲೆ ಎಂದು ಐಷಾರಾಮಿ ಬದುಕಿನ ಪ್ರದರ್ಶನ ಮಾಡುತ್ತಾ ಪರಸ್ಪರ ಸ್ಪರ್ಧಿಸುತ್ತಿದ್ದವರು ಇಂದು ಬಾಹ್ಯಾಕಾಶದ ಪಯಣದಲ್ಲಿ ತೊಡಗಿ ‘ನಾ ಮೊದಲು ನೀ ಮೊದಲು’ ಎಂದು ಅಂತರಿಕ್ಷದಲ್ಲಿ ಬಡಿದಾಡುತ್ತಿದ್ದಾರೆ. ಈ ಕೋಟ್ಯಧಿ ಗೀಳು ಈಗ ಅಂತರಿಕ್ಷಯಾನ, ಚಂದ್ರಯಾನ, ಮಂಗಳಯಾನದೆಡೆಗೆ ಆಕರ್ಷಿತವಾಗುತ್ತಿದೆ.
ಇತ್ತ ಪ್ರಪಂಚದ ಹಲವೆಡೆಗಳಲ್ಲಿ ಕಿತ್ತು ತಿನ್ನುವ ಬಡತನ. ಸಮಯಕ್ಕೆ ಸರಿಯಾದ ಊಟೋಪಚಾರಗಳಿಲ್ಲದೆ ಅನೇಕ ರೋಗಗಳಿಗೆ ತುತ್ತಾಗಿ ಪ್ರಾಣ ಕಳೆದು ಕೊಳ್ಳುತ್ತಿರುವ ಘಟನೆಗಳೂ ಅನೇಕ. ಇಂತಹ ಈ ಕಾಲಘಟ್ಟ ದಲ್ಲಿ ಹೊಸದಾಗಿ ಒಂದು ಬಳಗ ಕಟ್ಟಿಕೊಳ್ಳಲು, ಅದರಲ್ಲಿ ನಕ್ಕು ನಲಿಯಲು ವೇದಿಕೆಯಾಗಿ ಬಂದಿರುವುದು ‘ಕ್ಲಬ್‌ಹೌಸ್’ ಎಂಬ ಶ್ರವಣಪ್ರಧಾನ ಏರ್ಪಾಟು.
ಕ್ಲಬ್‌ಹೌಸ್ ಎಂಬುದು ಆಹ್ವಾನ-ಮಾತ್ರದಿಂದ ಭಾಗವಹಿಸಬಹುದಾದ ಸಾಮಾಜಿಕ ಮಾಧ್ಯಮದ ಒಂದು ಆಪ್ ಆಗಿದ್ದು, ಇದರಲ್ಲಿ ಯಾವುದೇ ತ್ರಾಸವಿಲ್ಲದೆ ನಾವೆಲ್ಲಿರುತ್ತೇವೆಯೋ ಅಲ್ಲಿಂದಲೇ ಸಾವಿರಾರು ಜನರ ಗುಂಪುಗಳನ್ನು ಒಂದುಗೂಡಿಸಿ ಸ್ಥಳಾವಕಾಶ ನೀಡಿ ಧ್ವನಿ ಪ್ರಧಾನ ಚಾಟ್‌ರೂಮ್‌ಗಳ ಮುಖಾಂತರ ಸಂವಹನ ನಡೆಸಬಹುದು.
ದಿನೆದಿನೇ ಅನೇಕ ವಿಚಾರ ವೇದಿಕೆಗಳು, ಮಾತಿನ ಕಟ್ಟೆಗಳು ಈ ಕ್ಲಬ್‌ಹೌಸ್ ಎಂಬ ಅದ್ಭುತ ಆವಿಷ್ಕಾರದಲ್ಲಿ ಪ್ರಚಲಿತವಾಗುತ್ತಿವೆ. ಇಂತಹ ಒಂದು ಅದ್ಭುತ ಅನುಭವ ಮಂಟಪ ‘ವಿಶ್ವವಾಣಿ ಕ್ಲಬ್ ಹೌಸ್’. ಭಾರತದ ಅತಿ ಹೆಚ್ಚು ಕೇಳುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಕ್ಲಬ್‌ಗೆ ಕಾರಣೀಭೂತರು ಮತ್ಯಾರೂ ಅಲ್ಲ ನಮ್ಮ ನಿಮ್ಮೆಲ್ಲರ ನೆಚ್ಚಿನ ನಮ್ಮ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಕ್ಲಬ್ ಹೌಸ್ ಏನೋ ಸರಿ, ಆದರೆ ಈ 99 ಕ್ಲಬ್ ಏನು? ಅದನ್ನು ಬಿಟ್ಟು ಈ ಕ್ಲಬ್ ಹೌಸ್ ಕಡೆಗೆ ಹೆಜ್ಜೆ ಹಾಕುವುದೆಂದರೇನು? ಯಾವುದೀ 99 ಕ್ಲಬ್? ಒಂದು ಸಣ್ಣ ಕತೆಯ ಮೂಲಕ ಈ 99 ಕ್ಲಬ್ ಏನೆಂದು ತಿಳಿಸುವ ಪ್ರಯತ್ನ ಮಾಡುತ್ತೇನೆ.
ಒಮ್ಮೆ ಒಂದೂರಿನ ರಾಜ ತನ್ನ ಮಂತ್ರಿಯೊಡನೆ ಮಾರುವೇಷದಲ್ಲಿ ತನ್ನ ನಗರದ ಪ್ರಯಾಣ ಹೊರಟ. ಎಡೆಯಲ್ಲಿಯೂ ಏನಾದರೊಂದು ಕುಂದುಕೊರತೆ ಗಳೊಂದಿಗೆ, ಅಸಮಾಧಾನ, ದುಃಖ, ಜಗಳ, ಕುತಂತ್ರವೇ ತುಂಬಿದ್ದ ಪ್ರಜೆಗಳನ್ನೇ ಕಾಣುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ. ಒಂದೆಡೆ ಸ್ವಲ್ಪ ದಣಿವಾರಿಸಿ ಕೊಳ್ಳಲು ಕುಳಿತ. ಅಲ್ಲಿ ಒಂದು ಪುಟ್ಟ ಗುಡಿಸಲು. ನಗು, ಸಂತೋಷದ ಮಾತುಗಳು ಮಾತ್ರವೇ ಕೇಳಿ ಬಂತು. ರಾಜನಿಗೆ ಸ್ವಲ್ಪ ಆಶ್ಚರ್ಯವಾಯಿತು. ಇನ್ನೂ ಕೆಲ ಕಾಲ ಅ ಕುಳಿತ. ಗಂಡ ಹೆಂಡತಿಯಿಬ್ಬರೂ ಹೊರಗೆ ಬಂದು ಹೊರಗಿನ ಗದ್ದೆಯಲ್ಲಿ ಹಾಡುತ್ತಾ, ನಗು ನಗುತ್ತಾ ಕೆಲಸ ಮಾಡ ತೊಡಗಿದರು.
ಬಡತನ ಎಷ್ಟಿದೆಯೆಂದರೆ ಚಿಕ್ಕ ಗುಡಿಸಲು, ಮನೆಯೊಳಗೆ ಇಣುಕಿ ನೋಡಿದಾಗ ಇಬ್ಬರು ಮಲಗುವಷ್ಟೇ ಪುಟ್ಟದಾದ ಜಾಗ. ಹೊರಗಡೆಯೇ ಅಡುಗೆ ಕೋಣೆ.
ರಾಜನು ಮಂತ್ರಿಯನ್ನು ಕೇಳಿದ, ಇಷ್ಟು ಕಡು ಬಡತನದಲ್ಲೂ ಈ ದಂಪತಿಗಳು ಇಷ್ಟು ಸಂತೋಷದಿಂದಿದ್ದಾರಲ್ಲ? ನಾನು ಇಷ್ಟು ಐಶ್ವರ್ಯದ ಒಡೆಯನಾಗಿದ್ದರೂ ಮನದಲ್ಲಿ ಎಲ್ಲಾ ಏನೋ ಖಿನ್ನತೆ ಇದೆ. ಹೇಗೆ? ಏನಿದು ಮಂತ್ರಿ? ಅದಕ್ಕೆ ಮಂತ್ರಿ ಬಹಳ ಶಾಂತಚಿತ್ತನಾಗಿ, ಮುಗುಳ್ನಗೆಯಿಂದ ಹೀಗೆಂದನು. ‘ಪ್ರಭು, ಅವರು ಇನ್ನೂ 99 ಕ್ಲಬ್‌ನ ಸದಸ್ಯರಾಗಿಲ್ಲ ಅದಕ್ಕೆ ಅವರಲ್ಲಿ ಈ ರೀತಿಯ ಪ್ರಶಾಂತತೆ, ನಿಷ್ಕಲ್ಮಶ ಪ್ರೀತಿ, ಸಂತೋಷ, ನಗು’.
ಆಗ ರಾಜನು ಆಶ್ಚರ್ಯಚಕಿತನಾಗಿ, ಏನಿದು 99 ಕ್ಲಬ್? ಎಂದು ಕೇಳಿದನು. ಅದಕ್ಕೆ ಮಂತ್ರಿಯು ನೀವು ಅದೇನೆಂದು ತಿಳಿಯಬೇಕಾದರೆ ನನಗೆ 99 ಚಿನ್ನದ ನಾಣ್ಯಗಳನ್ನು ನೀಡಬೇಕು ಮತ್ತು 6 ತಿಂಗಳು ಕಾಯಬೇಕು. ನಂತರ ನಾನು ಅದೇನೆಂದು ನಿಮಗೆ ತಿಳಿಯಪಡಿಸುವೆ ಎಂದು ನುಡಿದನು. ರಾಜನು ಹಾಗೆಯೇ ಮಾಡಿದನು. 99 ಚಿನ್ನದ ನಾಣ್ಯಗಳನ್ನು ಪಡೆದ ಮಂತ್ರಿಯು ಅದೇ ರಾತ್ರಿ ಆ ಚಿನ್ನದ ನಾಣ್ಯಗಳಿದ್ದ ಚೀಲವನ್ನು ಆ ಬಡ ದಂಪತಿಗಳ ಮನೆಯ ಬಾಗಿಲಿಗೆ ನೇತು
ಹಾಕಿ ಬಂದನು.
ಬೆಳಗ್ಗೆ ಎದ್ದ ಗಂಡ ಚೀಲವನ್ನು ನೋಡಿ ಒಳಗೇನಿದೆ ಎಂದು ತೆರೆದಾಗ ಅವನಿಗೆ ಒಂದು ರೀತಿಯ ಆಘಾತ. ಚಿನ್ನದ ನಾಣ್ಯಗಳು. ಹೊರಗೆ ಬಂದು ಎಡೆ ನೋಡಿದ,
ಯಾರಾದರೂ ಇzರೆಯೇ? ಯಾರಾದರೂ ಬಿಟ್ಟು ಹೋದರೆ? ಸಂಜೆಯವರೆಗೂ ಗಂಡ ಹೆಂಡತಿ ಆ ಚೀಲವನ್ನು ತೆರೆಯದೆ ಹಾಗೆಯೇ ಅದರ ಮುಂದೆ ಗರ
ಬಡಿದವರಂತೆ ಕುಳಿತು ಯಾರಾದರೂ ಬರುತ್ತಾರೆಂದು ಕಾಯುತ್ತಿದ್ದರು. ರಾತ್ರಿಯಾದಾಗ ಆ ಚೀಲವನ್ನು ತೆಗೆದು ನಾಣ್ಯಗಳನ್ನು ಎಣಿಸಿದರು. 99 ನಾಣ್ಯ ಗಳಿದ್ದದ್ದಕ್ಕೆ ಗಂಡ ಅದನ್ನು ಮತ್ತೆ ಮತ್ತೆ ಎಣಿಸಿದ. ಹೆಂಡತಿಗೂ ಒಮ್ಮೆ ಎಣಿಸಲು ಹೇಳಿದ. ನಂತರ 99 ನಾಣ್ಯಗಳು ಮಾತ್ರ ಇದೆ ಎಂಬುದು ಖಚಿತವಾದ ಮೇಲೆ ಅದನ್ನು 100 ಮಾಡಲು ಎಲ್ಲ ತರದ ಪ್ರಯತ್ನ ಮಾಡೋಣ. ನಾಳೆಯಿಂದ ಕಷ್ಟಪಟ್ಟು ದುಡಿದು ಒಂದು ಚಿನ್ನದ ನಾಣ್ಯವನ್ನು ಸಂಪಾದಿಸಿ ಈ ಚೀಲಕ್ಕೆ ಸೇರಿಸಿ 100 ಮಾಡೋಣ ಎಂದು ಹೆಂಡತಿಗೆ ಹೇಳಿದ.
ನಂತರದ ದಿನಗಳಲ್ಲಿ ಗಂಡ ಹೆಂಡತಿ ಬಹಳ ಕಷ್ಟ ಪಡ ತೊಡಗಿದರು. ಎಷ್ಟೇ ಕಷ್ಟಪಟ್ಟು ದುಡಿದರೂ ಕೈಗೆ ಬಾಯಿಗೆ ಸಂಪಾದಿಸಿದ ಹಣ ಸರಿ ಹೋಗುತ್ತಿತ್ತು. ಉಳಿತಾಯದ ಪ್ರಶ್ನೆಯೇ ಇರುತ್ತಿರಲಿಲ್ಲ. ಗಂಡನಂತೂ ಆ ಒಂದು ನಾಣ್ಯದ ಚಿಂತೆಯಿಂದ ಖಿನ್ನ ಮನಸ್ಕನಾಗಿಬಿಟ್ಟ. ಇತ್ತ ಹೆಂಡತಿಗೆ, ಗಂಡನ ಬಗ್ಗೆ ಇವನೆಂಥ ಮೂರ್ಖ, ಇರುವ ಹಣವನ್ನು ಸ್ವಲ್ಪ ಖರ್ಚು ಮಾಡಿದರೆ ನಾವು ಇನ್ನೂ ಚೆನ್ನಾಗಿ ಬಾಳುವೆ ಮಾಡಬಹುದಲ್ಲ, ಇರುವುದನ್ನು ಬಿಟ್ಟು ಇಲ್ಲದದರ ಹಿಂದೆಯೇಕೆ ಹೀಗೆ ಓಡುತ್ತಿದ್ದಾನೆ ಎನಿಸಿತು. ಆಕೆ ಗಂಡನಿಗೆ ತಿಳಿಯದ ಹಾಗೆ ೨ ನಾಣ್ಯಗಳನ್ನು ತೆಗೆದು ಬಟ್ಟೆ ಬರೆಗಳನ್ನು ಕೊಂಡು ತಂದಳು. ಮಾರನೆಯ ದಿನ ಸಂಜೆ ಗಂಡ ಮತ್ತೆ ನಾಣ್ಯಗಳನ್ನು ಎನಿಸಿದಾಗ ಅದರಲ್ಲಿ 96 ನಾಣ್ಯಗಳಿದ್ದದ್ದಕ್ಕೆ ಹೆಂಡತಿಯನ್ನು ಕೇಳಿದ. ಆಕೆ ಬಟ್ಟೆ ತಂದಿರುವುದಾಗಿ ಹೇಳಿದಳು.
ಅಲ್ಲಿಂದ ಪ್ರಾರಂಭವಾಯಿತು ಜಗಳ. ದಿನಂಪ್ರತಿ ಜಗಳ, ಹೊಡೆದಾಟ, ಬಡಿದಾಟ, ಅವಾಚ್ಯ ಶಬ್ದಗಳ ಪ್ರಯೋಗ, ಇಬ್ಬರ ಮಧ್ಯೆ ವೈಮನಸು ಎಲ್ಲವೂ ಬೆಳೆಯುತ್ತಾ ಹೋಯಿತು. ಹೀಗೆ 6 ತಿಂಗಳು ಕಳೆದವು. ರಾಜನು ಮಂತ್ರಿಯೊಡನೆ ಮತ್ತೆ ಅಲ್ಲಿಗೆ ಬಂದಾಗ ನಗು ಸಂತಸ ತುಂಬಿದ್ದ ಮನೆಯ ಸ್ವಲ್ಪ ದೂರದ
ಬೈಗುಳ, ಅವಾಚ್ಯ ಶಬ್ದಗಳು, ಕಿರುಚಾಟ, ಪರಸ್ಪರ ಶಾಪ ಹಾಕುವಿಕೆ ಎಲ್ಲವೂ ಕೇಳಿಸಿತು. ರಾಜನಿಗೆ ಪರಮಾಶ್ಚರ್ಯ. ಎಷ್ಟು ಸಂತಸದಿಂದಿದ್ದ ಇವರಿಗೆ ಏನಾಯಿತು? ಹೀಗೇಕೆ ಕಚ್ಚಾಡುತ್ತಿದ್ದಾರೆ? ಆಗ ಮಂತ್ರಿ ನುಡಿದ ಸ್ವಾಮಿ, ಈಗ ಇವರು 99 ಕ್ಲಬ್ ಸದಸ್ಯರು ನಂತರ ರಾಜನಿಗೆ 99 ನಾಣ್ಯಗಳ ಪ್ರಸಂಗವನ್ನು ವಿವರಿಸುತ್ತಾ, ತಮ್ಮಲ್ಲಿರುವ 99 ಚಿನ್ನದ ನಾಣ್ಯಗಳನ್ನು ತಮ್ಮ ಅಗತ್ಯಗಳಿಗೆ ಮತ್ತು ಸಂತೋಷಕ್ಕೆ ಉಪಯೋಗಿಸದೆ, ತಮ್ಮಲ್ಲಿರದ ಆ ಒಂದು ಚಿನ್ನದ ನಾಣ್ಯದ ಹಿಂದೆ ಓಡಿ ಹೋಗುವವರೇ, 99 ಕ್ಲಬ್‌ನ ಸದಸ್ಯರು ಎಂದು ಹೇಳಿದ.
ಈ ರೀತಿ ಇರುವುದನ್ನು ಬಿಟ್ಟು ಇಲ್ಲದುದರ ಹಿಂದೆ ಓಡುವ 99 ಕ್ಲಬ್ ನಮ್ಮಲ್ಲಿ ಬಹಳ ಮಂದಿ ಇರಬಹುದಲ್ಲವೇ? ಸುಖಭೋಗವೇ ಚಾರ್ವಾಕನ ಸಿದ್ಧಾಂತದ ತಿರುಳು, ತಿನ್ನು, ಕುಡಿ, ಮತ್ತು ಮಜಾ ಮಾಡು ಈ ಸಿದ್ಧಾಂತದ ಧ್ಯೇಯ ವಾಕ್ಯ. ಉತ್ತಮ ಸ್ವಾದಿಷ್ಟ ಊಟ, ತಣ್ಣನೆಯ ಗಾಳಿ, ಸುಗಂಧ ಸುವಾಸನೆ, ಕಣ್ಣು ಕುಕ್ಕುವ ಸೌಂದರ್ಯ ಮನುಷ್ಯನಿಗೆ ಸುಖಭೋಗದ ಅನುಭವ ತಂದುಕೊಡುತ್ತವೆ. ಚುಟುಕಾಗಿ ಹೇಳುವುದಾದರೆ ಸುಖಭೋಗ ಭಾವವು ಬಾಹ್ಯ ವಸ್ತು ಹಾಗೂ ವಿಷಯ ಗಳಿಂದ ಪ್ರೇರಿತವಾಗಿರುತ್ತದೆ. ಆದರೆ ಸಂತೋಷ, ನೆಮ್ಮದಿ ಮಾನವನ ಆಂತರಿಕ ಭಾವನೆಗಳು, ಆಯ್ಕೆಗಳು, ಹಾಗೂ ನಿರ್ಧಾರಗಳಿಗೆ ಸಂಬಧಿಸಿದ್ದಾಗಿರುತ್ತದೆ. ಬದುಕಿನ ಜಂಜಾಟ, ನೋವು, ಕಷ್ಟ-ನಷ್ಟಗಳ, ನಡುವೆಯೂ ಮನುಷ್ಯ ಸಂತೋಷವಾಗಿರುವುದು ಸಾಧ್ಯ.
ಸಂತೋಷ, ನೆಮ್ಮದಿಯಿಂದಿರುವುದು ಓರ್ವ ವ್ಯಕ್ತಿಯ ಆಯ್ಕೆ ಮತ್ತು ಇಚ್ಛೆಗಳನ್ನು ಅವಲಂಬಿಸಿದೆ. ಆದ್ದರಿಂದ ಈ ಇಲ್ಲದ ಬಾಹ್ಯ ಸುಖಭೋಗಗಳ ಬೆನ್ನಟ್ಟಿ ಹೋಗುತ್ತಾ ಆಂತರಿಕ ಸಂತೋಷವನ್ನು ಕಳೆದುಕೊಳ್ಳದೆ ನಮಗೇನು ಬೇಕು? ನಾವು ಯಾವುದರಲ್ಲಿ ಸಂತೋಷ ಕಾಣುತ್ತೇವೆ ಅಂಬುದನ್ನರಿತು ಉತ್ತಮ ಪ್ರಾರಂಭ ಮಾಡೋಣ. ಕ್ಲಬ್ ಹೌಸ್‌ನಂತಹ ಶ್ರವಣ ಮಾತ್ರ ವೇದಿಕೆ ವಿeನ, ತಂತ್ರಜ್ಞಾನ ನಮಗೆ ನೀಡಿದ ಒಂದು ಉತ್ತಮ ಕೊಡುಗೆ. ಇದನ್ನು ಸದುಪಯೋಗ ಪಡಿಸಿಕೊಂಡು ನಮಗೆ ಇಷ್ಟವಿರುವ ವಿಷಯಗಳ ಬಗ್ಗೆ ಚರ್ಚಿಸೋಣ, ಮಾತನಾಡೋಣ, ಹೋಲಿಕಾ ಮನೋಭಾವದವರನ್ನು ಒಂದುಗೂಡಿಸಿ ಹೊಸ ಹೊಸ ವಿಷಯಗಳನ್ನು ತಿಳಿಯುತ್ತಾ ಚರ್ಚಿಸೋಣ. eನದಾಹವನ್ನು ಹೆಚ್ಚಿಸಿಕೊಳ್ಳೋಣ.
ಅದು ಬೇರೆಲ್ಲ ಬಾಹ್ಯ ಹಸಿವು ದಾಹವನ್ನು ಹೋಗಲಾಡಿಸಿ ನಮ್ಮ ಮನಸ್ಸನ್ನು ತಾಜಾವಾಗಿಡಿಸುತ್ತದೆ. ಇದು ಜೀವನೋತ್ಸಾಹಕ್ಕೆ ಅತ್ಯುತ್ತಮ ಮಾರ್ಗ. 99 ಕ್ಲಬ್ ಅನ್ನು ಬಿಟ್ಟು ಕ್ಲಬ್ ಹೌಸ್ ನಂತಹ ಜ್ಞಾನ ಹಂಚುವ ಕ್ಲಬ್ ಗೆ ಸೇರೋಣ.