Friday, 13th December 2024

ಅಣೆಕಟ್ಟು ಎಂಬ ಟಿಕ್ ಟಿಕ್ ಟೈಮ್ ಬಾಂಬ್

ಶಿಶಿರ ಕಾಲ

ಶಿಶಿರ‍್ ಹೆಗಡೆ, ನ್ಯೂಜೆರ್ಸಿ

ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಒಂದು ಚಿಕ್ಕ ಊರು ಜೋನ್ಸ್ ಟೌನ್. 1880- ಅಮೆರಿಕದಲ್ಲಿ ಕೈಗಾರಿಕಾ ಕ್ರಾಂತಿಯ ಸಮಯ. ಇಡೀ ದೇಶದ ಜನರೆಲ್ಲ ಒಂದಿಂದು ಕೈಗಾರಿಕೆಯ ಜತೆ ಜೀವನವನ್ನು ಜೋಡಿಸಿಕೊಂಡಿದ್ದರು. ಈಗ ಆಪಲ್, ಗೂಗಲ್ ಮೊದಲಾದ ದೊಡ್ಡ ಕಂಪನಿಗಳಲ್ಲಿ ಕೆಲಸಮಾಡಬೇಕೆಂಬ,
ಡಾಕ್ಟರ್ ಆಗಬೇಕೆಂಬ ಹಂಬಲದಂತೆ ಅಂದಿನ ದಿನಗಳಲ್ಲಿ ಸ್ಟೀಲ್ ಮಿಲ್ ಗಳಲ್ಲಿ ಕೆಲಸಮಾಡಬೇಕೆಂಬುದು ಪ್ರತಿಯೊಬ್ಬ ಯುವಕನ ಮಹತ್ವಾಕಾಂಕ್ಷೆ.

ಅಲ್ಲಿ ಕೆಲಸ ಸಿಕ್ಕರೆ ಬಸವಳಿಯುವಷ್ಟು ಸಮಯ ದಿನದಲ್ಲಿ ದುಡಿಯಬಹುದು. ನದಿ ನೀರು ಹರಿಯುತ್ತಿದೆಯೆಂದರೆ ಅಂದು ಸ್ಟೀಲ್ ಮಿಲ್ ತಲೆಯೆತ್ತಿ ನಿಲ್ಲುತ್ತಿತ್ತು. ಅಂಥದ್ದೇ ಹರಿಯುವ ನದಿಯ ಅಂಚಿನಲ್ಲಿ ಸ್ಟೀಲ್ ಮಿಲ್‌ಗಳಿದ್ದ ಒಂದು ಊರು ಜೋ ಟೌನ್. ಈ ಸ್ಟೀಲ್ ಮಿಲ್‌ಗಳ ಒಂದಿಷ್ಟು ಸಾಹುಕಾರರು ಅಲ್ಲಿಯೇ ಊರಿಂದ ಮೇಲಿರುವ ಬೆಟ್ಟದಂದು ಮೋಜಿನ ಕ್ಲಬ್ ಕಟ್ಟಿಕೊಂಡಿದ್ದರು. ಆ ಕ್ಲಬ್ ಗೆ ತಾಗಿಯೇ ಒಂದು ತೊರೆ, ಅದಕ್ಕೊಂದು ಅಣೆಕಟ್ಟು. ಈ ಸಾಹು ಕಾರರು ಆ ಜಾಗ ಖರೀದಿ ಮಾಡಿದ ನಂತರ ಅಲ್ಲಿನ ಡ್ಯಾಮ್ ಕೂಡ ಅವರ ಸುಪರ್ದಿಗೇ ಬಂತು.

ಡ್ಯಾಮ್, ಅದರಿಂದಾದ ಮಾನವ ನಿರ್ಮಿತ ಒಂದು ಬೃಹತ್ – ಮೈಲುಗಳ ಲೆಕ್ಕದ ಅಗಲದ ಕೆರೆ. ಅಲ್ಲಿ ಮೀನು ಹಿಡಿಯುವುದು ಅಲ್ಲಿರುವ ಸಾಹುಕಾರರ ಮೋಜಿನ ಹವ್ಯಾಸ. ಬೇಕಾಬಿಟ್ಟಿ ಮೀನು ಹಿಡಿಯುವುದು, ಆಮೇಲೆ ಎಂದರಲ್ಲಿ ಮೀನಿನ ಬಲೆಗಳನ್ನು ಎಸೆಯುವುದು ಇತ್ಯಾದಿ. 1889ರ ಆ ಒಂದು ದಿನ ಪೆನ್ಸಿಲ್ವೇನಿಯಾದ ಗುಡ್ಡ ಗಾಡುಗಳಲ್ಲಿ ಎಲ್ಲಿಲ್ಲದ ಮಳೆ ಶುರುವಾಯಿತು. ಮಳೆ ಒಂದು ದಿನವಾದರೂ ನಿಲ್ಲಲೇ ಇಲ್ಲ. ಚಿಕ್ಕ ತೊರೆಗಳೆಲ್ಲ ನದಿಗಳಾಗಿ ಗುಡ್ಡವನ್ನು ಕೊರೆಯುತ್ತ ರಭಸವಾಗಿ ಈ ಡ್ಯಾಮ್‌ಗೆ ನುಗ್ಗತೊಡಗಿದವು. ನೋಡನೋಡುತ್ತ ಆ ಅಣೆಕಟ್ಟು ತುಂಬತೊಡಗಿತು. ಸಾಹುಕಾರರಿಗೆಲ್ಲ ಆಗ ಅಧೈರ್ಯವಾಯಿತು. ಡ್ಯಾಮ್‌ನಿಂದ ಇನ್ನು ನೀರು ಹೊರಕ್ಕೆ ಬಿಡಲಿಲ್ಲವೆಂದರೆ ಇಡೀ ಡ್ಯಾಮ್ ಮುರಿದುಬೀಳುವ ಸ್ಥಿತಿ.

ಆ ಡ್ಯಾಮ್‌ನ ಕೆಳಗಡೆ ಇರುವ ಊರಲ್ಲಿ ಸುಮಾರು ಇಪ್ಪತ್ತು ಸಾವಿರ ಜನ ವಸತಿ. ಆ ಜನಕ್ಕೆಲ್ಲ ಊರ ಹೊರಗೆ, ಮೇಲ್ಗಡೆ ಇಂಥದ್ದೊಂದು ಅಣೆಕಟ್ಟು ಇದೆ ಎನ್ನುವುದೇ ಮರೆತು ಹೋಗಿತ್ತು. ನೀರು ತುಂಬುತ್ತಲೇ ಹೋಯಿತು. ಡ್ಯಾಮ್‌ನ ಗೇಟ್ ಅನ್ನು ತೆರೆಯಲು ಹೊರಟರೆ ಅದಕ್ಕೆ ಮೀನು ಬಲೆಗಳಿಗೆ ಸಿಕ್ಕಿಕೊಂಡ ಕಸಕಡ್ಡಿಗಳು. ಎಷ್ಟೇ ಪ್ರಯತ್ನಪಟ್ಟರೂ ಗೇಟ್ ತೆರೆಯಲಾಗಲೇ ಇಲ್ಲ. ಅಲ್ಲಿನ ಸಾಹುಕಾರರೆಲ್ಲ ತಲೆ ಮೇಲೆ ಕೈ ಹೊತ್ತು ಕುಳಿತರು. ತಕ್ಷಣಕ್ಕೆ ಒಬ್ಬ ಸಾಹುಕಾರ ತನ್ನ ಕೆಲಸದವನನ್ನೊಬ್ಬನನ್ನು ಊರಿಗೆ ಕಳಿಸಿ ವಿಷಯ ತಿಳಿಸಲು ಹೇಳಿದ. ಆತ ಹೇಳಿದ ವಿಷಯವನ್ನು ಊರಿನ ಸರಕಾರಿ ಮುಖ್ಯಸ್ಥ ಕ್ಯಾರೆ ಅನ್ನಲಿಲ್ಲ. ಡ್ಯಾಮ್ ಕಂಠಪೂರ್ತಿಯಾಗಿ, ನಂತರ ತುಂಬಿ ಮುರಿದುಬಿತ್ತು.

ನೋಡನೋಡುತ್ತಲೇ ಮನೆ, ಸ್ಟೀಲ್ ಮಿಲ್‌ಗಳು, ಜನರು ಕೊಚ್ಚಿಹೋದರು. ಅಂದು ಸತ್ತವರು ಬರೋಬ್ಬರಿ ಎರಡು ಸಾವಿರದ ಇನ್ನೂರು ಮಂದಿ. ಅದೆಷ್ಟೋ ವಂಶವೇ ಅಂದು ನಿರ್ವಂಶವಾಯಿತು. ಕಥೆ ಒಂದೂವರೆ ಶತಮಾನದ ಹಿಂದಿನದೇ ಇರಬಹುದು. ಇಂದಿಗೆ ತೀರಾ ಅಪ್ರಸ್ತುತವೆನಿಸಬಹುದು. ಆ ಭಾವವನ್ನು ಹಾಗೆಯೇ ಒಂದಿಷ್ಟು ಹೊತ್ತು ಹಿಡಿದಿಟ್ಟುಕೊಳ್ಳಿ. ಅಲ್ಲಿಂದ ಒಂದು ಶತಮಾನ ಮುಂದಕ್ಕೆ ಭಾರತಕ್ಕೆ ಬರೋಣ. 1979, ಗುಜರಾತಿನ ಮಚ್ಚು ನದಿಗೆ ಮೊರ್ಬಿ ಯಲ್ಲಿ ಅಡ್ಡವಾಗಿ ಕಟ್ಟಿದ ಡ್ಯಾಮ್.

ಮತ್ತದೇ ಅತಿವೃಷ್ಟಿ ಸ್ಥಿತಿ. ಡ್ಯಾಮ್ ಮುರಿದುಬಿದ್ದು ಕೈಗಾರಿಕಾ ನಗರವಾದ ಮೊರ್ಬಿ ಇಪ್ಪತ್ತೇ ನಿಮಿಷದಲ್ಲಿ ಕೊಚ್ಚಿಹೋಯಿತು. ಸತ್ತವರ ಸಂಖ್ಯೆ ಸರಿಯಾಗಿ ಲೆಕ್ಕವೇ ಸಿಗಲಿಲ್ಲ. ಅಂದಾಜಿನ ಪ್ರಕಾರ ಇಪ್ಪತ್ತೈದು ಸಾವಿರ. ಸ್ಥಳ ಚೀನಾದ ಜ್ಹುಮಾಡಿಯನ್. ಅತಿವೃಷ್ಟಿ, ಡ್ಯಾಮ್ ಒಡೆದು ಅಲ್ಲಿ ಸತ್ತವರ ಸಂಖ್ಯೆ ಎರಡೂವರೆ ಲಕ್ಷ ಅಥವಾ ಅದಕ್ಕಿಂತ ಜಾಸ್ತಿ. ಇದೇ ವರ್ಷ ಉತ್ತರಾಖಾಂಡದ ಚಮೋಲಿಯಲ್ಲಿ ನಡೆದ ಘಟನೆ ಆಗಲೇ ಮರೆತುಬಿಟ್ಟಿದ್ದೇವೆ. ಋಷಿಗಂಗಾ ಡ್ಯಾಮ್ ಒಡೆದು ದೇಶಕ್ಕೆ ದೇಶವೇ ದಿಗಿಲಾಗಿತ್ತು. ಇದು ಇದೊಂದೆರಡು ಉದಾಹರಣೆ ಅಷ್ಟೆ. 2000 ದಿಂದ 2009ರ ನಡುವೆ, ಒಂದೇ ದಶಕದಲ್ಲಿ ಈ ರೀತಿ ಡ್ಯಾಮ್ ಒಡೆದು ಆದ ಅನಾಹುತಗಳೆಷ್ಟು ಗೊತ್ತೇ? 200ಕ್ಕಿಂತ ಜಾಸ್ತಿ. ಇದೆಲ್ಲ ಘಟನೆ, ಲೆಕ್ಕಾಚಾರ ಈಗ ನಿಮ್ಮ ಮುಂದೆ ಇಡಲು ಕಾರಣವಿದೆ.

ಡ್ಯಾಮ್ ಎಂದಾಕ್ಷಣ ಅದರ ಸುತ್ತಲಿನ ನಿರಾಶ್ರಿತರಾದವರ ಕಥೆಗಳು ಸಾಮಾನ್ಯವೆನಿಸುವಂತೆ ಕೇಳಿಬರುವುದಿದೆ. ಮನುಷ್ಯರು ನಿರಾಶ್ರಿತರಾಗಿ ಆಮೇಲೆ ಅವರ ಜಮೀನಿಗೆ ಒಂದು ಬರಡು ಬದಲಿ ಭೂಮಿಯನ್ನು ಪಡೆದು ಜೀವ ಬುಡಮೇಲಾಗಿಸಿಕೊಂಡು ಇನ್ನೆಲ್ಲಿಗೋ ವಕ್ಕಲೆದ್ದು ಹೋಗುವುದು ಇವೆಲ್ಲ ಗೊತ್ತಿರುವುದೇ. ಈ ಡ್ಯಾಮ್ ಕಟ್ಟಿದಾಗ ಹಿನ್ನೀರಿನ ಜಾಗ ನೀರು ತುಂಬಿ ಅಲ್ಲಿನ ಸಸ್ಯ, ಪ್ರಾಣಿ ವರ್ಗವೆಲ್ಲ ಸಾಯುವುದೂ ಗೊತ್ತಿರುವುದೇ. ಅದೆಲ್ಲದಕ್ಕಿಂತ ಭೀಕರವೆನಿಸುವುದು ಆ ನದಿಯ ನೀರಿನ ಮೀನುಗಳ ಕಥೆ. ಹೆಚ್ಚಿನ ಮೀನುಗಳು ಸಾಮಾನ್ಯವಾಗಿ ಒಂದೇ ಜಾಗದಲ್ಲಿ ಜೀವಮಾನವಿಡೀ ಬದುಕುವ ಜೀವಿಗಳಲ್ಲ. ಅವು ಕೂಡ ಥೇಟ್ ಹಕ್ಕಿಗಳಂತೆ ನೀರಿನ ಮೊಟ್ಟೆಯಿಡಲು, ಸಂತಾನೋತ್ಪತ್ತಿಗೆ ಇನ್ನೊಂದು ಕಡೆ ಹೋಗುತ್ತವೆ.

ನದಿಯ ನೂರು ಮೈಲಿಗಿಂತ ಜಾಸ್ತಿ ದೂರ ವಲಸೆ ಹೋಗುವ ಮೀನುಗಳು ಕೂಡ ಇವೆ. ಕಾಲಕ್ಕೆ ತಕ್ಕಂತೆ ಇರುವ ವಲಸೆ ಕೂಡ ಇದೆ. ಈ ಡ್ಯಾಮ್ ಕಟ್ಟಿಬಿಟ್ಟರೆ ಆ
ಪ್ರವಾಸಕ್ಕೆಲ್ಲ ರುಕಾವಟ್. ವಾಷಿಂಗ್ಟನ್ ರಾಜ್ಯದ ಎಲ್ವಾ  ನದಿಯ ಸಾಲ್ಮನ್ ಮೀನಿನ ಕಥೆಯನ್ನು ನಿಮಗೆ ಹೇಳಲೇಬೇಕು. ಅದೆಷ್ಟೋ ಸಾವಿರ ಅಥವಾ ಲಕ್ಷ ವರ್ಷದಿಂದ ಸಾಲ್ಮನ್ ಮೀನು ಈ ನೀರಿನಲ್ಲಿ ಇದೇ ರೀತಿ ವಲಸೆಮಾಡುತ್ತಿತ್ತು. ಚಳಿಯಲ್ಲಿ ದಕ್ಷಿಣಕ್ಕೆ ವಲಸೆ ಹೋಗುವ ಮೀನುಗಳು ಬೇಸಿಗೆ ಬಂತೆಂದರೆ ಉತ್ತರಕ್ಕೆ ನೂರುಗಟ್ಟಲೆ ಮೈಲಿ ಪ್ರವಾಸಕ್ಕೆ ಹೋರಾಡುತ್ತಿದ್ದವು.

ಇಂತಹ ಸ್ವಚ್ಛಂದ ಜೀವನವನ್ನು ನಡೆಸಿಕೊಂಡು ಬದುಕಿದ್ದ ಈ ಮೀನುಗಳ ದಾರಿಯಲ್ಲಿ ಒಂದು ವರ್ಷ ಇದ್ದಕ್ಕಿದ್ದಂತೆ ಒಂದು ಡ್ಯಾಮ್ ಅಡ್ಡಲಾಗಿ ಎದ್ದು ನಿಂತಿತು. ಇದರಿಂದ ಅವುಗಳ ವಲಸೆ ನಿಂತು ಹೋಯಿತು. ಕೋಟಿ ಸಂಖ್ಯೆಯಲ್ಲಿದ್ದ ಮೀನುಗಳು ವಿನಾಶದ ಅಂಚಿಗೆ ಬಂದು ನಿಂತವು. ಈ ಡ್ಯಾಮ್ ನಿರ್ಮಾಣವಾಗಿ ನೂರಿಪ್ಪತ್ತು ವರ್ಷ, ಐವತ್ತು ಅಥವಾ ಅದಕ್ಕಿಂತ ಜಾಸ್ತಿ ತಲೆಮಾರುಗಳೇ ಕಳೆದರೂ ಈ ವಲಸೆ ಅಭ್ಯಾಸವನ್ನು ಮೀನುಗಳು ಮರೆಯಲಿಲ್ಲ. ಇದು ಅವುಗಳ
ಜೀನ್‌ನ ಅಚ್ಚೊತ್ತ ವಿಷಯ. ಹಾಗಿರುವಾಗ ಆ ವಲಸೆಯ ಮಹತ್ವ ಅವುಗಳಿಗೆ ಎಷ್ಟು ಮುಖ್ಯವಿರಬಹುದು ಎಂದು ಗ್ರಹಿಸಿ. ಈ ಸಾಲ್ಮನ್ ಮೀನುಗಳು ರಾಶಿಯಾಗಿ ಬಂದು ಸೇರುತ್ತಿದ್ದವು.

ಡ್ಯಾಮ್‌ನ ಗೋಡೆಗಳಿಗೆ ನೆಗೆನೆಗೆದು ಹಾರಿ, ಕಾಂಕ್ರೀಟ್ ಗೋಡೆಗೆ ಬಡಿದು ಅರ್ಧಕ್ಕರ್ಧ ಮೀನುಗಳು ಜೀವ ಬಿಡುತ್ತಿದ್ದವು. ಅಲ್ಲಿನ ನೀರು ಕೆಂಪಾಗುವಷ್ಟು. ಅಲ್ಲಿ
ಸೇರುವ ಆ ಮೀನುಗಳನ್ನು ಹಿಡಿಯಲು ಹದ್ದು, ಕರಡಿ, ತೋಳ ಮತ್ತು ತೊಳಗಳಂತೆ ಮನುಷ್ಯ ಮುಗಿಬೀಳುತ್ತಿದ್ದ. ಕೊನೆಗೊಂದು ದಿನ ಈ ರೀತಿ ಅಲ್ಲಿ ಸೇರುವ ಮೀನಿನ ಸಂಖ್ಯೆ ನೂರಕ್ಕಿಳಿಯಿತು. ಅದು ಹೇಗೋ ಅಷ್ಟು ವರ್ಷ ಈ ಸಂತತಿ ಅಲ್ಲಿ ಬದುಕುಳಿದಿದ್ದೇ ಒಂದು ಸೋಜಿಗ. ಆ ವೇಳೆ ಎಚ್ಚೆತ್ತುಕೊಂಡ ಅಲ್ಲಿನ ಸರಕಾರ ಮೀನನ್ನು ದೊಡ್ಡ ದೊಡ್ಡ ಟ್ಯಾಂಕ್‌ನಲ್ಲಿ ತುಂಬಿಸಿ ಆಚೆಯಿಂದ ಈಚೆಗೆ ಸಾಗಿಸುವ ವ್ಯವಸ್ಥೆ ಮಾಡಿತು. ಕೊನೆಗೆ ೨೦೧೧ರಲ್ಲಿ ಈ ಅಣೆಕಟ್ಟನ್ನು ಕೆಡವಲಾಯಿತು. ಈಗ ಈ ವಲಸೆ ಮತ್ತೆ ಶತಮಾನದ ಹಿಂದಿನ ವೈಭವಕ್ಕೆ ಮರಳಿದೆ. ಮತ್ತೆ ಸಾಲ್ಮನ್ ಮೀನಿನ ಸಂಖ್ಯೆ ವರ್ಷಕಳೆದಂತೆ ಹೆಚ್ಚುತ್ತಿದೆ.

ಇದು ಒಂದು ಅಣೆಕಟ್ಟಿನ – ಒಂದು ಮೀನಿನ ಕಥೆ. ಸದ್ಯ ಅಮೆರಿಕದ 15600 ಚಿಕ್ಕ, ಮಧ್ಯಮ ಮತ್ತು ಬೃಹತ್ ಡ್ಯಾಮ್‌ಗಳಿವೆ. ಇಂದು ಭಾರತದಲ್ಲಿ 5200 ಹದಿನೈದು ಮೀಟರಿಗಿಂತ ದೊಡ್ಡ ಡ್ಯಾಮ್‌ಗಳಿವೆ. ಪ್ರಪಂಚಾದ್ಯಂತ 60000 ಡ್ಯಾಮ್‌ಗಳಿವೆ. ಡ್ಯಾಮ್ ಇಲ್ಲದ ನದಿಯೇ ಇಲ್ಲ ಎಂದರೂ ತಪ್ಪಲ್ಲ. ನೀವು ಈಗ ಈ ಲೇಖನ ಓದುತ್ತಿರುವ ಸಂದರ್ಭದಲ್ಲಿಯೇ ಜಗತ್ತಿನಲ್ಲಿ 3700 ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿವೆ. ಅಲ್ಲ ಈ ಸಾಲ್ಮನ್ ಮೀನಿನಂತೆ ಅದೆಷ್ಟೋ ಜೀವಿ ಗಳ, ಜಲಚರಗಳ ಜೀವನಗಳು ಬುಡಮೇಲಾಗಿವೆ.

ನದಿಯ ಹರಿವು ಏಕಮುಖವಾದರೂ ಅಲ್ಲಿನ ಜೀವದ ಹರಿವಿನದು ಎರಡೂ ಮುಖ. ಫಲವತ್ತತೆಯನ್ನು ನದಿಗಳು ಹೊತ್ತು ಕೆಳಮುಖವಾಗಿ ಹರಿದರೆ ಮೀನುಗಳು,
ಜಲಚರಗಳು ಮೇಲ್ಮುಖವಾಗಿ ಚಲಿಸಿ ಕೆಳಗಿನಿಂದ ಮೇಲಕ್ಕೆ ಫಲವತ್ತತೆಯನ್ನು ಸಾಗಿಸುತ್ತವೆ. ಇದು ಅಲ್ಲಿನ ಕೀಟಗಳಿಗೆ, ಉಳಿದ ಜೀವಗಳಿಗೆ ಆಹಾರವಾಗಿ ಅಲ್ಲಿ ಮರಗಿಡಗಳ ಜೀವನಕ್ಕೂ ಸೂಕ್ಷ್ಮವಾಗಿ ಹೊಂದಿಕೊಂಡಿರುತ್ತವೆ. ಇದೆಲ್ಲ ಸೂಕ್ಷ್ಮ ಕೊಂಡಿಯೊಂದು ಮುರಿಯಲು ಒಂದು ಡ್ಯಾಮ್ ಸಾಕು. ಯಾವುದೇ ನಾಗರೀಕತೆ ಯನ್ನೇ ತೆಗೆದುಕೊಳ್ಳಿ, ನದಿಯ ದಡದಂಚಿನಲ್ಲಿ ಬೆಳೆಯಿತು ಎನ್ನುವುದೇ ಅಲ್ಲಿನ ಕಥೆ. ಅದರಂತೆಯೇ ಜೀವಜಗತ್ತಿನ ಎಲ್ಲವೂ ಮನುಷ್ಯನ ಜತೆಜತೆ ಬೆಳೆದದ್ದು ನದಿಯ ಕಾರಣದಿಂದಲೇ ಮತ್ತು ಆಸುಪಾಸಿನ. ಕಳೆದ ಇನ್ನೂರು ವರ್ಷದಲ್ಲಿ ಎಲ್ಲಿಲ್ಲದ ಪ್ರಮಾಣದಲ್ಲಿ ಡ್ಯಾಮ್ ಕಟ್ಟಿ ಈ ಸೂಕ್ಷ್ಮತೆಗೆ ಹೊಡೆತ ಬಿದ್ದಿದೆ ಎಂದರೆ ಈಗ ನಿಮಗೆ ಮನದಟ್ಟಾದೀತು. ಒಂದು ಡ್ಯಾಮ್ ನಿಂದ ಆಗುವ ಅನಾಹುತಗಳ ಬಗ್ಗೆ ಇಷ್ಟು ಸಾಕು.

ಡ್ಯಾಮ್‌ನಿಂದ ಆಗುವ ಮನುಷ್ಯ ಲಾಭಗಳ ಬಗ್ಗೆ, ಅದರಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಸಂಪೂರ್ಣ ಅರಿವಿದೆ. ಆ ಮಟ್ಟಿಗೆ ಎರಡನೇ ಮಾತಿಲ್ಲ. ಈಗ ಈ ಎಲ್ಲ  ಡ್ಯಾಮ್ ಕಟ್ಟಿ ಆಗಿದೆ. ಇನ್ನೊಂದು ಹದಿನಾಲ್ಕು ಸಾವಿರ ಚಿಕ್ಕ ಡ್ಯಾಮ್ ಗಳನ್ನು ಕಟ್ಟಲು ಕರ್ನಾಟಕದ ಕೃಷಿ ಮಂತ್ರಿ ಕೇಂದ್ರಕ್ಕೆ ಬೇಡಿಕೆಯಿಡುವ ಸುದ್ದಿ ನಿನ್ನೆ ಅಷ್ಟೇ ಓದಿದ್ದೇನೆ. ಅದು ಕೂಡ ಕೃಷಿಗೆ, ಕೈಗಾರಿಕೆಗೆ, ಜನಸಂಖ್ಯೆ ಹೆಚ್ಚಳದಿಂದ ಉಂಟಾಗಿರುವ ಆಹಾರ ಮತ್ತು ಇತರ ಬೇಕುಗಳಿಗೆ ಅವಶ್ಯಕ. ಒಪ್ಪಲೇ ಬೇಕು.
ಮನುಷ್ಯ ತನ್ನ ಬೇಕುಗಳಿಗಾಗಿ ಪರಿಸರವನ್ನು, ಜಲಚರ ಮತ್ತು ಉಳಿದ ಜೀವಜಗತ್ತನ್ನು ಎರಡನೇ ಸ್ಥಳದಲ್ಲಿಡಬಾರದು ಎಂದು ಕೂಡ ಹೇಳುತ್ತಿಲ್ಲ. ಆದರೆ ಅದೆಲ್ಲ ದರ ನಡುವೆ ಈ ಹತ್ತಾರು ಅಡ್ಡಪರಿಣಾಮಗಳ ಅಂದಾಜು ಕೂಡ ಇರಬೇಕು.

ಹಾಗಂತ ಡ್ಯಾಮ್‌ಗಳನ್ನು ಮನುಷ್ಯ ನಿರ್ಮಿಸಲು ಶುರುಮಾಡಿ ಇನ್ನೂರೇ ವರ್ಷವಾಗಿದೆ ಎಂದೇನಲ್ಲ. ಮೆಸಪೊಟೇಮಿಯಾ ಕಾಲದಲ್ಲಿಯೇ ಅಣೆಕಟ್ಟು ನಿರ್ಮಿಸಿದ
ಇತಿಹಾಸವಿದೆ. ಜೋರ್ಡನ್‌ನ ಜಾವಾ ಡ್ಯಾಮ್ ಕ್ರಿಸ್ತಪೂರ್ವ 3000 ದಲ್ಲಿ ಎಂದರೆ ಇವತ್ತಿಗೆ ಐದುಸಾವಿರ ವರ್ಷಕ್ಕಿಂತ ಮೊದಲು ನಿರ್ಮಿಸಲಾದ ಬಗ್ಗೆ ಕುರುಹು, ಪುರಾವೆ ಸಿಕ್ಕಿದೆ. ಅವೆಲ್ಲ ಇತಿಹಾಸ. ಆದರೆ ಯತೇಚ್ಛ – ಇಷ್ಟು ಪ್ರಮಾಣದ ಡ್ಯಾಮ್‌ಗಳು ನಿರ್ಮಾಣವಾದದ್ದು ಮಾತ್ರ ಕಳೆದ ಎರಡು ಮೂರು ಶತಮಾನದಲ್ಲಿ. ಯಾವುದೇ ಡ್ಯಾಮ್ ತೆಗೆದುಕೊಳ್ಳಿ,

ಅದನ್ನು ಒಂದು ಉದ್ದೇಶ ಇಟ್ಟುಕೊಂಡು ನಿರ್ಮಿಸಲಾಗುತ್ತದೆ ಮತ್ತು ಅದೇ ಸಮಯದಲ್ಲಿ ಅದಕ್ಕೊಂದು ನಿಗದಿತ ಆಯಸ್ಸು ಕೂಡ ನಿರ್ಧರಿತವಾಗಿರುತ್ತದೆ. ಯಾವ ಡ್ಯಾಮ್ ಕೂಡ ಒಂದು ಶಾಶ್ವತ, ಕೋಟಿ ವರ್ಷ ಬದುಕಬಲ್ಲ ರಚನೆಗಳಲ್ಲ. 1930 ರಿಂದ 1970 ರ ಅವಧಿಯಲ್ಲಿ ಅಂದಿನ ತಂತ್ರಜ್ಞಾನವನ್ನು ಬಳಸಿ ಕಟ್ಟಿದ ಎಲ್ಲ ಡ್ಯಾಮ್‌ಗಳ ಆಯಸ್ಸು ನೂರು ವರ್ಷ. ಹಾಗೂ ಹೀಗೂ – ತೇಪೆ ಹಚ್ಚಿ ನೋಡಿಕೊಂಡರೆ ಅಬ್ಬಬ್ಬಾ ಎಂದರೆ ನೂರಿಪ್ಪತ್ತರಿಂದ ನೂರಾಮೂವತ್ತು ವರ್ಷ. ಈ ಆಯಸ್ಸು ಹತ್ತಾರು ಕಾರಣಗಳಿಂದ ಐವತ್ತಕ್ಕೂ ಇಳಿಯಬಹುದು. ಅದಾದ ಮೇಲೆ ಅವನ್ನು ಕೆಡವಬೇಕಾಗುತ್ತದೆ. ಇಲ್ಲದಿದ್ದರೆ ಅಂತಹ ಡ್ಯಾಮ್ ಒಂದು ಜೀವಂತ, ಟಿಕ್ ಟಿಕ್ ಗೆಡುವ ಟೈಮ್ ಬಾಂಬ್.

ಮೇಲ್ನೋಟಕ್ಕೆ ಈಗ ನಿಂತಿರುವ ಎಲ್ಲ ಡ್ಯಾಮ್ ಗಳೂ ಒಂದು ಎಂಜಿನಿಯರಿಂಗ್ ವಂಡರ್, ಎಂದಿಗೂ ಅಲುಗಾಡದ ಒಂದು ಬೃಹತ್ ರಚನೆಯಂತೆ ಕಂಡರೂ ಅದರ ದೌರ್ಬಲ್ಯ ಕಣ್ಣೋಟದಿಂದ ಅಳೆಯಲು ಸಾಧ್ಯವಾಗುವುದಿಲ್ಲ. ಅಮೆರಿಕದಿಂದ ಹಿಡಿದು ಭಾರತ, ಚೀನಾ ಇಲ್ಲೆಲ್ಲಾ ಒಡೆದ ಡ್ಯಾಮ್‌ಗಳು ಯಾವತ್ತೂ ಯಾರಿಗೂ ದುರ್ಬಲದಂತೆ ಕಾಣಿಸಿಲ್ಲ. ಅಥವಾ ಕಾಣಿಸಿದರೂ ಅದನ್ನು ನಾನಾ ಕಾರಣಗಳಿಂದ ಮುಚ್ಚಿಟ್ಟು ಅನಾಹುತಗಳಾದದ್ದು. ಎಲ್ಲ ಸರಕಾರಗಳಿಗೂ ಈ ಡ್ಯಾಮ್ ಒಂದು ಪುಕು ಪುಕು ವಿಚಾರವೇ. ಹೇಗೋ ಇದೆ, ಹಾಗೆಯೇ ಇದ್ದುಬಿಡಲಿ ಎನ್ನುವ ತಾತ್ಸಾರ.

ಆದರೆ ಅಮೆರಿಕ ಮತ್ತು ಕೆಲವು ದೇಶಗಳು ಈ ಅಪಾಯವನ್ನು ಅರಿತು ಈಗಾಗಲೇ ಕಾರ್ಯೋನ್ಮುಖವಾಗಿವೆ. ಕಳೆದ ಒಂದು ಶತಮಾನದಲ್ಲಿ ಈ ರೀತಿ ವಯೋ ವೃದ್ಧ ೮೦೦ ಡ್ಯಾಮ್‌ಗಳನ್ನು ನಾಶಮಾಡಲಾಗಿದೆ. ಬಹುತೇಕ ಮುಂದುವರಿದ ದೇಶಗಳೆಲ್ಲ ಈ ಕೆಲಸವನ್ನು ಎಲ್ಲಿಲ್ಲದ ಗಡಿಬಿಡಿಯಲ್ಲಿ ಇಂದು ಮಾಡುತ್ತಿವೆ.
ಹೀಗೆ ಅಣೆಕಟ್ಟನ್ನು ನಾಶಮಾಡಿದ ನಂತರ, ಅಲ್ಲ ಮತ್ತೆ ಜೀವ ಜಗತ್ತು ನಿಧಾನ ಗತಿಯಲ್ಲಿ ಚಿಗುರಿಕೊಂಡಿವೆ. ನದಿ ಭೂಮಿಯ ಜೀವ ಹರಿವಿನ ನರಗಳಂತೆ. ಅಣೆಕಟ್ಟುಗಳು ಈ ಭೂಮಿಯ ಹೃದಯದ ಬ್ಲಾಕ್‌ಗಳಂತೆ. ಹಾಗಂತ ಈ ಬ್ಲಾಕ್ ಅನ್ನು ತೆರೆಯುವುದು ಕೂಡ ಅಷ್ಟು ಸುಲಭದ ಕಥೆಯಲ್ಲ. ಡ್ಯಾಮ್ ಅನ್ನು ತೆರವು ಗೊಳಿಸಿದಾಗ ಅಲ್ಲಿನ್ನೊಂದಿಷ್ಟು, ಮುನ್ನೀರಿನ ಪ್ರದೇಶದಲ್ಲಿ ನಿರಾಶ್ರಿತರ ಸಮಸ್ಯೆ ಎದುರಾಗುತ್ತದೆ. ಅಲ್ಲದೆ ಡ್ಯಾಮ್ ನಾಶಮಾಡುವಾಗ ಉಂಟಾಗುವ ಸಿಮೆಂಟ್ ಮತ್ತು ಕಲ್ಲಿನ ತ್ಯಾಜ್ಯವನ್ನು ಹಾಗೆಯೇ ಎಸೆದು ಬಿಡುವಂತಿಲ್ಲ. ಅದನ್ನು ಸಾಗಿಸಿ ಅದಕ್ಕೊಂದು ಗತಿಗಾಣಿಸುವುದು ಕೂಡ ಅಷ್ಟೇ ದೊಡ್ಡ ತಲೆಬಿಸಿಯ ಕೆಲಸ.

ಅಲ್ಲದೇ ನೂರು ವರ್ಷದ ಡ್ಯಾಮ್‌ನಿಂದಾಗಿ ಹಿನ್ನೀರಿನ ಮತ್ತು ಮುನ್ನೀರಿನ ಜೀವ ಜಗತ್ತು ಶಾಶ್ವತವೆನ್ನುವಂತೆ ಬದಲಾವಣೆಯನ್ನು ಆಗತಾನೆ ಒಪ್ಪಿಕೊಂಡಿರು ತ್ತವೆ. ಅವೆಲ್ಲ ಒಂದು ಡ್ಯಾಮ್‌ನ ತೆರವಿನಿಂದ ಮತ್ತೊಮ್ಮೆ ಆಘಾತಕ್ಕೊಳಗಾಗುತ್ತವೆ. ಹೀಗೆ ಮಾಡಿದರೂ ಸಮಸ್ಯೆಯೇ, ಹಾಗೆ ಮಾಡಿದರೂ ಸಮಸ್ಯೆ ತಪ್ಪಿದ್ದಲ್ಲ. ವಾತಾವರಣದಲ್ಲಿನ ಮಾನವ ಕೃತಕ ವೈಪರೀತ್ಯ, ಬದಲಾವಣೆಯಿಂದ ಈಗಾಗಲೇ ನದಿಯ ಜಲಚರಗಳ, ಪರಿಸರ ವ್ಯವಸ್ಥೆ ಬುಡಮೇಲಾಗುತ್ತಲಿದೆ. ಇದಕ್ಕೆ ಇನ್ನಷ್ಟು ಇಂಬುಕೊಡುವುದು ಅಣೆಕಟ್ಟುಗಳು.

ಜಪಾನ್ ಮತ್ತು ಬ್ರಿಟನ್ ಇಂದು ಅತ್ಯಂತ ಹಳೆಯ ಡ್ಯಾಮ್‌ಗಳನ್ನು ಹೊಂದಿದ ದೇಶಗಳು. ಬ್ರಿಟನ್ನಿನ ಅಣೆಕಟ್ಟಿನ ಸರಾಸರಿ ವಯಸ್ಸು 106 ವರ್ಷ. ಜಪಾನಿ ನದು ೧೧೧ ವರ್ಷ. ಅಮೆರಿಕದ ಅಣೆಕಟ್ಟುಗಳ ಸರಾಸರಿ ವಯಸ್ಸು 65. ಅದಾದ ನಂತರದ್ದು ಭಾರತ ಮತ್ತು ಚೀನಾ. ಭಾರತದಲ್ಲಂತೂ ಬಹುತೇಕ ಅಣೆಕಟ್ಟು ಗಳು ನಿರ್ಮಾಣವಾದದ್ದು ಇಪ್ಪತ್ತನೆಯ ಶತಮಾನದ ಮಧ್ಯದಲ್ಲಿ. ಹಾಗಾಗಿ ನಾವು ಕೂಡ ಬಹಳ ಹಿಂದೆ ಉಳಿದಿಲ್ಲ. 2050ರ ಸಮಯದಲ್ಲಿ ನಮ್ಮಲ್ಲಿನ ಹೆಚ್ಚಿನ ಅಣೆಕಟ್ಟುಗಳು ವರ್ಷ ಲೆಕ್ಕ ಹಾಕಲು ಶುರುಮಾಡಿರುತ್ತವೆ. ಬಾಕಿ ಕಥೆಯೆಲ್ಲ ಬಿಡಿ, ನಮ್ಮ ಕರ್ನಾಟಕದಲ್ಲಿ ಇರುವ ಅಣೆಕಟ್ಟುಗಳ ವಯಸ್ಸನ್ನೇ ನೋಡುವು ದಾದರೆ, ಕೆ.ಆರ್.ಎಸ್‌ಗೆ ತೊಂಭತ್ತು ದಾಟಿದೆ.

ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ವಯಸ್ಸು 68. ಲಿಂಗನಮಕ್ಕಿ ಮತ್ತು ಭದ್ರಾ ಡ್ಯಾಮ್‌ಗೆ ಕೂಡ ಅರವತ್ತರ ಆಸುಪಾಸು. ಹಿರಿಯೂರಿನ ವಾಣಿ ವಿಲಾಸ ಸಾಗರ ಅಣೆಕಟ್ಟಿಗಂತೂ 114 ವರ್ಷ! ಇತ್ತೀಚಿಗೆ ಕೆ.ಆರ್.ಎಸ್ ಡ್ಯಾಮ್‌ನಲ್ಲಿನ ಬಿರುಕು ಎಂದು ಒಂದಿಷ್ಟು ಸುದ್ದಿಯಾಗಿತ್ತು. ಕಾರಣ ಏನೇ ಇರಬಹುದು. ಆದರೆ ಇಲ್ಲಿ ಒಂದು ಬಿರುಕೇ ಇಷ್ಟು ಸುದ್ದಿ ಮಾಡುವ ಸ್ಥಿತಿಯಲ್ಲಿರುವಾಗ ಒಂದೊಮ್ಮೆ ಅಲ್ಲಿನ ಎಂಜಿನಿಯರ್‌ಗಳೇ ಡ್ಯಾಮ್ ಕೊನೆಯ ಹಂತ ತಲುಪಿದೆ ಎಂದು ಮುಂದಿನ ದಿನ ಹೇಳಿದರೂ ಯಾರೂ ಅದರ ನಾಶದ ಬಗ್ಗೆ ಚಕಾರ ಎತ್ತಲಿಕ್ಕಿಲ್ಲ.

ಆ ಡ್ಯಾಮ್ ಯಾವತ್ತಾದರೂ ಕೊನೆಯ ಹಂತ ತಲುಪಿದಾಗ ಕೂಡ, ಪ್ರಾಕ್ಟಿಕಲ್ ಆಗಿ ಕೆಡವಲೇ ಬೇಕಾದ ಸ್ಥಿತಿ ಬಂದಾಗ ಕೂಡ ಅಂಥದ್ದೊಂದು ಸಾಹಸಕ್ಕೆ ಬಿಡಿ, ಸೊತ್ತಲೂ ಸಾಧ್ಯವಾಗದ ಸ್ಥಿತಿ ನಮ್ಮಲ್ಲಿದೆ. ಇದು ಮಂಡ್ಯದ ಕಥೆಯಷ್ಟೇ ಅಲ್ಲ. ಎಲ್ಲಿ ಪ್ರಜಾಪ್ರಭುತ್ವವಿದೆಯೋ ಅಲ್ಲ ಈ ಡ್ಯಾಮ್ ಗಳದ್ದು ತಲೆನೋವು ಇದ್ದೇ ಇದೆ, ಇಲ್ಲದಿದ್ದರೆ ಮುಂದೊಂದು ದಿನ ಕಟ್ಟಿಟ್ಟದ್ದೇ. ಅಣೆಕಟ್ಟುಗಳು ಶಾಶ್ವತವೆನ್ನುವ ರೀತಿ ಬದುಕುವುದು, ಬದುಕು ಕಟ್ಟಿಕೊಳ್ಳುವುದು, ಅವಲಂಬಿಸುವುದು ಸರಿ ಆದರೆ ಅದಕ್ಕೊಂದು ಅಂತ್ಯಕಾಲ ಬರುವುದರೊಳಗೆ ಅಂದು ಪರಿಹಾರ ಸಿದ್ಧವಾಗಿರಬೇಕು – ಅದಕ್ಕೆ ಅಣಿಯಾಗಬೇಕು.

ನಿಮಗೆ ಹಳೆಯ ಬೃಹತ್ ಅಣೆಕಟ್ಟುಗಳನ್ನು ನೋಡಿದಾಗ ಎಂಜಿನಿಯರಿಂಗ್ ಮಾರ್ವೆಲ್ ಎಂದೆನಿಸಬಹುದು – ಅದರ ಅತಿವಿಸ್ತಾರ, ಆಳ, ಎತ್ತರ, ಅಗಲ ಇವೆಲ್ಲ
ಭವ್ಯವೆನಿಸಬಹುದು. ಚಿಕ್ಕಪುಟ್ಟ ಅಣೆಕಟ್ಟುಗಳಲ್ಲಿ ರಭಸದಿಂದ ಹರಿಯುವ ನೀರು ನಯನ ಮನೋಹರವೆನಿಸಬಹುದು. ಆದರೆ ಇದೆಲ್ಲ ತಿಳಿದ ನಂತರ ನನಗೆ ಎಲ್ಲ ಅಣೆಕಟ್ಟುಗಳೂ ಮೊದಲು ಹೇಳಿದಂತೆ ಭೂಮಿಯ ಹಾರ್ಟ್ ಬ್ಲಾಕ್‌ನಂತೆ ಕಾಣಿಸುತ್ತವೆ. ಇನ್ನು ಎಂಭತ್ತು, ತೊಂಭತ್ತು, ನೂರು ವರ್ಷ ದಾಟಿದ ಅಣೆಕಟ್ಟುಗಳು ದೀರ್ಘಕಾಲ ಬಾಳಿ, ಎಲ್ಲ ವೈಭವವನ್ನು ಕಂಡು, ತನ್ನ ಬದುಕಿನ ಉದ್ದೇಶ ಮುಗಿಸಿ ಶರಶಯ್ಯೆಯಲ್ಲಿ ಮಲಗಿ, ಒಂದು ಅಂತ್ಯವನ್ನು ನೋಡಿ ಅಂತ್ಯ ಕಾಣುವ ಹಂಬಲದ ಗಾಂಗೇಯ (ಗಂಗೆ – ನದಿಗೆ ಜನಿಸಿದವ) – ಭೀಷ್ಮ ನಂತೆ ಕಾಣಿಸುತ್ತದೆ.