Friday, 18th October 2024

ವಿದ್ಯಾರ್ಥಿಗಳಿಗೆ ಕಲಿಕೆಯೇ ಮುಖ್ಯ ಗುರಿಯಾಗಬೇಕು !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ದಿನ ಕಳೆದಂತೆಲ್ಲ ಬದುಕು ಹೊಸ ಹೊದ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊರಿಸುತ್ತದೆ. ಆ ಜವಾಬ್ದಾರಿಗಳನ್ನು ಹೊತ್ತ ವ್ಯಕ್ತಿ ಅವುಗಳನ್ನು ಸಮರ್ಥವಾಗಿ ಎದುರಿಸಬೇಕೇ ಹೊರತು, ಅದರಿಂದ ಹಿಂದೆ ಸರಿಯಬಾರದು. ಹೀಗಾಗಿ ಬದುಕಿನ ಆ ಸವಾಲು ಗಳನ್ನು ಎದುರಿಸಬೇಕಾದರೆ, ವಿದ್ಯಾರ್ಥಿಗಳಾಗಿದ್ದಾಗ ವಿದ್ಯಾರ್ಥಿಗಳಿಗೆ ಕಲಿಕೆಯೇ ಮುಖ್ಯ ವಾಗಿರಬೇಕು.

ಹೆಣಭಾರದ ದೊಡ್ಡ ಗಂಟಿನೊಳಗೆ ಕಲ್ಕತ್ತಾದ ಚೆಂದ ಚೆಂದದ ಮಸ್ಲಿನ್ ಸೀರೆಗಳನ್ನು ಮಟ್ಟಸವಾಗಿ ಮಡಚಿಟ್ಟು ಅದರ ಮೇಲೊಂದು ತೆಳುವಾದ ಪಾರದರ್ಶಕ ಕವರಿನ ಹೊದಿಕೆಯನ್ನಿಟ್ಟು ಒಂದರ ಮೇಲೊಂದನ್ನು ಚಕಚಕನೆ ಪೇರಿಸಿಟ್ಟು ಅದನ್ನೆಲ್ಲ ಒಂದು ಹಳೆಯ ಉದ್ದನೆಯ ಕಾಟನ್ ಬಟ್ಟೆಯೊಳಗೆ ಬಂಧಿಸಿ ಗಂಟುಕಟ್ಟಿ ತನ್ನ TVS 50 ಮೊಪೆಡ್‌ಗೆ ಜಾರಿ ಹೋಗದಂತೆ ಬಿಗಿಯಾಗಿ ಕಟ್ಟಿ ಅದರ ಮುಂದೆ ಕುಳಿತು ಬೆಂಗಳೂರಿನ ಸಿಟಿ ಟ್ರಾಫಿಕ್ ಪೊಲೀಸರ ಕಣ್ಣಿಗೂ ಬೀಳದಂತೆ ಬಂದು ಅದೇ ಮುಗುಳ್ನಗೆಯೊಂದಿಗೆ, ’ದೀದೀ ಆಜ್ ಆಪ್ ಕೇ ಲಿ ಯೇ ಅಚ್ಚಾ ಸಾ ಸಾಡಿಯಾ ಲೇಕೇ ಆಯಾ ಹೂ ಅಂದಾಗ ಎಷ್ಟೇ ಬೇಡವೆಂದುಕೊಂಡು ಮನಸ್ಸನ್ನು ನಿಗ್ರಹಿಸಿಕೊಂಡರೂ ಒಂದೇ ಒಂದು ಸಲ ನೋಡಿ ಬಿಡೋಣ ಅಂದುಕೊಂಡು ಅದರಲ್ಲಿ ಆರೇಳು ಸೀರೆಗಳನ್ನು ಆರಿಸಿಕೊಂಡು ಇನ್ನೂ ಎಷ್ಟೊಂದು ಸೀರೆಗಳು ವಾಪಸ್ಸು ಹೋಗುತ್ತಿವೆಯ ಎಂದು ಪೇಚಾಡುವ ಈ ಹೆಣ್ಣು ಮನಸಿಗೆ ವಾರ್ಡ್ ರೋಬ್ ತುಂಬಿ ತುಳುಕುತಿದ್ದರೂ ತೃಪ್ತಿಯಿಲ್ಲ.

ಪವಿತ್ರಾ ಲೋಕೇಶ್ ಹಾಗೂ ಸುಂದರ ಶ್ರೀಯವರಿಂದ ಪರಿಚಯವಾದ ಅಭಿಜಿತ್  ಸುಮಾರು ಇಪ್ಪತ್ತು ವರುಷಗಳಿಂದಲೂ ಹೀಗೇ ಚೆಂದ ಚೆಂದದ ಸೀರೆಗಳನ್ನು ತಂದು ಕೊಡುತ್ತಲೇ ಇದ್ದಾನೆ. ಅದಲ್ಲ ವಿಷಯ. ದೀದೀ ಮೈ ಫಿಲ್ಮ್ ವಿಲ್ಮ್ ನಹೀ ದೇಕ್ತಾ ಹೂಂ ಮಗರ್ ಆಜ್ ಜರೂರ್ ಜಾವೂಂಗಾ. ಏಕ್ ಅಚ್ಚಾ ಸಾ film ಆಯಾ ಹೈ The Kashmir files’ ಆಪ್ ಭಿ ಜರೂರ್ ದೇಖಿಯೇ…. ಅಂದು ಗಂಟು ಕಟ್ಟಿಕೊಂಡು ಹೊರಟ.

ಉಳಿದ ದಿನಗಳಗಿದ್ದಿದ್ದರೆ ಕೂಡಲೇ ಬುಕ್ ಮೈ ಶೋ ಆಪ್‌ನಲ್ಲಿ ಟಿಕೆಟ್ ಬುಕ್ ಮಾಡಿ ಪಾಪ್ ಕಾರ್ನ್ ತಿನ್ನುತ್ತಾ ಮಗನೊಂದಿಗೆ ಸಿನೆಮಾ ನೋಡಿ ಬಂದು ಬಿಡುತ್ತಿದ್ದೆ. ಆದರೆ ಅವನಿಗೆ ಈಗ ಪರೀಕ್ಷೆಯ ಸಮಯ. ಅವನಿಗಿಂತ ಹೆಚ್ಚಾಗಿ ನನಗೇ ಟೆನ್ಷನ್ನು. ಹೀಗಾಗಿ ಅವನ ಮುಖ ಕಂಡಾಗಲೆಲ್ಲ ಏನು ಓದ್ತಾ ಇದೀಯಾ ಪುಟ್ಟಾ? ಎಷ್ಟು ಓದಿದೆ? ಎಷ್ಟು ನೆನಪಿದೆ? ಬರೀ ಓದಿದ್ರೆ ಆಗಲ್ಲ.
ಅದನ್ನ ಒಂದು ಸಲ ಬರೆದು practice ಮಾಡು ಅಂತೆಲ್ಲ ಪದೇಪದೆ ಹೇಳುವುದು ಕಂಡು, ಅಮ್ಮಾ exam ಇರೋದು ನಂಗೆ. ನೀನು ಟೆನ್ಷನ್ ಮಾಡ್ಕೊಬೇಡ. ನಾನು ಚೆನ್ನಾಗಿ ಬರೀತೀನಿ ಎನ್ನುತ್ತಾ ನನಗೆ ಸಮಾಧಾನ ಮಾಡುತ್ತಾನೆ.

ಅವನೇನು ದಡ್ಡನಲ್ಲ. ಆದ್ರೂ ಬರೆಯುವ ಸಮಯದಲ್ಲಿ ನೆನಪು ಬಂದು, ಅದನ್ನೆಲ್ಲ ಕೊಟ್ಟ ಸಮಯದಲ್ಲಿ ಸರಿಯಾಗಿ ಮುಗಿಸ ಬೇಕಲ್ಲ? ಕನಫ್ಯೂಸ್ ಆಗಿಬಿಟ್ಟರೆ, ಟೈಮ್ ವೇಸ್ಟ್ ಮಾಡಿಬಿಟ್ಟರೆ ಅಥವಾ ಪ್ರಶ್ನೆಯೇ ಅರ್ಥವಾಗದಿದ್ದರೆ ಅಂತೆಲ್ಲ ಧಾವಂತ ನನಗೆ. ಈ ಎರಡು ವರ್ಷಗಳು ಕಣ್ಮುಂದೆಯೇ ಬರೆಯುತ್ತಿದ್ದವನು ಈಗ ತಾನೊಬ್ಬನೇ ಶಿಕ್ಷಕರ ಸಮ್ಮುಖದಲ್ಲಿ ಪರೀಕ್ಷೆ
ಬರೆಯಲು ಹೋಗುತ್ತಿದ್ದಾನೆ. ರವಿ ಇದ್ದಿದ್ರೆ ಖಂಡಿತಾ ಚೆನ್ನಾಗಿ ಬೈಸಿಕೊಳ್ತಿದ್ದೆ. ನಿನ್ನ ಮಗನೇನು ಐಎಎಸ್ ಎಕ್ಸಾಮ್ ಬರೀತಿ ದಾನಾ? ಅವನಿಂದ ಎಷ್ಟು ಸಾಧ್ಯವಾಗತ್ತೋ ಅಷ್ಟು ಬರೀತಾನೆ. ನೀನು ಧಾವಂತ ಮಾಡಿಕೊಂಡರೆ ಅದನ್ನು ನೋಡಿ ಅವರ ಟೀಚರ್ರೇನೂ ಎಕ್ಸಟ್ರಾ ಮಾರ್ಕ್ಸ್ ಕೊಡಲ್ಲ ಸುಮ್ನಿರು ಮಾರಾಯ್ತಿ…

ಅಂತ ತಿಳಿ ಹಾಸ್ಯ ಮಾಡಿ, ಮಗನಲ್ಲೂ ಆತ್ಮಸ್ಥೈರ್ಯ ತುಂಬಿ, ನನ್ನ ಮನಸ್ಸಿನ ಆತಂಕವನ್ನೂ ಕಡಿಮೆಯಾಗಿಸುತ್ತಿದ್ದ ರು. ಆದರೆ ಈಗ ಅದನ್ನೆಲ್ಲ ಯಾರೊಂದಿಗೂ ಹೇಳಿಕೊಳ್ಳಲಾಗುವುದಿಲ್ಲ. ಹೇಳಿಕೊಂಡರೂ ಆ ಸಮಾಧಾನ ಸಿಗುವುದಿಲ್ಲ. ಎಲ್ಲರೂ ಪ್ರೀತಿಯಿಂದಲೂ, ಸ್ನೇಹದಿಂದಲೂ ಮಾತನಾಡಬಹುದು. ಆದರೆ ನನ್ನದು ಅನ್ನುವ ಅಧಿಕಾರ ತುಂಬಿದ ಸಲುಗೆಯ ಪ್ರೀತಿ ಯಿಂದ ಹೇಳುವ ಮಾತಿನ ಧಾಟಿಯೇ ಬೇರೆ.

ಎಲ್ಲರೂ ನಮ್ಮವರೇ. ಆದರೆ ಯಾರೂ ನಮ್ಮವರಲ್ಲ ಅನ್ನುವಂಥ ಅನಾಥ ಭಾವ. ದಿನ ಕಳೆದಂತೆಲ್ಲ ಪ್ರತಿ ಯೊಂದು ಕೆಲಸ ಮಾಡುವಾಗಲೂ ಅವರ ನೆನಪು ಸಾಕಷ್ಟು ಕಾಡುತ್ತ, ಅವರು ಎಷ್ಟೆಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಲೂ ಎಷ್ಟು ಜೋವಿ ಯಲ್ ಆಗಿರ್ತಿದ್ರಲ್ಲ… ನನ್ನಿಂದೇಕೆ ಸಾಧ್ಯವಾಗ್ತಿಲ್ಲ? ಅನ್ನುವ ಪ್ರಶ್ನೆ ಎದ್ದು ಅವರಿಲ್ಲದೆ ಉಂಟಾಗಿರುವ ದೊಡ್ಡ ಶೂನ್ಯವನ್ನು ತುಂಬಿಕೊಳ್ಳಲು ತೀವ್ರವಾಗಿ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ನನ್ನ ಪ್ರತಿಯೊಂದು ಆಲೋಚನೆ ಯಲ್ಲೂ ಅವರೇ ತುಂಬಿ ಹೋಗಿ ಕೆಲವೊಮ್ಮೆ ಹೆಜ್ಜೆ ಎತ್ತಿಡಲಾಗದಷ್ಟು ಸೋತು ಹೋಗುತ್ತೇನೆ. ಮತ್ತವರ ಮಾತುಗಳನ್ನೇ ನೆನಪು ಮಾಡಿಕೊಂಡು ಎದ್ದು ನಿಲ್ಲುವ ಪ್ರಯತ್ನ ಮಾಡುತ್ತೇನೆ. ಬಿಟ್ಟು ಹೋದವರಿಗಿಂತ ಉಳಿದು ಹೋದವ ರಿಗೇ ಹೆಚ್ಚು ಸಂಕಟ!

ಅಮ್ಮಾ, ನಿನ್ನ ಸ್ಕೂಲ್ ಲೈಫಲ್ಲಿ ನೀನು ಬ್ರಿಲಿಯಂಟ್ ಸ್ಟೂಡೆಂಟಾ? ಎಂದು ಕೇಳುತ್ತಾ ನನ್ನ ಆಲೋಚನೆಗಳ ಓಟಕ್ಕೆ ಬ್ರೇಕು ಹಾಕಿದ ಮಗ. ಇಲ್ಲಪ್ಪ, I am always an average student.. ಅಂದು ನಕ್ಕೆ. ಆದರೆ ನನಗಿದ್ದ ಸೌಲಭ್ಯಗಳು, ಅವಕಾಶಗಳು, ಹಿನ್ನೆಲೆ ಎಲ್ಲವೂಗಳನ್ನು ಉಪಯೋಗಿಸಿಕೊಂಡು ನನ್ನಿಂದ ಅಷ್ಟು ಮಾತ್ರ ಸಾಧಿಸಲು ಸಾಧ್ಯವಾಯಿತು. I never failed in any class till my graduation ಅಂದೆ. ಮತ್ತೆ ಸರ್ ಎಂ. ವಿಶ್ವೇಶ್ವರಯ್ಯನವರು ಬೀದಿ ದೀಪದ ಬೆಳಕಿನಲ್ಲಿ ಓದಿ ಬೆಸ್ಟ್ ಇಂಜಿನಿಯರ್ ಆದ್ರು. ಇವತ್ತು ಕೃಷ್ಣರಾಜ ಸಾಗರದಂತಹ ಆಣೆಕಟ್ಟನ್ನು ಕಟ್ಟಿ ಕಾವೇರಿ ನದಿಯ ನೀರನ್ನು ರೈತರಿಗೆ ಅನುಕೂಲವಾಗುವಂತೆ ಮಾಡಿದ ಮಹನೀಯರು ಅಂತೆಲ್ಲ ನೀನೇ ಹೇಳಿzಯಲ್ಲ? ಹಾಗಾದ್ರೆ ನಿಂಗ್ಯಾಕೆ ಆಗ್ಲಿಲ್ಲ? ಅನ್ನುವ ಮರುಪ್ರಶ್ನೆ.

ಹೀಗೇ ಬಿಟ್ಟರೆ ಈ ಚೋಟಾ ಜರ್ನಲಿಸ್ಟು ನನ್ನನ್ನು ಬಾಣಲಿಗೆ ಹಾಕಿ ಹುರಿದುಬಿಡುತ್ತಾನೆ ಅನ್ನಿಸಿ ಮಾತು ಮರೆಸಲು ನಿಂಗೊತ್ತಾ? ಅಪ್ಪ, ಅವರಮ್ಮ ಇಬ್ಬರೂ ಒಟ್ಟಿಗೆ ಎಸ್‌ಎಸ್ ಎಲ್‌ಸಿ ಎಕ್ಸಾಮ್ ಬರೆದಿದ್ರಂತೆ ಅಂದೆ. ಹೌದಾ? ಯಾಕೆ ಅಜ್ಜಿ ಮೊದಲೇ ಓದಿ ರ್ಲಿಲ್ವಾ? ಅಂದ. ಅದೆಲ್ಲ ದೊಡ್ಡ ಕಥೆ. ನಿಂಗೆ ನಿಧಾನಕ್ಕೆ ಹೇಳ್ತೀನಿ. ಆದರೆ ಇಂಟರಸ್ಟಿಂಗ್ ವಿಷಯ ಅಂದ್ರೆ ಎಸ್‌ಎಸ್‌ಎಲ್‌ಸಿ ಅಪ್ಪ fail ಆಗಿದ್ರಂತೆ. ಅವರಮ್ಮ ಪಾಸಾಗಿದ್ರಂತೆ. ಹೇ ಹೋಗಮ್ಮಾ, ನೀನು ಬರೀ ಸುಳ್ಳೇ ಹೇಳ್ತೀಯ. ಅಪ್ಪ ಫೇಲ್ ಆಗಿರೋಕೆ ಚಾನ್ಸೇ ಇಲ್ಲ ಅಂದ. ಅವರು ಅದೊಂದೇ ಸಲ ಫೇಲ್ ಆಗಿದ್ದು.

ಆದ್ರೆ ಅವರ ಪೋಸ್ಟ್ ಗ್ರಾಜುಯೇಷನ್ ನಲ್ಲಿ ಅವರು ಗೋಲ್ಡ್ ಮೆಡಲಿಸ್ಟಂತೆ ಗೊತ್ತಾ? ಅಪ್ಪಂಗೆ Peಈ ಮಾಡಬೇಕೂ ಅಂತ ಬಹಳ ಆಸೆ ಇತ್ತು. ಅದಕ್ಕಾಗಿ ಹಂಪಿ ಯೂನಿವರ್ಸಿಟಿಯಲ್ಲಿ ಎಲ್ಲ ಸಿದ್ಧತೆಯನ್ನೂ ಮಾಡಿಟ್ಟಿದ್ರು. ಆದರೆ ಅದೊಂದು ಆಸೆ ಪೂರೈಸಿಕೊಳ್ಳೋಕೆ ಆಗ್ಲೇ ಇಲ್ಲ. ನೀನಾದ್ರೂ Ph ಈ ಮಾಡಿ ಅವರ ಆಸೆಯನ್ನು ಪೂರೈಸು. ಆಗ ಅವರ ಮನಸ್ಸಿಗೂ ತೃಪ್ತಿ ಯಾಗತ್ತೆ ಅಂದೆ. ಆಯ್ತಮ್ಮ, ಅಪ್ಪಂಗೆ ಖುಷಿ ಆಗತ್ತೆ ಅಂದ್ರೆ ಖಂಡಿತಾ ಮಾಡ್ತೀನಿ ಅಂದು ಓದಲು ಕುಳಿತ.

ನಿಜವಾಗಿಯೂ ಸಮಸ್ಯೆ ಇರುವುದು ಮಕ್ಕಳಲ್ಲಿ ಅಲ್ಲ. ದೊಡ್ಡವರಾದ ನಮ್ಮ. ಅವರ ಮುಂದೆ ವಿನಾಕಾರಣ ಕಂಪ್ಲೇಂಟಿನ ಬಾಕ್ಸು ಬಿಚ್ಚಿ ಕೂರುತ್ತೇವೆ. ಅವರ ಸಮಸ್ಯೆಯನ್ನೇ ಅರ್ಥ ಮಾಡಿಕೊಳ್ಳದೆ ನಮ್ಮ ನಿರೀಕ್ಷೆಯಂತೆ ಅವರಿರಬೇಕು ಎಂದು ಬಯಸು ತ್ತೇವೆ. ಮತ್ತೂ ಕೆಲವರು ತಮ್ಮ ಮಾತುಗಳಿಂದ ಅವರನ್ನು ಸಾಕಷ್ಟು discourage ಕೂಡ ಮಾಡ್ತಾರೆ. ಡಾಕ್ಟರು, ಇಂಜಿನಿಯರ್ ಓದಿದವರೆಲ್ಲ ಬೀದಿ ಬದಿಯಲ್ಲಿ ಸಣ್ಣ ಕ್ಲಿನಿಕ್ ಇಟ್ಟುಕೊಂಡೋ, ಆಟೋರಿಕ್ಷಾ ಓಡಿಸುತ್ತಲೋ ಜೀವನ ಮಾಡ್ತಿದ್ದಾರೆ. ಓದು ಮುಖ್ಯವಲ್ಲ. ಹಣವೇ ಮುಖ್ಯ ಎಂದು ತಲೆತುಂಬಿ ಓದಿನ ಬಗ್ಗೆ ಇರುವ ಆಸಕ್ತಿಯಿಂದ ವಿಮುಖಗೊಳ್ಳುವಂತೆ ಮಾಡುತ್ತಾರೆ. ಆದರೆ ಅದು ಅವರಿಗೆ ಸಿಕ್ಕ ಬದುಕು. ಅದೇ ಎಲ್ಲರದ್ದೂ ಆಗಬೇಕೆಂಬ ನಿಯಮವೇನೂ ಇಲ್ಲ.

ಅವರ ಜೊತೆಯ ಓದಿದವರು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಾ ಹೆಸರು, ಕೀರ್ತಿ ಹಣ ಎಲ್ಲವನ್ನೂ ಗಳಿಸುತ್ತಿರುವುದು ಕೂಡ ನಮ್ಮ ಕಣ್ಣ ಮುಂದೆಯೇ ಇರುತ್ತದೆ. ಆಯ್ಕೆ ನಮ್ಮದಾಗಿರಬೇಕಷ್ಟೆ. ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ತಮ್ಮ ಮೇಲೆ
ನಂಬಿಕೆಯಿಟ್ಟು ಶ್ರದ್ಧೆಯಿಂದ ಓದಬೇಕು. ಶ್ರದ್ಧೆಗೆ ಉತ್ತಮ ಫಲ ಖಂಡಿತಾ ಸಿಕ್ಕೇ ಸಿಗುತ್ತದೆ. Dream Big and achieve Big. Success will automatically follows you. ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಯೇ ಮುಖ್ಯ ಗುರಿಯಾಗಿರಬೇಕು.

ಹಾಗೆಯೇ ಕಲಿಕೆಯ ಜೊತೆಯಲ್ಲಿ ಏನನ್ನು ಕಲಿಯಬೇಕು ಅನ್ನುವುದು ಕೂಡಾ ಅಷ್ಟೇ ಮುಖ್ಯ. ಈಗಿನ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಮೊಬೈಲುಗಳು ಅನಿವಾರ್ಯ ಅಗತ್ಯವಾಗಿ ಕೈಗೆ ಸಿಕ್ಕು ಬೇಕಾಗಿದ್ದರ ಜೊತೆಗೆ ಬೇಡದ್ದೂ ಕಾಣುವಂತಾಗಿ ಅದರ ಮೂಲಕ ಅವರು ವಯಸ್ಸಿಗೆ ಮೀರಿದ ಸಾಕಷ್ಟು ಅನಗತ್ಯ ವಿಷಯಗಳನ್ನು ಯಾರ ಗಮನಕ್ಕೂ ಬಾರದಂತೆ ಕಲಿತುಬಿಡುತ್ತಾರೆ. ವಿದ್ಯಾರ್ಥಿ
ಜೀವನವೆನ್ನುವುದು ಅದೆಷ್ಟು ಅಮೂಲ್ಯವಾದದ್ದು. ದಿನಕಳೆದಂತೆಲ್ಲ ಬದುಕು ಒಂದೊಂದಾಗಿ ಜವಾಬ್ದಾರಿಗಳ ಮೂಟೆಯನ್ನು
ಹೊರಿಸುತ್ತಾ ಮುಂದಮುಂದಕ್ಕೆ ಕೊಂಡೊಯ್ಯುತ್ತದೆಯೇ ಹೊರತು ಹಿಂತಿರುಗಿ ಹೋಗುವ ಅವಕಾಶವನ್ನೇ ಕೊಡುವುದಿಲ್ಲ. ಮುಂದೊಂದು ದಿನ ಛೇ, ನಾನೂ ಎಲ್ಲರ ಹಾಗೆ ಓದಿ ವಿದ್ಯಾವಂತನಾಗಬೇಕಿತ್ತು ಅನ್ನುವ ಕೊರಗು ನಿಮ್ಮನ್ನು ಕಾಡುವಂತಾಗ ದಿರಲಿ.

ಅದಕ್ಕಾಗಿ ದೊರೆತಿರುವ ಸಮಯವನ್ನು ಸದ್ಬಳಕೆ ಮಾಡಿಕೊಂಡು ನಿಮಗೆ ನೀವೇ ಗೆಳೆಯರಾಗಿ. ಕೇವಲ ನಿಮಗಾಗಿ, ನಿಮ್ಮ ಒಳಿತಿಗಾಗಿ, ನಿಮ್ಮ ಏಳಿಗೆಗಾಗಿ ಶ್ರದ್ಧೆಯಿಟ್ಟು ಓದಿ. ನಿಮ್ಮ ಜೊತೆಯ ಕುಳಿತು ನಿಮ್ಮಂತೆಯೇ ಪಾಠ ಕೇಳಿದ ನಿಮ್ಮದೇ ಸಹಪಾಠಿ ನಿಮಗಿಂತ ಹೆಚ್ಚಿನ ಅಂಕಗಳಿಸಲು ಸಾಧ್ಯವೆಂದಾದರೆ ನನಗೇಕೆ ಸಾಧ್ಯವಿಲ್ಲ ಎನ್ನುವ ಸವಾಲನ್ನು ನಿಮಗೆ ನೀವೇ ಹಾಕಿಕೊಂಡು
ಎಲ್ಲರನ್ನೂ ಮೀರಿಸುವಂಥಾ ವಿದ್ಯಾರ್ಥಿಯಾಗಿ ರೂಪುಗೊಂಡು ಉತ್ತಮ ಮಾದರಿಯಾಗಿ ನಿಲ್ಲುವಂತಾಗಲಿ.

ಅಕ್ಷರದ ಸಕ್ಕರೆಯ ಕಹಿಯೆಂದು ತಿಳಿದು
ಪುಸ್ತಕವ ಕಸಕಿಂತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆಬರಹವೆಂದು
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ
ನನ್ನ ತಮ್ಮಾ ಮಂಕುತಿಮ್ಮ….