Friday, 20th September 2024

ವಿಪಕ್ಷಗಳ ಗದ್ದಲ: ಎರಡು ಬಾರಿ ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ವಿರೋಧ ಪಕ್ಷಗಳ ಸದಸ್ಯರು ‍ಪೆಗಾಸಸ್‌, ನೂತನ ಕೃಷಿ ಕಾಯ್ದೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಗದ್ದಲ ಉಂಟಾಗಿ, ಸದನದ ಕಲಾಪವನ್ನು ಎರಡನೇ ಬಾರಿಗೆ ಮಧ್ಯಾಹ್ನ 2 ಗಂಟೆವರೆಗೆ ಮಂದೂಡಲಾಗಿದೆ.

ಬೆಳಿಗ್ಗೆ ಸಭೆ ಸೇರುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಪೆಗಾಸಸ್, ಕೃಷಿ ಕಾಯ್ದೆ ಸೇರಿದಂತೆ ಹಲವು ವಿಷಯ ಗಳನ್ನು ಕೈಗೆತ್ತಿಕೊಂಡು, ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿರು. ಈ ನಡುವೆಯೇ ಸದನದಲ್ಲಿ ಪ್ರಶ್ನೋತ್ತರ ಕಲಾಪ ಆರಂಭವಾಯಿತು. ವಿಪಕ್ಷದ ಸದಸ್ಯರು ತಮ್ಮ ಪ್ರತಿಭಟನೆಯನ್ನು ತೀವ್ರ ಗೊಳಿಸಿದರು. ಕಾಂಗ್ರೆಸ್ ಸದಸ್ಯರು ದಾಖಲೆ ಪತ್ರಗಳನ್ನು ಸಭಾಧ್ಯಕ್ಷ ಪೀಠದ ಮುಂದೆ ತೂರಿದರು. ನಂತರ ಕಲಾಪವನ್ನು ಮಧ್ಯಾಹ್ನ 12.30 ರವರೆಗೆ ಮುಂದೂಡಲಾಯಿತು.

ಮಧ್ಯಾಹ್ನ ಕಲಾಪ ಪುನರಾರಂಭವಾದಾಗ, ಸಭಾಧ್ಯಕ್ಷ ಸ್ಥಾನದಲ್ಲಿದ್ದ ರಾಜೇಂದ್ರ ಅಗರ್‌ವಾಲ್‌ ಅವರು ನಿಯಮ 377ರ ಅಡಿಯಲ್ಲಿ ವಿಷಯಗಳನ್ನು ಕೈಗೆತ್ತಿ ಕೊಂಡರು. ನಂತರ, ಪ್ರತಿಭಟನಾ ನಿರತ ಸದಸ್ಯರಿಗೆ ತಮ್ಮ ಸ್ಥಾನ ಗಳಿಗೆ ಹೋಗಿ ಕುಳಿತುಕೊಳ್ಳುವಂತೆ ತಿಳಿಸಿದರು. ಆದರೂ ವಿಪಕ್ಷಗಳ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.