ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 51
ವಿಶ್ವವಾಣಿ ಕ್ಲಬ್ಹೌಸ್ ಸಂವಾದದಲ್ಲಿ ಕ್ಯಾಪ್ಟನ್ ಗೋಪಿನಾಥ್ ಮನದ ಮಾತು
ಬೆಂಗಳೂರು: ಹೊಲದ ಬದುವಿನ ಮೇಲೆ ಕೈಕಟ್ಟಿ ಕುಳಿತ ರೈತನೂ, ಬಡಗಿಯೂ, ಬಡವನೂ ಭೂಮಿಯನ್ನು ಬಿಟ್ಟು ಒಮ್ಮೆ ಹಕ್ಕಿಯಂತೆ ಆಗಸಕ್ಕೆ ಹಾರಬಹುದು ಎಂಬ ಕನಸನ್ನು ಸಾಕಾರಗೊಳಿಸಿದ್ದು ಹಾಸನದ ಗೊರೂರಿನ ಕ್ಯಾಪ್ಟನ್ ಗೋಪಿನಾಥ್.
ಬಡ ವ್ಯಕ್ತಿಯೊಬ್ಬ ಆಗಸದಲ್ಲಿ ಹಾರಬಹುದು ಎಂಬ ಕಲ್ಪನೆಯೇ ಇರದಿದ್ದ ದಿನಗಳಲ್ಲಿ 1 ರುಪಾಯಿಗೂ ವಿಮಾನ ದಲ್ಲಿ ಪ್ರಯಾಣ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟು, ವೈಮಾನಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಕ್ಯಾಪ್ಟನ್ ಗೋಪಿನಾಥ್ ಅವರು ವಿಶ್ವವಾಣಿ ಕ್ಲಬ್ಹೌಸ್ನ ವಿಶೇಷ ಅತಿಥಿಯಾಗಿ ತಮ್ಮ ಅನುಭವಗಳನ್ನು ಹಂಚಿ ಕೊಂಡರು.
ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಹುಟ್ಟಿ ಬೆಳೆದ ತಾವು ಪಟ್ಟ ಪಾಡುಗಳನ್ನು, ಊರಿನ ಕಟ್ಟುಪಾಡುಗಳನ್ನು, ಬಡವರ, ದಲಿತರ ಮನೆಗಳಲ್ಲಿನ ಸಂಕಷ್ಟ ಗಳನ್ನು ಸಿನಿಮಾದಂತೆಯೇ ತಮ್ಮ ಮಾತುಗಳಲ್ಲಿಯೂ ಕಟ್ಟಿಕೊಟ್ಟರು. ಈ ಬಗ್ಗೆ ಮಾತನ್ನಾಡುತ್ತಾ, ಏಳನೇ ತರಗತಿಯಲ್ಲಿ ನಂಜುಂಡಯ್ಯ ಮಾಸ್ಟರ್ ಬಂದು ಸೈನಿಕ ಶಾಲೆಗೆ ಸೇರಲು ಹೇಳಿದರು. ಸೇನೆಯಲ್ಲಿ ಸೇವೆ ಸಲ್ಲಿಸಿ, ಬಾಂಗ್ಲಾ ವಿಮೋಚನಾ ಯುದ್ಧದ ನಂತರ ವಾಪಸ್ ಊರಿಗೆ ಬಂದೆ.
ಹೇಮಾವತಿ ಜಲಾಶಯ ನಿರ್ಮಾಣ ಯೋಜನೆಯಲ್ಲಿ ನಮ್ಮ ಜಮೀನು ಮುಳುಗಿ ಹೋಗಿತ್ತು. ಶ್ರೀರಾಮದೇವರ ಕಟ್ಟೆಯಂತಹ ಕೆಲವು ಕಟ್ಟೆ ಕಟ್ಟಿ ನೀರು ಒದಗಿಸು ತ್ತಿದ್ದರು. ಹೀಗಾಗಿ, ನಾನು ಅರಸೀಕೆರೆ ತಾಲೂಕಿನ ಜಾವಗಲ್ ಬಳಿ ಜಮೀನು ನೋಡಿ, ಅಲ್ಲಿ ಕೃಷಿ ಆರಂಭಿಸಲು ತೀರ್ಮಾನಿಸಿದೆ ಎಂದರು. ಆ ಮಣ್ಣು ನೋಡುತ್ತಿದ್ದಂತೆ ಅಲ್ಲೊಂದು ಕನಸು ಕಂಡೆ. ಆ ಕನಸನ್ನು ನಾನು ನನಸು ಮಾಡಿಕೊಂಡೆ, ಒಬ್ಬ ರೈತನಾದೆ ಎಂದರು.
ಕುರಿ, ದನ, ಕತ್ತೆ ಸಾಕಾಣಿಕೆ: ನನಗೆ ದುಡುಕು ಜಾಸ್ತಿ, ಇದರಿಂದ ಕಷ್ಟಕ್ಕೂ ಒಳಗಾಗಿದ್ದೇನೆ. ಸಾಧನೆಗೂ ಅವಕಾಶ ಒದಗಿಸಿದೆ. ಜಮೀನು ಮಾಡಲು ಹೊರಟಾಗ ಎಲ್ಲರೂ ನನ್ನನ್ನು ಹುಚ್ಚ ಎಂದರು. ನಮ್ಮ ಜಾತಕವನ್ನು ನಾವೇ ಬರೆಯುತ್ತೇವೆ. ಪಂಡಿತರ ಹತ್ತಿರ ಬರೆಸಬಾರದು. ಭವಿಷ್ಯ ಹೇಳುವವನಿಗೆ ಎಲ್ಲಿಯೂ ಭವಿಷ್ಯ ಇಲ್ಲದಿದ್ದಕ್ಕೆ ಆತ ಭವಿಷ್ಯ ಹೇಳಲು ಬಂದಿರುತ್ತಾನೆ ಎಂಬ ಮಾತೊಂದಿದೆ. ಹೀಗಾಗಿ, ನಾವು ಕಂಡ ಕನಸಿನ ಸಾಕಾರಕ್ಕೆ ನಾವೇ ಮುಂದಾಗಬೇಕು. ಹೀಗಾಗಿ, ಮಣ್ಣಿನ ಜತೆಯೇ ಇರಬೇಕೆಂದು ತೋಟದೊಳಗೆ ಟೆಂಟ್ ಹಾಕಿಕೊಂಡೆ.
ಬಯಲಿನಲ್ಲಿ ನಾನು ಮಲಗಿದೆ. ಆಗ ನನ್ನೊಳಗೆ ಏನೂ ಇರಲಿಲ್ಲ, ಆದರೆ, ಒಂದು ರೀತಿಯಲ್ಲಿ ಎಲ್ಲವೂ ಇತ್ತು. ಹಸು, ಕುರಿ, ಹಂದಿ ಮತ್ತು ಕತ್ತೆಗಳನ್ನು ಸಾಕಿದ್ದೆ. ಆ ಜಮೀನಿಗೆ ದೂರದಿಂದ ನೀರು ಹೊರಬೇಕಿತ್ತು. ಒಮ್ಮೆ ಒಬ್ಬ ಅಗಸ ಕತ್ತೆಯೊಂದಿಗೆ ಹೋಗುತ್ತಿದ್ದ, ಇವುಗಳನ್ನು ನಾವು ನಮ್ಮ ವಸ್ತುಗಳನ್ನು ಹೊರಲು ಬಳಸು ತ್ತೇನೆ ಎಂದ. ಆಗ ನಾನು ಹತ್ತು ಕತ್ತೆ ಖರೀದಿಸಿ, ಅವುಗಳ ಮೇಲೆ ನೀರು ಹೊತ್ತು ತೋಟಗಳಿಗೆ ನೀರುಣಿಸುತ್ತಿದ್ದೆ ಎಂದು ಹೇಳಿದರು.
ಕಡಾಣಿ ಇಲ್ಲದ ಗಾಡಿಯಲ್ಲಿ ಬಂದ ಮನದನ್ನೆ: ಇಂತಹ ಹುಚ್ಚು ಸಾಹಸದ ನಡುವೆ ಮದುವೆ ಆಫರ್ ಬಂತು. ಒಮ್ಮೆ ನಾನು ಇದ್ದದ್ದನ್ನು ನನ್ನ ಹೆಂಡತಿ ಮನೆಯ ವರಿಗೆ ಹೇಳಿದ್ದೆ. ಒಮ್ಮೆ ಜಾವಗಲ್ನ ತೋಟಕ್ಕೆ ಅವರೆಲ್ಲ ಬರುವುದಿತ್ತು. ಅಲ್ಲಿ ನನಗೆ ಮಂಜೇಗೌಡ ಎಂಬುವವರು ಬಹಳ ಸಹಾಯ ಮಾಡುತ್ತಿದ್ದರು. ಈ ವಿಷಯ ತಿಳಿದು ಎತ್ತಿನ ಗಾಡಿ ತೆಗೆದುಕೊಂಡು ಹೋಗುವಂತೆ ಅವರ ಮಗನಿಗೆ ಹೇಳಿದ್ದರು. ಗಾಡಿ ಜತೆ ಬಸ್ಸ್ಟಾಂಡಿಗೆ ಬಂದು ನನ್ನ ಭಾವಿ ಪತ್ನಿ ಅವರ ತಂದೆ, ತಾಯಿ ಯನ್ನು ಗಾಡಿಯಲ್ಲಿ ಕೂರಿಸಿಕೊಂಡು ಆತ ಹೊರಟ.
ನಾನು ಬೈಕ್ನಲ್ಲಿ ಮನೆಗೆ ಹೋದೆ. ಅವರು ಬರುವುದನ್ನು ಕಾಯುತ್ತಿದ್ದೆ. ಆತ ತೋಟಕ್ಕೆ ಗಾಡಿ ತಂದು ನಿಲ್ಲಿಸಿದ್ದನ್ನು ನೋಡಿ, ಮಂಜೇಗೌಡರು ಅವನನ್ನು
ಕಡಾಣಿಯನ್ನೇ ಹಾಕಿಲ್ವಲ್ಲೋ ಬಡವ ರಾಸ್ಕಲ್ ಎಂದು ಬೈದರು. ಅದು ಮರದ ಗಾಡಿಯಾದ್ದರಿಂದ ಕಡಾಣಿಯಿಲ್ಲದೆ ಸಂಚಾರ ಕಷ್ಟ. ಆದರೆ, ಅಂದು ನಮ್ಮ ಅದೃಷ್ಟಕ್ಕೆ ಏನೂ ಆಗದೆ ನನ್ನ ಮಡದಿ ಭಾರ್ಗವಿ ಮತ್ತು ಕುಟುಂಬ ಸೇಫ್ ಆಗಿದ್ದರು. ನಂತರ ಮದುವೆಯಾಯ್ತು. ಮಡದಿಯೂ ನನ್ನ ಕನಸಿನ ಭಾಗವಾದರು.
ಈಗ ಬನ್ ವರ್ಲ್ಡ್ ಮೂಲಕ ಆಕೆಯೂ ತನ್ನದೇ ಆದ ಉದ್ಯಮ ನಡೆಸುತ್ತಿದ್ದಾರೆ ಎಂದರು ಕ್ಯಾಪ್ಟನ್.
ಮೊದಲ ವಿಮಾನಕ್ಕೆ ಬೆಂಕಿ
ವಿಮಾನ ಸೇವೆ ಶುರು ಮಾಡುವಾಗ ಕೆಲವರು ಇದು ಸಾಧ್ಯವಾ ಎಂದರು. ಅಮೆರಿಕದಲ್ಲಿ 30 ಕೋಟಿ ಜನ ವಿಮಾನ ಪ್ರಯಾಣ ಮಾಡುತ್ತಾರೆ. ನಮ್ಮಲ್ಲಿ ಶೇ.1ರಷ್ಟು ಜನ ಮಾತ್ರ ವಿಮಾನ ಬಳಸುತ್ತಿದ್ದರು. ಅದಕ್ಕೆ ನಾನು, ನೀವು ಪ್ರಯಾಣ ಮಾಡುತ್ತಿರುವ ಶೇ.1 ರಷ್ಟು ಬಗ್ಗೆ ಯೋಚನೆ ಮಾಡಿದ್ದೀರಾ, ನಾನು ಉಳಿದ 99ರಷ್ಟು ಜನರ ಬಗ್ಗೆ ಯೋಚನೆ ಮಾಡ್ತಿದ್ದೇನೆ ಎಂದೆ. ಮೊದಲ ಫ್ಲೈಟ್ ಶುರು ಮಾಡಿದ್ದು, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಮಂಗಳೂರು, ಬೆಂಗ ಳೂರು-ವಿಜಯವಾಡದಂತಹ ನಗರಗಳ ನಡುವೆ. ಹೈದರಾಬಾದ್ನಲ್ಲಿ ಮೊದಲ ಫ್ಲೈಟ್ ಉದ್ಘಾಟನೆ ಇತ್ತು.
ವೆಂಕಯ್ಯ ನಾಯ್ಡು, ಚಂದ್ರುಬಾಬು ನಾಯ್ಡು ಇದ್ದರು. ಆ ಫ್ಲೈಟ್ಗೆ ಬೆಂಕಿ ಹೊತ್ತಿಕೊಂಡಿತ್ತು. ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದರು. ವೆಂಕಯ್ಯನಾಯ್ಡು ನಮ್ಮ ಯೋಜನೆ ಮೆಚ್ಚಿ ಅವಕಾಶ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ನಂತರದ ದಿನವೇ ನಮ್ಮ ವಿಮಾನಕ್ಕೆ ಶೇ.100 ರಷ್ಟು ಪ್ರಯಾ ಣಿಕರು ಬಂದರು ಎಂದು ಕ್ಯಾಪ್ಟನ್ ಗೋಪಿನಾಥ್ ತಿಳಿಸಿದರು.
ಬಾನಂಗಳದ ಭಾವನೆಗಳು
? ನಿಮ್ಮ ಐಡಿಯಾ ಸಾಗರವಿದ್ದಂತೆ, ಅದನ್ನು ಹಂಚಿಕೊಂಡರೆ ಹಣ ಅದಾಗೇ ಬರುತ್ತದೆ
? ನಿಮ್ಮ ಕನಸೇ ನಿಮ್ಮ ವ್ಯಾಪ್ತಿ ಎನಿಸಿಕೊಳ್ಳುತ್ತದೆ. ಹೀಗಾಗಿ, ದೊಡ್ಡದಾಗಿರಲಿ ಕನಸು
? ಹೋಟೆಲ್ ನಡೆಸುವುದು ಸರ್ಕಸ್ ಎಂದು ಹೇಳಿದ್ದರು. ಕೊನೆಗೆ ಅದರಲ್ಲೂ ಗೆದ್ದೆ
? ಚನ್ನರಾಯಪಟ್ಟಣ, ಹಾಸನ, ಕಡೂರಿನಲ್ಲಿ ಹೋಟೆಲ್ಗಳನ್ನು ತೆರೆದಿದ್ದೆ.
? ರೇಷ್ಮೆ ಬೆಳೆಯಲ್ಲಿ ಸಾಧನೆ ಮಾಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿ ಬಂತು.
? ಡಯಲ್ ಎ ಕಾಪ್ಟರ್ ಎಂಬುದು ನನ್ನ ಮೊದಲ ಜಾಹೀರಾತು.
? ಹೊಸ ಸಾಹಸದ ಹುಚ್ಚು ಬಂದಾಗ, ಗುರುವನ್ನು ಹುಡುಕಿ ಹೋಗಬಾರದು.