ಒಂದು ಆಡಳಿತ ಪಕ್ಷ ನಿತ್ಯ ತಮ್ಮ ಸಾಧನೆ ಹೇಳುವಂತಿರಬೇಕು. ಜನಪರ ಯೋಜನೆಗಳನ್ನು ಘೋಷಿಸುವ ಮೂಲಕ ಜನರ ಹೊಗಳಿಕೆಗೆ ಅರ್ಹವಾಗಬೇಕು. ಆಡಳಿತ ಪಕ್ಷ ಎಡವಿದರೆ ಪ್ರತಿಪಕ್ಷವು ಸರಕಾರದ ಕಿವಿ ಹಿಂಡಿ ಸರಿದಾರಿಗೆ ತರಬೇಕು. ಆದರೆ, ರಾಜ್ಯದಲ್ಲಿ ಇವ್ಯಾವವೂ ನಡೆಯುತ್ತಿಲ್ಲ.
ನಿತ್ಯವೂ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ಆಡಳಿತ ಮತ್ತು ಪ್ರತಿಪಕ್ಷಗಳು ಜನರ ದಾರಿ ತಪ್ಪಿಸು ತ್ತಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಿರಿ ಎಂದದ್ದು, ಕಳೆದೆರಡು ದಿನಗಳ ಹಿಂದೆ ಕೆ.ಎಸ್.ಈಶ್ವರಪ್ಪ ಅವರು ಕಾಂಗ್ರೆಸ್ ನಾಯಕರು ಕುಡುಕರು ಎಂಬ ಧಾಟಿಯಲ್ಲಿ ಮಾತನಾಡಿದ್ದು ಪ್ರಜಾಪ್ರಭುತ್ವದ ಉತ್ತಮ ನಡವಳಿಕೆ ಅಲ್ಲ. ಈ ಹೇಳಿಕೆಗಳನ್ನು ರಾಜಕೀಯವಾಗಿ ಉಪಯೋಗಿಸಿಕೊಳ್ಳುತ್ತಿರುವ ಪ್ರತಿಪಕ್ಷದ ನಡೆಯೂ ಮೆಚ್ಚುವಂಥದಲ್ಲ.
ರಾಜಕಾರಣದಲ್ಲಿ ಆರೋಪ- ಪ್ರತ್ಯಾರೋಪಗಳು, ಟೀಕೆ, ಟಿಪ್ಪಣಿಗಳು ಸಹಜ. ರಚನಾತ್ಮಕ ಟೀಕೆ ಪ್ರಜಾ ಪ್ರಭುತ್ವ ವ್ಯವಸ್ಥೆಯ ಸೌಂದರ್ಯವೂ ಹೌದು. ಆದರೆ, ಸಾರ್ವಜನಿಕವಾಗಿ ಮಾತ ನಾಡುವಾಗ ರಾಜಕಾರಣಿ ಗಳು ಸಭ್ಯತೆಯ ಪರಿಧಿಯನ್ನು ದಾಟದೆ ಉತ್ತಮ ನಡವಳಿಕೆಯ ಬದ್ಧತೆಯನ್ನು ಪ್ರದರ್ಶಿಸಬೇಕು.
ಮಾತ್ರವಲ್ಲದೆ, ಸಂಸದೀಯ ಭಾಷೆಯನ್ನು ಬಳಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಇಂತಹ ಮಾತುಗಳು ಶೋಭೆ ತರುವುದಿಲ್ಲ ಮತ್ತು ಇದು ಸಂವಿಧಾನಬದ್ಧ ಚುನಾಯಿತ ಪ್ರತಿನಿಧಿಗಳ ಲಕ್ಷಣವಲ್ಲ.