Friday, 18th October 2024

ಕಮಿಷನ್‌ ಆರೋಪ ಮತ್ತು ಸತ್ಯಾಸತ್ಯತೆ

muda scam cm siddaramaiah

ವರ್ತಮಾನ

2018 ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಅಂಶ ಎಂದರೆ ಆಗಿನ ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ‘ಇದು 10 ಪರ್ಸೆಂಟ್ ಕಮಿಷನ್ ಸರಕಾರ’ ಎಂಬ ಆರೋಪ.

ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಎಲ್ಲದರಲ್ಲೂ ಕಮಿಷನ್ ಪಡೆಯಲಾಗುತ್ತಿದೆ. ಇದೊಂದು 10 ಪರ್ಸೆಂಟ್ ಕಮಿಷನ್ ಸರಕಾರ ಎಂದು ನರೇಂದ್ರ ಮೋದಿ ಟೀಕಿಸಿದ್ದರು. ಆಡಳಿತದಲ್ಲಿದ್ದ ಕಾಂಗ್ರೆಸ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ, ನರೇಂದ್ರ ಮೋದಿ ಅವರ ಮಾತನ್ನು ರಾಜ್ಯದ ಜನ ನಂಬಿದರು ಎಂಬುದಕ್ಕಿಂತ, ಇರಬಹು ದೇನೋ ಎಂದುಕೊಂಡಿದ್ದರು ಎಂಬುದು ಸತ್ಯ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಗೆ ಸಾಕಷ್ಟು ಅಸಗಳಿದ್ದರೂ ಬ್ರಹ್ಮಾಸವಾಗಿದ್ದು ಮಾತ್ರ ಈ 10 ಪರ್ಸೆಂಟ್ ಕಮಿಷನ್ ಸರಕಾರ ಎಂಬ ಆರೋಪ.

ಇದೀಗ ಅಂತಹದ್ದೇ ಆರೋಪ ಬಿಜೆಪಿ ಸರಕಾರದ ವಿರುದ್ಧವೂ ಬಂದಿದೆ. ಆದರೆ, ಪರ್ಸೆಂಟೇಜ್ ಮಾತ್ರ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಸರಕಾರ ಎಂದು ದೂರಲಾಗುತ್ತಿದೆ. ಗುತ್ತಿಗೆದಾರರ ಸಂಘ ವೊಂದರ ಅಧ್ಯಕ್ಷರೇ ಈ ಆರೋಪ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲೇ ಇಂತಹದ್ದೊಂದು ಆರೋಪ ಮಾಡಿ ಅವರು ಪ್ರಧಾನಿಗೆ ಪತ್ರ ಬರೆದಿದ್ದರು.

ಅದು ಭಾರಿ ಸುದ್ದಿಯಾಗಿದ್ದು ಮಾತ್ರವಲ್ಲದೆ, ರಾಜಕೀಯ ಚರ್ಚೆಗೂ ಗ್ರಾಸವಾಗಿತ್ತು. ನಂತರ ಈ ಆರೋಪದ ಕುರಿತು ದಾಖಲೆ ಗಳನ್ನು ಒದಗಿಸುವಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಿಗೆ ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆ ಬಂದಿತ್ತು. ದಾಖಲೆ ಗಳನ್ನು ಸಲ್ಲಿಸುತ್ತೇನೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡ ಹೇಳಿದ್ದರು. ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ.

ಇದೀಗ ೪೦ ಪರ್ಸೆಂಟ್ ಕಮಿಷನ್ ಸರಕಾರ ಎಂಬ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ದಿನಗಳ ಹಿಂದೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಪುನರುಚ್ಚರಿಸಿದ್ದ ಕೆಂಪಣ್ಣ, ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟ ಸದಸ್ಯರು, ಶಾಸಕರ ಮೇಲೆಲ್ಲಾ ಕಮಿಷನ್ ಆರೋಪ ಮಾಡಿದ್ದರು. ಖಂಡಿತವಾಗಿಯೂ ಇದು ಸರಕಾರ ಮತ್ತು ಆಡಳಿತ ಪಕ್ಷಕ್ಕೆ ತೀವ್ರ ಮುಜುಗರ ತರುವಂತಹ ವಿಚಾರ.

ಅದರಲ್ಲೂ ಸರಕಾರಿ ಗುತ್ತಿಗೆಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷರೊಬ್ಬರು ಇಂತಹ ಆರೋಪ ಮಾಡುತ್ತಾರೆ ಎಂದರೆ ಸಹಜವಾಗಿಯೇ ಅದಕ್ಕೆ ಹೆಚ್ಚಿನ ಮಹತ್ವ ಮತ್ತು ತೂಕ ಇರುತ್ತದೆ. ಹೀಗಾಗಿ ಆಡಳಿತ ನಡೆಸುವವರು ಮುಜುಗರ, ಆತಂಕಕ್ಕೆ ಒಳಗಾಗಿದ್ದೂ ಹೌದು. ಏಕೆಂದರೆ, ರಾಜ್ಯ ವಿಧಾನಸಭೆ ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇರುವಾಗ ಸರಕಾರದ ಕೆಲಸಗಳನ್ನೇ ಮಾಡಿಕೊಂಡಿರುವ ಗುತ್ತಿಗೆದಾರರು ಇಂತಹ ಆರೋಪ ಮಾಡಿದರೆ ಅದು ಚುನಾವಣೆ ಯಲ್ಲಿ ಆಡಳಿತ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಸಹಜ.

ಆದರೆ…. ಸಚಿವರು, ಶಾಸಕರು, ಅಽಕಾರಿಗಳಿಗೆ ಒಬ್ಬ ಗುತ್ತಿಗೆದಾರ ೪೦ ಪರ್ಸೆಂಟ್ ಕಮಿಷನ್ ಕೊಟ್ಟು ಕಾಮಗಾರಿಗಳನ್ನು
ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಕೂಡ ಸಹಜ. ಏಕೆಂದರೆ, ಯಾವುದೇ ಗುತ್ತಿಗೆದಾರ ಲಾಭವಿಲ್ಲದೆ ಟೆಂಡರ್‌ ನಲ್ಲಿ ಭಾಗವಹಿಸುವುದಿಲ್ಲ, ಕಾಮಗಾರಿಯನ್ನೂ ಮಾಡುವುದಿಲ್ಲ. ಮೇಲಾಗಿ ಸರಕಾರಿ ಕಾಮಗಾರಿ ಎಂದರೆ ತಕ್ಷಣಕ್ಕೆ ಹಣ ಬಿಡುಗಡೆಯಾಗುವುದೂ ಇಲ್ಲ. ಹೀಗಾಗಿ ಕಾಮಗಾರಿ ನಡೆಸಬೇಕಾದರೆ ಬ್ಯಾಂಕ್‌ಗಳಲ್ಲಿ ಸಾಲ ಮಾಡುತ್ತಾರೆ. ಈ ಸಾಲಕ್ಕೆ ಬಡ್ಡಿ ಪಾವತಿಸಬೇಕಾಗುತ್ತದೆ.

ಸರಕಾರದಿಂದ ಗುತ್ತಿಗೆ ಹಣ ಬಿಡುಗಡೆಯಾದ ಬಳಿಕ ಆ ಮೊತ್ತವನ್ನು ಬ್ಯಾಂಕ್‌ಗಳಿಗೆ ಭರ್ತಿ ಮಾಡಲಾಗುತ್ತದೆ. ಆಗ ಸಾಲದ ಜತೆಗೆ ಒಂದಷ್ಟು ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ. ಹೀಗಿರುವಾಗ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ತನ್ನ ಲಾಭದ ಜತೆ ಬ್ಯಾಂಕ್‌ಗೆ ಪಾವತಿಸಬೇಕಾದ ಬಡ್ಡಿಯನ್ನೂ ಕಾಮಗಾರಿ ಮೊತ್ತದಿಂದಲೇ ಭರಿಸುತ್ತಾನೆಯೇ ಹೊರತು ತನ್ನ ಜೇಬಿನಿಂದ ಹಾಕುವುದಿಲ್ಲ. ಹೀಗಾಗಿ ಗುತ್ತಿಗೆದಾರ ತನ್ನ ಲಾಭದ ಜತೆ ಬಡ್ಡಿಯ ಮೊತ್ತವನ್ನೂ ಕಾಮಗಾರಿ ಹಣದಲ್ಲೇ ಹೊಂದಾಣಿಕೆ ಮಾಡುತ್ತಾನೆ.

ಅಂದರೆ, ಕಾಮಗಾರಿಯ ಒಟ್ಟು ವೆಚ್ಚದ ಶೇ. 15 ರಿಂದ 20ರಷ್ಟು ಭಾಗವನ್ನು ಗುತ್ತಿಗೆದಾರ ಲಾಭ, ಬ್ಯಾಂಕ್ ಬಡ್ಡಿ ಎಲ್ಲವೂ ಸೇರಿ ಇಟ್ಟುಕೊಳ್ಳುತ್ತಾನೆ. ಆ ರೀತಿ ಲೆಕ್ಕ ಹಾಕಿದಾಗ 1 ಕೋಟಿ ರೂ. ಕಾಮಗಾರಿಯಲ್ಲಿ 40 ಲಕ್ಷ ರೂ. ಕಮಿಷನ್‌ಗೆ ಹೋದರೆ, 15 ರಿಂದ 20 ಲಕ್ಷ ರೂ. ಲಾಭ ಮತ್ತು ಬ್ಯಾಂಕ್‌ಗೆ ಹೋಗುತ್ತದೆ. ಕಾಮಗಾರಿಗೆ ಉಳಿಯುವುದು 40ರಿಂದ 45 ಲಕ್ಷ ರೂ. ಮಾತ್ರ. ಈ ಮೊತ್ತದಲ್ಲಿ ಕಾಮಗಾರಿ ನಿರ್ವಹಿಸಲು ಸಾಧ್ಯವೇ? ಏಕೆಂದರೆ, ಯಾವುದೇ ಕಾಮಗಾರಿಗೆ ಸರಕಾರ ಎಸ್‌ಆರ್
ದರ ನಿಗದಿಪಡಿಸುತ್ತದೆ. ರಸ್ತೆಗಾದರೆ ಕಿಲೋಮೀಟರ್‌ಗೆ ಇಷ್ಟು ವೆಚ್ಚ, ಕಟ್ಟಡಕ್ಕಾದರೆ ಇಂತಿಷ್ಟು ವೆಚ್ಚ ಎಂದು ಅದರಲ್ಲಿ
ನಿಗದಿಪಡಿಸಲಾಗುತ್ತದೆ. ಬಳಿಕ ಟೆಂಡರ್ ಕರೆಯಲಾಗುತ್ತದೆ. ಆ ವೇಳೆ ಸರಕಾರ ನಿಗದಿಪಡಿಸಿರುವ ವೆಚ್ಚಕ್ಕಿಂತ ಕಡಿಮೆ ವೆಚ್ಚಕ್ಕೆ ಸಲ್ಲಿಸುವ ಬಿಡ್ ಅನ್ನು ಅಂತಿಮಗೊಳಿಸಲಾಗುತ್ತದೆ.

ಅದರಲ್ಲೂ ಎಲ್ 1 ಎಂಬ ಅಂಶ ಇರುತ್ತದೆ. ಸರಕಾರ ಒಂದು ಕಾಮಗಾರಿಗೆ 10 ಕೋಟಿ ರೂ. ಎಸ್‌ಆರ್ ದರ ನಿಗದಿಪಡಿಸಿ ದರೆ ಟೆಂಡರ್‌ದಾರರು ಅದಕ್ಕಿಂತ ಕಡಿಮೆ ದರ ಬಿಡ್ ಮಾಡಬೇಕು. ಈ ಪೈಕಿ ಒಬ್ಬ 9 ಕೋಟಿ ರೂ., ಇನ್ನೊಬ್ಬ 8 ಕೋಟಿ ರೂ., ಮತ್ತೊಬ್ಬ ಏಳೂವರೆ ಕೋಟಿ ರೂ. ಬಿಡ್ ಮಾಡಿದರೆ ಏಳೂವರೆ ಕೋಟಿ ರೂ. ಬಿಡ್ ಮಾಡಿದವರನ್ನು ಎಲ್ 1 (ಅತಿ ಕಡಿಮೆ ಬಿಡ್) ಎಂದು ಪರಿಗಣಿಸಿ ಆ ವ್ಯಕ್ತಿಗೆ ಗುತ್ತಿಗೆ ನಿಗದಿಪಡಿಸಲಾಗುತ್ತದೆ.

ಅಂದರೆ, ಟೆಂಡರ್ ಅಂತಿಮಗೊಳ್ಳುವಾಗಲೇ ಅದು ಎಸ್ ಆರ್ ದರಕ್ಕಿಂತ ಕಡಿಮೆಯಾಗಿರುತ್ತದೆ. ಆ ಹಣದಲ್ಲೂ ಶೇ. 40 ರಷ್ಟು ಕಮಿಷನ್ ನೀಡಿ, ಅದರೊಂದಿಗೆ ತನ್ನ ಲಾಭವನ್ನೂ ಕಳೆದು ಉಳಿದ ಮೊತ್ತದಲ್ಲಿ ಕಾಮಗಾರಿ ನಿರ್ವಹಿಸಲು ಸಾಧ್ಯವೇ? ಎಷ್ಟೇ ಕಳಪೆ ಕಾಮಗಾರಿ ನಡೆಸಿದರೂ ಅದು ಸಾಧ್ಯವೇ ಇಲ್ಲ ಎಂದು ಗುತ್ತಿಗೆದಾರರೇ ಹೇಳುತ್ತಾರೆ. ಆಗಲಿ, ಶೇ. 40ರಷ್ಟು ಕಮಿಷನ್ ಕೊಟ್ಟೇ ಗುತ್ತಿಗೆದಾರ ಕೆಲಸ ಮಾಡಿಸುತ್ತಾನೆ ಎಂದಾದರೆ ಅಷ್ಟೊಂದು ಕಮಿಷನ್ ಕೊಡುವ ಗುತ್ತಿಗೆದಾರ ಅದರಲ್ಲಿ ತಾನೆಷ್ಟು ಒಳಗೆ ಹಾಕಬಹುದು? ಹಾಗಿದ್ದರೆ ಕಾಮಗಾರಿಗೆ ಎಷ್ಟು ಖರ್ಚು ಮಾಡಬಹುದು? ಗುತ್ತಿಗೆದಾರ ಕಾಮಗಾರಿ ನಡೆಸಿದ ಬಳಿಕ ಬಿಲ್ ಪಾವತಿ ವೇಳೆ ಕಮಿಷನ್ ಕೊಡಬೇಕು.

ಹೀಗಾಗಿ ಗುತ್ತಿಗೆದಾರರು ಹಣ ಖರ್ಚು ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗುತ್ತಿಗೆದಾರರ ಸಂಘದವರು ಹೇಳುವುದನ್ನೇ ಪರಿಗಣಿಸುವುದಾದರೆ, ಈ ರೀತಿ ಕೈಸುಟ್ಟುಕೊಂಡು ಯಾವ ಗುತ್ತಿಗೆದಾರ ತಾನೇ ಬೇರೊಂದು ಕೆಲಸ ಕೈಗೆತ್ತಿಕೊಳ್ಳುತ್ತಾನೆ? ಯಾವ ಬ್ಯಾಂಕ್ ಆತನಿಗೆ ಸಾಲ ಕೊಡುತ್ತದೆ? ಹಾಗೆಂದು ಗುತ್ತಿಗೆ ದಾರರಿಗೆ ಸರಕಾರ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ
ಸರಕಾರದ ಯಾವುದೇ ಕಾಮಗಾರಿಯೂ ನಿಂತಿಲ್ಲ.

ಟೆಂಡರ್ ಕರೆದಾಗ ಬಿಡ್ ಸಲ್ಲಿಸುವಲ್ಲಿ ಸ್ಪರ್ಧೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಹಾಗೆಂದು ಸರಕಾರಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರವೇ ನಡೆಯುತ್ತಿಲ್ಲ ಎಂದು ಅರ್ಥವಲ್ಲ. ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಅಽಕಾರ ಹಿಡಿಯುವವರು ತಾವು ಸಮಾಜಸೇವೆ ಮಾಡುತ್ತಿದ್ದೇವೆ ಎಂದುಕೊಂಡು ಯಾರೂ ರಾಜಕಾರಣ ಮಾಡುವುದಿಲ್ಲ. ಬಹುತೇಕ ರಾಜಕಾರಣಿಗಳ ಆದಾಯ ವರ್ಷ ಕಳೆದಂತೆ ಏರುತ್ತಲೇ ಹೋಗುತ್ತದೆಯೇ ವಿನಾ ಕಡಿಮೆಯಾದ ಉದಾಹರಣೆ ಇಲ್ಲ. ಇದಕ್ಕೆ
ಒಂದೆರಡು ಅಪವಾದಗಳು ಇರಬಹುದು. ಹಾಗೆಂದು ಎಲ್ಲವನ್ನೂ ನುಂಗುತ್ತಾರೆ ಎಂದು ಹೇಳಲು ಕೂಡ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಈಗಿನ ಸರಕಾರದ ಮೇಲೆ ಗುತ್ತಿಗೆದಾರರು ಮಾಡುತ್ತಿರುವ 40 ಪರ್ಸೆಂಟ್ ಕಮಿಷನ್ ಆರೋಪ, 2018ರ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಆಗಿನ ಕಾಂಗ್ರೆಸ್ ಸರಕಾರದ ವಿರುದ್ಧ ಮಾಡಿದ್ದ 10 ಪರ್ಸೆಂಟ್ ಕಮಿಷನ್ ಸರಕಾರದಷ್ಟು ಗಾಢವಾಗಿ ಜನರನ್ನು ತಲುಪುತ್ತಿಲ್ಲ. ಕೇವಲ ರಾಜಕಾರಣಿಗಳ ಆರೋಪ-ಪ್ರತ್ಯಾರೋಪಗಳಿಗಷ್ಟೇ ಸೀಮಿತವಾಗಿದೆ.

ಲಾಸ್ಟ್ ಸಿಪ್: ಸುಳ್ಳು ಹೇಳಿದರೆ ಸತ್ಯದ ತಲೆ ಮೇಲೆ ಹೊಡೆದಂತಿರಬೇಕು ಇಲ್ಲವೇ, ಸತ್ಯಕ್ಕೆ ಹತ್ತಿರವಾಗಿರಬೇಕು.
ಇಲ್ಲದಿದ್ದರೆ ಅದು ಸುಳ್ಳು, ನಂಬಿಕೆಗೆ ಅರ್ಹವಾಗಿರುವುದಿಲ್ಲ.