Saturday, 23rd November 2024

ರಷ್ಯಾಕ್ಕೆ ದಿಗ್ಬಂಧನ – ಏನದು ಲೆಕ್ಕಾಚಾರ ?

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಈ ಪ್ರಮಾಣದ ಸ್ಥಿತಿ ರಷ್ಯಾಗೆ ಬಂದೊದಗುತ್ತದೆ ಎಂದು ಪುಟಿನ್ ಕೂಡ ಅಂದಾಜಿಸಿದಂತಿಲ್ಲ. ಈ ಆರ್ಥಿಕ ದಿಗ್ಬಂಧನವನ್ನು ಇತಿಹಾಸದ
ಯಾವುದೇ ದೇಶದ ಮೇಲೆ ಹೇರಲಾಗಿಲ್ಲ. ಇರಾನ್, ಉತ್ತರ ಕೊರಿಯಾದ ಮೇಲೆ ಹೇರಿದ ಪ್ರಮಾಣ ಇದಕ್ಕೆ ಹೋಲಿಸಿದರೆ ಎಳ್ಳಷ್ಟೂ ಅಲ್ಲ.

ಉಕ್ರೇನಿನ ಒಳನೆಲಕ್ಕೆ ರಷ್ಯಾ ನುಗ್ಗುತ್ತಿರುವುದು, ಚೀನಾ ಬಿಟ್ಟು ಜಗತ್ತಿನ ಬಹುತೇಕ ರಾಷ್ಟ್ರಗಳು ರಷ್ಯಾವನ್ನು ಒಗ್ಗೂಡಿ ಖಂಡಿಸುತ್ತಿ ರುವುದು ನಿಮಗೆ ತಿಳಿದ ವಿಚಾರ. ಅತ್ತ ಅಮೆರಿಕ ‘ಹಲ್ಲಿಲ್ಲದ ಹುಲಿ’ ಎಂದು ಜಗತ್ತೆಲ್ಲ ಆಡಿಕೊಳ್ಳುತ್ತಿರುವ ಸಮಯದ ಅಮೆರಿಕ -ಜೋ ಬೈಡನ್ ಆಡಳಿತ ಮತ್ತು ಪಶ್ಚಿಮದ ದೇಶಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಲು ಶುರುಮಾಡಿಕೊಂಡಿವೆ.

ಅಮೆರಿಕದ ಈ ದಿಗ್ಬಂಧನ ಎನ್ನುವುದು ಭಾರತಕ್ಕೇನೂ ಹೊಸತಲ್ಲ. ವಾಜಪೇಯೀ ಸರಕಾರ ಪೋಕ್ರಾನ್‌ನಲ್ಲಿ ಅಣ್ವಸ ಪರೀಕ್ಷೆ ನಡೆಸಿದಾಗ ಹೀಗೆ ಹಲವು ಬಾರಿ ದಿಗ್ಬಂಧನ ಗಳನ್ನು ನಾವು ಕಂಡವರೇ. ಅವೆಲ್ಲ ಕೇವಲ ಸುದ್ದಿಯ ಕೇಳಿದ್ದು ಬಿಟ್ಟರೆ ಅಂಥ ಹೇಳಿ ಕೊಳ್ಳುವ ವ್ಯತ್ಯಾಸ ಜನಸಾಮಾನ್ಯರಿಗೆ ಗೋಚರವಾಗಿರಲ್ಲ. ಹಾಗೆಯೇ ರಷ್ಯಾದ ಜತೆಯೂ ಆಗುತ್ತದೆಯೇ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡುತ್ತಿದೆ. ಸಹಜ. ಅಮೆರಿಕ ಇಂದು ಸಾಮಾನ್ಯರ ಮನಸ್ಸಿನಲ್ಲಿ ಒಂದು ರೀತಿಯಲ್ಲಿ ವಾಲಿ-ಸುಗ್ರೀವನನ್ನು ಮೊದಲ ಬಾರಿ ಹೊಡೆದಾಟಕ್ಕೆ ಕರೆದಾಗ ರಾಮ ಬಾಣ ಬಿಡಲೇ ಇಲ್ಲವಲ್ಲ, ಸುಗ್ರೀವನನ್ನು ವಾಲಿ ಹಿಗ್ಗಾ ಮುಗ್ಗಾ ಥಳಿಸಿದನಲ್ಲ – ಆ ರೀತಿಯದಾಗಿ ಕಾಣಿಸುತ್ತಿದೆ. ಇಲ್ಲಿ ಸುಗ್ರೀವ ಯುಕ್ರೇನ್ – ರಷ್ಯಾ ವಾಲಿ. ರಾಮ ಯಾವಾಗ ಬಾಣಬಿಡುತ್ತಾನೆ ಎಂಬ ಹೋಲಿಕೆಗೆ ತಕ್ಕನಂತೆ ಈಗ ಬರುತ್ತಿರುವುದು ಅಮೆರಿಕದ ಆರ್ಥಿಕ ದಿಗ್ಬಂಧನ.

ಆದರೆ ಏನು ಈ ದಿಗ್ಬಂಧನ? ದಿಗ್ಬಂಧನ ಶಬ್ಧವನ್ನು ಒಡೆದರೆ ಅದು ದಿಕ್ – ಬಂಧನ. ಎಲ್ಲ ದಿಕ್ಕಿನಿಂದಲೂ ಕಟ್ಟಿ ಹಾಕುವುದು. ಅಮೆರಿಕ ಹಾಗಾದರೆ ಯುದ್ಧಕ್ಕೆ ಹೋಗಬಹುದಲ್ಲ ಎನ್ನುವ ಪ್ರಶ್ನೆ ಸರಿ. ರಷ್ಯಾ ಮತ್ತು ಅಮೆರಿಕ ಸೆಣೆಸಿದರೆ ಅಮೆರಿಕ ಗೆಲ್ಲಬಹುದು ಎನ್ನುವುದು ಕೂಡ ನಿಜ. ರಷ್ಯಾದ ಮಗ್ಗುಲು ರಾಷ್ಟ್ರ ಅಮೆರಿಕ. ಭೂಮಿಯನ್ನು ಸ್ವಲ್ಪ ತಿರುವಿ ನೋಡಿದರೆ ಅದು ಕಾಣಿಸುತ್ತದೆ. ಅಮೆರಿಕದ ಅಲಾಸ್ಕಾ ಮೊದಲು ರಷ್ಯಾ ನೆಲವೇ ಆಗಿತ್ತು. ಅದನ್ನು ಅಮೆರಿಕ ಖರೀದಿಸಿದ್ದು ಇತಿಹಾಸ, ಒಂದು ಸ್ಟ್ರಾಟೆಜಿಕ್ ನಡೆ. ಅಮೆರಿಕ ನೆಲದಿಂದ ರಷ್ಯಾದ ನೆಲಕ್ಕೆ ಸುಮಾರು ಐವತ್ತಮೂರು ಕಿಲೋಮೀಟರ್ ಅಂತರವಿದ್ದರೂ ಅಂದು ತುದಿಯಲ್ಲಿ ಅಮೆರಿಕದ ದ್ವೀಪವಿದೆ – ಅದು ಅಮೆರಿಕದ ಕೊನೆಯ ನೆಲ. ಅದರಿಂದ ರಷ್ಯಾ ಕೇವಲ ನಾಲ್ಕು ಕಿಲೋಮೀಟರ್.

ಇರಲಿ – ಈಗ ಅಮೆರಿಕಾದ ಈ ಆರ್ಥಿಕ ದಿಗ್ಬಂಧನ ಏನು ಎತ್ತ ಎನ್ನುವುದನ್ನು ನೋಡೋಣ. ಆಗ ಮಾತ್ರ ಅಮೆರಿಕದ ಈ ಎಲ್ಲ ನಡೆಗಳ ಅಂತರಾರ್ಥ ತಿಳಿಯುತ್ತದೆ. ರಷ್ಯಾ ಆರ್ಥಿಕತೆಯಲ್ಲಿ ಹನ್ನೊಂದನೆಯ ದೇಶವಾದರೂ ಅದು ಬಲಿಷ್ಠ ಹೌದು. ಇಂದು ರಷ್ಯಾಮೇಲಿನ ದಿಗ್ಬಂಧನ ಹೇರುವುದರಲ್ಲಿ ಇಪ್ಪತ್ತೇಳು ದೇಶಗಳು ಭಾಗಿಯಾಗಿವೆ. ಅಂತಹ ಗಟ್ಟಿ ದೇಶದ ಮೇಲಿನ ಅಮೆರಿಕ ಮತ್ತು ಇತರೆ ಪಶ್ಚಿಮ ದೇಶಗಳ ದಿಗ್ಬಂಧನ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದು ಈಗಿನ ಪ್ರಶ್ನೆ.

ರಷ್ಯಾದ ಮೇಲಿನ ಆರ್ಥಿಕ ದಿಗ್ಬಂಧನ ಇದೇನು ಹೊಸತಲ್ಲ. ಹಿಂದೆ 2014ರಲ್ಲಿ ಕ್ರಿಮಿಯಾ ಎನ್ನುವ ಬಂದರು ಪ್ರದೇಶವನ್ನು ಯುಕ್ರೇನಿ ನಿಂದ ವಶಪಡಿಸಿಕೊಂಡಾಗ ಕೂಡ ಇಂಥದ್ದೊಂದು ಆರ್ಥಿಕ ಒತ್ತಡಕ್ಕೆ ರಷ್ಯಾವನ್ನು ಒಳಪಡಿಸಲಾಗಿತ್ತು. ಆಗ ಪ್ರಮಾಣ ಚಿಕ್ಕದು. ಪುಟಿನ್ ಬುದ್ಧಿವಂತ. ಆತ ಹಿಂದಿನ ಈ ದಿಗ್ಬಂಧನದಿಂದ ಪಾಠ ಕಲಿತಂತಿತ್ತು. ಆ ಕಾರಣಕ್ಕಾಗಿಯೇ ಈ ಬಾರಿ ಸಾಕಷ್ಟು ತಯಾರಿ ಮಾಡಿಕೊಂಡೇ ಯುಕ್ರೇನಿನ ಮೇಲೆ ದಂಡೆತ್ತಿ ಹೊರಟದ್ದು. ಈ ತಯಾರಿಯಲ್ಲಿ ರಷ್ಯಾದ ಸೆಂಟ್ರಲ್ ಬ್ಯಾಂಕ್ ನಡೆಸಿದ ತಯಾರಿಯೆಂದರೆ ಬರೋಬ್ಬರಿ ೬೪೦ ಬಿಲಿಯನ್ ಡಾಲರ್‌ನಷ್ಟು ಮೊತ್ತದ ಹಣ, ಚಿನ್ನ ಮತ್ತು ವಿದೇಶೀ ಬಾಂಡ್‌ಗಳನ್ನು ಒಟ್ಟು ಮಾಡಿಟ್ಟುಕೊಂಡದ್ದು.

ರಷ್ಯಾದ ಯೋಜನೆಯ ಪ್ರಕಾರ ಇಂಥದ್ದೊಂದು ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾದರೆ ಅದು ಹದಕ್ಕೆ ಬರುವಷ್ಟು ಸಮಯ ಈ ಹಣವನ್ನು ಬೇರೆ ದೇಶದಿಂದ ಆಮದುಮಾಡಿಕೊಳ್ಳಲು ಬಳಸುವುದು ಎಂದು. ರಷ್ಯಾ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶ. ರಷ್ಯಾ ವಿಸ್ತೀರ್ಣದಲ್ಲಿ ಅತಿ ದೊಡ್ಡ ದೇಶವಾದರೂ ಅಲ್ಲಿ ವಾಸ – ಬಳಸಲು ಯೋಗ್ಯವಾದ ಸ್ಥಳ ಕಡಿಮೆಯೇ. ಅಲ್ಲದೇ ಅಲ್ಲಿನ ಜನಸಂಖ್ಯೆ ಕೇವಲ ೧೪ ಕೋಟಿ. ಅದರಲ್ಲಿ ದುಡಿಯುವ ಯುವ ಜನಸಂಖ್ಯೆ ಐದಾರು ಕೋಟಿ ಮಾತ್ರ. ಉಳಿದವರೆಲ್ಲ ಒಂದೋ ಮಕ್ಕಳು ಅಥವಾ ಮುದುಕರು. ಈ ಎಲ್ಲ ಕಾರಣಕ್ಕೆ ರಷ್ಯಾ ಬಚಾವಾಗಬೇಕೆಂದರೆ ಆಮದು ಮಾಡಿಕೊಳ್ಳಲೇಬೇಕು.

ಹೀಗಿರುವಾಗ ರಷ್ಯಾದ ಮಟ್ಟಿಗೆ ಈ ೬೪೦ ಬಿಲಿಯನ್ ಡಾಲರ್ ಅಪದ್ಧನ ಇದು. ಈ ಹಣವನ್ನು ಅವರು ಇಟ್ಟುಕೊಂಡದ್ದೇ ಇಂತಹ
ಸಮಯದಲ್ಲಿ ಕಾರು, ಪೀಠೋಪಕರಣ, ಎಲೆಕ್ಟ್ರಾನಿಕ್ ಮತ್ತು ಸಾಫ್ಟ್ ವೇರ್ ಮೊದಲಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಆಗಲಿ ಎಂದು. ಈ ಹಣದಿಂದ ರಷ್ಯಾ ಒಂದು ರೀತಿಯ ಆರ್ಥಿಕ ಕೋಟೆಯನ್ನೇ ನಿರ್ಮಿಸಿಕೊಂಡಿತ್ತು. ಆದರೆ ಇದೆಲ್ಲ ಲೆಕ್ಕಚಾರ ಈಗ ಬುಡಮೇಲಾಗಿದೆ. ಕಳೆದ ರವಿವಾರ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ಹೇರಿದ್ದೇ ಹೇರಿದ್ದು – ರಷ್ಯಾದ ರುಬೆಲ್ ಬೆಲೆ ಶೇ. ೩೦ ಕುಸಿದಿದೆ. ಕಳೆದ ಎರಡು ದಿನಗಳಿಂದ ಅಲ್ಲಿನ ಸ್ಟಾಕ್ ಎಕ್ಸ್‌ಚೇಂಜ್‌ಗಳನ್ನು ನೆಲಕಚ್ಚುವ ಹೆದರಿಕೆಯಿಂದ
ಬಂದ್ ಮಾಡಲಾಗಿದೆ.

ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕ ಮಾಡಿದ ಮೊದಲ ಕೆಲಸವೆಂದರೆ ರಷ್ಯಾದ ಎಲ್ಲ ದೊಡ್ಡ ಬ್ಯಾಂಕುಗಳನ್ನು ಸ್ವಿಫ್ಟ್ ಹಣ ವಹಿವಾಟಿನಿಂದ ಹೊರದಬ್ಬಿದ್ದು. ‘ಸ್ವಿಫ್ಟ್ ’ ಎಂಬುದು ಜಗತ್ತಿನ ಹನ್ನೊಂದು ಸಾವಿರ ಬ್ಯಾಂಕ್‌ಗಳು ತಮ್ಮ ನಡುವೆ ಹಣ ವಹಿವಾಟು – ವರ್ಗಾವಣೆ ಮಾಡಿಕೊಳ್ಳಲು ಮಾಡಿಕೊಂಡ ಬೃಹತ್ ವ್ಯವಸ್ಥೆ. ಈ ನಿರ್ಬಂಧದಿಂದ ಈ ಹನ್ನೊಂದು ಸಾವಿರ ಬ್ಯಾಂಕ್‌ನ ಜತೆ ರಷ್ಯಾದ ಬ್ಯಾಂಕ್‌ಗಳು ಹಣ ವರ್ಗಾವಣೆ ಮಾಡದಂತಾಗಿದೆ. ಇದರರ್ಥ ಇವತ್ತು ರಷ್ಯಾ ಅಕ್ಷರಶಃ ಗಡಿಯಾಚೆಗಿನ ಯಾವುದೇ ವ್ಯವಹಾರವನ್ನೂ ಮಾಡದಂತಾಗಿದೆ.

ಎರಡನೇಯದೆಂದರೆ ಪಶ್ಚಿಮ ದೇಶಗಳು ರಷ್ಯಾದ ಸೆಂಟ್ರಲ್ ಬ್ಯಾಂಕ್‌ನ ಮೇಲೆಯೇ ದಿಗ್ಬಂಧನ ಹೇರಿದ್ದು. ಈ ಒಂದು ಕೆಲಸದಿಂದ ರಷ್ಯಾದ ಕಷ್ಟಕಾಲಕ್ಕೆ ಪೇರಿಸಿಟ್ಟ ಆ 640 ಬಿಲಿಯನ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಮೊತ್ತದಲ್ಲಿ ಸುಮಾರು 250 ಬಿಲಿಯನ್ ಡಾಲರ್‌ನಷ್ಟು ಹಣವನ್ನು ರಷ್ಯಾ, ಅಮೆರಿಕ, ಯುರೋಪ್ , ಜಪಾನ್ ಮೊದಲಾದ ದೇಶದ ಸರಕಾರೀ ಬಾಂಡ್‌ಗಳನ್ನು ಖರೀದಿಸಿಟ್ಟು ಕೊಂಡಿತ್ತು. ಈ ವಿದೇಶಿ ಬಾಂಡ್‌ಗಳೆಂದರೆ ಅದು ಅಲ್ಲಿನ ಸ್ಥಳೀಯ ಹಣ ಅಪಮೌಲ್ಯ ಹೊಂದಿದಾಗ ಕೂಡ ಇದಕ್ಕೇನೂ ಆಗುವುದಿಲ್ಲ.
ಒಂದು ರೀತಿಯಲ್ಲಿ ನೋಟಿನ ಬದಲಿಗೆ ಚಿನ್ನವಿಟ್ಟುಕೊಂಡಂತೆ. ಬಾಂಡ್ ಎಂದರೆ ಅದು ಸರಕಾರಗಳ ನಂಬಿಕೆಯ ಮೇಲೆಯೇ ನಿಂತದ್ದು. ಅದನ್ನೇ ಅಮೆರಿಕ ಮತ್ತು ಈ ಎಲ್ಲ ದೇಶಗಳು ಫ್ರೀಜ್ ಮಾಡಿದ್ದು. ಇದರಿಂದ ರಷ್ಯಾ ಈ ಒಂದು ಹೇರಿಕೆಯಿಂದ ತನ್ನ ಆರ್ಥಿಕತೆಯ ಶೇ. 17ಅನ್ನು ಬಳಸದಂತಾಗಿದೆ.

ಇನ್ನು ಸುಮಾರು 150 ಬಿಲಿಯನ್ ಡಾಲರ್ ನಷ್ಟು ಮೊತ್ತವನ್ನು ರಷ್ಯಾ ವಿದೇಶೀ ಬ್ಯಾಂಕಿನಲ್ಲಿ ಡೆಪಾಸಿಟ್ ಇಟ್ಟಿತ್ತು – ಈಗ ಅದು ಕೂಡ ಫ್ರೀಜ. ಈಗ ರಷ್ಯಾ ತನ್ನದೇ ಹಣವನ್ನು ಈ ದೇಶಗಳ ಬ್ಯಾಂಕ್‌ನಿಂದ ಹೊರತೆಗೆಯದಂತಾಗಿದೆ. ಇನ್ನು 84 ಬಿಲಿಯನ್‌ನಷ್ಟನ್ನು ರಷ್ಯಾ, ಚೀನಾದ ಸರಕಾರಿ ಬಾಂಡ್‌ನಲ್ಲಿಟ್ಟಿದೆ. ಅದನ್ನು ಚೀನಾದ ಯುವಾನ್ ನಲ್ಲೇ ಮರಳಿ ಪಡೆಯಬೇಕು. ಯುವಾನ್ ಅನ್ನು ಅಮೆರಿಕದ ಡಾಲರ್‌ನಂತೆ ಜಾಗತಿಕವಾಗಿ ಬಳಸಲಾಗದು.

ಈಗ ೬೪೦ ಬಿಲಿಯನ್‌ನಲ್ಲಿ ಉಳಿದುಕೊಂಡದ್ದು ಕೇವಲ ೧೫೬ ಬಿಲಿಯನ್. ಅದರಲ್ಲಿ ೧೩೦ನಷ್ಟು ಚಿನ್ನ. ಹಾಗಾದರೆ ರಷ್ಯಾ ಈ ಚಿನ್ನವನ್ನು ಮಿತ್ರ ದೇಶವಾದ ಇರಾನ್, ಪಾಕಿಸ್ತಾನಕ್ಕೆ ಮಾರಿ ಹಣವನ್ನು ಪಡೆಯಬಹುದಲ್ಲ? ಆದರೆ ಇಂತಹ ಸ್ಥಿತಿ ಯಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಒಯ್ದು ಮಾರುವುದು ಅಷ್ಟು ಸುಲಭವಲ್ಲ. ಪಾಕಿಸ್ತಾನದಂತಹ ದೇಶಕ್ಕೆ ಅಷ್ಟು ಪ್ರಮಾಣದ ಚಿನ್ನ ಖರೀದಿಸಲು ತಾಕತ್ತಾದರೂ ಬೇಕಲ್ಲ!

ಇಷ್ಟು ಲೆಕ್ಕಾಚಾರ ಸಾಕು – ರಷ್ಯಾದ ಜಿಡಿಪಿ 1.7 ಟ್ರಿಲಿಯನ್ ಡಾಲರ್- ಅದರಲ್ಲಿ 640 ಬಿಲಿಯನ್ ಎಂದರೆ ಅದು ಅಲ್ಲಿನ ಆರ್ಥಿಕತೆಯ ಶೇ. ೪೦. ರಷ್ಯಾ ಈ ದಿಗ್ಬಂಧನ ದಿಂದ ತಕ್ಷಣಕ್ಕೆ ಅಷ್ಟು ಪ್ರತಿಶತ ಬಡವಾಗಿದೆ ಎಂದರೆ ತಪ್ಪಲ್ಲ. ಒಂದು ದೇಶದ ಅರ್ಧಕ್ಕರ್ಧ ಹಣ ಈ ರೀತಿ ಬಳಸಲಾಗದೇ ಹೋಗುವುದೆಂದರೆ ಉಳಿದದ್ದು ನೀವೇ ಅಂದಾಜಿಸಿಕೊಳ್ಳಿ. ಈ ಕಾರಣಕ್ಕೆ ಹೇರಲ್ಪಟ್ಟದ್ದು ಅಕ್ಷರಶಃ ದಿಕ್ – ಬಂಧನವೇ. ಈಗಂತೂ ರಷ್ಯಾದ ಆರ್ಥಿಕತೆ ಜೋಗ್ ಫಾಲ್ಸ್ ನಲ್ಲಿನ ನೀರಿನಂತೆ ಕೆಳಕ್ಕೆ ಬೀಳುತ್ತಿದೆ. ಹೀಗಿರುವಾಗ ಒಂದು ದೇಶವನ್ನು ಆಳುವುದು ಬಹಳ ಕಷ್ಟ. ಆ ಕಾರಣಕ್ಕೇ ಇಂದು ರಷ್ಯಾದ ಸಾಮಾನ್ಯರು ಆತಂಕಕ್ಕೊಳಗಾಗಿದ್ದು ದಂಗೆಯೇಳುತ್ತಿದ್ದಾರೆ.

ಪುಟಿನ್ ಕಂಗಾಲಾಗಿರುವುದು. ಈ ಪ್ರಮಾಣದ ಸ್ಥಿತಿ ರಷ್ಯಾಗೆ ಬಂದೊದಗುತ್ತದೆ ಎಂದು ಪುಟಿನ್ ಕೂಡ ಅಂದಾಜಿಸಿದಂತಿಲ್ಲ. ಈ ಪ್ರಮಾಣದ ಆರ್ಥಿಕ ದಿಗ್ಬಂಧನವನ್ನು ಇತಿಹಾಸದ ಯಾವುದೇ ದೇಶದ ಮೇಲೆ ಹೇರಲಾಗಿಲ್ಲ. ಇರಾನ್, ಉತ್ತರ ಕೊರಿಯಾದ ಮೇಲೆ ಹೇರಿದ ಪ್ರಮಾಣ ಇದಕ್ಕೆ ಹೋಲಿಸಿದರೆ ಎಳ್ಳಷ್ಟೂ ಅಲ್ಲ. ಇಡೀ ಯುಕ್ರೇನಿನ ಜೆಡಿಪಿ ಇರೋದೇ ೧೫೫ ಬಿಲಿಯ ನ್ ಡಾಲರ್. ಅದನ್ನು ಆಕ್ರಮಿಸಲು ಹೋಗಿ ರಷ್ಯಾ ಬೆಲೆ ತೆತ್ತುತ್ತಿರುವುದು ಅದರ ನಾಲ್ಕು ಪಟ್ಟು. ಇದು ಹೇಗಿದೆಯೆಂದರೆ ಐದು ರುಪಾಯಿಯ ವಸ್ತುವನ್ನು ಪಡೆಯಲು ಇಪ್ಪತ್ತು ರುಪಾಯಿ ಕಳೆದುಕೊಂಡಂತೆ.

ಆದರೆ, ಇದೆಲ್ಲದರ ಹೊಡೆತ ಅನುಭವಿಸುವುದು ಕೇವಲ ರಷ್ಯಾ ಮಾತ್ರ ಅಲ್ಲ. ಭಾರತ, ಯುರೋಪ್ ದೇಶಗಳು ಮತ್ತು ಖುದ್ದು ಅಮೆರಿಕಕ್ಕೆ ಕೂಡ ಈ ಬಿಸಿ ದಿನ-ಒಪ್ಪತ್ತಿನಲ್ಲಿ ತಟ್ಟಲಿದೆ. ರಷ್ಯಾ ಜಗತ್ತಿನ ಅತಿ ದೊಡ್ಡ ಪೆಟ್ರೋಲಿಯಂ ಉತ್ಪಾದಿಸುವ ದೇಶಗಳಲ್ಲಿ ಮೂರನೆಯದು – ಅದು ಜಾಗತಿಕ ಪೂರೈಕೆಯ ಶೇ.೧೦ರಷ್ಟು. ಯುರೋಪ್ ಪೆಟ್ರೋಲ್‌ಗೆ ರಷ್ಯಾವನ್ನೇ ಅವಲಂಬಿಸಿರುವುದರಿಂದ ಅವೆರಡು ಆರ್ಥಿಕತೆ
ಒಂದಕ್ಕೊಂದು ಥಳಕು ಹಾಕಿಕೊಂಡಿದೆ.

ಪೊಲೊಡಿಯಮ, ನಿಕ್ಕೆಲ, ತಾಮ್ರ, ಅಲ್ಯೂಮಿನಿಯಂ ಮೊದಲಾದವನ್ನು ಹೇರಳ ಪ್ರಮಾಣದಲ್ಲಿ ರಷ್ಯಾ ರ- ಮಾಡುತ್ತದೆ – ಹಾಗಾಗಿ
ಇದು ಮುಂದುವರಿದರೆ ಅದನ್ನು ಬಳಸಿ ನಿರ್ಮಿಸುವ ಎಲ್ಲ ವಸ್ತುಗಳು, ವಾಹನಗಳು ತುಟ್ಟಿಯಾಗುತ್ತವೆ. ಮೊದಲೇ ಕರೋನಾದಿಂದ ಅಂತಾರಾಷ್ಟ್ರೀಯ ಸಪ್ಲೈ ಚೈನ್ ಮುರಿದು ಬಿದ್ದು ಬಹುತೇಕ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಬೆಲೆ ಜಾಗತಿಕವಾಗಿ ಈಗಾಗಲೇ ಏರಿದ್ದು – ಈ ದಿಗ್ಬಂಧನ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇಂದು ಜಗತ್ತಿನ ಆರ್ಥಿಕತೆಗಳೆಲ್ಲ ಒಂದಕ್ಕೊಂದು ಕೊಂಡಿ. ಎಲ್ಲರೂ ಇದನ್ನೆಲ್ಲ ಸೇರಿಯೇ
ಅನುಭವಿಸಬೇಕು – ಪರೋಕ್ಷವಾಗಿ ಬೆಲೆ ತೆರಬೇಕು.