Saturday, 23rd November 2024

ಯೋಗಿ ಎಫೆಕ್ಟ್: 72 ಗಂಟೆಗಳಲ್ಲೇ 6,031 ಧ್ವನಿವರ್ಧಕಗಳಿಗೆ ನಿರ್ಬಂಧ

ಲಕ್ನೋ: ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸರ್ಕಾರ ನಿರ್ದೇಶನ ನೀಡುತ್ತಿದ್ದಂತೆ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಲ್ಲಿನ 6000ಕ್ಕೂ ಹೆಚ್ಚು ಧ್ವನಿ ವರ್ಧಕಗಳನ್ನು ತೆಗೆದು ಹಾಕಲಾಗಿದೆ.

ನಿರ್ದೇಶನ ನೀಡಿದ 72 ಗಂಟೆಗಳಲ್ಲೇ 6,031 ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ. ನಿಗದಿತ ಡೆಸಿಬಲ್ ಮಟ್ಟಗಳಿಗೆ ಅನುಗು ಣವಾಗಿ 30,000 ಧ್ವನಿವರ್ಧಕಗಳ ಪರಿಮಾಣ ವನ್ನು ಕಡಿಮೆ ಮಾಡಲಾಗಿದೆ.

ಧಾರ್ಮಿಕ ಸ್ಥಳಗಳ ಸುತ್ತಮುತ್ತಲಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ಧ್ವನಿ ವರ್ಧಕಗಳ ಶಬ್ದವನ್ನು ನಿರ್ಬಂಧಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ ಹಿನ್ನೆಲೆ ಈ ಕ್ರಮವನ್ನು ಜಾರಿಗೊಳಿಸಲಾಗಿದೆ. ಈ ಸಂಬಂಧ ಏಪ್ರಿಲ್ 30ರೊಳಗೆ ಜಿಲ್ಲೆಗಳಿಂದ ವರದಿಯನ್ನು ಕೋರಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ತಿ ತಿಳಿಸಿದ್ದಾರೆ.

ಇಲ್ಲಿಯವರೆಗೆ 125 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಸುಮಾರು 17,000 ಜನರು ಅಂತಹ ಸಾಧನಗಳ ಪರಿಮಾಣ ವನ್ನು ಸ್ವತಃ ಕಡಿಮೆ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಆದಿತ್ಯನಾಥ್, ಅನುಮತಿಯಿಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸಬಾರದು ಮತ್ತು ಧ್ವನಿವರ್ಧಕಗಳ ಬಳಕೆಯಿಂದ ಇತರರಿಗೆ ಅನಾನುಕೂಲವಾಗಬಾರದು ಎಂದು ನಿರ್ದೇಶನ ನೀಡಿದ್ದರು.

ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಧಾರ್ಮಿಕ ಸಿದ್ಧಾಂತದ ಪ್ರಕಾರ ಪೂಜಾ ವಿಧಾನವನ್ನು ಅನುಸರಿಸಲು ಸ್ವಾತಂತ್ರ್ಯವಿದೆ. ಬೇರೆಯವರು ಯಾವುದೇ ಸಮಸ್ಯೆ ಎದುರಿಸಬಾರದು. ಹೊಸ ಸ್ಥಳ‌ಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಬಾರದು ಎಂದು ಯೋಗಿ ಹೇಳಿದ್ದರು.