Saturday, 27th July 2024

ಮೋದಿಯಿಂದ ಕಲಿಯಬಹುದಾದ 17 ಪಾಠಗಳು !

ನೂರೆಂಟು ವಿಶ್ವ
ವಿಶ್ವೇಶ್ವರ ಭಟ್

ಪ್ರಧಾನಿ ನರೇಂದ್ರ ಮೋದಿ ಎಪ್ಪತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅವರು ಇಲ್ಲಿಯ ತನಕ ತುಳಿದ ಹಾದಿ, ಮಾಡಿದ ಸಾಧನೆ ಮತ್ತು ರೂಪಿಸಿಕೊಂಡ ವ್ಯಕ್ತಿತ್ವವನ್ನು ಪರಿಗಣಿಸಿ ನಾವೇನು ಕಲಿಯಬಹುದು? ಅವರ ವ್ಯಕ್ತಿತ್ವದಿಂದ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪಾಠಗಳೇನು? ಅವರಿಂದ ಒಟ್ಟಾರೆ ನಾವು ಪಡೆಯಬಹುದಾದ ಜೀವನ ದ್ರವ್ಯಗಳೇನು?
ಸಾಧಕರ ಮತ್ತು ಯಶಸ್ವಿ ವ್ಯಕ್ತಿಗಳ ಬದುಕನ್ನು ಇಟ್ಟುಕೊಂಡು ಮ್ಯಾನೇಜ್ಮೆೆಂಟ್ ಕ್ಲಾಸುಗಳಲ್ಲಿ ವಿದ್ಯಾರ್ಥಿಗಳು ಪಾಠವನ್ನು
ಕಲಿಯುವಂತೆ, ಕಲಿತಿದ್ದನ್ನು ವಿಶ್ಲೇಷಿಸುವಂತೆ, ನಾವೂ ಆ ರೀತಿ ಕಸರತ್ತನ್ನನ್ನು ಮಾಡಬಹುದಾ ? ನೋಡೋಣ..

1. ನಮ್ಮ ಏಳಿಗೆಗೆ ನಮ್ಮ ಹಿನ್ನೆೆಲೆ, ಕುಟುಂಬ, ಅವರ ನೆರವು ಮುಖ್ಯವಲ್ಲ, ನಮ್ಮ ಪರಿಶ್ರಮವೊಂದೇ: ನಮ್ಮ ತಂದೆ-ತಾಯಿ ಖ್ಯಾತನಾಮರಲ್ಲದಿರಬಹುದು, ಶ್ರೀಮಂತರಲ್ಲದಿರಬಹುದು, ನಮ್ಮ ಕುಟುಂಬಕ್ಕೆ ಯಾವುದೇ ಖ್ಯಾತಿ ಅಥವಾ ಹೆಸರು ಇಲ್ಲದಿರಬಹುದು, ಅವ್ಯಾವವೂ ನಮ್ಮ ಸಾಧನೆ ಅಥವಾ ಯಶಸ್ಸಿಗೆ ತೊಡಕಲ್ಲ. ಮೋದಿಯವರ ಹಿನ್ನೆೆಲೆ, ಕುಟುಂಬದ ಸ್ಥಾನಮಾನವನ್ನು ಗಮನಿಸಿದರೆ, ಅವರು ಪ್ರಧಾನಿ ಪಟ್ಟಕ್ಕೆ ಏರಲೇಬಾರದು. ಅವರಿಗೆ ಯಾವ ಗಾಡ್ ಫಾರ್ದ ಕೂಡ ಇರಲಿಲ್ಲ. ಅಷ್ಟಕ್ಕೂ ಅವರು ಬಾಲ್ಯದಲ್ಲಿ ರೈಲು ನಿಲ್ದಾಣದಲ್ಲಿ ಚಹ ಮಾರುತ್ತಿದ್ದರು. ಅವರ ನಿಷ್ಠೆ, ಪರಿಶ್ರಮ, ಶ್ರದ್ಧೆ ಅವರನ್ನು ಈ ಎತ್ತರಕ್ಕೆ ತಂದಿದೆ.

2. ನಿಮ್ಮಲ್ಲಿ ಏನಿದೆ ಎಂಬುದನ್ನು ನೀವು ತೋರಿಸದಿದ್ದರೆ, ಅದು ಬೇರೆಯವರಿಗೆ ಗೊತ್ತಾಗುವುದಿಲ್ಲ: ಬಾಲ್ಯದಿಂದಲೂ
ಮೋದಿಯವರು ಮುಂಗಾಲಪುಟಿಕೆ ಸ್ವಭಾವದವರು. ಹತ್ತು ಜನರ ಮಧ್ಯೆೆ ತಮ್ಮ ಇರುವಿಕೆ ಬೇರೆಯವರ ಗಮನಕ್ಕೆ ಬರುವಂತೆ ಆಕರ್ಷಿಸುವವರು. ರಾಜಕೀಯಕ್ಕೆ ಬರುವುದಕ್ಕಿಂತ ಮುನ್ನವೇ ಈ ಗುಣ ಅವರಲ್ಲಿತ್ತು. ಸಂದರ್ಭಕ್ಕೆ ತಕ್ಕಂತೆ ತಮ್ಮ ಉಪಸ್ಥಿತಿಯ ಅನುಭವ ಬೇರೆಯವರಿಗೆ ತಿಳಿಯುವಂತೆ ಮಾಡುವುದರಲ್ಲಿ ಅವರದು ಎತ್ತಿದ ಕೈ. ಅದನ್ನು ಅವರು ಇಂದಿಗೂ ಮುಂದುವರಿಸಿ ಕೊಂಡು ಬಂದಿದ್ದಾರೆ. ನಮ್ಮ ಬಂಡವಾಳವನ್ನು ನಾವು ಹೇಳದಿದ್ದರೆ, ಬೇರೆಯವರು ನಮ್ಮ ಬಗ್ಗೆ ಪ್ರಚಾರ ಮಾಡುವುದಿಲ್ಲ. ಆರಂಭದಲ್ಲಿ ನಮ್ಮ ತುತ್ತೂರಿಯನ್ನು ನಾವೇ ಓದಬೇಕು. ನಾವು ಯಶಸ್ವಿಯಾದ ಬಳಿಕ, ಆ ಕೆಲಸವನ್ನು ಬೇರೆಯವರು ಬೇಡ ಎಂದರೂ ಮಾಡುತ್ತಾರೆ.

3. ನೀವು ಮಹತ್ತರವಾದುದನ್ನು ಸಾಧಿಸುವ ತನಕ ನಿಮ್ಮತ್ತ ಯಾರೂ ನೋಡುವುದಿಲ್ಲ: ಮೋದಿಯವರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಆರೆಸ್ಸೆಸ್ಸನ್ನು ಸೇರಿದಾಗ, ಅವರು ಸಾಮಾನ್ಯ ಕಾರ್ಯಕರ್ತರಾಗಿದ್ದರು. ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ಮಾಡಿ ಮುಗಿಸುತ್ತಿದ್ದರು. ಸಂಘ ವಹಿಸಿದ ಹೊಣೆಗಾರಿಕೆಯನ್ನು ಎರಡು ದಶಕಗಳ ಕಾಲ ನಿಷ್ಠೆಯಿಂದ ಮಾಡಿದರೂ, ಅವರಿಗೆ ಒಂದು ಬ್ರೇಕ್ ಸಿಕ್ಕಿರಲಿಲ್ಲ. ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದರೂ ಅವರತ್ತ ಯಾರ ಗಮನವೂ ಹರಿದಿರಲಿಲ್ಲ. ಅವರ ತವರು ರಾಜ್ಯ ಗುಜರಾತ್ ಮತ್ತು
ಕೇಂದ್ರದಲ್ಲೂ ಅವರ ಅಸ್ತಿತ್ವ ಪ್ರಕಟಗೊಂಡಿರಲಿಲ್ಲ. 1999 ರವರೆಗೆ ಬಿಜೆಪಿಯ ಕಾರ್ಯಕರ್ತರಿಗೂ ಅವರು ಅಷ್ಟೇನೂ
ಪರಿಚಿತರಾಗಿರಲಿಲ್ಲ.

4. ನನಗಿಂತ ನಾನು ನಂಬಿದ ನಂಬಿಕೆ, ಸಿದ್ದಾಂತ ಮುಖ್ಯ: ಮೋದಿಯವರು ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇರಿಕೊಂಡ ನಂತರ ತಮ್ಮ ವೈಯಕ್ತಿಕವನ್ನೆಲ್ಲ ತ್ಯಜಿಸಿ, ತಾವು ನಂಬಿದ ಧ್ಯೇಯ, ನಂಬಿಕೆ ಮತ್ತು ಸಿದ್ದಾಂತಗಳಿಗೆ ಸಮರ್ಪಿಸಿ ಕೊಂಡರು. ಸಂಘದ ಸಿದ್ದಾಂತವೇ ಅವರ ಸಿದ್ದಾಂತವಾಯಿತು. ಜೀವನದಲ್ಲಿ ಮಹತ್ತರವಾದ ಸಾಧನೆಗೈದವರೆಲ್ಲರೂ ಸೈದ್ದಾಂತಿಕವಾಗಿ ಗಟ್ಟಿ ಬುನಾದಿ ಹೊಂದಿದವರೇ. ಮೋದಿಯವರು ಈ ಸೈದ್ದಾಂತಿಕ ಭೂಮಿಕೆಯಲ್ಲಿ ತಮ್ಮ ವ್ಯಕ್ತಿತ್ವ ಬೆಳೆಸಿಕೊಂಡವರು.

5. ಒಂದು ಹಂತದಲ್ಲಿ ನಿಮ್ಮನ್ನು ಎಲ್ಲರೂ ಪೂರ್ತಿ ಕಡೆಗಣಿಸಿದಾಗ, ಎಲ್ಲವೂ ಮುಗಿದು ಹೋಯಿತು ಎಂದು ಭಾವಿಸಬಾರದು: ಕೇಶುಭಾಯಿ ಪಟೇಲರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಅವರಿಗೆ ಮೋದಿಯವರ ಸಾಮರ್ಥ್ಯದ ಬಗ್ಗೆ ಭಯವಿತ್ತು. ಮೋದಿ ಗುಜರಾತ ಬಿಜೆಪಿ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಆರೋಪಿಸಿ ಅವರನ್ನು ದೂರ ಇಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಕೇಶುಭಾಯಿ ಮುಖ್ಯಮಂತ್ರಿಯಾಗಿ ಇರುವಷ್ಟು ಕಾಲ ಮೋದಿ ಗುಜರಾತಿಗೆ ಕಾಲಿಟ್ಟಿರಲಿಲ್ಲ. ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ಅಲ್ಪಕಾಲ ಸುರೇಶ ಮೆಹ್ತಾ ಮುಖ್ಯಮಂತ್ರಿಯಾದರು. ಆಗಲೂ ಅವರು ಗುಜರಾತಿಗೆ ಹೋಗಿರಲಿಲ್ಲ. ಮುಖ್ಯಮಂತ್ರಿಯಾಗುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದಾಗಲೇ ಅವರು
ಗುಜರಾತ್ ಪ್ರವೇಶಿಸಿದ್ದು.

6.ಜನರ ಟೀಕೆಗೆ ತುತ್ತಾಗದೇ, ಸತ್ವಪರೀಕ್ಷೆಗೊಳಗಾಗದೇ ಯಾರೂ ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ: ನಾಳೆ ಇವರೇ ನಿಮ್ಮ
ನಾಯಕರು ಎಂದು ಹೈಕಮಾಂಡ್ ಹೇಳಿದ ಮಾತ್ರಕ್ಕೆ ಜನ ನಿಮ್ಮನ್ನು ನಾಯಕನೆಂದು ಒಪ್ಪಿಕೊಳ್ಳುವುದಿಲ್ಲ. ಆಭರಣವಾಗು ವಾಗ ಬಂಗಾರವನ್ನೂ ಬೆಂಕಿಯಲ್ಲಿ ಅದ್ದಬೇಕಾಗುತ್ತದೆ. ಇಂಥ ಪರೀಕ್ಷೆಗೊಳಪಡಿಸಿದಾಗ ನೀವು ಹೇಗೆ ವ್ಯವಹರಿಸುತ್ತೀರಿ ಎಂಬು
ದನ್ನು ಜನ ನೋಡಿ ನಿಮ್ಮ ಸಾಮರ್ಥ್ಯವನ್ನು ಅಳೆಯುತ್ತಾರೆ.

ಗೋಧ್ರಾ ನರಮೇಧವಾದಾಗ, ಮೋದಿಯವರು ಇನ್ನಿಲ್ಲದ ಟೀಕೆಗೆ, ನಿಂದನೆಗೆ ಗುರಿಯಾದರು. ಅವರು ಮುಖ್ಯಮಂತ್ರಿಯಾಗಿ ಮುಂದುವರಿದದ್ದೇ ಸೋಜಿಗ. ಈ ಎಲ್ಲಾ ದಢಕಿಗಳನ್ನು ಅನುಭವಿಸಿದ ನಂತರವೇ ಜನ ಅವರನ್ನು ಒಬ್ಬ ನಾಯಕ ಎಂದು ಒಪ್ಪಿಕೊಂಡಿದ್ದು.

7. ಏನೂ ಸಿಗದಿದ್ದಾಗ, ಕೊನೆ ಅಸ್ತ್ರವಾಗಿ ಜನ ನಿಮ್ಮ ಚಾರಿತ್ರ್ಯಹರಣಕ್ಕೆ ಮುಂದಾಗುತ್ತಾರೆ.  ಅದಕ್ಕೆ ಜಗ್ಗಬಾರದು: ಟೀಕೆಗೆ
ಜಗ್ಗದಿದ್ದಾಗ, ಜನ ನಿಮ್ಮ ಚಾರಿತ್ರ್ಯಹರಣ ಮಾಡುತ್ತಾರೆ. ಮೋದಿಯವರ ವಿಷಯದಲ್ಲೂ ಇದೇ ಆಯಿತು. ತಾನು ಅವಿವಾಹಿತ ಎಂದು ಹೇಳಿಕೊಳ್ಳುವ ಮೋದಿಯವರು ಮದುವೆಯಾಗಿ, ಹೆಂಡತಿಯನ್ನು ಬಿಟ್ಟಿದ್ದಾರೆ ಎಂದು ಪ್ರಚಾರ ಮಾಡಲಾಯಿತು. ಹೆಂಗಸರ ಸಮಸ್ಯೆ ಗೊತ್ತಿಲ್ಲದವರು ದೇಶದ ಪ್ರಧಾನಿ ಆಗಲು ಲಾಯಕ್ಕಲ್ಲ ಎಂದು ಮೂದಲಿಸಿದರು. ಆದರೆ ಅವರು ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ.

8.ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರಹಿತ ಮುಖ್ಯ: ಮೋದಿಯವರ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅವರು ತಮ್ಮ ಕುಟುಂಬ ದವರನ್ನು ರಾಜಕೀಯ ಮತ್ತು ಅಧಿಕಾರದ ಪಡಸಾಲೆಯಿಂದ ದೂರ ಇಟ್ಟಿರುವುದು. ಕುಟುಂಬ ರಾಜಕಾರಣ ಅವರ ಪದಕೋಶ ಮತ್ತು ಪಿತ್ತಕೋಶದಲ್ಲಿ ಇಲ್ಲವೇ ಇಲ್ಲ. ಅವರಿಗೆ ಪಿತೃಕೋಶವೂ ಇಲ್ಲ ಬಿಡಿ. ಅವರಿಗೆ ತಮ್ಮದೆನ್ನುವ ಒಂದು ಸಂಸಾರ, ಮನೆ ಇಲ್ಲ. ಸಂಬಂಧಿಕರ ಕಾಟವಿಲ್ಲ. ಮೋದಿ ಹಣ ಹೊಡೆಯುತ್ತಾರೆ, ಮೋದಿ ಭ್ರಷ್ಟ ಎಂದು ಯಾರೂ ಬೊಟ್ಟು ಮಾಡಲಾರರು, ಮಾಡಿದರೂ ಯಾರೂ ನಂಬಲಾರರು. ‘ಚೌಕಿದಾರ್ ಚೋರ್ ಹೈ’ ಎಂದು ರಾಹುಲ್ ಗಾಂಧಿ ಹೇಳಿದರೂ ಯಾರೂ ನಂಬಲಿಲ್ಲ.

9. ಉನ್ನತ ಸ್ಥಾನಕ್ಕೇರಿದ ನಂತರ, ಅಲ್ಲಿಯೇ ಇರಲು ಸದಾ perform ಮಾಡಬೇಕು, ಹೆಣಗಬೇಕು: ಮೋದಿಯವರ ದೊಡ್ಡ ತಾಕತ್ತು ಅವರ ಕ್ರಿಯಾಶೀಲತೆ. ಅವರು ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುತ್ತಾರೆ. ಇಲ್ಲಿ ತನಕ ಒಂದು ದಿನ ರಜಾ ತೆಗೆದುಕೊಂಡಿಲ್ಲ. ಅವರೂ ವಿರಮಿಸುವುದಿಲ್ಲ, ಬೇರೆಯವರಿಗೂ ವಿರಮಿಸಲು ಬಿಡುವುದಿಲ್ಲ. ಸದಾ ಕೆಲಸ, ಕೆಲಸ. ಕಠಿಣ ಪರಿಶ್ರಮ ಮತ್ತು ದುಡಿಮೆಯಿಂದ ಸುಸ್ತಾಗುವುದಿಲ್ಲ. ಅದು ಅಪರಿಮಿತವಾದ ಸಮಾಧಾನ, ಸಂತೃಪ್ತಿಯನ್ನು ಕೊಡುತ್ತದೆ ಎಂಬುದು ಅವರ
ಕಾಯಕ ಸಿದ್ದಾಂತ. ಅದೇ ಅವರನ್ನು ಆ ಜಾಗದಲ್ಲಿಟ್ಟಿದೆ.

10. ಜನರು ನಮ್ಮನ್ನು ಮೆಚ್ಚಲು ಬಲವಾದ ಕಾರಣಗಳಿರಬೇಕು: ಜನ ಯಾರನ್ನೂ ಸುಖಾಸುಮ್ಮನೆ ಇಷ್ಟಪಡುವುದಿಲ್ಲ. ನಾಯಕನೆಂದು ಒಪ್ಪಿಕೊಳ್ಳುವಾಗ ಅವರಲ್ಲಿ ಹಲವಾರು ಗುಣಲಕ್ಷಣಗಳನ್ನು ನೋಡುತ್ತಾರೆ. ಸಂತೆಯಲ್ಲಿ ದನವನ್ನು ಖರೀದಿಸು  ವಾಗ ಅದರ ಹಲ್ಲು, ಕೊಂಬು ನೋಡುವಂತೆ, ತಮ್ಮ ನಾಯಕನಲ್ಲಿ ಕೂಡ ವಿಶಿಷ್ಟ ಗುಣ, ಸಾಮರ್ಥ್ಯಗಳನ್ನು ನೋಡುತ್ತಾರೆ. ನಿಶ್ಚಿತವಾಗಿ ಮೋದಿಯವರಲ್ಲಿ ಅಂಥ ಅನೇಕ ಗುಣಗಳಿರಲೇಬೇಕು. ಅವು ಯಾವವು ಎಂಬುದು ನಿಮಗೆ ಗೊತ್ತಿದೆ.

11. ಸದಾ ನಮ್ಮ ಪರ ಹೋರಾಡುವ ಬಲಿಷ್ಠ ತಂಡ ಕಟ್ಟುವುದು: ಮೋದಿಯವರು ಪ್ರಧಾನಿಯಾಗಿದ್ದಾಗ ಮಾತ್ರವಲ್ಲ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಬಲಿಷ್ಠ ತಂಡ ರಚನೆಯಲ್ಲಿ ಅವರಿಗೆ ನಂಬಿಕೆ. ತಮ್ಮ ಆಶಯ, ಧ್ಯೇಯಗಳಿಗೆ ಅನುಗುಣವಾಗಿ ಕೆಲಸ ಮಾಡುವ ಪ್ರಾಮಾಣಿಕ, ನಿಷ್ಠಾವಂತರ ತಂಡ ರಚಿಸಿ, ಅವರಿಗೆ ಹೊಣೆಗಾರಿಕೆ ನೀಡುವುದು ಅವರ ಕಾರ್ಯಶೈಲಿ. ಎಲ್ಲ ಕೆಲಸಗಳನ್ನು ನಮಗೆ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಸುತ್ತ ಯೋಗ್ಯರನ್ನು ಇಟ್ಟುಕೊಳ್ಳದಿದ್ದರೆ, ಅಯೋಗ್ಯರೇ ತುಂಬಿ ಕೊಳ್ಳುತ್ತಾರೆ. ಯಾರನ್ನು ಎಲ್ಲಿಡಬೇಕೋ ಅಲ್ಲಿಯೇ ಇಡಬೇಕು. ಸಮರ್ಥರನ್ನು ಗುರುತಿಸಿ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸಕ್ಕೆ ಹೆಚ್ಚಿದರೆ ನಿಶ್ಚಿತ ಫಲಿತಾಂಶ ಪಡೆಯಬಹುದು. ಇದರಲ್ಲಿ ಮೋದಿ ಪರಿಣತರು.

12. ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕಬಾರದು: ಇದು ಮೋದಿಯವರ ತೀರ್ಫು. ಮೋದಿಯವರ ಜಾಗದಲ್ಲಿ ಯಾರೇ ಪ್ರಧಾನಿಯಿದ್ದರೂ ನೋಟು ರದ್ದತಿ, ಜಿಎಸ್ಟಿ ಜಾರಿ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ (ಆರ್ಟಿಕಲ್ 370) ರದ್ದು ಮುಂತಾದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಪುಲ್ವಾಮಾ ದಾಳಿಯಾದಾಗ ಪಾಕಿಸ್ತಾನದ ವಿರುದ್ಧ ಪ್ರತಿದಾಳಿಗೆ ಮುಂದಾದರು. ಚೀನಾ ಗಡಿಯಲ್ಲಿ ಕ್ಯಾತೆ ತೆಗೆದಾಗ ಗುಂಡಿನಿಂದಲೇ ಉತ್ತರ ನೀಡಿದರು. ನಾಯಕನಾದವನು ಕಠಿಣ ನಿರ್ಧಾರ ತೆಗೆದುಕೊಳಲು ಹೆದರಬಾರದು. ಮೋದಿಯವರನ್ನು ಯಾರೂ ಹೆದರಿಸಲು, ಬೆದರಿಸಲು ಸಾಧ್ಯವಿಲ್ಲ. ಕೆಲವು ನಿರ್ಧಾರಗಳು ಸರಿಯೆನಿಸದಿರಬಹುದು. ತಪ್ಪಾಗಬಹುದು. ಹಾಗೆಂದು ನಿರ್ಧಾರವನ್ನೇ ತೆಗೆದುಕೊಳ್ಳದಿರುವುದು ನಾಯಕತ್ವದ ಲಕ್ಷಣವಲ್ಲ.

13. ಪ್ರತಿಕೂಲ ಪರಿಸ್ಥಿತಿಯನ್ನು ನಮ್ಮ ಲಾಭಕ್ಕೆ ಬಳಸಿಕೊಳ್ಳಬೇಕು: ಮೋದಿ ಅವರ ಮೊದಲ ಅವಧಿಯ ಕೊನೆಯಲ್ಲಿ ಅವರ ಆಡಳಿತದ ಬಗ್ಗೆೆ ಕೆಲವು ಅಪಸ್ವರಗಳು ಕೇಳಿ ಬರಲಾರಂಭಿಸಿದ್ದವು. ಪುಲ್ವಾಾಮದಲ್ಲಿ ಸಂಭವಿಸಿದ ಉಗ್ರರ ದಾಳಿಯ ನಂತರ, ಮೋದಿಯವರು ನಡೆದುಕೊಂಡ ರೀತಿ ಯಿಂದ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯಿತು. ಆ ಘಟನೆಯ ಛಾಯೆ ಚುನಾ ವಣೆಯ ಮೇಲೂ ಆಯಿತು. ಇದು ಮೋದಿಯವರಿಗೆ ವರದಾನವಾಗಿ ಪರಿಣಮಿಸಿತು. ಚಾಯ್ ವಾಲಾ ಎಂದು ಅವರನ್ನು ಕಾಂಗ್ರೆಸ್ ನಾಯಕರೊಬ್ಬರು ಜರೆದಾಗ, ಅದನ್ನು ಅವರು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡರು. ‘ಚೌಕಿದಾರ್ ಚೋರ್ ಹೈ’ ಎಂದು ರಾಹುಲ್ ಗಾಂಧೀ ನಿಂದಿಸಿದಾಗ, ತಮ್ಮನ್ನು ಬೆಂಬಲಿಸುವ ಎಲ್ಲರಿಗೂ ಹೆಸರಿನ ಮೊದಲು ಚೌಕಿದಾರ್ ಎಂದು ಸೇರಿಸಿಕೊಳ್ಳುವಂತೆ ಹೇಳಿದರು.

14. ಆಟದ ನಿಯಮಗಳನ್ನು ಬದಲಿಸುವುದು ಸಾಧ್ಯವಾಗದಿದ್ದರೆ ಆಟವನ್ನೇ ಬದಲಿಸಬೇಕು: 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳೆಲ್ಲ ಜಾತಿ, ಧರ್ಮ, ಪ್ರಾದೇಶಿಕತೆ, ವೋಟ್ ಬ್ಯಾಂಕ್ ರಾಜಕಾರಣ..

ಇವೇ ಮುಂತಾದ ಚರ್ವಿತಚರ್ವಣ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಸೆಣಸುವ ಲೆಕ್ಕಾಚಾರದಲ್ಲಿದ್ದರೆ,
ಮೋದಿಯವರು ಸಾಂಪ್ರದಾಯಿಕ ಚುನಾವಣೆಯ ಪಟ್ಟುಗಳನ್ನು ಬಿಟ್ಟು, ಪಾಶ್ಚಾತ್ಯ ದೇಶಗಳಲ್ಲಿ ಇರುವಂತೆ, ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಮತ ನೀಡುವಂತೆ, ಒಬ್ಬ ನಾಯಕನಿಗೆ ಮತ ನೀಡುವಂತೆ, ಬಲಿಷ್ಠ ಮತ್ತು ಸಮರ್ಥ ನಾಯಕತ್ವಕ್ಕೆ ಮತ ನೀಡು ವಂತೆ, ದೇಶವಾಸಿಗಳಿಗೆ ಕರೆ ಕೊಟ್ಟರು. ‘ಪ್ರತಿಪಕ್ಷಗಳ ಹತ್ತಾರು ನಾಯಕರು ವರ್ಸಸ್ ಒಬ್ಬ ಮೋದಿ’ ಎಂಬಂಥ ಅಖಾಡದಲ್ಲಿ ನಿಸ್ಸಂದೇಹವಾಗಿ ಮೋದಿಯವರನ್ನೇ ಬೆಂಬಲಿಸುವುದು ಮತದಾರರ ಸಹಜ ಆಯ್ಕೆಯಾಯಿತು. ನಿಯಮಗಳ ಬದಲು ಆಟವನ್ನೇ ಬದಲಿಸಿದ್ದರು.

15. ತನ್ನ ತಲೆಯಲ್ಲಿರುವುದನ್ನು ಜನರ ತಲೆಯೊಳಗೆ ಹಾಕುವ, ಅವರೊಳಗೆ ಹುಳು ಬಿಡುವ ಪರಿಣಾಮಕಾರಿ ಸಂವಹನಕಾರ ಮಾತ್ರ ಉತ್ತಮ ನಾಯಕನಾಗಬಲ್ಲ: ಮೋದಿಯವರ ತಾಕತ್ತಿರುವುದು ಅವರ ಸಂವಹನದಲ್ಲಿ. ತಮ್ಮ ವಿಚಾರವನ್ನು ಗೊಂದಲವಿಲ್ಲದೇ, ನೇರವಾಗಿ ಜನರಿಗೆ ತಲುಪಿಸುವ ಕಲೆ ಅವರಿಗೆ ಸಿದ್ಧಿಸಿದೆ. ಲಕ್ಷೋಪಾದಿಯಲ್ಲಿ ಸೇರಿದ ಜನರನ್ನು ಮಂತ್ರಮುಗ್ದಗೊಳಿಸುವುದರಲ್ಲಿ ಅವರು ನಿಷ್ಣಾತರು. ಮಾತಿನಲ್ಲಿ ಅವರು ಯಾರನ್ನಾದರೂ ನಂಬಿಸಬಲ್ಲರು. ಹಾಗೆಂದು ಅವರು ಬಾಯಿಪಟಾಕಿಯಲ್ಲ.

ಹೊಸ ವಿಚಾರಗಳನ್ನು ಅತ್ಯಂತ ಸಮರ್ಪಕವಾಗಿ ಜನರಿಗೆ ತಲುಪಿಸಬಲ್ಲರು. ಅವರು great communicator.  ಅವರು ಮಾತಾಡಿದರೆ ಇಡೀ ದೇಶವೇ ಕೇಳಿಸಿಕೊಳ್ಳುತ್ತದೆ. ಲಾಕ್ ಡೌನ್ ಕಾಲದಲ್ಲಿ ದೀಪ ಬೆಳಗಿ ಎಂದು ಅವರು ಕರೆ ಕೊಟ್ಟರೆ ಇಡೀ ದೇಶವೇ ಅವರ ಮಾತನ್ನು ಆಜ್ಞೆಯಂತೆ ಪಾಲಿಸಿತು.

16. ನಾಯಕನಾದವನಿಗೆ ಎಲ್ಲರನ್ನೂ ತಲುಪುವ, ಆವರಿಸಿಕೊಳ್ಳುವ ಗುಣ ಅವಶ್ಯ: ನೀವು ಮೋದಿ ಭಕ್ತರೋ,  ವಿರೋಧಿಯೋ ಸಂಬಂಧವಿಲ್ಲ. ಇಂದು ಎಲ್ಲಿಯೇ ಹೋಗಿ, ಮೋದಿ ಮಾತುಕತೆಗಳಲ್ಲಿ ಪ್ರಸ್ತಾಪವಾಗದೇ ಹೋಗುವುದಿಲ್ಲ. ಹೊಗಳಲೂ ಅವರು ಬೇಕು. ತೆಗಳಲೂ ಅವರೇ ಬೇಕು. ತಮ್ಮ ತಲೆಯಲ್ಲಿ ಎಲ್ಲರೂ ಮೋದಿಯ ಗೂಡು ಕಟ್ಟುಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ಭಾರತ ಮೋದಿಮಯ, ಬೇರೆ ನಾಯಕರು ಮಾಯ!

ಮೋದಿಯವರು ಬಂದು ಲ್ಯಾಂಡ್ ಆಗುವುದಿಲ್ಲ. ತಾವು ಇಳಿದ ಲ್ಯಾಂಡನ್ನೇ ಆವರಿಸಿಕೊಳ್ಳುತ್ತಾಾ. ಅವರು ಸದಾ ದೇಶದ ಜನರ ಜತೆ connect ಆಗುತ್ತಾರೆ. ‘ಮನ್ ಕಿ ಬಾತ್’, ಟ್ವಿಟರ್, ಫೇಸ್ ಬುಕ್ , ಇನ್ಸ್ಟಾಗ್ರಾಮ್ ಮೂಲಕ ದೇಶವಾಸಿಗಳೊಂದಿಗೆ ದಿನದಲ್ಲಿ ಹತ್ತಾರು ಸಲ ಮುಖಾಮುಖಿಯಾಗುತ್ತಾರೆ. ಅವರು ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ನಾಯಕ.

17. ನಮಗೆ ನಾವೇ ಮಾದರಿಯಾಗುವುದು: ಇಂದು ಮೋದಿಯವರಿಗೆ ಮೋದಿಯವರೇ ರೋಲ್ ಮಾಡೆಲ್. ಅವರಿಗಿಂತ ದೊಡ್ಡ ಬ್ರಾಂಡ್ ಮೌಲ್ಯ ಹೊಂದಿರುವ ನಾಯಕನಿಲ್ಲ. ಇಂದು ಮೋದಿಯವರು ಮೋದಿತ್ವವನ್ನೇ ಅನುಸರಿಸಬೇಕು. ಅವರಿಗೆ ಪೊರೆ ಕಳಚಿ ಬೇರೆ ವ್ಯಕ್ತಿಯಾಗಲು ಸಾಧ್ಯವಿಲ್ಲ. ಅವರು ತಮ್ಮನ್ನು reinvent ಮಾಡಿಕೊಳ್ಳಬಹುದು, ಆದರೆ ಮಾರ್ಪಾಡು ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟಮಟ್ಟಿಗೆ ‘ಬ್ರಾಂಡ್ ಮೋದಿ’ ಎನ್ನುವುದು ಬಲಿಷ್ಠವಾಗಿದೆ. ಅವರು ಎಲ್ಲರನ್ನೂ ಒಳಗೊಳ್ಳುವ
ನಾಯಕರಾಗಿರುವುದು ಈ ಕಾರಣದಿಂದ. ಮೋದಿಯವರ ಈ ಗುಣಗಳನ್ನು ಮೆಚ್ಚುವುದೆಂದರೆ, ಬಿಜೆಪಿಯನ್ನು ಮೆಚ್ಚಿದಂತೆ ಎಂದು ಭಾವಿಸಬೇಕಿಲ್ಲ. ಅವರ ವಿರೋಧಿಗಳೂ ಈ ಗುಣಗಳನ್ನು ಅಳವಡಿಸಿಕೊಂಡು ರಾಜಕೀಯದಲ್ಲಿ ಮಾತ್ರವಲ್ಲ, ತಮ್ಮ ತಮ್ಮ ವೃತ್ತಿಗಳಲ್ಲಿ, ಜೀವನದಲ್ಲಿ ಯಶಸ್ವಿ ಆಗಬಹುದು. ಅಷ್ಟಕ್ಕೂ ಒಬ್ಬ ವ್ಯಕ್ತಿಯಲ್ಲಿರುವ ಉತ್ತಮ ಗುಣಗಳನ್ನು ಅಳವಡಿಸಿ ಕೊಳ್ಳುವುದರಲ್ಲಿ ತಪ್ಪೇನಿಲ್ಲ ಬಿಡಿ.

Leave a Reply

Your email address will not be published. Required fields are marked *

error: Content is protected !!