Friday, 20th September 2024

ಹತಾಶೆಯ ಪರಮಾವಧಿ- ಕಪಾಲ ರಂಧ್ರನ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ಮನುಷ್ಯನು ಹತಾಶನಾದಾಗ ಏನೆಲ್ಲ ದಿಟ್ಟ ಪ್ರಯೋಗಗಳನ್ನು ಅನಿವಾರ್ಯವಾಗಿ ನಡೆಸುತ್ತಾನೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಕಪಾಲ ರಂಧ್ರನ ಅಥವಾ ಟ್ರಿಪಾನಿಂಗ್. ಕಪಾಲ ರಂಧ್ರನವನ್ನು ಟ್ರಿಫೈನೇಶನ್, ಟ್ರಿಫೈನಿಂಗ್, ಬರ್ ಹೋಲ್ ಇತ್ಯಾದಿ ಹೆಸರುಗಳಲ್ಲಿ ಗುರುತಿಸಿರುವುದುಂಟು.

ಟ್ರೆಪೆನ್ ಎನ್ನುವ ಮಧ್ಯ ಯುಗದ ಫ್ರೆಂಚ್ ಶಬ್ದವು ಲ್ಯಾಟಿನ್ನಿಗೆ ಬಂದು ಟ್ರೆಪನಮ್ ಎಂಬ ರೂಪವನ್ನು ಧರಿಸಿ, ಗ್ರೀಕ್ ಭಾಷೆಯಲ್ಲಿ ಟ್ರೈಪನಾನ್ ಎಂದು
ಪರಿವರ್ತನೆಯಾಗಿದೆ. ಹೆಸರೇ ಸೂಚಿಸುವ ಹಾಗೆ ಜೀವಂತ ಮನುಷ್ಯರ ಕಪಾಲದಲ್ಲಿ ರಂಧ್ರವನ್ನು ಕೊರೆಯುವರು. ಕಪಾಲರಂಧ್ರನ, ಬಹುಶಃ ನಮಗೆ ಸಾಧಾರಣವಾಗಿ ದೊರೆತಿರುವ ನಮ್ಮ ಪೂರ್ವಜರ ಪ್ರಪ್ರಥಮ ಶಸ್ತ್ರಚಿಕಿತ್ಸೆ. ಕಪಾಲ ರಂಧ್ರನವನ್ನು ನಮ್ಮ ಪೂರ್ವಜರು ಏಕೆ ಮಾಡಿದರು ಎನ್ನುವುದಕ್ಕೆ ನಿಖರ ಪುರಾವೆಯು ದೊರೆತಿಲ್ಲ.

ಆದರೆ ಏಕೆ ಮಾಡುತ್ತಿದ್ದಿರಬಹುದು ಎನ್ನುವುದಕ್ಕೆ ತಾರ್ಕಿಕ ವಿವರಣೆಗಳಂತೂ ದೊರೆತಿವೆ. ಬಹುಶಃ ಮೂರು ಕಾರಣಗಳಿದ್ದಿರಬಹುದು. ಮೊದಲನೆಯದು ತಲೆಗೆ ಬೀಳುವ ಪೆಟ್ಟು. ಈ ಪೆಟ್ಟು ಬೇಟೆಯಾಡುವಾಗ ಕೆಳಕ್ಕೆ ಬಿದ್ದು ಆಗಿರಬಹುದು. ಪ್ರಾಣಿಗಳೊಡನೆ ನಡೆಸುವ ಹೋರಾಟದಲ್ಲಿ ಆಗಿರಬಹುದು. ಶತ್ರುಗಳ ದೊಣ್ಣೆಯ ಹೊಡೆತಕ್ಕೆ ಇಲ್ಲವೇ ಭರ್ಜಿಯ ತಿವಿತಕ್ಕೆ ಕಪಾಲವು ಬಿರುಕು ಬಿಟ್ಟಿರಬಹುದು. ಹೀಗಾದಾಗ ಕಪಾಲದ ಒಳಗೆ ರಕ್ತಸ್ರಾವ ವಾಗಿ, ಹೆಪ್ಪುಗಟ್ಟಿ, ಮಿದುಳಿನ ಮೇಲೆ ತೀವ್ರ ಸ್ವರೂಪದ ಒತ್ತಡವು ಏರ್ಪಡಬಹುದು. ಆ ಒತ್ತಡದ ಕಾರಣ ತಡೆಯಲಾಗದಂತಹ ತಲೆನೋವು ಕಂಡುಬರಬಹುದು.

ಇಂತಹ ಸ್ಥಿತಿಯು ಇಂದಿನ ರಸ್ತೆ ಅಪಘಾತಗಳಲ್ಲಿ ತಲೆಗೆ ಪೆಟ್ಟಾದಾಗಲೂ ಕಂಡು ಬರುತ್ತದೆ. ತಕ್ಷಣವೇ ಕಪಾಲ ದಲ್ಲಿ ಒಂದು ರಂಧ್ರವನ್ನು ಮಾಡಿ ಒಳಗೆ ಒತ್ತಡದಲ್ಲಿರುವ ರಕ್ತವನ್ನು ಹೊರಹರಿಯಲು ಬಿಟ್ಟರೆ ಅಥವಾ ಅಲ್ಲಿರುವ ರಕ್ತದ ಹೆಪ್ಪುಗಳನ್ನು ಸುರಕ್ಷಿತವಾಗಿ ಹೊರದೆಗೆದರೆ, ಮಿದುಳಿನ ಮೇಲೆ ಇದ್ದ ಒತ್ತಡವು ಕಡಿಮೆ ಯಾಗುತ್ತದೆ. ಆಗ ನೋವು ಕಡಿಮೆಯಾಗುತ್ತದೆ. ಮಿದುಳಿನ ಮೇಲೆ ಯಾವುದೇ ಶಾಶ್ವತ ದುಷ್ಪರಿಣಾಮವು ಉಂಟಾಗುವು ದಿಲ್ಲ. ರಸ್ತೆ ಅಪಘಾತಗಳಲ್ಲಿ ತಲೆಬುರುಡೆಯಲ್ಲಿ ರಂಧ್ರವನ್ನು ಕೊರೆದು ರಕ್ತವನ್ನು ಹೊರಗೆ ಹರಿಯಬಿಡಲೇ ಬೇಕಾದ ತುರ್ತು ಶಸ್ತ್ರಚಿಕಿತ್ಸೆ ಇಂದು ಹೇಗೆ ಅನಿವಾರ್ಯವೋ, ಅಂದೂ ಸಹ ಹಾಗೆಯೇ ಅನಿವಾರ್ಯ ವಾಗಿತ್ತು. ಬಹುಶಃ ಅಂದಿನ ಅಭಿಚಾರಿ ಶಸ್ತ್ರವೈದ್ಯರು ಇದನ್ನು ಮನಗಂಡಿದ್ದರು ಎಂದು ಕಾಣುತ್ತದೆ.

ಕಪಾಲರಂಧ್ರನವನ್ನು ನಡೆಸಲು ಎರಡನೆಯ ಕಾರಣವು ಮಿದುಳಿಗೆ ಸಂಬಂಧಿಸಿದ ಅನಾರೋಗ್ಯಗಳಾಗಿರಬಹುದು. ಮೈಗ್ರೇನ್ ತಲೆನೋವು ಅತ್ಯಂತ ಉಗ್ರವಾದ ನೋವು. ನೋವಿನ ತೀವ್ರತೆಯು ಎಷ್ಟಿರುತ್ತದೆ ಎನ್ನುವುದು, ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಮೈಗ್ರೇನ್ ತಲೆನೋವನ್ನು ತಡೆದು ಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆಯನ್ನು ಮಾಡಿಕೊಂಡ ಪ್ರಕರಣಗಳು ಸಾಕಷ್ಟಿವೆ. ಹಾಗಾಗಿ ಮೈಗ್ರೇನ್ ತಲೆನೋವನ್ನು ಗುಣಪಡಿಸಲು ಕಪಾಲರಂಧ್ರನವನ್ನು ಮಾಡಿರಬಹುದು. ಸೆಳವು ಅಥವಾ ಎಪಿಲೆಪ್ಸಿ ಭೀತಿಯನ್ನು ಉಂಟು ಮಾಡುವ ಅಪಾಯಕರ ಸ್ಥಿತಿ. ಆರೋಗ್ಯವಾಗಿರುವ ವ್ಯಕ್ತಿಯು ಇದ್ದಕ್ಕಿದ್ದ ಹಾಗೆ ಕೆಳಕ್ಕೆ
ಬಿದ್ದು, ಕೈಕಾಲುಗಳನ್ನು ತೀವ್ರವಾಗಿ ಝಾಡಿಸುತ್ತಾ, ಬಾಯಿಯ ಮೂಲಕ ನೊರೆಯನ್ನು ಹರಿಸುತ್ತಾ ಪ್ರಜ್ಞಾಹೀನನಾಗುವುದನ್ನು ನೋಡಲು ನಮ್ಮ ಗುಂಡಿಗೆಯು
ಬಲವಾಗಿಯೇ ಇರಬೇಕು.

ನಮ್ಮ ಪೂರ್ವಜರು ಇಂತಹ ಸೆಳೆವನ್ನು ಗುಣಪಡಿಸಲು ಕಪಾಲರಂಧ್ರನವನ್ನು ಮಾಡಿರಬಹುದು. ಹಾಗೆಯೇ ಇಚ್ಚಿತ್ತವಿಕಲತೆ ಅಥವ ಶ್ಕೈಜ಼ೋಫ್ರೀನಿಯ. ವ್ಯಕ್ತಿಯ ಅಸಹಜ ಹಾಗೂ ಅಪಾಯಕಾರಿ ವರ್ತನೆಗಳನ್ನು ನಿಗ್ರಹಿಸಲು ಕಪಾಲರಂಧ್ರನವನ್ನು ಮಾಡುತ್ತಿದ್ದಿರಬಹುದು. ಕಪಾಲರಂಧ್ರನವನ್ನು ನಡೆಸಲು ಇದ್ದಿರಬಹುದಾದ
ಮೂರನೆಯ ಕಾರಣ, ಒಬ್ಬ ವ್ಯಕ್ತಿಯ ತಲೆಯಲ್ಲಿ ಮನೆಮಾಡಿರುವ ದುಷ್ಟಶಕ್ತಿಗಳನ್ನು ರಂಧ್ರ ಮೂಲಕ ಹೊರದೂಡುವುದು ಅಥವಾ ಶಿಷ್ಟಶಕ್ತಿಗಳನ್ನು ರಂಧ್ರದ
ಮೂಲಕ ಆಹ್ವಾನಿಸುವುದು. ನಮ್ಮ ಪೂರ್ವಜರು ನಿಜ ವೈದ್ಯಕಿಯವನ್ನು ಅಭಿವೃದ್ಧಿಪಡಿಸುವುದರ ಜೊತೆ ಜೊತೆಯಲ್ಲಿಯೇ ಹುಸಿವೈದ್ಯಕೀಯವನ್ನೂ ಬೆಳೆಸಿದರು
ಎನ್ನುವುದಕ್ಕೆ ಇದು ಒಂದು ಉದಾಹರಣೆ.

ಕಪಾಲ ರಂಧ್ರನವು ನವಶಿಲಾಯುಗದಲ್ಲಿ ನಡೆಯುತ್ತಿದ್ದ ಸರ್ವೇಸಾಮಾನ್ಯ ಶಸ್ತ್ರಚಿಕಿತ್ಸೆಯಾಗಿತ್ತು. ಅಂದಿನ ಕಾಲದಲ್ಲಿ ಜಗತ್ತಿನ ಹಲವು ಭಾಗಗಳಲ್ಲಿ -ಯೂರೋಪ್, ಆಫ್ರಿಕ, ಉತ್ತರ ಮತ್ತು ದಕ್ಷಿಣ ಅಮೆರಿಕ ಹಾಗೂ ಪೂರ್ವ ದೇಶಗಳು-ಹಲವು ಸಂಸ್ಕೃತಿಗಳು ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದಿದ್ದವು. ಕಪಾಲ ರಂಧ್ರನವು ಈ ಎಲ್ಲ ಸಂಸ್ಕೃತಿಗಳಲ್ಲಿ ಸ್ವತಂತ್ರವಾಗಿ ಆರಂಭವಾದವು ಎನ್ನುವ ವಿಚಾರವು ನಿಜಕ್ಕೂ ಆಶ್ಚರ್ಯಕರವಾಗಿದೆ.

ಫ್ರಾನ್ಸಿನಲ್ಲಿ ಸುಮಾರು ಕ್ರಿ.ಪೂ.೬೫೦೦ ವರ್ಷಗಳ ಹಿಂದಿನ ಸಮಾಽ ಸ್ಥಳಗಳಲ್ಲಿ ೧೨೦ ತಲೆಬುರುಡೆಗಳು ದೊರೆತಿವೆ. ಇವುಗಳಲ್ಲಿ ಕಪಾಲ ರಂಧ್ರನವು ೪೦ ತಲೆಬುರುಡೆಗಳಲ್ಲಿದ್ದವು. ದಕ್ಷಿಣ ರಷ್ಯಾದಲ್ಲಿರುವ ರೋಸ್ತೋವ್-ಆನ್-ದಾನ್ ಎನ್ನುವ ಪ್ರದೇಶದಲ್ಲಿ ೨೦ ಸಮಾಧಿಗಳ ಉತ್ಖನನವನ್ನು ಮಾಡಿದಾಗ, ಅವುಗಳಲ್ಲಿ ೩೫ ಅಸ್ಥಿಪಂಜರಗಳು ದೊರೆತವು. ಒಂದು ಸಮಾಧಿಯಲ್ಲಿ ಏಳು ಅಸ್ಥಿಪಂಜರಗಳಿದ್ದವು. ಮೂವರು ಪುರುಷರು, ಇಬ್ಬರು ಮಹಿಳೆಯರು, ಓರ್ವ ಹದಿಹರಯದ
ಹೆಣ್ಣುಮಗಳು ಹಾಗೂ ಸುಮಾರು ೨ ವರ್ಷ ವಯಸ್ಸಿನ ಮಗುವಿನದು. ಇವುಗಳ ಬುರುಡೆಗಳೆಲ್ಲ ಕಪಾಲ ರಂಧ್ರನಗಳಿದ್ದವು.

ಹಾಗಾಗಿ ಈ ಪ್ರದೇಶದಲ್ಲಿ ಕಪಾಲರಂಧ್ರನವು ಸರ್ವೇ ಸಾಮಾನ್ಯವಾಗಿ ನಡೆಯುತ್ತಿದ್ದಿರಬಹುದು. ಈ ಬುರುಡೆಗಳು ಕ್ರಿ.ಪೂ.೬೦೦೦ ವರ್ಷಗಳಷ್ಟು ಹಿಂದಿನವು. ಕ್ರಿ.ಪೂ.೫೦೦೦-ಕ್ರಿ.ಪೂ.೨೦೦೦ದ ಅವಧಿಗೆ ಸೇರಿರಬಹುದಾದ, ಕಪಾಲರಂಧ್ರನವಿರುವ ೬ ತಲೆಬುರುಡೆಗಳು ಚೀನಾದಲ್ಲಿ ದೊರೆತಿವೆ. ಆಫ್ರಿಕದಲ್ಲಿ ಹಾಗೂ ದಕ್ಷಿಣ ಕೊಲಂಬಿಯ ಹಾಗೂ ಪೂರ್ವ ಮಧ್ಯ ಅಮೆರಿಕಗಳಲ್ಲಿ ಕಪಾಲರಂಧ್ರನವಿರುವ ತಲೆಬುರುಡೆಗಳು ದೊರೆತಿವೆ. ಪೆರು ದೇಶವೊಂದರಲ್ಲಿಯೇ ಕಪಾಲರಂಧ್ರನ
ವಿರುವ ೧೦,೦೦೦ ತಲೆಬುರುಡೆಗಳು ದೊರೆತಿವೆ. ಗ್ರೀಕ್ ಮತ್ತು ರೋಮನ್ನರ ವೈದ್ಯಕೀಯ ಗ್ರಂಥಗಳಲ್ಲಿ ಕಪಾಲ ರಂಧ್ರನದ ಬಗ್ಗೆ ವಿವರಗಳು ದೊರೆಯುತ್ತವೆ.

ಹಿಪೊಕ್ರೇಟ್ಸ್ (ಕ್ರಿ.ಪೂ.೪೬೦- ಕ್ರಿ.ಪೂ.೩೭೦) ಕಪಾಲರಂಧ್ರನ ವಿಧಿ ನಿಷೇಧಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿದರೆ, ರೋಮನ್ ವೈದ್ಯ ಗ್ಯಾಲನ್ (ಕ್ರಿ.ಶ ೧೨೯-ಕ್ರಿ.ಶ.೨೧೦) ಸಹ ತನ್ನ ಅವಧಿಯಲ್ಲಿ ಕಪಾಲ ರಂಧ್ರನ ಶಸ್ತ್ರಚಿಕಿತ್ಸೆಯು ಸಾಮಾನ್ಯವಾಗಿ ನಡೆಯುತ್ತಿತ್ತು ಎಂದು ದಾಖಲಿಸಿದ್ದಾನೆ. ಯೂರೋಪಿನಲ್ಲಿ ೧೯ನೆಯ ಶತಮಾನದ ಆರಂಭದವರೆಗೂ ಕಪಾಲ ರಂಧ್ರನಗಳು ನಡೆಯುತ್ತಿರುವುದನ್ನು ನೋಡಬಹುದಾಗಿದೆ. ಕಪಾಲ ರಂಧ್ರನಗಳು ಸಾಮಾನ್ಯವಾಗಿ ಪುರುಷರ ತಲೆಬುರುಡೆಗಳಲ್ಲಿ ಹೆಚ್ಚು ಕಂಡುಬಂದಿವೆ. ಮಹಿಳೆಯರು ಹಾಗೂ ಮಕ್ಕಳ ತಲೆಬುರುಡೆಗಳಲ್ಲಿ ಕೆಲವು ಸಲ ಮಾತ್ರ ಕಪಾಲ ರಂಧ್ರನ ಕಂಡುಬಂದಿವೆ.

ಕಪಾಲ ರಂಧ್ರನವನ್ನು ಮಾಡುವುದರಲ್ಲಿ ಪರಿಣತಿಯನ್ನು ಪಡೆದ ಅಭಿಚಾರೀ ವೈದ್ಯರು ಇದ್ದಿರಬೇಕು. ಕಪಾಲ ರಂಧ್ರನವನ್ನು ಮಾಡುವ ಮೊದಲು ಇವರು ವ್ಯಕ್ತಿಗೆ ಕೋಕಾ ಎಲೆ/ಅಫೀಮು/ಗಾಂಜಾ/ಮದ್ಯಪಾನ ಇತ್ಯಾದಿಗಳನ್ನು ನೀಡಿ ಅವನ ಪ್ರಜ್ಞೆಯನ್ನು ತಪ್ಪಿಸುತ್ತಿದ್ದರು. ನಂತರ ಹರಿತವಾದ ಬೆಣಚುಕಲ್ಲಿನ ಚಕ್ಕೆ, ಅಗ್ನಿಪರ್ವತದ ಲಾವಾದಲ್ಲಿ ದೊರೆಯುವ ಗಾಜಿನಂತಹ ಕಾರ್ಗಲ್ಲು (ಒಬ್ಸೀಡಿಯನ್) ಮೂಳೆಯ ಚಾಕು ಅಥವಾ ತಾಮ್ರ/ಹಿತ್ತಾಳೆಯ ಚೂರಿಯಿಂದ ಮಿದುಳಿನಲ್ಲಿ ರಂಧ್ರವನ್ನು ಕೊರೆಯುತ್ತಿದ್ದಿರಬೇಕು. ಪೆರುವಿನ ಅಭಿಚಾರೀ ವೈದ್ಯರು ಟುಮಿ ಎನ್ನುವ ಕಪ್ಪೆಚಿಪ್ಪಿನ ಹರಿತ ಸಾಂಪ್ರದಾಯಿಕ ಚೂರಿಯನ್ನು ಬಳಸುತ್ತಿದ್ದರು.

ಇವೆಲ್ಲವು ಅತ್ಯಂತ ಒರಟು ಆಯುಧ ಗಳಾಗಿದ್ದವು. ಗ್ರೀಕ್ ಮತ್ತು ರೋಮನ್ನರ ಕಾಲದಲ್ಲಿ ಮಾತ್ರ ಸೂಕ್ಷ್ಮ ಹಾಗೂ ಸುಧಾರಿತ ಉಪಕರಣಗಳು ಬಳಕೆಗೆ ಬಂದವು.
ತಲೆಬುರುಡೆಯಲ್ಲಿ ರಂಧ್ರವನ್ನು ಕೊರೆಯುವುದು ಹೇಳುವುದಷ್ಟು ಸುಲುಭದ ಕೆಲಸವಲ್ಲ. ಮೊದಲು ಚರ್ಮವನ್ನು ಛೇದಿಸಬೇಕು. ನಂತರ ಕಪಾಲದ ಪರ್ಯಾಸ್ಥಿ ಯನ್ನು (ಪೆರಿಯಾಸ್ಟಿಯಂ) ಆನಂತರ ಕಪಾಲಾಸ್ಥಿಯನ್ನು ಛೇದಿಸಬೇಕು. ಕಪಾಲಾಸ್ಥಿಯ ಕೆಳಗೆ ಮೂರು ಮೆದುಳಿನ ಪೊರೆಗಳಿವೆ. ಡ್ಯುರಾಮ್ಯಾಟರ್
ಅಥವಾ ಗಡಸುಪೊರೆ, ಅರಕ್ನಾಯ್ಡ್ ಮ್ಯಾಟರ್ ಅಥವ ಜೇಡರೂಪಿ ಪೊರೆ ಮತ್ತು ನವಿರುಪೊರೆ ಅಥವ ಪಯಾಮ್ಯಾಟರ್. ಪಯಾಮ್ಯಾಟರ್ ಕೆಳಗೆ ಅನುಲಂಬ
ರಕ್ತಕಾಲುವೆ (ಸಜೈಟಲ್ ಸೈನಸ್)ಯಿರುತ್ತದೆ.

ಕಪಾಲವನ್ನು ರಂಧ್ರ ಮಾಡುವ ಪ್ರಕ್ರಿಯೆಯು ಗಡಸುಪೊರೆಯನ್ನು ತಲುಪುತ್ತಿರುವಂತೆಯೇ ನಿಲ್ಲಬೇಕು. ರಂಧ್ರವು ಗಡಸುಪೊರೆಯನ್ನು ಛೇದಿಸಿದರೆ ಉಳಿದ ಪೊರೆಗಳೂ ಅದರೊಡನೆ ನಾಶವಾಗಿ ಕಾಲುವೆಯಿಂದ ರಕ್ತಸ್ರಾವವು ತೀವ್ರವಾಗಿ ವ್ಯಕ್ತಿಯು ಸಾಯುವ ಸಾಧ್ಯತೆಯಿರುತ್ತದೆ. ಅಕಸ್ಮಾತ್ ರಕ್ತಸ್ರಾವದಿಂದ ವ್ಯಕ್ತಿಯು ಬದುಕಿದರೆ, ಮುಂದೆ ಸೋಂಕಿನಿಂದ ಪಾರಾಗಬೇಕಾಗುತ್ತದೆ. ಆದರೆ ಅನೇಕ ಜನರು ಕಪಾಲರಂಧ್ರನದ ನಂತರ ಬದುಕಿರುತ್ತಿದ್ದರು. ಕೆಲವರಂತೂ ಒಂದಕ್ಕಿಂತ ಹೆಚ್ಚಿನ ಸಲ ಕಪಾಲರಂಧ್ರನವನ್ನು ಮಾಡಿಸಿಕೊಂಡಿದ್ದರು ಎನ್ನುವುದಕ್ಕೆ ಕುರುಹಾಗಿ ಕಪಾಲದಲ್ಲಿ ಎರಡು ಮೂರು ರಂಧ್ರಗಳಿರುವುದು ಪತ್ತೆಯಾಗಿದೆ. ರಂಧ್ರವನ್ನು ಐದು ರೀತಿಯಲ್ಲಿ ಮಾಡುತ್ತಿದ್ದರು. ಹೆರೆದು ಹೆರೆದು ರಂಧ್ರವನ್ನು ಮಾಡುವುದು, ಎಳನೀರಿನ ಮೂತಿಯನ್ನು ಕೊಚ್ಚುವಂತೆ ವೃತ್ತಾಕಾರವಾಗಿ ಛೇದಿಸಿ ಬಿಲ್ಲೆಯನ್ನು ಪ್ರತ್ಯೇಕಿಸುವುದು, ಅಂಡಾಕಾರವಾಗಿ ಛೇದಿಸುವುದು, ಚೌಕಾಕಾರವಾಗಿ ಛೇದಿಸುವುದು ಹಲವು ರಂಧ್ರಗಳನ್ನು ಕೊರೆದು, ಅವನ್ನೆಲ್ಲ ಒಟ್ಟುಗೂಡಿಸಿ ದೊಡ್ಡ ರಂಧ್ರವಾಗಿಸುವುದು…

ಹೀಗೆ. ಮೂಳೆಯ ಬಿಲ್ಲೆಯನ್ನು ತಾಯಿತದ ರೂಪದಲ್ಲಿ ಕೊರಳಿಗೆ ಕಟ್ಟಿಕೊಳ್ಳುತ್ತಿದ್ದರು. ರಂಧ್ರ ಕೊರೆದ ಸ್ಥಳದ ಮೇಲಿರುವ ಚರ್ಮವು ಪೂರ್ಣ ಬೆಳೆದು ರಂಧ್ರವು ಮುಚ್ಚಿಹೋಗುತ್ತಿತ್ತು. ಆದರೆ ಮೂಳೆಯು ಪೂರ್ಣ ರೂಪದಲ್ಲಿ ಬೆಳೆಯುತ್ತಿರಲಿಲ್ಲ. ಹಾಗಾಗಿ ಕಪಾಲ ರಂಧ್ರವು ಅವರ ಜೀವಮಾನ ಪೂರ್ಣ ಹಾಗೆಯೇ ಇರುತ್ತಿತ್ತು. ಸಾಮಾನ್ಯವಾಗಿ ಕಪಾಲದ ಮೇಲಿರುವ ಒಬೀಲಿಯನ್ ಎನ್ನುವ ಬಿಂದುವಿನಲ್ಲೇ ಕಪಾಲ ರಂಧ್ರನಗಳೆಲ್ಲ ಮಾಡುತ್ತಿದ್ದರು. ಕೆಲವು ಸಲ ಮಾತ್ರ ಕಪಾಲದ ಲಲಾಟಮೂಳೆಯ ಮೇಲೆ ಮಾಡಿರುವುದನ್ನು ಕಾಣಬಹುದು.

ಕಪಾಲ ರಂಧ್ರನವು ಹತಾಶ ಮನೋಸ್ಥಿತಿಯಲ್ಲಿ ಅಸ್ತಿತ್ವಕ್ಕೆ ಬಂದ ಒರಟು ಶಸಚಿಕಿತ್ಸೆ. ಇದರಿಂದ ಹೆಚ್ಚಿನ ಸಾಯುತ್ತಿದ್ದರಾದರೂ ಸಾಕಷ್ಟು ಜನರು ಬದುಕಿ
ಕೊಳ್ಳುತ್ತಿದ್ದರು. ಕಪಾಲರಂಧ್ರನವನ್ನು ಮಾಡಿಸಿಕೊಂಡ ಮೇಲೆ ಅವರ ಅನಾರೋಗ್ಯವು ಸ್ವಲ್ಪ ಮಟ್ಟಿಗಾದರೂ ಸುಧಾರಿಸಿರಬೇಕು. ಇಲ್ಲದಿದ್ದರೆ ಇದು ಜಗತ್ತಿನ ವಿಭಿನ್ನ ಖಂಡಗಳಲ್ಲಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಅಷ್ಟು ಜನರು ಮಾಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕಪಾಲ ರಂಧ್ರನಕ್ಕಿಂತ ಭೀಭರ್ತ್ಸವಾದ ಶಸಚಿಕಿತ್ಸೆಗಳು ಅಸ್ತಿತ್ವಕ್ಕೆ ಬಂದವು ಎನ್ನುವುದು ದೊಡ್ಡ ವಿಪರ್ಯಾಸವಾಗಿದೆ.