Sunday, 15th December 2024

ಈ ಎಚ್ಚರ ನಿಮ್ಮಲ್ಲಿರಲಿ !

ಇಂದು ಎ.ಟಿ.ಎಂ. ಬಳಕೆ ತೀರಾ ಸಾಮಾನ್ಯವಾಗಿದೆ. ಆ ಸಂದರ್ಭದಲ್ಲಿ ವಂಚಕರ ಬಲೆಯಿಂದ ದೂರವಿರಲು ಕೆಲವು ಟಿಪ್ಸ್ ಇಲ್ಲಿವೆ.

ಪುರುಷೋತ್ತಮ್ ವೆಂಕಿ

ಇಂದು ಎ.ಟಿ.ಎಂ. ಬಳಸುವವರ ಸಂಖ್ಯೆ ಅಸಂಖ್ಯ! ಹಳ್ಳಿಯ ಜನರು, ಕಾರ್ಮಿಕರು, ಅರೆಅಕ್ಷರಸ್ಥರು ಸಹ ಎಟಿಎಂ ಬಳಸಿ, ಎಲ್ಲಿ ಬೇಕಾದರು ಹಣ ಪಡೆಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಹಣವನ್ನು ಜೇಬಿನಲ್ಲಿ ಕೊಂಡೊಯ್ಯುವ ಕೆಲಸವನ್ನು ಎ.ಟಿ.ಎಂ. ಸಾಕಷ್ಟು ಕಡಿಮೆ ಮಾಡಿಸೆ.

ಆದರೆ, ಎ.ಟಿ.ಎಂ. ಬಳಸುವ ಅಮಾಯಕರನ್ನು, ಹಳ್ಳಿ ಜನರನ್ನು ಮೋಸ ಮಾಡುವವರ ಸಂಖ್ಯೆಯೂ ಹೆಚ್ಚಳಗೊಂಡಿದೆ! ಹೊಸ ಹೊಸ ವಿಧಾನಗಳಿಂದ ಈ ವಂಚಕರು ಹಣ ಎಗರಿಸುತ್ತಾರೆ. ಹಾಗಂತ ವಂಚಕರಿಗೆ ಹೆದರಿ ಎಟಿಎಂ ಬಳಸುವುದನ್ನೇ ಬಿಟ್ಟು ಬಿಡಬೇಕು ಅಂತಲ್ಲ. ಎಟಿಎಂನಿಂದ ಹಣ ಪಡೆಯುವಾಗ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನು ಸರಿಸುವುದು ಸೂಕ್ತ.

ಪಿನ್ ನಂಬರ್

ಪಿನ್ ನಂಬರ್ ಟೈಪ್ ಮಾಡುವಾಗ ಪಕ್ಕದಲ್ಲಿದ್ದವರಿಗೆ ಕೀಬೋರ್ಡ್ ಕಾಣದಂತೆ ಕೈ ಅಡ್ಡವಾಗಿಡಿ. ಎಟಿಎಂನಲ್ಲಿ ನಿಮಗೆ ತೀರಾ ಸನಿಹದಲ್ಲಿ ಜನ ನಿಂತಿದ್ದರೆ ಪಿನ್ ನಂಬರ್ ಟೈಪ್ ಮಾಡಲೇಬೇಡಿ. ‘ದಯವಿಟ್ಟು ದೂರ ನಿಲ್ಲಿ’ ಎಂದು ಅವರಿಗೆ ಮನವಿ ಸಲ್ಲಿಸಿ. ಅನುಮಾನ ಬಂದರೆ ವಾಪಸ್ ಹೊರಡಿ.

ರಹಸ್ಯ ಕಾಪಾಡಿ
ಮಿತ್ರರು, ಮನೆಯವರು ಅಥವಾ ಬ್ಯಾಂಕ್ ಸಿಬ್ಬಂದಿ ಯಾರಿಗೇ ಆದರೂ ಎಟಿಎಂ ಪಿನ್ ನಂಬರ್ ತಿಳಿಸಬೇಡಿ. ಸುಲಭವಾಗಿ ನೆನಪಿಟ್ಟುಕೊಳ್ಳಲು ಆದಷ್ಟು ನಾಲ್ಕಂಕಿಯ ಪಿನ್ ಬಳಸಿ. ಚೀಟಿಯಲ್ಲಿ ಪಿನ್ ನಂಬರ್ ಬರೆದು ಅದನ್ನು ಪರ್ಸನಲ್ಲಿ ಅಥವಾ ಬ್ಯಾಗ್ನಲ್ಲಿ ಇಡುವುದು ಸರ್ವಥಾ ಸಲ್ಲದು. ಪಿನ್ ನಂಬರನ್ನು ಎಲ್ಲಿಯೂ ಬರೆದಿಡದೆ ಕೇವಲ ನೆನಪಿನಲ್ಲಿಟ್ಟುಕೊಳ್ಳುವುದೇ ಕ್ಷೇಮ. ಎಟಿಎಂ ಕಾರ್ಡ ಹಾಗೂ ಅದರ ಜೊತೆಗೆಯೇ ಪಿನ್ ನಂಬರ್ ಇರುವ ಹಾಳೆಯೂ ಕಳೆದು ಹೋದರೆ ನಿಮ್ಮ ಕಾರ್ಡ ಬಳಸುವುದು ವಂಚಕರಿಗೆ ಅತಿ ಸುಲಭವಾಗುತ್ತದೆ. ಹೀಗಾಗದಂತೆ ಎಚ್ಚರ ವಹಿಸಿ.

ಸ್ಥಳದ ಬಗ್ಗೆ ಎಚ್ಚರ
ರಾತ್ರಿ ಸಮಯದಲ್ಲಿ ಉತ್ತಮ ಬೆಳಕಿರುವ ಹಾಗೂ ಹೆಚ್ಚು ಜನಸಂಚಾರ ಇರುವ ಪ್ರದೇಶಗಳಲ್ಲಿನ ಎಟಿಎಂಗಳನ್ನು ಬಳಸುವುದು ಸೂಕ್ತ. ಸಿಸಿಟಿವಿ ಅಳವಡಿಸಿರುವ ಹಾಗೂ ಬ್ಯಾಂಕ್ ಕಟ್ಟಡದಲ್ಲಿರುವ ಎಟಿಎಂಗಳನ್ನು ಹುಡುಕಿ. ಈ ಹಿಂದೆ ದರೋಡೆ ಅಥವಾ ವಂಚನೆ ಪ್ರಕರಣಗಳು ನಡೆದ ಎಟಿಎಂಗಳನ್ನು ಆದಷ್ಟು ಬಳಸದೆ ಇರಲು ಪ್ರಯತ್ನಿಸಬೇಕು.

ನಕಲಿ ಸ್ಲಾಟ್ ಬಗ್ಗೆ ಎಚ್ಚರ
ಎಟಿಎಂ ಕಾರ್ಡ್ ಸ್ವೈಪ್ ಮಾಡುವ ಮುನ್ನ ಎಟಿಎಂ ಯಂತ್ರವನ್ನು ಸರಿಯಾಗಿ ಚೆಕ್ ಮಾಡಿ. ಕೆಲ ಬಾರಿ ವಂಚಕರು ವಾಸ್ತವ ಕಾರ್ಡ ಸ್ಲಾಟ್‌ ಅನ್ನು ಮರೆ ಮಾಡಿ ನಕಲಿ ಸ್ಲಾಟ್ ಅನ್ನು ಅಳವಡಿಸಿರುತ್ತಾರೆ. ಇದರಲ್ಲಿ ಕಾರ್ಡ್ ಹಾಕಿದರೆ ಕಾರ್ಡ್ ಮಾಹಿತಿ ಯನ್ನೂ ಸೈಬರ್ ವಂಚಕರು ಕದಿಯುವ ಸಾಧ್ಯತೆ ಇರುತ್ತದೆ. ಇನ್ನು ಕೆಲ ಬಾರಿ ಕೀಬೋರ್ಡ್ ಮೇಲ್ಭಾಗದಲ್ಲಿ ಮೈಕ್ರೊ ಕ್ಯಾಮೆರಾ
ಅಳವಡಿಸಿ ನಿಮ್ಮ ಪಿನ್ ಕದಿಯಬಹುದು. ಇಂಥ ಯಾವುದೇ ವಂಚನೆಯ ಯತ್ನಗಳು ನಿಮ್ಮ ಗಮನಕ್ಕೆ ಬಂದಲ್ಲಿ ಆ ಎಟಿಎಂ ಬಳಸದಿರಿ.

ಜತೆಗಾರರಿದ್ದರೆ ಉತ್ತಮ
ಎಟಿಎಂಗಳಲ್ಲಿ ಪಕ್ಕದಲ್ಲಿಯೇ ನಿಂತು ನಿಮಗೆ ಗೊತ್ತಾಗದಂತೆ ಪಿನ್ ನಂಬರ್ ಗಮನಿಸುವ ವಂಚಕರು ಇರುತ್ತಾರೆ. ಇಂಥವರ ಬಗ್ಗೆ ಎಚ್ಚರವಿರಲಿ. ಯಾವುದೋ ನಿರ್ದಿಷ್ಟ ಎಟಿಎಂ ನಿಂದ ಹಣ ತೆಗೆಯುವುದು ಸುರಕ್ಷಿತವಾಗಿ ಕಾಣುತ್ತಿಲ್ಲ ಎಂದು ಅನಿಸು ತ್ತಿದ್ದರೆ ಜತೆಗೆ ಯಾರನ್ನಾದರೂ ಕರೆದೊಯ್ಯಿರಿ. ಇದರಿಂದ ಹಣ ಕಸಿದುಕೊಂಡು ಹೋಗುವ ವಂಚಕರಿಂದ ಪಾರಾಗಬಹುದು.

ಓ.ಟಿ.ಪಿ. ಶೇರ್ ಮಾಡಬೇಡಿ
ಈ ಬಗ್ಗೆ ಬ್ಯಾಂಕ್ ಗಳು ಸಹ ಸ್ಪಷ್ಟನೆ ನೀಡಿವೆ. ಬ್ಯಾಂಕುಗಳು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಕರೆ ಮಾಡಿ ಓ.ಟಿ.ಪಿ ಕೇಳುವು ದಿಲ್ಲ ಎಂದು. ಆದರೂ ವಂಚಕರು ರಂಗೋಲಿ ಕೆಳಗೆ ನುಸುಳುವ ಮೂಲಕ ಜನರ ಕಣ್ಣಿಗೆ ಮಂಕುಬೂದಿ ಎರಚಿ ಹಣವನ್ನು ಲಪಟಾಯಿಸುತ್ತಾರೆ. ‘ನಾವು ಬ್ಯಾಂಕ್ ಅಽಕಾರಿಗಳು ನಿಮ್ಮ ಖಾತೆಯನ್ನು ಪರಿಶೀಲನೆ ನಡೆಸಬೇಕು’ ಎಂದು ಯಾರಾದರೂ ಫೋನ್ ಮೂಲಕ ಕೇಳಿದ್ದಲ್ಲಿ ಅಥವಾ ನಿಮಗೆ ಲಾಟರಿ ಬಂದಿದೆ, ಕೊರಿಯರ್ ಬಂದಿದೆ, ಹಣ ಬಂದಿದೆ ಎಂದು ನಿಮಗೆ ಕರೆ ಮಾಡಿ ಆಸೆ ಹುಟ್ಟಿಸಿದಾಗ ಒ.ಟಿ.ಪಿ.ಶೇರ್ ಮಾಡಬೇಡಿ.

ಅಪರಿಚಿತರಿಂದ ಸಹಾಯ ಬೇಡ
ಎಟಿಎಂ ವ್ಯವಹಾರಕ್ಕೆ ಅಪರಿಚಿತರ ಸಹಾಯ ಪಡೆಯಲೇಬೇಡಿ. ಒಂದೊಮ್ಮೆ ನಿಮ್ಮ ಕಾರ್ಡ ಎಟಿಎಂ ಯಂತ್ರದಲ್ಲಿ ಸಿಕ್ಕಿ ಹಾಕಿಕೊಂಡರೆ ಅದನ್ನು ಅಲ್ಲಿಯೇ ಬಿಟ್ಟು ಬರಬೇಡಿ. ಮೊಬೈಲ್ ಫೋನ್ ಮುಖಾಂತರ ಕಸ್ಟಮರ್ ಕೇರ್‌ಗ ತಿಳಿಸಿ. ಒಂದು ವೇಳೆ ಜೊತೆಯಲ್ಲಿ ಯಾರಾದರೂ ಬಂದಿದ್ದರೆ ಒಬ್ಬರು ಎಟಿಎಂನಲ್ಲಿಯೇ ಕಾಯುತ್ತ, ಇನ್ನೊಬ್ಬರು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ತೆರಳಿ ದೂರು ನೀಡಿ. ಇಂಥ ಸಂದರ್ಭಗಳಲ್ಲಿ ಅಪರಿಚಿತರು ಸಹಾಯ ನೀಡಲು ಮುಂದೆ ಬಂದರೂ ಅವರಿಂದ ಸಹಾಯ
ಪಡೆಯುವುದು ಸೂಕ್ತವಲ್ಲ. ಇನ್ನು ಕೆಲವೊಮ್ಮೆ ತಾವು ಬ್ಯಾಂಕ್ ಸಿಬ್ಬಂದಿ, ಎಟಿಎಂ ಯಂತ್ರದ ಮಾಲೀಕರು ಅಥವಾ ಪೊಲೀಸ್ ಎಂದು ಹೇಳಿ ನಿಮ್ಮ ಪಿನ್ ನಂಬರ್ ಕೇಳಬಹುದು. ಆದರೆ ಯಾರಿಗೇ ಆದರೂ ಪಿನ್ ಹೇಳುವ ಅಗತ್ಯವಿಲ್ಲ.

ಕಾರ್ಡ್ ಬಳಕೆ
ಬಹುತೇಕ ವ್ಯವಹಾರ ಸ್ಥಳಗಳಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ ಮೂಲಕವೇ ಪಾವತಿ ಮಾಡಬಹುದಾಗಿದೆ. ಅಂತಹ ಜಾಗಗಳಲ್ಲಿ ನಗದು ನೀಡಬೇಕಾಗಿಲ್ಲ, ಎಟಿಎಂ ಬಳಕೆ ಅವಶ್ಯಕತೆ ಇಲ್ಲ. ಕಾರ್ಡ್ ಮೂಲಕ ಪಾವತಿ ಮಾಡಬಹುದು. ಇದರಿಂದ ಎಟಿಎಂ ಮೂಲಕ ಹಣ ಪಡೆಯುವ ಸಂದರ್ಭಗಳನ್ನು ಕಡಿಮೆ ಮಾಡಬಹುದು.