Friday, 18th October 2024

ಆಶಾ ಭೋಸ್ಲೆ ಅವರಿಗೊಂದು ಅಷ್ಟೋತ್ತರ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ದಿ ಕಾರಿಡಾರ್ ಆಫಗ ಅನ್‌ಸರ್ಟನಿಟಿ (the corridor of uncertainty) ಎಂಬ ನುಡಿಗಟ್ಟಿನ ಬಳಕೆ ಕ್ರಿಕೆಟ್‌ನಲ್ಲಿದೆ. ಬೌಲರ್‌ನ ಕೈಯಿಂದ ಹೊರಟುಬಂದ ಚೆಂಡನ್ನು ಆಡಿದರೆ ಒಳಿತೋ,  ಹಾಗೆಯೇ ಬಿಡುವುದು ಕ್ಷೇಮವೋ ಎಂಬ ಗೊಂದಲದಲ್ಲಿ ಬ್ಯಾಟ್ಸ್‌ಮನ್ ಅನ್ನು ಸಿಕ್ಕಿಸುವ ಹಾಗೆ ಆಫ್’ಸ್ಟಮ್ಪ್ ನೇರಕ್ಕೆ ಅಥವಾ ಅದರ ಸರಿಸುಮಾರಿನ ಪ್ರದೇಶವನ್ನು ಆ ರೀತಿ ವರ್ಣಿಸಲಾಗುತ್ತದೆ. ಅಂತಹ ಗೊಂದಲವೊಂದು ನನ್ನನ್ನು ಸದಾ ಕಾಡುತ್ತದೆ.

ಆಶಾ ಭೋಸ್ಲೆಯ ಗಾಯನದಿಂದ ಲಭಿಸುವ ಸುಖ ಲೌಕಿಕವಾದದ್ದೋ, ಅಲೌಕಿಕವಾದದ್ದೋ ಎಂಬ ಗೊಂದಲ. ಆಶಾರ ಅಷ್ಟೋತ್ತರವನ್ನು ಆರಂಭಿಸುವ ಮುನ್ನ ಒಂದು ಡಿಸ್ಕೇಮರ್. ನಾನು ಸಿಸಿಮಾ ನೋಡಿದ್ದು, ನೋಡುವುದು ತೀರಾ ಕಡಿಮೆ. ಕಂಠಪಾಠ ಮಾಡಿದಂತೆ ನನಗಿಂದು ಬಾಯಿಗೆ ಬರುವ ಹಾಡುಗಳೆಲ್ಲವೂ ಸ್ಮೃತಿಗಿಳಿದಿದ್ದು ಶ್ರುತಿ ಯ (ರೇಡಿಯೊ) ಮೂಲಕ. ಆಡಿಯೊ ಟೇಪ್ ಮತ್ತು ಸಿಡಿಗಳ ಪಾತ್ರವೂ ತಕ್ಕಮಟ್ಟಿಗಿದೆ. ಟಿವಿ ಮೂಲಕ ಮನದಾಳ ಕ್ಕಿಳಿದದ್ದು ತೀರಾ ಕಡಿಮೆ. ನನ್ನ ಏಳೆಂಟು ವಯಸ್ಸಿನಲ್ಲಿ, ಹತ್ತಿರದ ಶೆಟ್ಟರ ಅಂಗಡಿಯಲ್ಲಿ ಕೊಳ್ಳುತ್ತಿದ್ದ ಶೇಂಗಾ ಬರ್ಫಿಯ (ಚಿಕ್ಕಿ) ಚೌಕಾಕಾರದ ಒಂದು ತುಂಡಿಗೆ ಐದು ಪೈಸೆ.

ನಾಲ್ಕಾಣಿ ಇದ್ದರೆ ಸಾಮ್ರಾಜ್ಯದ ಒಡೆಯ ಎನ್ನುವಷ್ಟು ಕಾಸಿಗೆ ಬೆಲೆ ಇತ್ತು. ಒಮ್ಮೆ ನಮ್ಮ ಮನೆಗೆ ಹಾಲು ನೀಡುತ್ತಿದ್ದ ಲಿಂಗಣ್ಣನವರ ಮಗ ನನ್ನೆದುರಿಗೆ ಒಂದೂ ಕಾಲು ರುಪಾಯಿ ಕೊಟ್ಟು ಬಾಯಿ ಭರ್ತಿ ಬರ್ಫಿ ತಿಂದಿದ್ದ. ಅಂದಿನಿಂದ ನನಗೂ ಅವನಂತೆಯೇ ಬಾಯ್ತುಂಬ ಚಿಕ್ಕಿ ತಿನ್ನುವ ಕನಸು ಮೂಡಿತು. ಅಷ್ಟೊಂದು ಮಿಠಾಯಿಯನ್ನು ಕೊಂಡು ತಿನ್ನುವ ಸಾಮರ್ಥ್ಯ ನಾನೂ ಪಡೆದಾಗ ಅದನ್ನು ತಿನ್ನುವ ತೀವ್ರ ಬಯಕೆಯನ್ನು ಹುಡುಕುವಂತಾಗಿತ್ತು. ಅಷ್ಟರಲ್ಲಿ  ಸ್ವಚ್ಛತೆಯ ಬಗ್ಗೆ ಪರಿeನ ಬಂದದ್ದು ಮತ್ತೊಂದು ಕಾರಣ.

ಸ್ವಾನುಭವದಿಂದ ಹಂಚಿಕೊಳ್ಳಬಹುದಾದ ಮತ್ತೊಂದು ವಿಷಯವೆಂದರೆ, ಯಶಸ್ಸಿನ ಗಮ್ಮತ್ತು ಅದಕ್ಕಾಗಿ ಶ್ರಮಿಸುವುದರಲ್ಲಿದೆ, ಗಳಿಸುವುದರಲ್ಲಲ್ಲ. ದೇವರು ಕಂಡಕಂಡಲ್ಲಿ  ಪ್ರತ್ಯಕ್ಷನಾಗಿದ್ದರೆ ಅವನ ಬೆಲೆ ಏನಿರುತ್ತಿತ್ತು, ಊಹಿಸಿ. ಅಗೋಚರತೆಯ ಪ್ರಬಲ ಶಕ್ತಿಗಳ ಸಾಫಲ್ಯವಿದೆ. ಕರೋನಾ ವೈರಸ್ ಜಿರಲೆಯಂತೆಯೋ ಇಲಿಯಂತೆಯೋ  ಇದ್ದಿದ್ದರೆ ಅವುಗಳನ್ನು ಬಡಿದು ಹಾಕಲು ಜಗತ್ತಿನ ಪೊರಕೆಗಳು ಸಾಕಾಗುತ್ತಿರಲಿಲ್ಲ. ಹಾಡುಗಳು ನೀಡುವ ಮುದವೂ ಚಿಕ್ಕಿ ನೀಡುವ ಸಂತೋಷದ ಹಾಗೆ. ಆ ಕಾಲದಲ್ಲಿ, ರೇಡಿಯೊನಲ್ಲಿ ಬಿತ್ತರವಾಗುತ್ತಿದ್ದ ಹಾಡುಗಳಿಗೆ ಹಾತೊರೆಯುತ್ತಿದ್ದೆವು. ಮುಂಬರುವ ಹಾಡ್ಯಾವುದೆಂಬ ಕೌತುಕ ಮತ್ತಷ್ಟು ಮಜಾ ನೀಡುತ್ತಿತ್ತು. ಕೇಳುಗರ ಕೋರಿಕೆಯ ಮೇರೆಗೆ ಪ್ರಸಾರ ಮಾಡುವ ಚಿತ್ರ ಗೀತಾ ಕಾರ್ಯಕ್ರಮದಲ್ಲಿ ಬರುವ ಹಾಡುಗಳನ್ನು ಆಗಷ್ಟೇ ಬಿಡುಗಡೆಗೊಂಡಿದ್ದ ಚಿತ್ರದ ಜನಪ್ರಿಯ ಹಾಡೇ ಇರಬೇಕೆಂದು ಒಂದು ಹಂತದವರೆಗೂ ಊಹಿಸಬಹುದಾಗಿತ್ತು.

ಯೂ ಟ್ಯೂಬ್ ಎಂಬ ಕಾಮಧೇನು ಆಧುನಿಕ ಜೀವನವನ್ನು ಆಕ್ರಮಿಸಿದ ನಂತರ ರೇಡಿಯೊನಲ್ಲಿ ಹಾಡು ಕೇಳುವ ಹಪಹಪಿ ಕಡಿಮೆಯಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಹಾಡು ಶ್ರಮವಿಲ್ಲದೆ ದೊರಕುವ ಅನುಕೂಲ ಒದಗಿ ಬಂದು ಹಾಡು ಕೇಳಲು ಯಾರದ್ದೇ ಮರ್ಜಿ ಬೇಕಿಲ್ಲ. ಶ್ರಮವಲ್ಲದದಕ್ಕಿದ್ದಕ್ಕೆ ಎಂದು ತಾನೇ ಬೆಲೆ ಇತ್ತು. ಅದಕ್ಕೊಂದು ಅಪವಾದವೆಂದರೆ, ಆಶಾ ಭೋಸ್ಲೆಯ ಹಾಡುಗಳು. ಗಾಯಕಿ ಆಶಾಗೆ ನಿರ್ದಿಷ್ಟ ಐಡೆಂಟಿಟಿ ಕೊಟ್ಟದ್ದು ಓ.ಪಿ ನಯ್ಯರ್ ಆದರೂ ಆಕೆಯ ಪ್ರತಿಭೆಯ ಸಂಪೂರ್ಣವಾಗಿ ಸಂಗೀತ ಜಗತ್ತಿಗೆ ಪರಿಚಯಿಸಿದ ಕೀರ್ತಿ ಆಕೆಯ ಎರಡನೆಯ ಪತಿ ಆರ್.ಡಿ ಬರ್ಮನ್‌ರಿಗೆ ಸಲ್ಲಬೇಕು.

ಆಕೆಯ ಗಾಯನದ ಒಳಸಾಮರ್ಥ್ಯವನ್ನು ಹೆಕ್ಕಿ ತೆಗೆಯಲೇ ಬರ್ಮನ್ ಆಕೆಯನ್ನು ವಿವಾಹವಾದರೋ ಅಥವಾ ಆ ಸಾಮರ್ಥ್ಯದಿಂದ ಬೆರಗಾಗಿ ತಮಗಿಂತ ಆರು ವರ್ಷ ಹಿರಿಯರಾದ ಆಶಾರನ್ನು ವರಿಸಿದರೋ ತಿಳಿಯದು. ಆದರೆ, ಅವರ ವಿವಾಹವಾಗುವ ಹೊತ್ತಿಗೆ ಆಕೆಯ ಕಂಠದ ಸಿರಿಯ ವೈವಿಧ್ಯವನ್ನು ಬರ್ಮನ್ ಬಗೆದಾಗಿತ್ತು. ಇದು ಆಶಾರ ಸಾಧನೆಗಳನ್ನು ಪಟ್ಟಿ ಮಾಡುವ ಲೇಖನವಲ್ಲ, ಆಕೆಯ ಮಾದಕ ದನಿಯ ರಸಾನುಭವವನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶದಿಂದ ಬರೆದದ್ದು. ಒಂದು ಡಝನ್ ಭಾಷೆಗಳಲ್ಲಿ ಸುಮಾರು 12000 ಗೀತೆಗಳನ್ನು  ಹಾಡಿರುವ ಆಶಾರಿಗೇ ಅವುಗಳಲ್ಲಿ ಯಾವುದು ಹೆಚ್ಚು ಇಷ್ಟ?

‘ದ ಗ್ರೇಟ್ ಗ್ಯಾಂಬ್ಲರ್’ ಚಿತ್ರದ ದೊ ಲಫ್ಜೋನ್ ಕಿ ಹೇ…  ನಾನು ಯೂ ಟ್ಯೂಬ್‌ನಲ್ಲಿ ಹಾಡುಗಳನ್ನು ಕೇಳುತ್ತೇನೆ,  ಸಾಮಾನ್ಯವಾಗಿ ವೀಕ್ಷಿಸುವುದಿಲ್ಲ. ಸಂಗೀತ ಮಾಧುರ್ಯದ  ಆಸ್ವಾದನೆಗೆ ದೃಶ್ಯಗಳು ಭಂಗಪಡಿಸಬಾರದಲ್ಲ. ಹೇಳಿ ಕೇಳಿ, ನಮ್ಮ ಚಲನಚಿತ್ರಗಳ ದೃಶ್ಯಾವಳಿಗಳು ಅಸಂಬದ್ಧವಾಗಿರುತ್ತವೆ. ಎಷ್ಟೋ ಹಾಡುಗಳ ದೃಶ್ಯಗಳನ್ನು ನೋಡಿ ರಸಭಂಗವಾಗಿ ಆ ಹಾಡುಗಳ ಬಗ್ಗೆಯೇ ತಿರಸ್ಕೃತ ಭಾವ ಬಂದದ್ದೂ ಉಂಟು. ಶಾಸೀಯ ಸಂಗೀತ ಕಚೇರಿಯಲ್ಲಿನ ಗಾಯನ ವನ್ನು ಆಸ್ವಾದಿಸುವಾಗ ಕಣ್ಣಾಲಿಗಳು ತಂತಾನೇ ಮುಚ್ಚುತ್ತವಲ್ಲ, ಹಾಗೆ.

ಆದರೆ, ದ ಗ್ರೇಟ್ ಗ್ಯಾಂಬ್ಲರ್ ಚಿತ್ರದ ಸದರಿ ಹಾಡು ಅಪವಾದ. ನಯನ ಮನೋಹರ ವೆನಿಸ್ ನಗರದಲ್ಲಿ ಚಿತ್ರೀಕರಣಗೊಂಡ ಹಾಡು. ಬಾಲಿವುಡ್‌ನಲ್ಲಿ ಬೃಹತ್ ಬೇಡಿಕೆ ಹೊಂದಿದ್ದ ಜೀನತ್ ಅಮಾನ್ ಮತ್ತು ಯೌವನದ ಉಚ್ಛ್ರಾಯದಲ್ಲಿದ್ದ ಅಮಿತಾಭ್ ಬಚ್ಚನ್. ಅವರೆದುರು ಜೀನತ್ ಮಂಕಾಗಿ ಕಾಣುತ್ತಾಳೆ. ಅವರಿಬ್ಬರ ಉಡುಗೆ ತೊಡುಗೆಗಳೂ ಅತ್ಯಾಕರ್ಷಕ. ಹಾಡಿನ ಇಡೀ ಚಿತ್ರಣವೂ ಕಣ್ಣುಗಳಿಗೆ ಹಿತವಾದ ಕಸರತ್ತು ಕೊಡುತ್ತದೆ. ಅವೆಲ್ಲಕ್ಕಿಂತ ಮಿಗಿಲಾದದ್ದು ಪಂಚಮ್ ದಾರ ಉತ್ಕೃಷ್ಟವಾದ ಸಂಗೀತ ಸಂಯೋಜನೆ. ಆ ಸಂಗೀತಕ್ಕೆ ಮೆರುಗು ಕೊಡುವಂತೆ ಕಂಠ ದಾನ ಮಾಡಿರುವುದು ಸ್ವಯಂ ಅಮಿತಾಭ್ ಬಚ್ಚನ್ ಮತ್ತು ಶರದ್ ಕುಮಾರ್.

ಇಟಾಲಿಯನ್ ಭಾಷೆಯಲ್ಲಿನ ಆರಂಭಿಕ ಸಾಲುಗಳನ್ನು ಅವರಿಬ್ಬರೂ ತಮ್ಮ ವಿಭಿನ್ನ ದನಿಯಲ್ಲಿ ಹಾಡಿದ್ದಾರೆ. (ಆ ಸಾಲುಗಳಿಗೆ ಸಾಹಿತ್ಯ ಒದಗಿಸಿದವರು ಪಂಚಮ್ ದಾ ಮತ್ತು ಶರದ್ ಕುಮಾರ್ ಎಂದು ಹೇಳಲಾಗಿದೆ.) ಈವರೆಗೂ ತಿಳಿಸಿದ ವಿವರಗಳು ಒಂದು ಸ್ತರದ್ದಾದರೆ ಆಶಾ ತಮ್ಮ ಜೇನ್ದನಿಯಿಂದ ಅವಕ್ಕೆ ದಿವ್ಯದರ್ಶನ ಮಾಡಿಸಿ ಗಂಧರ್ವಲೋಕಕ್ಕೆ ರಹದಾರಿ ನೀಡುತ್ತಾರೆ. ಶಾಸೀಯ ಸಂಗೀತದ ಗಾಯಕ(ಕಿ) ಯಾದರೋ ತಾನು ತೇಲುತ್ತಲೇ ತಲುಪುವ ರಸಾ ನುಭವದ ಉತ್ತುಂಗದ ಸ್ಥಿತಿಗೆ ಶ್ರೋತೃಗಳನ್ನು ಹಂತಹಂತವಾಗಿ ಕೊಂಡೊಯ್ಯುತ್ತಾರೆ.

ಆಶಾರ ಗಾಯನ ಹಾಗಲ್ಲ. ತಾವು ಹಾಡುವ ಗೀತೆಯ ಮೊದಲ ಶಬ್ದದಿಂದಲೂ ಶ್ರೋತೃಗಳ ಹೃದಯದ ಬಡಿತವನ್ನು ಹೆಚ್ಚಿಸಿಬಿಡುತ್ತಾರೆ. ಆಕೆಯ ಹಾಡಿನ ಪ್ರತಿ ಶಬ್ದಕ್ಕೂ ತನ್ನದೇ ಆದ ಸವಿಯಿದೆ. ಅದರಲ್ಲೂ, ಕೆಲವು ಶಬ್ದಗಳಂತೂ ಲಾಡುವಿನಲ್ಲಿ ಸಿಕ್ಕ ದ್ರಾಕ್ಷಿ-ಗೋಡಂಬಿಗಳು ನೀಡುವಂಥ ಪುಳಕ ನೀಡುತ್ತವೆ. ಉದ್ಧರಿಸಿದ ಹಾಡಿನ ಗಮ ಶಬ್ದಕ್ಕೆ ಬೇರಾವ ಗಾಯಕಿಯೂ ಅಷ್ಟು ರುಚಿಯನ್ನು (ಪಾನಿಪೂರಿ ಮಾಡುವವನು ಪೂರಿಗೆ ತಿವಿದು ಮಸಾಲೆಯನ್ನು ತುಂಬಿ ತುಂಬಿ ಕೊಡುವಂತೆ) ತುಂಬಲಾರರು. ಗಮ್ ಪದವನ್ನು ಬರೆದಂತೆ ಉಚ್ಚರಿಸಲಿಕ್ಕಾಗದು. (ತಮಿಳಿನ ಕನ್ನಡಿಗರ ಬಾಯಲ್ಲಿ ಹೊರಡಲಾರದು.

ಅನೇಕ ವರ್ಷಗಳ ತಪಸ್ಸಿನಿಂದ ಸಾಧ್ಯವೇನೋ!) ಆಶಾರ ಕಂಠದಿಂದ ಹೊರಟ ಗಮ್‌ನಂತೆ ನೀವು ಹಾಡಲು ತಪಸ್ಸಿನಿಂದಲೂ ಸಿದ್ಧಿಸುವುದಿಲ್ಲ. ಐನ್‌ಸ್ಟಿನ್ ಮೆದುಳು, ಆಶಾರ ದನಿಪೆಟ್ಟಿಗೆ ಸೃಷ್ಟಿನಿಯಮಗಳನ್ನು ಮೀರಿದ ವಸ್ತುಗಳು. ದ ಗ್ರೇಟ್ ಗ್ಯಾಂಬ್ಲರ್ ಬಿಡುಗಡೆಯಾಗಿ ೪೩ ವರ್ಷಗಳಾದವು. ಹೊರಾಂಗಣ ಚಿತ್ರೀಕರಣವನ್ನು ವಿದೇಶಗಳಲ್ಲಿ ನಡೆಸಿ, ಚಿತ್ರದ ಒಂದೇ ಒಂದು ಹಾಡು ಹಿಟ್ ಆದರೂ ಚಿತ್ರವೂ ಸೂಪರ್ ಹಿಟ್ ಆಗುತ್ತಿದ್ದ ಕಾಲವದು. ಆದರೂ, ಬೇರೆ ಬೇರೆ ದೇಶಗಳಲ್ಲಿ ಚಿತ್ರೀಕರಣವಾಗಿದ್ದ ದಿಗ್ದರ್ಶಕ ಶಕ್ತಿ  ಸಾಮಂತರ ಈ ಚಿತ್ರ ತೋಪಾಗಿದ್ದು ಆಶ್ಚರ್ಯವೇ ಸರಿ.

ಆಶಾರ ಇದೊಂದೇ ಹಾಡು ಆ ಚಿತ್ರವನ್ನು ಜನಪ್ರಿಯಗೊಳಿಸಬಹುದಿತ್ತು. ಹಾಗಾಗದಿದ್ದುದು ವಿಷಾದ. ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ, ಪಂಚಮ್ ದಾ ಈ ಹಾಡಿಗೆ ಬಳಸಿಕೊಂಡಿದ್ದು Parigi e Sempre Parigi (Paris Is Always Paris) ಎಂಬ ಫ್ರೆಂಚ್ ಹಾಡಿನ ಸಾರವನ್ನು. (ಚಿತ್ರ 1951 ರ Les Feuilles Mortes). ಪಂಚಮ್ ದಾರನ್ನು ಏಕೆ ಮೇಧಾವಿ ಎಂದು ಕರೆಯುತ್ತಾರೆ ಎಂದು ತಿಳಿಯಲು ಇದೊಂದು ಹಾಡು ಸಾಕು. ಇದನ್ನೊಮ್ಮೆ ಕೇಳಿ, ಮೂಲ ಹಾಡನ್ನು ಕೇಳಿದರೆ ಹಬ್ಬದಡುಗೆ ಉಣ್ಣಲು ಕೂತವನಿಗೆ ಚಾತುರ್ಮಾಸ ವ್ರತದಡುಗೆ ಉಣಿಸಿದಂತಾಗುತ್ತದೆ.

ಫ್ರೆಂಚ್ ಭಾಷೆಯ ಅಪಾರ ಮೃದುತ್ವವೂ ಆಶಾರ ದನಿಯ ಮಾಧುರ್ಯದ ಮುಂದೆ ಪೇಲವವೆನಿಸುತ್ತದೆ. ಅದು ಆಶಾ-ಆರ್‌ಡಿಯ ದೈತ್ಯ ಪ್ರತಿಭೆಯ ಸಮ್ಮಿಲನದ ಪ್ರಭಾವ. ಎರಡೂ ವಿಡಿಯೊಗಳನ್ನೂ ಯೂಟ್ಯೂಬಿನಲ್ಲಿ ನೋಡಿದೆ. ಮೂಲವನ್ನು ವೀಕ್ಷಿಸಿದವರು ಒಂದು ಕೋಟಿ ಚಿಲ್ಲರೆ ಯೂ-ಟ್ಯೂಬಿಗರು. ಪಂಚಮ-ದಾರ ಪುನರ್‌ಸೃಷ್ಟಿಯ ಸವಿಯುಂಡವರು ನಾಲ್ಕು ಕೋಟಿಗೂ ಹೆಚ್ಚು. ಡಾನ್ ಚಿತ್ರದ ಏ ಮೇರಾ ದಿಲ್ ಯಾರ್ ಕಾ ದೀವಾನಾ ಹಾಡು ಕೂಡ ಹಾಗೆ. ಕಲ್ಯಾಣ್ ಜೀ ಆನಂದ್ ಜೀ ಜಬರ್ದಸ್ತಾಗಿ ಸಂಯೋಜಿಸಿರುವ ಈ ಐಟಂ ಸಾಂಗ್‌ನಲ್ಲಿ ಅಮಿತಾಭ್ ಬಚ್ಚನ್ ಮತ್ತೆ ಸಹನಟಿ ಹೆಲೆನ್ ಮೇಲೆ ಮೇಲುಗೈ ಸಾಧಿಸುತ್ತಾರೆ.

ಹೆಲೆನ್‌ರ ಮೋಹಕತೆ ಉಕ್ಕಿಸುವ ದೃಷ್ಟಿಯ ಬಾಣವನ್ನು ಅಮಿತಾಭ್‌ರ ನೋಟದ ತೀಕ್ಷ್ಣತೆ ಹತ್ತಿಕ್ಕುತ್ತದೆ. (ಆತ ಆ ದೃಶ್ಯದಲ್ಲಿ ಧರಿಸಿರುವ ಕಡು ಹಸಿರು ಶರ್ಟ್ ಮೇಲಿನ ಬಿಳಿ-ಹಸಿರು-ಕಪ್ಪು ಚೌಕುಳಿಯ ಆಡ್-ಕೋಟ್  ತರಹದ್ದೇ ಕೋಟ್ ಸಿಕ್ಕರೆ ನಾಳೆಯೇ ಕೊಂಡುಕೊಳ್ಳುತ್ತೇನೆ.) ನೀವು ಈ ದೃಶ್ಯದ ಪ್ರತಿ ಎಳೆಯನ್ನೂ ಎವೆಯಿಕ್ಕದೇ ನೋಡಿ ಆನಂದಿಸಲು ನಿರ್ದೇಶಕ-ದ್ವಯರ ರುಸ್ತುಮ್ ಹಿತವಾಗಿ ಅಡ್ಡಿಪಡಿಸುತ್ತದೆ. ಆಶಾರ ಹಾಡು ಅಷ್ಟೇ ಹಿತವಾಗಿ ನಿಮ್ಮನ್ನು ಹಿಡಿದಿಡುತ್ತದೆ. ದೃಶ್ಯದ ನರ್ತಕಿ ಹಾಡದೇ ಕೇವಲ ತುಟಿಗಳನ್ನು ಚಲಿಸುತ್ತಿದ್ದಾಳೆ ಎಂದು ನೋಡುಗರಿಗೆ ಕ್ಷಣಮಾತ್ರವೂ ಅನಿಸುವುದಿಲ್ಲ.

ಆಶಾರ ದನಿಯ ಅಸಲೀ ತಾಕತ್ತದು. ಆಶಾರ ದನಿ ಅಯಸ್ಕಾಂತ, ಕೇಳುಗರು ಕಬ್ಬಿಣದ ಅದಿರು. ಯಾವುದೇ ಹೊಗಳಿಕೆ ಉತ್ಪ್ರೇಕ್ಷೆಯೇ ಅಲ್ಲ ಅನ್ನುವಂತಹ ಪ್ರತಿಭೆಯ ಕಾರಂಜಿ ಆಶಾ. ಸಿನಿಮಾ ಸಂಗೀತ ರಸಿಕರನ್ನು ಸೆಳೆಯಲು ಆಕೆ ಹಾಡಲೇಬೇಕಿಲ್ಲ. ನುಡಿದರೆ ಸಾಕು. ಅದೇ ಹಾಡಾಗುತ್ತದೆ. ಖೇಲ್ ಖೇಲ್ ಮೇ ಚಿತ್ರದ ಸಪ್ನಾ ಮೇರಾ ಟೂಟ್ ಗಯಾ ಹಾಡೊಂದೇ ಸಾಕು, ಅದನ್ನು ಸಾಬೀತುಗೊಳಿಸಲು. ಸರ್ವೇಸಾಧಾರಣ ಸಾಹಿತ್ಯ ಹೊಂದಿದ ಆ ಹಾಡಿಗೆ ಅದೆಷ್ಟು ಜೀವ ತುಂಬಿದ್ದಾರೆ ಆಶಾ. ತಮ್ಮ ನಿಜ ಜೀವನದ ವಿರಹವೇ ಆ ಹಾಡಿನ ಸಾಹಿತ್ಯ-ಸಂಗೀತಗಳಲ್ಲಿ ತುಂಬಿದೆಯೇನೋ ಅನ್ನುವಷ್ಟು ಭಾವಪೂರ್ವಕವಾಗಿ ಹಾಡಿದ ಆಶಾಗೆ ಬರ್ಮನ್ ಸಮರ್ಥ ಸಾಥ್ ನೀಡಿದ್ದಾರೆ.

ಭಾವ ಶುದ್ಧವಿಲ್ಲದವರಲಿ ಸಂಗೀತವನೊಲ್ಲಯ್ಯ ನೀನು ಎಂದು ಹಾಡಬೇಕೆನಿಸುತ್ತದೆ. ನಾನು ಚಿಕ್ಕಂದಿನಲ್ಲಿ ಕೇಳಿದ ಜವಾನಿ ದಿವಾನಿ ಚಿತ್ರದಲ್ಲಿ ಆಶಾ ಹಾಡಿದ ಎಲ್ಲ ಹಾಡುಗಳು ಭಾವನಾ ವಿಹಾರಕ್ಕೆ ಕೈ ಹಿಡಿದು ಕರೆದುಕೊಂಡು ಹೋಗುವಂಥದ್ದೇ. ಆದರೆ, ಜಾನೆಜಾ ಡೂಂಢ್ ತಾ ಫಿರ್ ರಹಾ ಮಾತ್ರ ಅಂದು ಕೇಳಿದ ಹೊಸತನವನ್ನು ಉಳಿಸಿಕೊಂಡಿದೆ. ಅದನ್ನ ದೆಷ್ಟು ಬಾರಿ ಕೇಳಿದ್ದೀನೊ? ಅದೆಷ್ಟು ಬಾರಿ ಹಾಡಿದ್ದೀನೋ? ಆಕೆಯ ಮತ್ತೊಂದು ಹಾಡು, ಜೋಶೀಲಾ ಚಿತ್ರದ ಸೋನಾ ರೂಪ. ಈ ಲೇಖನವನ್ನು ಬರೆಯುವಾಗ ಅದು ಮತ್ತೆ ಮತ್ತೆ ಒಳಕಿವಿಯಲ್ಲಿ ರಿಂಗಣಿಸುತ್ತಿದೆ.

ಅತಿ ಸಾಧಾರಣ ಹಾಡು. ಹೇಮಾಮಾಲಿನಿಯ ಶಕ್ತಿಸಂವಧಿನಿ ನೃತ್ಯ. ಅಂತಹ ರೂಪವತಿ ಕಲಾವಿದೆ ಕೂಡ ಆಶಾರ ಸ್ವರಮಾಧುರ್ಯದ ಮುಂದೆ ಸೊರಗುತ್ತಾರೆ. ನಾಟ್ಯರಾಣಿ ಹೇಮಾಮಾಲಿನಿಯ ಆಂಗಿಕ ಅಭಿನಯಕ್ಕೂ, ಆಶಾರ ಗಾಯನ ವೈವಿಧ್ಯಕ್ಕೂ ಸ್ಪರ್ಧೆ ಏರ್ಪಟ್ಟರೆ ಗೆಲ್ಲುವುದು ನಿಸ್ಸಂಶಯವಾಗಿ ಆಶಾ.  ಆಶಾರ ಪ್ರತಿಯೊಂದು ಜನಪ್ರಿಯ ಹಾಡಿಗೂ ನನ್ನದೇ  ವ್ಯಾಖ್ಯಾನ ಬರೆಯುವ ಹುಮ್ಮಸ್ಸಿದೆ. ಆ ಮಟ್ಟಿಗೆ ಆಕೆಯ ಗಾಯನದ ಸೊಬಗು ನನ್ನನ್ನಾವರಿಸಿದೆ. ಇಸ್ಕಾನ್ ಪ್ರತಿಪಾದಿಸುವ ಕೃಷ್ಣ ಪ್ರeಯ ಪರಿಕಲ್ಪನೆ ನನಗೆ ಅರ್ಥವಾಗುವುದೇ ನನ್ನ ಮನಸ್ಸನ್ನು ತುಂಬಿರುವ ಆಶಾ ಪ್ರಜ್ಞೆ.

ಕೃಷ್ಣನನ್ನು ನಾನು ಆ ಮಟ್ಟಿಗೆ ನನ್ನ ಮನಸ್ಸನ್ನು ಆವರಿಸಲು ಬಿಟ್ಟುಕೊಂಡಿದ್ದರೆ ಅವನು ಎಂದೋ ನನ್ನ ಮುಂದೆ ಪ್ರತ್ಯಕ್ಷನಾಗುತ್ತಿದ್ದ. ಕಾಣಿಸಿಕೊಳ್ಳುವ ದೇವರಿಗೆ ಬೆಲೆ ಕಮ್ಮಿ.