Friday, 20th September 2024

ಎನ್‌ಇಪಿ ಜಾರಿಗೆ ಪೂರ್ವಸಿದ್ಧತೆ ಅಗತ್ಯ

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ನಾರಾಯಣ ಅವರು ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ಈ ವರ್ಷದಿಂದಲೇ ಪ್ರಾರಂಭಿಸಲಾಗುವುದು ಎಂದು ಗುರುವಾರ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಎನ್‌ಇಪಿ ನೀತಿ ಪ್ರಕಾರ ಪದವಿ ಕಾಲೇಜುಗಳಲ್ಲಿ ಈಗಿರುವ ಸಾಮಾನ್ಯ ಮೂರು ವಿಷಯಗಳನ್ನು ಅಂದರೆ ಉದಾ ಹರಣೆಗೆ ಪಿಸಿಎಂ ಅಥವಾ ಪಿಇಎಂ ಅಂತಹ ಸಂಯೋಜನೆಗಳ ಬದಲಿಗೆ ಒಂದೇ ಜ್ಞಾನಶಾಖೆಯ ಎರಡು ಮುಖ್ಯ ವಿಷಯಗಳ ಜತೆ ಬೇರೊಂದು ಜ್ಞಾನಶಾಖೆಯ ವಿಷಯವನ್ನು (ಎಲೆಕ್ಟಿವ್) ಆಯ್ಕೆ ಮಾಡಿ ಕೊಳ್ಳಬಹುದು. ಪದವಿ ಮುಗಿಸುವ ಮುನ್ನ ತಾವು ಆರಿಸಿಕೊಂಡ ವಿಷಯಗಳಲ್ಲದೆ ಕೆಲವು ಕೌಶಲಗಳನ್ನು ಕೂಡ ಕಲಿಯುವ ಸಾಧ್ಯತೆಯ ಪ್ರಸ್ತಾವ ಈ ಶಿಕ್ಷಣ ನೀತಿಯಲ್ಲಿದೆ. ಜತೆಗೆ ಸಂಶೋಧನೆಯ ಹಾದಿಯನ್ನು ಹಿಡಿಯ ಬಯಸುವವರಿಗೆ ನಾಲ್ಕು ವರ್ಷಗಳ ಆನರ್ಸ್ ಕೋರ್ಸ್‌ಗಳನ್ನು ಆರಂಭಿಸುವ ಮಹತ್ವದ ಹೆಜ್ಜೆಯನ್ನೂ ಇದು ಒಳಗೊಂಡಿದೆ.

ಎನ್‌ಇಪಿ ನೀತಿಯಲ್ಲಿ ಕ್ರಿಯಾತ್ಮಕ ಕಲಿಕೆಯನ್ನು ಒದಗಿಸಬೇಕೆಂಬ ಉದ್ದೇಶವಿರುವುದು ಸ್ವಾಗತಾರ್ಹ. ಆದರೆ ಈಗಿರುವ ಕಾಲೇಜುಗಳ ಪರಿಸ್ಥಿತಿಯಲ್ಲಿ ಇದು ಸಾಧ್ಯವಾಗುವುದೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಬಹುತೇಕ ಸರಕಾರಿ ಕಾಲೇಜುಗಳ ವಿeನ ಪ್ರಯೋಗಾಲಯಗಳಲ್ಲಿ ಸಮರ್ಪಕ ಪರಿಕರಗಳಿಲ್ಲದೆ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅಡ್ಡಿಯಾಗಿದೆ. ಹೊಸ ಶಿಕ್ಷಣ ನೀತಿಯು ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶ ಹೊಂದಿರುವುದರಿಂದ, ಪ್ರಯೋಗಾಲಯಗಳನ್ನು ಉನ್ನತೀಕರಿಸಿದಾಗ ಮಾತ್ರ ಈ ನೀತಿಯ ಆಶಯ ಈಡೇರಲಿದೆ.

ಜತೆಗೆ ಶಿಕ್ಷಕರನ್ನೂ, ವಿದ್ಯಾಸಂಸ್ಥೆಗಳನ್ನೂ ಈ ದಿಸೆಯಲ್ಲಿ ಸಜ್ಜುಗೊಳಿಸಬೇಕಿದೆ.ವಿವಿಧ ಹಂತಗಳಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸಂವಾದಗಳನ್ನು ನಡೆಸಿ, ಅವರ ಸಮಸ್ಯೆಗಳನ್ನು ಪರಿಗಣಿಸಿ ನಡೆಸಬೇಕಾದ ತಯಾರಿಗೆ ಕನಿಷ್ಠ ಒಂದು ವರ್ಷವಾದರೂ ಬೇಕು. ಹೀಗಾಗಿ, ಹೊಸ ನೀತಿಯನ್ನು ಅನುಷ್ಠಾನ ಗೊಳಿಸುವ ಮುನ್ನ ಒಂದು ಅಥವಾ ಎರಡು ವರ್ಷಗಳ ಪರಿಪೂರ್ಣ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಎನ್‌ಇಪಿ ಜಾರಿಗೊಳಿಸಿದರೆ ಹೊಸ ನೀತಿಯ ಅನುಷ್ಠಾನ ಸಫಲವಾಗು ತ್ತದೆ. ಇಲ್ಲವಾದಲ್ಲಿ ಮೂರರೊಳಗೆ ಮತ್ತೊಂದು ಎಂಬಂತೆ ಮಹತ್ವದ ಎನ್‌ಇಪಿ ನೀತಿಯೂ ಆಗುತ್ತದೆ.