Saturday, 23rd November 2024

ಮೋದಿ ಕಾರಣವೆಂಬ ಅಡ್ಡಕಸುಬಿತನ !

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಮೋದಿಯ ಭಾರತ ಯಾವ ಭೀತಿಯೂ ಹುಟ್ಟಿಸಲಿಲ್ಲ. ಹುಟ್ಟಿಸಲಾರದು ಕೂಡ. ಸುಖಾಸುಮ್ಮನೆ ಮೋದಿಯನ್ನು ಟೀಕಿಸುವುದು ಶ್ರೇಷ್ಠ
ಪ್ರಜಾಪ್ರಭುತ್ವದ ಸೂಚಕವಲ್ಲ. ಭಾರತದ ಪ್ರಜಾಪ್ರಭುತ್ವ ಜಗತ್ತಿಗೇ ಮೇಲ್ಪಂಕ್ತಿಯಾದುದು.

ಒಂದು ವಾಟ್ಸ್‌ಆಪ್ ಜೋಕ್. ಮಗುವೊಂದು ಅಮ್ಮನ ಹತ್ತಿರ ಹೇಳುವುದು: ಅಮ್ಮಾ, ನನಗಿವತ್ತು ಭೇದಿ, ಅದಕ್ಕೆ ಕಾರಣ ಮೋದಿ. ಮೇಲ್ನೋಟಕ್ಕಿದು ಜೋಕ್ ಅನಿಸಿದರೂ, ಪ್ರತಿಯೊಂದೂ ವಿಷಯದಲ್ಲಿ, ಅದೂ ಸಂಬಂಧವಿರಲಿ, ಇಲ್ಲದಿರಲಿ ಎಳೆದು ತಂದು ಎಲ್ಲದಕ್ಕೂ ಸಂಬಂಧ ಕಲ್ಪಿಸಿ ಮೋದಿಯೇ ಎಲ್ಲದಕ್ಕೂ ಕಾರಣ ಎಂದು ಮೋದಿ ಪ್ರಧಾನಿಯಾದ ಲಾಗಾಯ್ತಿನಿಂದಲೂ ಹೀಗಳೆಯುವುದು, ನಿಂದಿಸು ವುದು, ಆರೋಪಿಸುವುದು, ಆಕ್ಷೇಪಿ ಸುವುದು, ಅಪರಾಧಿಯನ್ನಾಗಿಸುವ ಅಡ್ಡಕಸುಬಿತನ ಅನೂಚಾನವಾಗೇ ನಡೆದು ಕೊಂಡೇ ಬಂದಿದೆ.

ಅಚ್ಚರಿಯೇನಲ್ಲವಾದರೂ ಇದು ಒಬ್ಬ ಜನಮಾನ್ಯ ಪ್ರಧಾನಿಯನ್ನು ಗೌರವಿಸುವ ರೀತಿಯಂತೂ ಖಂಡಿತವಾಗಿಯೂ ಅಲ್ಲವೇ ಅಲ್ಲ. ದೇಶಕ್ಕೂ ಶೋಭೆಯಲ್ಲ. ಮನೆಯ ಯಜಮಾನನನ್ನು ಮನೆಯ ಸದಸ್ಯರೇ ಈ ರೀತಿಯಲ್ಲಿ ನೆಗೆಟಿವ್ ಶೇಡಿನಲ್ಲಿ ಬಿಂಬಿಸು ವುದು ದೇಶಕ್ಕೂ ಹಿತವಲ್ಲ. ಯಾಕೆಂದರೆ, ರಾಜಭೀತಿಯೂ ಇಲ್ಲ, ರಾಜನಿಲ್ಲದ ಭೀತಿಯೂ ಅಲ್ಲ. ರಾಜ ಅದಕ್ಷನಾಗಿದ್ದರೆ ಹುಟ್ಟುವ ಭೀತಿಯೂ ಸಲ್ಲ. ಮೋದಿಯ ಭಾರತ ಯಾವ ಭೀತಿಯೂ ಹುಟ್ಟಿಸಲಿಲ್ಲ. ಹುಟ್ಟಿಸಲಾರದು ಕೂಡ. ಸುಖಾಸುಮ್ಮನೆ ಮೋದಿ ಯನ್ನು ಟೀಕಿಸುವುದು ಶ್ರೇಷ್ಠ ಪ್ರಜಾಪ್ರಭುತ್ವದ ಸೂಚಕವಲ್ಲ.

ಭಾರತದ ಪ್ರಜಾಪ್ರಭುತ್ವ ಜಗತ್ತಿಗೇ ಮೇಲ್ಪಂಕ್ತಿಯಾದುದು. ಎಷ್ಟೆಂದರೆ, ಕಮ್ಯುನಿಸ್ಟ್ ದೇಶಗಳು ಭಾರತದಂಥ ಪ್ರಜಾಪ್ರಭುತ್ವಕ್ಕೆ ಹಾತೊರೆಯುವಷ್ಟು! ಶ್ರೇಷ್ಠವಾದ ಗಣತಂತ್ರದ ವ್ಯವಸ್ಥೆಯಲ್ಲಿ ಇರುವ ನಾವು ಮೋದಿಯಂಥ ನಿಷ್ಕಲ್ಮಶ ನಿಸ್ವಾರ್ಥ ಪ್ರಾಮಾಣಿಕನನ್ನು ಎದುರಿಸುವುದಕ್ಕೆ ಅಂಥ ಪ್ರಮಾಣದ ನೈತಿಕತೆ ಬೇಕು! ಅದು ಸದ್ಯದ ಮಟ್ಟಿಗೆ ವಿರೋಧ ಪಕ್ಷದ ಯಾವನಲ್ಲೂ ಇಲ್ಲ! ನನ್ನ ದೇಶ, ನನ್ನ ಪ್ರಧಾನಿಯೆಂದು ಅಭಿಮಾನ ಮತ್ತು ಹೆಮ್ಮೆಯಿಂದ ಘಂಟಾಘೋಷವಾಗಿ ಅನಿವಾಸಿ ಭಾರತೀ ಯರು ಒಕ್ಕೊರಲಿನಿಂದ ಹೇಳುತ್ತಿರುವ ಈ ಕಾಲಘಟ್ಟದಲ್ಲಿ ಮೋದಿಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ದೇಶವಾಸಿಗಳು ಪ್ರದರ್ಶಿಸಬೇಕಿದೆ.

ಆದರೆ, ಮಜಾ ಏನೆಂದರೆ, ಉನ್ನತ ವ್ಯಾಸಂಗಕ್ಕೆ ಅಂತ ಉಕ್ರೇನಿಗೆ ಹೋದವರಿಗೆ ಯುದ್ಧ ಭೀತಿ ಮತ್ತು ಆ ವರ್ತೂಲದಿಂದ ಹೊರಬಂದು ತಾಯ್ನಾಡನ್ನು ಸೇರುವುದಕ್ಕೆ ಮೋದಿಯೇ ವಿಮಾನ ತಗೊಂಡು ಬರಬೇಕಿತ್ತು ಎಂದು ತಲೆಗೆಟ್ಟು ಬಾಯಿಗೆ ಬಂದಂತೆ ಹೇಳಿಕೆಯನ್ನು ಭಾರತಕ್ಕೆ ಬಂದಾದ ಮೇಲೆ ಹೇಳುತ್ತಿರುವುದು!

ಈ ದೇಶದ ಮೊದಲ ಪ್ರಧಾನಿ ಯಾರು? ದೇಶದ ರಾಜಧಾನಿ ಯಾವುದು? ಸ್ವಾತಂತ್ರ ದಿನಾಚರಣೆ ಯಾವಾಗ? ಜನೆವರಿ 26ರ ಮಹತ್ವ ವೇನು? ಮಹಾತ್ಮಾ ಗಾಂಧಿಗೂ ರಾಹುಲ್ ಗಾಂಧಿಗೂ ಏನು ಸಂಬಂಧ? ಸರಕಾರದಲ್ಲಿ ಯಾರ್‌ಯಾರು ಮಂತ್ರಿಗಳಿದ್ದಾರೆ? ವಿದೇಶಾಂಗ ಮಂತ್ರಿ ಯಾರು? ಎಂತ ಪ್ರಶ್ನಿಸಿದರೆ ಬ್ಬೆಬ್ಬೆಬ್ಬೆ ಅಂತ ಬಾಯಾಡಿಸುವವರಿಗೆ ಸ್ವಲ್ಪ ಯಾಮಾರಿದರೆ ಜೀವ ಹೋಗೇ ಬಿಡುತ್ತದೆಂಬುದು ಗೊತ್ತಾದ ತಕ್ಷಣ ಊರುಕೇರಿ, ಜಿಲ್ಲೆ, ರಾಜ್ಯ, ದೇಶ, ಪ್ರಧಾನಿ, ಎಂಬೆಸ್ಸಿ, ಮಿಲಿಟರಿ, ಹೆಲಿಕಾಪ್ಟರ್, ಯುದ್ದ ವಿಮಾನ, ಆರ್ಮಿ ಎಲ್ಲದರ ನೆನಪು ಒಮ್ಮೆಲೇ ಆಗಿ, ಜತೆಯಲ್ಲಿದ್ದವರ ಸಾವು ಕಣ್ಮುಂದೆ ಘಟಿಸಿದಾಗ ಒಳಗಿನ ಜಂಘಾಬಲವೇ ಕುಸಿದು ಹೋಗಿ, ಮೋದಿಗೆ, ಭಾರತದ ಸೇನೆಗೆ ಗಟ್ಸ್ ಇಲ್ಲ ಎಂಬಂಥ ಮಾತುಗಳೂ ಹುಟ್ಟಿಕೊಂಡು ಬಿಡುತ್ತವೆ.

ಸೇನೆಗೋ ಮೋದಿಗೋ ಗಟ್ಸ್ ಇದೆಯೋ ಇಲ್ಲವೋ ಆ ಮಾತು ಬದಿಗಿರಲಿ. ಮೋದಿಯ ಅಥವಾ ಭಾರತೀಯ ಸೇನೆಯ ಗಟ್ಸ್ ಅನ್ನು ಸವಾಲಾಗಿ ಪ್ರಶ್ನಿಸುವವರಿಗೆ ಗಟ್ಸ್ ಎಂದರೇನೆಂಬುದು ಜಗತ್ತಿಗೇ ಅರಿವಾಗುವಷ್ಟು, ಈ ಯುದ್ಧದ ಭೀಕರತೆ ಹುಟ್ಟಿಸಿಬಿಟ್ಟಿತು. ಏನೋ ಓದಬೇಕು ಅಂತ ದೇಶಬಿಟ್ಟು ಹೋದವರಿಗೆ ದೇಶಪ್ರೇಮದ ಬಗ್ಗೆ ಅರಿವಾಗುವುದು ಇಂಥ ಜೀವನ್ಮರಣ ಸಂದರ್ಭ-ಸನ್ನಿವೇಶಗಳು ಧುತ್ತೆಂದು ಎದುರಾದಾಗ! ಅದರಲ್ಲೂ ಇಂಗ್ಲಿಷ್ ಶಿಕ್ಷಣ ಪಡೆದು ನಿತ್ಯ ಬದುಕಿನಲ್ಲೂ ಇಂಗ್ಲಿಷಿನಲ್ಲೇ ಮಾತಾಡುವ ಜನರಿಗೆ ಯಾವ ಜೀವನ
ಮೌಲ್ಯಗಳು ಅಂತಸ್ಥವಾಗಿರಲು ಸಾಧ್ಯವೆಂಬುದನ್ನು ಮತ್ತೆ ಅವಲೋಕಿಸಬೇಕಿದೆ.

ಇರುವುದೇ ಇಲ್ಲ ಎಂಬ ವಾದವಲ್ಲ! ಆದರೆ, ಪ್ರಾಥಮಿಕ ಹಂತದಲ್ಲಾದರೂ ಮಾತೃಭಾಷೆಯ ಬೋಧನೆ ಆಗಬೇಕೆಂದೆನಿಸುವುದು ಇಂಥ ವರು ಮಾತಾಡುವುದನ್ನು ಕೇಳಿದಾಗಲೇ! ಪಾಪ, ಜೀವ ಬೆಳೆದಿದೆ. ವಿವೇಕ ಬೆಳೆಯಲಿಲ್ಲ! ಮೋದಿಯೇ ಎಲ್ಲದಕ್ಕೂ ಕಾರಣ ಎನ್ನುವುದಕ್ಕೆ ಯಾವ ಕಾರಣವೂ ಬೇಕಿಲ್ಲ. ವಿವೇಕವೂ ಬೇಕಿಲ್ಲ. ಕೇವಲ ದ್ವೇಷಭಾವವೇ ಸಾಕೆಂಬುದನ್ನು ಕಾಂಗ್ರೆಸ್, ಕಮ್ಯುನಿಸ್ಟ್, ಎಡಪಂಥದಂಥ ಅರಾಷ್ಟ್ರೀಯವಾದಿಗಳು, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ರೈತ ಮುಖಂಡರು ಕಿಸಾನ್ ಕಾಯಿದೆಯ ವಿರೋಧದ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭಗಳಲ್ಲಿ ಹುಟ್ಟಿಕೊಂಡು ಪ್ರವರ್ಧಮಾನಕ್ಕೆ ಎಲ್ಲ ಬಗೆಯ ವಿರೋಧಗಳಿಗೆ ಮೂಲಕಾರಣ ಏನೆಂಬುದನ್ನು ಅವರೇ ಪ್ರಚುರಪಡಿಸಿಕೊಂಡಿದ್ದಾರೆ.

ಅವನ್ಯಾರೋ ಮೋದಿಯನ್ನು ಪ್ರಶ್ನಿಸುತ್ತಾನೆ: ಸರ್ಜಿಕಲ್ ದಾಳಿಗೆ ಸಾಕ್ಷ್ಯವೇನು? ಉಕ್ರೇನ್‌ನಿಂದ ಎಷ್ಟು ಭಾರತೀಯರನ್ನು ಕರೆದು ಕೊಂಡು ಬಂದಿದ್ದೀರಿ? ಕರೋನಾ ಲಸಿಕೆಯನ್ನು ಎಷ್ಟು ಭಾರತೀಯ ನಾಗರಿಕರಿಗೆ, ಮಕ್ಕಳಿಗೆ ನೀಡಿದ್ದೀರಿ? ಉಕ್ರೇನ್ ದೇಶಕ್ಕೆ ಯಾಕೆ ಬೆಂಬಲವನ್ನು ನೀಡಿಲ್ಲ? ರಷ್ಯಾ ಉಕ್ರೇನ್ ಯುದ್ಧಕ್ಕೆ ಕಾರಣ ಯಾರು? ಉಕ್ರೇನಿಗೆ ಭಾರತದ ಮಿಲಿಟರಿ ಪಡೆಯನ್ನು ಯಾಕೆ ಕೊಂಡೊಯ್ಯಲಿಲ್ಲ? ಕಿಸಾನ್ ಕಾಯಿದೆ ವಿರುದ್ಧ ನಡೆಸಿದ ಪ್ರತಿಭಟನೆ ಮತ್ತು ಹೋರಾಟದ ಸ್ವರೂಪದಲ್ಲಿ ಅನೇಕ ರಹಸ್ಯಗಳು, ದೇಶದ್ರೋಹದ ಚಿಂತನೆಗಳು ಬಯಲಾಗಿದ್ದು ಜಗತ್ತಿಗೇ ತಿಳಿದಿದೆ.

ಒಬ್ಬ ಪ್ರಧಾನಿಯ ಘನತೆ ಮತ್ತು ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆಯುವುದಕ್ಕೆ ನಡೆಸಿದ ಎಲ್ಲ ಪ್ರಯತ್ನಗಳು ಆ ಪ್ರಧಾನಿ
ಯನ್ನು ಇನ್ನಷ್ಟು ಬಲಗೊಳಿಸುತ್ತಾ ಹೋಗಿದೆ. ಬಲಗೊಳಿಸಿದೆ. ಕಾಲಗತಿಯಲ್ಲಿ ಮೋದಿ ಎತ್ತರವನ್ನು ಏರುತ್ತಲೇ ಏರುಹಾದಿಯ ವಿಕಾಸ ಪಥದಲ್ಲಿದ್ದಾರೆ. ವಿಶ್ವವೇ ಮೋದಿಯನ್ನು ಗೌರವಿಸಿದೆ. ಆದರೆ ದೇಶದೊಳಗಿನ ಗೆದ್ದಲುಗಳಿಗೆ ಇನ್ನೂ ಎಚ್ಚರವಾಗಿಲ್ಲ. ಮೋದಿಯ ತಾಕತ್ತು, ಔದಾರ್ಯ, ರಾಜನೀತಿ, ರಾಜತಾಂತ್ರಿಕತೆ ಅರಿವಾದಂತಿಲ್ಲ. ಅರಿವಾದರೂ ಒಪ್ಪಿಕೊಳ್ಳುವುದು ಕಷ್ಟವಾಗಿದೆ. ಪ್ರಾಯಃ ಅರಿವಾಗುವುದೇ ಇಲ್ಲವೇನೋ! ಯಾಕೆಂದರೆ ಈ ಅರಿವು ಎಂಬುದು ಇವರಿಗೆ ಶಾಪವಾಗಿ ನೆಗೆಟಿವ್ ಅಪ್ರೋಚಾಗಿ ಬೆಳೆದಿದೆ.

ರಾಜಭೀತಿಯನ್ನು ಹುಟ್ಟಿಸುವ ಇವರು ಅರಾಜಕತೆಯಿಂದ ಹುಟ್ಟುವ ಭೀತಿಯಿಂದ ಪಾಪದ ಜನರನ್ನು ಭಯಗೊಳಿಸುತ್ತಾರೆ. ಮೇಕೆದಾಟು ವಿಚಾರಕ್ಕೂ ಮೋದಿಗೂ ಏನು ಸಂಬಂಧವಿದೆ? ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ಮೋದಿ ಯಾರು? ಅಷ್ಟಕ್ಕೂ ಮೋದಿ ಯಾಕೆ ನಿಲ್ಲಿಸಬೇಕು? ಅವೆರಡೂ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಮೋದಿಯ ಪ್ರವೇಶವನ್ನು ಆಗ್ರಹಿಸುವ ಇಂಥವರಿಗೆ ಬುದ್ಧಿಯ ಬರಗಾಲ ಎಷ್ಟಿರಬಹುದು? ದೇಶದ ಅದ್ಯಾವುದೋ ಸ್ಥಳದಲ್ಲಿ ರೈಲು ಮಗುಚಿಬಿದ್ದರೆ, ಬೆಂಕಿಬಿದ್ದರೆ, ವಿದ್ಯುತ್ ವ್ಯತ್ಯಯ ವಾದರೆ, ಇನ್ಯಾರೋ ಹೊಡೆದಾಡಿಕೊಂಡು ಸತ್ತರೆ, ನಾರಾಯಣ ಗುರು ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ಕೊಡದಿದ್ದರೆ, ಕ್ರಿಕೆಟಲ್ಲಿ ಸೋತರೆ, ಯಾವುದಾದರೂ ರಾಜಕಾರಣಿ ಹಗರಣದಲ್ಲಿ ಸಿಕ್ಕಿಬಿದ್ದರೆ, ನಿಸ್ಸಂ ಸಂಯಾದರೆ, ಸಂ ತನ್ನ ರಾಷ್ಟ್ರೀಯತೆಯನ್ನು ಅಭಿವ್ಯಕ್ತಿಸಿದರೆ, ಕೊನೆಯದಾಗಿ, ರಾಜನೀತಿಯ ಯಾವ ಕನಿಷ್ಠ ಅರಿವೂ ಇಲ್ಲದೆ ಹೋದಾಗ ನಾವು ಮೋದಿಯಂಥ ಅಪ್ರತಿಮ, ಅಪೂರ್ವ ರಾಷ್ಟ್ರೀಯತೆಯ ದ್ಯೋತಕವಾಗಿರುವ ವ್ಯಕ್ತಿತ್ವವನ್ನು ಏನೇಕೇನ ವಿರೋಧಿಸಲು ಅಣಕಿಸಲು ಆರಂಭಿಸುತ್ತೇವೆ.

ಅಂದರೆ ರಾಜಕೀಯದ ಬಗ್ಗೆ ನಮ್ಮ ಚಿಂತನಾ ಕ್ರಮವು ಎಷ್ಟೆಷ್ಟು ಬಾಲಿಶವಾಗುತ್ತ ಹೋಗುತ್ತದೋ ಅಷ್ಟಷ್ಟು ಹೆಚ್ಚಾಗುತ್ತ ನಾವು ರಾಜನಿಂದ ಪೌರುಷ ಪರಾಕ್ರಮಗಳನ್ಮು ಹೀಗೆ ವಾಮಮಾರ್ಗದಲ್ಲೂ ಅಪೇಕ್ಷಿಸುತ್ತ ಕಾಲ ಕಳೆಯುತ್ತೇವೆ. ಹಾಗೆ ನೋಡಿದರೆ, ಮೋದಿ
ಯನ್ನು ವಿರೋಽಸುವುದು ಹೆಚ್ಚುತ್ತಾ ಹೋಗುವುದರಿಂದ ಒಂದು ಲಾಭವೇನೆಂದರೆ, ಅಂತರಂಗದಲ್ಲೂ, ಬಹಿರಂಗದಲ್ಲೂ ಮೋದಿ ಮತ್ತಷ್ಟು ಬಲವಾಗುತ್ತಾರೆ. ಇದು ಭಾರತದಂಥ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ತೀರಾ ಅನಿವಾರ್ಯವಾಗುತ್ತದೆ.

ಈ ದೃಷ್ಟಿಯಿಂದ ಮೋದಿ ವಿರೋಽಗಳನ್ನು ಅಭಿನಂದಿಸಲೇಬೇಕು; ಮೋದಿಯನ್ನು ಸದೃಢಗೊಳಿಸುತ್ತಿರುವುದಕ್ಕೆ! ವಿರೋಧ ಹೆಚ್ಚಾದಾ ಗಲೇ ಆಸಕ್ತಿ ಕುತೂಹಲ ಹೆಚ್ಚುವುದು. ಭೈರಪ್ಪರ ಆವರಣ ಹೆಚ್ಚು ಹೆಚ್ಚು ಓದುಗರನ್ನು ಪಡೆದದ್ದರ ಹಿಂದೆ ಅನಂತಮೂರ್ತಿ ಅದನ್ನು ಕಾದಂಬರಿಯೇ ಅಲ್ಲೆಂಬ ಅಸಹನೆಯನ್ನು ವ್ಯಕ್ತಿಪಡಿಸಿದ್ದೂ ಒಂದು ಕಾರಣವಾಗಿದೆ! ಆ ಮಟ್ಟಿಗೆ ಅನಂತಮೂರ್ತಿಗೆ ಭೈರಪ್ಪರು ಋಣಿಯಾಗಿರಬೇಕು.

ಮೋದಿ ಕಾಲದಲ್ಲಿ ದೇಶದಲ್ಲಿ ಪರ್ಯಾಯ ಶಕ್ತಿಯನ್ನು ಸಾಧ್ಯವಿಲ್ಲ. ಇದೇ ಮೋದಿಯ ತಾಕತ್ತು. ಇಷ್ಟು ಮಾತುಗಳು ಸಾಕೆನಿಸಿ, ಕೊನೆಯ ಮಾತನ್ನು ದೇವನೂರು ಮಹಾದೇವರಿಗೆ ಹೇಳಬೇಕಿದೆ: ಮೊನ್ನೆ ಯುದ್ಧ ಪೀಡಿತ ನೆಲದಿಂದ ನಮ್ಮವರನ್ನು ಕರೆತರುವಾಗ ಗಾಂಧಿ ನಾಡಿ ನವರೋ, ಬುದ್ಧನ ನಾಡಿನವರೋ, ಅಂಬೇಡ್ಕರರ ನಾಡಿನವರೋ ಎಂದು ರಷ್ಯಾದ ಸೈನಿಕರು ನೋಡಿರಲು ಸಾಧ್ಯವಿಲ್ಲ. ಮೋದಿಯ ವಿದೇಶಾಂಗ ರಾಜನೀತಿ ಇಲ್ಲಿ ಕೆಲಸ ಮಾಡಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಷ್ಟಕ್ಕೂ ಈ ದೇಶ ಗಾಂಧಿ ಯದೂ ಅಲ್ಲ; ಬುದ್ಧನದೂ ಅಲ್ಲ; ಗೋಡ್ಸೆಯದೂ ಅಲ್ಲ: ಮೋದಿಯದೂ ಅಲ್ಲ. ಹಾಗಾದರೆ ಏನು? ಆಲೋಚಿಸಿ. ಆದರೆ, ಸದ್ಯಕ್ಕಂತೂ ಮೋದಿ ಭಾರತದಲ್ಲಿ ನಾವಿದ್ದೇವೆ; ನೀವೂ ಇದ್ದೀರಿ!