ಶಿಶಿರ ಕಾಲ
ಶಿಶಿರ ಹೆಗಡೆ
shishirh@gmail.com
ಟೆಸ್ಲಾ ಕಾರು. ಅತ್ಯಾಧುನಿಕತೆಯಿಂದಲೇ ಇದು ಹೆಸರುವಾಸಿ. ನೀವು ಕಾರಿನ ಬಗ್ಗೆ ಕ್ರೇಜ್ ಉಳ್ಳವರಾದರೆ ಟೆಸ್ಲಾ ಕಾರಿನ ಹೆಸರು, ಸುದ್ದಿ
ಕೇಳಿಯೇ ಇರುತ್ತೀರಿ. ಇದು ಯಾವಾಗ ಭಾರತಕ್ಕೆ ಬರಬಹುದು ಎಂದು ಹುಡುಕಾಡಿಯೇ ಇರುತ್ತೀರಿ. ಅಮೆರಿಕದ ಕಾರು ಕಂಪನಿಯ ಒಡೆಯ ಎಲಾನ್ ಮಸ್ಕ್‌ನ ಬಗ್ಗೆ ಕೂಡ ಕೇಳಿಯೇ ಇರುತ್ತೀರಿ. ಈ ಕಾರಿನ ಬಗ್ಗೆ ಚಿಕ್ಕದಾಗಿ, ಚೊಕ್ಕದಾಗಿ ಹೇಳುವುದಾದರೆ ಮೊದಲನೆಯ ದಾಗಿ ಇದು ಎಲೆಕ್ಟ್ರಿಕ್ ಕಾರು.
ಎಂದರೆ ಇದಕ್ಕೆ ಸೈಲೆನ್ಸರ್ ಪೈಪ್ ಇರುವುದಿಲ್ಲ – ಹೋಗೆ ಉಗುಳುವುದಿಲ್ಲ. ಎರಡನೇ ಯದೆಂದರೆ ಇದು ಟೆಕ್ ಕಾರ್ – ಇದರಲ್ಲಳ ವಡಿಸಿರುವ ಸಾಫ್ಟ್ ವೇರ್ ಈ ಕಾರನ್ನು ತಾನೇ ಡ್ರೈವ್ ಮಾಡಿಕೊಂಡು ಹೋಗಬಲ್ಲದು. ಎಲೆಕ್ಟ್ರಿಕ್ ಕಾರಿನ ವಿಚಾರ ನಿನ್ನೆ ಮೊನ್ನೆ ಯದಲ್ಲ. ಪೆಟ್ರೋಲ, ಡೀಸೆಲ್, ಹೊಗೆ, ವಾಯು ಮಾಲಿನ್ಯ – ಶಬ್ದ ಮಾಲಿನ್ಯ ಎಂಬಿತ್ಯಾದಿ ಚರ್ಚೆಯಾಗುವಾಗಲೆಲ್ಲ ಎಲೆಕ್ಟ್ರಿಕ್ ವಾಹನಗಳೇ ಅದಕ್ಕೆಲ್ಲ ಪರಿಹಾರ ಎನ್ನುವ ವಾದ-ಪ್ರತಿವಾದ ಸಾಮಾನ್ಯ.
ಆದರೆ ಆಶ್ಚರ್ಯವಾಗಬಹುದು, ಮೊದಲ ಕಚ್ಚಾ ಎಲೆಕ್ಟ್ರಿಕ್ ಕಾರ್ ತಯಾರಾಗಿದ್ದು ಇಂದು ನಿನ್ನೆಯಲ್ಲ – 90 ವರ್ಷಗಳ ಹಿಂದೆ, 1832 ರಲ್ಲಿ. ನಂತರದಲ್ಲಿ 1900ರ ವರೆಗೆ ಅಂಥದ್ದೇನೂ ಬದಲಾವಣೆ – ಆವಿಷ್ಕಾರಗಳಾಗಲಿಲ್ಲ. 20ನೇ ಶತಮಾನದ ಆದಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಜನಪ್ರಿಯತೆ ಹೆಚ್ಚಾಗಿತ್ತು. ಆದರೆ ಅದೆಲ್ಲ ಕೇವಲ ಇಪ್ಪತ್ತು ವರ್ಷ ಮಾತ್ರ. ಆ ಸಮಯದಲ್ಲಿ ಪೆಟ್ರೋಲ್ ಎಂಜಿನ್‌ನದ ಆವಿಷ್ಕಾರ ಮತ್ತು ಪೆಟ್ರೋಲಿಯಂ ಭೂಮಿಯಿಂದ ತೆಗೆಯುವುದು ಅಗ್ಗವಾಗುತ್ತಿದ್ದಂತೆ ಎಲೆಕ್ಟ್ರಿಕ್ ಕಾರಿನಿಂದ ಜನರ ಗಮನ ಪಕ್ಕಕ್ಕೆ ಸರಿದು ಬಿಟ್ಟಿತು.
ನಂತರದಲ್ಲಿ, 1960ರ ಸಮಯದಲ್ಲಿ ಮತ್ತೆ ಪೆಟ್ರೋಲ್ ಬೆಲೆ ಜಾಗತಿಕ ಯುದ್ಧಗಳಿಂದಾಗಿ ಮೇಲೇರಿದಾಗ – ಹೀಗೆ ಯಾವ ಯಾವಾಗ ಯುದ್ಧಗಳಾದವೋ ಮತ್ತು ಪೆಟ್ರೋಲ್ ಬೆಲೆ ಏರಿತೋ ಆಗೆಲ್ಲ ಈ ಎಲೆಕ್ಟ್ರಿಕ್ ಕಾರು ತಯಾರಾಗಬೇಕು ಎನ್ನುವ ಕೂಗುಗಳು ಕೇಳಿಸಿದವು – ಅಷ್ಟೆ. 2000ದಲ್ಲಿ ಟೊಯೋಟಾದ ಹೈಬ್ರಿಡ್ ಕಾರು ಜಾಗತಿಕವಾಗಿ ಬಹಳ ಜನಪ್ರಿಯವಾಯಿತು. ಹೈಬ್ರಿಡ್ ಎಂದರೆ ಕಾರು ಪೆಟ್ರೋಲ್ ನಲ್ಲಿ ಚಲಿಸುವಾಗ ಅದರಲ್ಲಿರುವ ಬ್ಯಾಟರಿ ಚಾರ್ಜ್ ಆಗುವುದು ಮತ್ತು ಟ್ರಾಫಿಕ್‌ನಲ್ಲಿ ಸಿಲುಕಿದಾಗ ಪೆಟ್ರೋಲ್ ಎಂಜಿನ್‌ನ ಬದಲಿಗೆ ಬ್ಯಾಟರಿಯಿಂದ ಕಾರು ಚಲಿಸುವುದು.
ಇದು ಅತ್ಯಂತ ಯಶಸ್ವೀ ಪ್ರಯೋಗ. ಇದರಿಂದಾಗಿ ಕಾರಿಗೆ ಅಸಾಧ್ಯವೆನಿಸಿದ ಮೈಲೇಜ್ ಸಾಧ್ಯವಾಯಿತು. ಅಲ್ಲಿಂದೀಚೆಗೆ ಪೆಟ್ರೋಲ್ ಬೆಲೆ, ಪೆಟ್ರೋಲ್ ಸೀಮಿತತೆ ಎಂಬಿತ್ಯಾದಿ ಕಾರಣಕ್ಕೆ ಸಂಪೂರ್ಣ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿ ಪಡಿಸುವ ಕೆಲಸ ಭರದಿಂದ ನಡೆದಿದೆ.
ಸಂಪೂರ್ಣ ಎಲೆಕ್ಟ್ರಿಕ್ ಕಾರು – ಇಂದಿಷ್ಟು ಸಮಸ್ಯೆಗಳಿವೆ. ಕಾರೆಂದರೆ ಸಾಮಾನ್ಯವಾಗಿ ಹತ್ತಿರದ ಮತ್ತು ದೂರದ, ಎರಡೂ ಪ್ರಯಾಣಕ್ಕೆ ಆಗಬೇಕು. ಮನೆಯಲ್ಲಿ ಚಾರ್ಜ್ ಮಾಡಿಕೊಂಡು ನೂರಿನ್ನೂರು ಕಿಲೋಮೀಟರ್ ಹೋದ ನಂತರ ಚಾರ್ಜ್ ಮುಗಿದುಬಿಟ್ಟರೆ ಮುಂದೆ ಹೋಗುವುದು, ಮರಳಿ ಬರುವುದು ಹೇಗೆ ಎನ್ನುವುದು.
ಈ ಸಮಸ್ಯೆ ಬಗೆಹರಿಸಿದಾಗ ಮಾತ್ರ, ಬೇಕೆಂದಲ್ಲಿಗೆ ಸ್ವಚ್ಛಂದವಾಗಿ ಪೆಟ್ರೋಲ್ ಕಾರಿನಂತೆ ಹೋಗಿ ಬರುವಂತಾದಾಗ ಮಾತ್ರ ಇದೊಂದು ಜನರು ಒಪ್ಪುವ ಕಾರಾಗುತ್ತದೆ ಅಲ್ಲವೇ? ಇಲ್ಲದಿದ್ದರೆ ಇದು ಕೇವಲ ಊರೊಳಗೆ ಓಡಾಡಲಷ್ಟೇ ಸೀಮಿತವಾಗಿಬಿಡುತ್ತದೆ.
ಅದಲ್ಲದೆ ಹೊರಗೆ ಹೋದಾಗಲೆಲ್ಲ ಬ್ಯಾಟರಿ – ಚಾರ್ಜಿನದೇ ತಲೆಬಿಸಿಯಾಗುತ್ತಿರುತ್ತದೆ. ಈ ಸಮಸ್ಯೆಯನ್ನು ತೀರಾ ವ್ಯವಸ್ಥಿತವಾಗಿ ಪರಿಹರಿಸಲು ಹೊರಟ ಭೂಪನೇ ಎಲಾನ್ ಮಾಸ್ಕ.
ಎಲಾನ್, ಟೆಸ್ಲಾ ಕಂಪನಿಯ ಸ್ಥಾಪಕನೇನಲ್ಲ. ಆ ಕಂಪನಿಯ ಉಗಮ, ನಂತರದಲ್ಲಿ ಈ ಕಂಪನಿಯಲ್ಲಿ ಎಲಾನ್ ಹಣ ತೊಡಗಿಸಿದ್ದು, ನಂತರದಲ್ಲಿ ಕಂಪನಿಗೆ ಹೂಡಿಕೆದಾರರನ್ನು ಕರೆತಂದದ್ದು ಇವೆಲ್ಲ ಈ ಲೇಖನದಮಟ್ಟಿಗೆ ಅಪ್ರಸ್ತುತ. ಅಷ್ಟಕ್ಕೂ, ಹಿಂದೆ ಹೇಳಿದಂತೆ
ಎಲೆಕ್ಟ್ರಿಕ್ ಕಾರೇನು ಹೊಸ ಆವಿಷ್ಕಾರವೇನಲ್ಲ. ಆದರೆ ಗಮನಿಸಬೇಕಾದದ್ದು ಆತ ಈ ಕಂಪನಿಯನ್ನು ಬೆಳೆಸಿದ, ಎಲೆಕ್ಟ್ರಿಕ್ ಕಾರು ನಿತ್ಯ ಬಳಸುವಂತಾಗಲು ಇಡೀ ಒಂದು ವ್ಯವಸ್ಥೆಯನ್ನೇ ಅಮೆರಿಕದುದ್ದಗಲಕ್ಕೂ ಕಟ್ಟಿ ನಿಲ್ಲಿಸಿದ್ದು.
ಇಂದು ಅಮೆರಿಕದಲ್ಲಿ ಸುಮಾರು 900 ಟೆಸ್ಲಾದ ಕಾರು ಚಾರ್ಜಿಂಗ್ ಸ್ಟೇಷನ್‌ಗಳಿವೆ. ಇದು ದೇಶದಲ್ಲಿರುವ ಒಂದೂವರೆ ಲಕ್ಷ ಪೆಟ್ರೋಲ್ ಪಂಪ್‌ಗಳ ಸಂಖ್ಯೆಗೆ ಹೋಲಿಸುವಂತಿಲ್ಲ. ಆದರೆ ಅಮೆರಿಕದ ಯಾವುದೇ ತುದಿಯಿಂದ ಇನ್ನೊಂದು ತುದಿಗೆ ಹೋಗಲು ಬೇಕಾಗುವಷ್ಟು ವ್ಯವಸ್ಥೆ ಈಗ ಸಾಧ್ಯವಾಗಿದೆ. ಕಾರು ಹತ್ತಿ ಹೋಗುವ ಜಾಗವನ್ನು ಕಾರಿನ ಐಪ್ಯಾಡ್‌ನಂತಹ ಪರದೆಯಲ್ಲಿ ಟೈಪ್ ಮಾಡಿದರೆ ಮಾರ್ಗ ಮಧ್ಯದಲ್ಲಿ ಎಲ್ಲಿ ಚಾರ್ಜರ್‌ಗಳಿವೆ, ಎಲ್ಲಿ ನಿಲ್ಲಿಸಬೇಕು, ಚಾರ್ಜ್ ಮಾಡಿಕೊಳ್ಳಬೇಕು ಎನ್ನುವುದನ್ನು ಕರಾರುವಕ್ಕಾಗಿ ತೋರಿಸುತ್ತದೆ.
ಅಲ್ಲಲ್ಲಿ ನಿಂತು ಒಂದಿಷ್ಟು ಹೊತ್ತು ಚಾರ್ಜ್ ಮಾಡಿಕೊಂಡು ಆಮೇಲೆ ಮುಂದುವರಿದರಾಯ್ತು. ಆದರೂ ಇದು ಇನ್ನು ಕೂಡ ಸುಧಾರಿಸುವ ಅವಶ್ಯಕತೆಯಿದೆ ಎನ್ನುವುದು ಸುಳ್ಳಲ್ಲ. ಟೆಸ್ಲಾ ಮೊದಲ ಕಾರು ರೋಡ್‌ಸ್ಟರ್ ಬಿಡುಗಡೆ ಮಾಡಿದಾಗ ಅದಕ್ಕೆ ಎರಡು ಸವಾಲುಗಳಿದ್ದವು. ಮೊದಲನೆಯದು ಕಾರಿನ ಉತ್ಪಾದನಾ ವೆಚ್ಚ – ಆಗ ಕಾರಿನ ಮಾರಾಟದ ಬೆಲೆ ಸುಮಾರು ಒಂದು ಲಕ್ಷ ಡಾಲರ್ (ಇವತ್ತಿನ ಎಪ್ಪತ್ತೈದು ಲಕ್ಷ ರೂಪಾಯಿ). ರೋಡ್‌ಸ್ಟರ್ ನಾಲ್ಕೇ ಸೆಕೆಂಡಿಗೆ ನೂರು ಕಿಲೋಮೀಟರ್ ಪ್ರತಿ ಗಂಟೆಯ ವೇಗ ತಲುಪಬಲ್ಲ ಎಲೆಕ್ಟ್ರಿಕ್ ಕಾರಾಗಿ ತ್ತೇನೋ ನಿಜ. ಆದರೆ ಅದು ಬಿಟ್ಟರೆ ಬೇರೇನೂ ಹೇಳಿಕೊಳ್ಳುವ ವಿಶೇಷಗಳಿರಲಿಲ್ಲ.
ಎರಡನೆಯ ಸವಾಲೆಂದರೆ ಆ ಕಾರನ್ನು ಪೂರ್ಣ ಚಾರ್ಜ್ ಮಾಡಲು ಒಂದರಿಂದ ಎರಡು ದಿನ ಬೇಕಾಗುತ್ತಿತ್ತು. ಈ ಕಾರಣಕ್ಕೆ ಎಲೆಕ್ಟ್ರಿಕ್ ಕಾರಿನ ಸಾಧ್ಯತೆಯೇ ಪ್ರಶ್ನೆಯಾಗಿತ್ತು. ಅಂದು ಟೆಸ್ಲಾ ಕಂಪನಿ ದಿವಾಳಿಯತ್ತ ಬಂದಾಗ ಅದನ್ನು ಕೈಕೊಟ್ಟು ಮೇಲಕ್ಕೆತ್ತಿದ್ದು ಅಮೆರಿಕದ ಸರಕಾರ. ಸರಕಾರ ಇದರ ಸಾಧ್ಯತೆ, ಅದಕ್ಕಿಂತ ಮಿಗಿಲಾಗಿ ಅವಶ್ಯಕತೆಯನ್ನು ಮನಗಂಡು ಸಾಲ ಕೊಟ್ಟು ಕಂಪನಿಯನ್ನು ಅಂದು ಉಳಿಸಿತ್ತು. ಅಲ್ಲಿಂದ ನಂತರದಲ್ಲಿ ಉತ್ಪಾದನಾ ವೆಚ್ಚ ಕಡಿಮೆಯಾಗಲು ಆದ ಹತ್ತಾರು ತಾಂತ್ರಿಕ ಅಭಿವೃದ್ಧಿಗಳು ಕಾರಣ ವಾದರೂ ಅದೆಲ್ಲದಕ್ಕಿಂತ ಹೆಚ್ಚಾಗಿ ಬ್ಯಾಟರಿ ಅಗ್ಗವಾಗತೊಡಗಿತು ಮತ್ತು ಫಾಸ್ಟ್ ಚಾರ್ಜ್‌ಗಳು ಬಂದವು.
ಇಂದು ಟೆಸ್ಲಾ ಕಾರನ್ನು ಶೇ.80 ಚಾರ್ಜ್ ಮಾಡಲು ಬೇಕಾಗುವ ಸಮಯ 40 ನಿಮಿಷ. ಟೆಸ್ಲಾ ಕಂಪನಿ ಮೇಲೆದ್ದು ಬಂದದ್ದೇ ಒಂದು ರೋಚಕ ಕಥೆ. ಎಲೆಕ್ಟ್ರಿಕ್ ಕಾರನ್ನು ತಯಾರಿಸಲು ಜಗತ್ತಿನ ಬಹುತೇಕ ಎಲ್ಲ ಕಾರುಕಂಪನಿಗಳು ಅದಾಗಲೇ ಪ್ರಯತ್ನಿಸಿ ಕೈ ಸುಟ್ಟು ಕೊಂಡಿದ್ದವು. ಹಾಗಾಗಿ ಟೆಸ್ಲಾ ಕಂಪನಿಯ ಸಾಧ್ಯತೆಯನ್ನು ನಂಬಿದವರಿಗಿಂತ ಅನುಮಾನದಿಂದ ನೋಡಿದವರೇ ಹೆಚ್ಚು. ಇದೆಲ್ಲ ಕಾರ್ಯಸಾಧ್ಯವಾಗಲು ಶಕ್ಯವೇ ಇಲ್ಲವೆನ್ನುವ ಸ್ಥಿತಿ. ಆದರೆ ಇಂದು ಇಂಥದ್ದೊಂದು ಗಟ್ಟಿ ಕಂಪನಿಯಾಗಿ ಟೆಸ್ಲಾ ಇಲ್ಲಿಯವರೆಗೆ ಬಂದು ನಿಲ್ಲಲು ಮೊದಲ ಕಾರಣವೇ ಎಲಾನ್ ಮಸ್ಕ.
ಟೆಸ್ಲಾ ಕೇವಲ ಎಲೆಕ್ಟ್ರಿಕ್ ಕಾರಷ್ಟೇ ಅಲ್ಲ. ಅದೊಂದು ಆಧುನಿಕ ತಾಂತ್ರಜ್ಞಾನಗಳಿಂದ ಕೂಡಿದ, ಅತ್ಯಾಧುನಿಕ ಸಾಫ್ಟವೇರ್ ಹೊಂದಿರುವ ವಾಹನ. ಈ ಕಾರಿನ ಸುತ್ತಲೂ ಆರೆಂಟು ಕ್ಯಾಮೆರಾಗಳು ಮತ್ತು ರೇಡಾರ್ ವ್ಯವಸ್ಥೆಯಿದೆ. ಇವೆಲ್ಲ ಕಾರಿನ ಸುತ್ತಲಿನ ವಾಹನಗಳನ್ನು, ವಸ್ತುಗಳನ್ನು, ಮನುಷ್ಯರನ್ನು, ರಸ್ತೆ – ಲೇನ್‌ಗಳನ್ನು ಟೆಸ್ಲಾದ ಕಾರಿನಲ್ಲಿರುವ ಕಂಪ್ಯೂಟರಿಗೆ ರವಾನಿಸುತ್ತವೆ. ಆ ಕಂಪ್ಯೂಟರ್ ಇದೆಲ್ಲ ವನ್ನು ಕರಾರುವಕ್ಕಾಗಿ, ಮನುಷ್ಯನನ್ನು ಹೋಲುವಂತೆ ಗ್ರಹಿಸಿ ಅದಕ್ಕನುಗುಣವಾಗಿ ಕಾರನ್ನು ಆಟೋ ಡ್ರೈವ್ ಎಂದರೆ – ಸ್ವಯಂ ಚಾಲನೆ ಮಾಡಬಲ್ಲವು.
ಮುಂದಿರುವ ವಾಹನ ಅಕಸ್ಮಾತ್ ನಿಂತಲ್ಲಿ ಕಾರು ತಾನಾಗಿಯೇ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಬಲ್ಲದು. ಇದರಲ್ಲಿ -ಲೋ ಕಾರ್ ಎನ್ನುವ
ವ್ಯವಸ್ಥೆಯಿದೆ. ಅದನ್ನು ಚಾಲನೆಗಿಟ್ಟರೆ ಈ ಕಾರು ಮುಂದಿನ ಕಾರನ್ನು ಹಿಂಬಾಲಿಸಿಕೊಂಡು ಅದರಷ್ಟಕ್ಕೆ ಹೋಗುತ್ತಿರುತ್ತದೆ. ಕಾರನ್ನು ಮನೆಗೆ ತಂದು ನಿಲ್ಲಿಸಿದಾಗ ಅದು ಮನೆಯ ವೈಫೈ ಗೆ ಕನೆಕ್ಟ್ ಆಗಿ ತನ್ನ ಸಾಫ್ಟವೇರ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಲ್ಲದು. ಅದಲ್ಲದೆ ಚಾರ್ಜರ್ ಅನ್ನು ಸಿಲುಕಿಸಿ ಸಮಯವನ್ನು ನಿಗದಿಮಾಡಿಟ್ಟರೆ ಆ ಸಮಯದಲ್ಲಷ್ಟೇ (ಅಮೆರಿಕದಲ್ಲಿ ರಾತ್ರಿ ಎಲೆಕ್ಟ್ರಿಸಿಟಿ ಅಗ್ಗ) ಚಾರ್ಜ್ ಮಾಡಿಕೊಳ್ಳುತ್ತದೆ.
ಇಡೀ ಕಾರಿನ ಸಾಪ್ಟ್‌ವೇರ್ ನಿರ್ವಹಣೆ, ಆರೋಗ್ಯ ಪರಿಶೀಲನೆ ಎಲ್ಲವೂ ಮೊಬೈಲ್ ನಲ್ಲಿ ಸಾಧ್ಯ. ಟೆಸ್ಲಾ ಅದೆಷ್ಟು ಟೆಕ್ನಾಲಜಿಕಲ್ ಎಂದರೆ, ಕಾರ್ ಖರೀದಿ, ಕಾರಿಗೆ ಸಾಲವನ್ನು ಪಡೆಯುವುದು, ಹೀಗೆ ಎಲ್ಲವನ್ನೂ ಮೊಬೈಲ್ ಅಪ್ಪ್ಲಿಕೆಶನ್ ಮೂಲಕ ಮಾಡಿಬಿಡಬಹುದು. ಎಲಾನ್ ಮಾಸ್ಕ ಒಂದು ಕಡೆ ಹೇಳಿದ್ದು ಹೀಗೆ. ಮುಂದೊಂದು ದಿನ ನಾನು ಅಮೆರಿಕದ ಒಂದು ತುದಿಯಲ್ಲಿ ಕೂತು ಮೊಬೈಲ್ ನ ಇನ್ನೊಂದು ತುದಿಗೆ ಕರೆದರೆ ಚಾಲಕನೇ ಇಲ್ಲದೇ ಟೆಸ್ಲಾ ಕಾರು ಬರುವಂತೆ ಮಾಡುತ್ತೇನೆ ಎಂದು. ಆಗ ಅದು ಹಾಸ್ಯವೆನ್ನುವಂತೆ ಕಂಡರೂ ಈಗ ಸಾಧ್ಯ ಎನ್ನುಬಹುದು.
ಸದ್ಯ ಕಾರನ್ನು ಪಾರ್ಕಿಂಗ್ ಲಾಟ್‌ನಲ್ಲಿ ಪಾರ್ಕ್ ಮಾಡಿದ ಜಾಗದಿಂದ ನಾವಿರುವ ಜಾಗಕ್ಕೆ ತಾನಾಗಿಯೇ ಬರುವಂತೆ ಮೊಬೈಲ್ ಅಪ್ಪ್ಲಿಕೆಶನ್‌ನಲ್ಲಿಯೇ ಕರೆಯುವುದು ಸಾಧ್ಯವಿದೆ. ಕಾನೂನಿನ ಕಾರಣಗಳಿಂದ ಸಂಪೂರ್ಣ, ಈ ರೀತಿ ಚಾಲಕನಿಲ್ಲದೆ ಕಾರನ್ನು ರಸ್ತೆಯಲ್ಲಿ ಓಡಾಡುವಂತೆ ಮಾಡುವುದಕ್ಕೆ ಅನುಮತಿಯಿಲ್ಲದಿದ್ದರೂ ಇದು ಅಸಾಧ್ಯವಲ್ಲ ಎನ್ನುವುದಕ್ಕೆ ಇದೇ ಉದಾಹರಣೆ. ಟೆಸ್ಲಾದಲ್ಲಿ ಕೂತು
ಕಾರು ಚಲಾಯಿಸುವಾಗ ಚಾಲಕ ನಿದ್ರಿಸಬಾರದು ಎಂಬ ಕಾರಣದಿಂದ ಆಗಾಗ ಚಾಲಕ ಎಚ್ಚರವಿದ್ದಾನೆಯೇ ಎಂದು ಕಾರು ಗುರುತಿಸಲು ಸ್ಟೀಯರಿಂಗ್ ಅನ್ನು ಮುಟ್ಟುತ್ತಿರಬೇಕು.
ಒಂದು ಲೇಖನದಲ್ಲಿ ಈ ಕಾರಿನ ಒಂದು ಝಲಕ್ ಅಷ್ಟೆ ಕೊಡಲು ಸಾಧ್ಯ. ಒಟ್ಟಾರೆ ಎಲೆಕ್ಟ್ರಿಕ್ ಕಾರು ಸಾಧ್ಯವೇ ಇಲ್ಲ ಎನ್ನುವ ಸಮಯದಲ್ಲಿ ಇಂಥದ್ದೊಂದು ಕಾರಿನ ಕಂಪನಿ, ವ್ಯವಸ್ಥೆ, ತಂತ್ರಜ್ಞಾನವನ್ನು ನಿರ್ಮಿಸಿದ ಶ್ರೇಯಸ್ಸು ಎಲಾನ್ ಮಸ್ಕ್‌ಗೆ ಸಲ್ಲಲೇಬೇಕು. ಇಂದು ಎಲಾನ್ ಮಸ್ಕ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ಅದೆಲ್ಲದರ ಹಿಂದೆ ಆತನ ಶ್ರಮ ಮತ್ತು ದೂರದರ್ಶಿತ್ವ ಕಾರಣ ಎನ್ನುವುದರಲ್ಲಿ ದೂಸ್ರಾ
ಮಾತಿಲ್ಲ. ಒಟ್ಟಾರೆ ಇಂದು ಪೆಟ್ರೋಲಿಯಂನಿಂದ ದೂರ ಸರಿಯುವ ಅವಶ್ಯಕತೆಯಿರುವಾಗ ಟೆಸ್ಲಾ ಕಾರು ಒಂದು ಆಶಾಕಿರಣವಾಗಿದೆ. ಆತ ಇದು ಸಾಧ್ಯ ಎಂದು ತೋರಿಸಿದ ನಂತರವೇ ಉಳಿದ ಆಟೋ ದಿಗ್ಗಜರೆಲ್ಲ ಆತ ಹಾಕಿಕೊಟ್ಟ ದಾರಿಯಲ್ಲಿ ಇಂದು ಸಾಗುತ್ತಿzರೆ. ಈಗ ಬಹುತೇಕ ಆಟೋ ಕಂಪನಿಗಳು ಎಲೆಕ್ಟ್ರಿಕ್ ಕಾರು ತಯಾರಿಕೆಯ ಪೈಪೋಟಿಗಿಳಿದಿವೆ.
ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್ ವಾಹನಗಳ ಕಾಲ ಮುಗಿಯುವುದು ಬಹುತೇಕ ನಿಶ್ಚಿತವೆನ್ನಿಸುತ್ತದೆ. ಆದರೆ ಅದಕ್ಕೆ ಹತ್ತಾರು ಸವಾಲುಗಳನ್ನು ಎದುರಿಸಿ ಸುಧಾರಿಸಬೇಕು. ಅದು ಅನಿವಾರ್ಯವೆಂದಾದಾಗ ಸಾಧ್ಯವಾ ಗುತ್ತದೆ. ಇನ್ನು ಭಾರತಕ್ಕೆ ಕೂಡ ಟೆಸ್ಲಾ, ಎಲೆಕ್ಟ್ರಿಕ್ ಸ್ವಯಂ ಚಾಲಿತ ಕಾರುಗಳು ಮುಂದೊಂದು ದಿನ ಬರಬಹುದು, ಆದರೆ ಆಗ ಅಲ್ಲಿ ಎದುರಾಗುವ ಏಕೈಕ ದೊಡ್ಡ ಸವಾಲೆಂದರೆ ಭಾರತದ ರಸ್ತೆಗಳಲ್ಲಿ, ನಮ್ಮ ವಾಹನ ಚಾಲಕರ ಮಧ್ಯೆ ಆಟೋಪೈಲೆಟ್ ಕೆಲಸಮಾಡುವಂತೆ ಮಾಡುವುದು. ಈ ಸವಾಲಿನ ಕಾರಣ
ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ಎಲೆಕ್ಟ್ರಿಕ್ ವಾಹನವೇ ಭವಿಷ್ಯ.