Saturday, 23rd November 2024

ಅಂ.ರಾ ಮನ್ನಣೆಗೆ ಭಾರತವನ್ನು ಬೈಯ್ಯಬೇಕು

ಶಿಶಿರ ಕಾಲ

ಶಿಶಿರ ಹೆಗಡೆ

ಪತ್ರಕರ್ತರಾದವರು ವ್ಯವಸ್ಥೆಯನ್ನು ಪ್ರಶ್ನಿಸಲೇಬೇಕು. ಅನ್ಯಾಯವಾದಲ್ಲಿ ಅದನ್ನು ತೋರ್ಪಡಿಸಲೇಬೇಕು. ಆದರೆ ಇವರೆಲ್ಲರ ಅವೈeನಿಕ
ನೆರೇಷನ್ನುಗಳನ್ನು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಕಾರಿಕೊಳ್ಳುವುದಿದೆಯಲ್ಲ, ಅದು ಇವರೆಲ್ಲರ ಉದ್ದೇಶವನ್ನು ಪ್ರಶ್ನಿಸುತ್ತದೆ.

ಅಂತಾರಾಷ್ಟ್ರೀಯ ಪ್ರಶಸ್ತಿ, ಮನ್ನಣೆ ಇವೆಲ್ಲ ಸಿಗಬೇಕೇ? ನಿಮ್ಮ ಲೇಖನಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕೇ? ಬಹಳ ಸುಲಭ- ನಿಮಗೆ ಭಾರತವನ್ನು ಚೆನ್ನಾಗಿ ಬೈಯ್ಯಲು ಬರಬೇಕು. ಸತ್ಯದ ತಲೆಯ ಮೇಲೆ ಹೊಡೆದಂತೆ ತಿರುಚಿ ಇಂಗ್ಲಿಷ್‌ನಲ್ಲಿ ಹೇಳಲು, ಬರೆಯಲು, ಚಲನಚಿತ್ರ ಮಾಡಿ ಬಿಂಬಿಸಲು- ಈ ಯಾವುದಾದರೂ ಒಂದು ಬಂದರೆ ನೀವು ಪ್ರತಿಷ್ಠಿತರೆನ್ನಿಸಿಕೊಳ್ಳಬಹುದು. ಬಹಳ ಸುಲಭ.

ಅರ್ಜೆಂಟೀನಾ ರಸ್ತೆಗಳಲ್ಲಿ ನಾವು ನಾಲ್ಕು ಸ್ನೇಹಿತರು ಓಡಾಡುತ್ತಿದ್ದವು. ಅಲ್ಲಿ ಬಹುತೇಕ ರಿಗೆ ಇಂಗ್ಲಿಷ್ ಸುಟ್ಟುಕೊಂಡು ತಿನ್ನಲಿಕ್ಕೂ ಬರುವುದಿಲ್ಲ. ಮಾರ್ಗಮಧ್ಯದಲ್ಲಿ ಅನಿ ರೀಕ್ಷಿತವಾಗಿ ಒಬ್ಬ ಸಿಕ್ಕಿದ್ದ. ಆತನಿಗೆ ಇಂಗ್ಲಿಷ್ ಬರುತ್ತಿತ್ತು. ಆಗ ತಾನೆ ಸ್ಲಂ ಡಾಗ್ ಮಿಲಿಯನೇರ್ ತೆರೆಗೆ ಬಂದ ದಿನಗಳವು. ಪುಣ್ಯಾತ್ಮ ಆ ಚಿತ್ರವನ್ನು ನೋಡಿದ್ದ. ಅಲ್ಲಿನವರಿಗೆ ಭಾರತ ಬಿಡಿ, ಅವರ ದೇಶದ ಆಚೆ ಹೇಗಿದೆ ಎಂಬ ಐಡಿಯಾ ಕೂಡ ಇರೋದಿಲ್ಲ. ಆತ ನಮ್ಮನ್ನು ನಿಲ್ಲಿಸಿ ಮಾತನಾಡುತ್ತ ಹರುಕು ಮುರುಕು ಇಂಗ್ಲಿಷ್‌ನ ಎರಡನೇ ವಾಕ್ಯದಲ್ಲಿಯೇ ಭಾರತವೆಂದರೆ ಆ ಚಿತ್ರದಲ್ಲಿ ತೋರಿಸಿದಂತೆಯೇ ಇದೆಯ ಲ್ಲವೇ ಎಂದು ಕೇಳಿದ. ನಾವು ಒಂದು ಷೋಗೆ ಹೋಗಬೇಕಿತ್ತು. ಅದನ್ನೆಲ್ಲ ಬಿಟ್ಟು ಆತನಿಗೆ ಒಂದರ್ಧ ಗಂಟೆ ಭಾರತದ ಬಗ್ಗೆ ಹೇಳಬೇಕಾಯ್ತು. ಸಾಮಾನ್ಯ ವ್ಯಕ್ತಿ ಯಾರೋ ಆಗಿದ್ದರೆ ಹಾಗೇನಿಲ್ಲ ಎಂದು ಒಂದೇ ಶಬ್ದದಲ್ಲಿ ಉತ್ತರಿಸಿ ಮುಂದೆ ಹೋಗ ಬಹುದಿತ್ತು.

ಆದರೆ ಕೇಳಿದವನು ಅಲ್ಲಿನ Clarin ಎಂಬ ಪ್ರತಿಷ್ಠಿತ ಪತ್ರಿಕೆಯ ಪತ್ರಕರ್ತ. ಹಾಗಾಗಿ ಈ ಎಲ್ಲ ವಿವರಣೆ ಕೊಡಲೇಬೇಕಿತ್ತು. ಫೋನ್ ನಂಬರ್ ಎಕ್ಸ್‌ಚೆಂಜ್ ಮಾಡಿಕೊಂಡೆವು. ನಂತರದಲ್ಲಿ ಆತ ಭಾರತವೆಂದರೆ ಸ್ಲಮ್ ಡಾಗ್ ಚಿತ್ರವಲ್ಲ ಎನ್ನುವ ಲೇಖನವನ್ನು ಬರೆದು ಅದರ ಕ್ಲಿಪ್ಪಿಂಗ್ ಅನ್ನು ಕಳುಹಿಸಿಕೊಟ್ಟಿದ್ದ. ಅದು ನನಗೆ ಪರಮ ಸಮಾಧಾನವನ್ನು ತಂದುಕೊಟ್ಟಿತ್ತು. ಆದರೆ ಇಲ್ಲಿ ನಮ್ಮ ಸಂಭಾಷಣೆ ಮತ್ತು ಆತ ನಂತರದಲ್ಲಿ ಬರೆದ ಲೇಖನ, ಇವೆಲ್ಲವನ್ನು ಮೀರಿ ನನ್ನನ್ನು ಈ ಘಟನೆ ಇಂದಿಗೂ ಕಾಡುತ್ತದೆ. ಒಂದು ಚಲನಚಿತ್ರ ನಮ್ಮ ದೇಶದ ಬಗ್ಗೆ ಸಂಪೂರ್ಣ ತಪ್ಪು ಕಲ್ಪನೆಯನ್ನೇ ಕಟ್ಟಿಕೊಟ್ಟಿತಲ್ಲ ಎನ್ನುವ ಬೇಸರ.

ಆತ ಬಹುಷಃ ಇಂಥದೊಂದು ಚಲನಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬರದಿದ್ದರೆ ನೋಡುತ್ತಿರಲಿಲ್ಲವೇನೋ. ಇಲ್ಲಿ ಸ್ಲಾಮ್ ಡಾಗ್ ಚಲನಚಿತ್ರದಲ್ಲಿ ತೋರಿಸಿದ್ದಕ್ಕೆ ನನ್ನಅಭ್ಯಂತರವಿಲ್ಲ. ಅಲ್ಲದೇ ನನ್ನ ದೇಶ ಭಾರತವೇನು ಪ-ಕ್ಟ್ ರಾಮ ರಾಜ್ಯವೇನಲ್ಲ. ಇಲ್ಲಿ ಸಹಜವಾದ ಹುಳುಕುಗಳಿವೆ. ಆದರೆ ಇಂತಹ ತಪ್ಪು ಭಾವವನ್ನು ಜಾಗತಿಕವಾಗಿ, ಭಾರತವೆಂದರೆ ಅಂದಾಜೇ ಇಲ್ಲದವರ ಮನಸ್ಸಿನಲ್ಲಿ ಇದೇ ಭಾರತವೆನ್ನುವ ಕಲ್ಪನೆಯನ್ನು ಹುಟ್ಟಿಹಾಕಿತಲ್ಲ ಎನ್ನುವ ಬೇಸರ, ಹತಾಶೆ.

ದಿನಕ್ಕೆ ಕನಿಷ್ಠ ಏಳೆಂಟು ಅಂತಾರಾಷ್ಟ್ರೀಯ ಪತ್ರಿಕೆ ಮೇಲೆ ಕಣ್ಣಾಡಿಸುವ ನನಗೆ ಇಲ್ಲಿಯವರೆಗೆ ಈ ಯಾವ ಪತ್ರಿಕೆಯೂ ಭಾರತದ ಬಗ್ಗೆ ಒಳ್ಳೆ ಮಾತಾಡಿದ್ದು ಸ್ಯಾಂಪಲ್ಲಿಗೂ ಸಿಕ್ಕಿಲ್ಲ, ಮುಂದೆಯೂ ಸಿಗಲಿಕ್ಕಿಲ್ಲ. ಗೌರಿ ಲಂಕೇಶ್ ಹತ್ಯೆಯಾಯಿತಲ್ಲ, ಆ ಸಮಯದಲ್ಲಿ ವಿಶ್ವೇಶ್ವರ ಭಟ್ಟರು ಬರೆದ ಲೇಖನ ಓದಿದವರಿಗೆ ಆಕೆಯ ಬಗ್ಗೆ ಬೇರಿನ್ನೊಂದು ಲೇಖನ ಓದುವ ಅವಶ್ಯಕತೆಯಿಲ್ಲ ಎನ್ನುವುದು ನನ್ನ ಗಟ್ಟಿ ನಿಲುವು. ಆಕೆ ನಕ್ಸಲ್ ಸಹಾನುಭೂತಿಯುಳ್ಳವಳಾಗಿದ್ದಳು ಎನ್ನುವುದರಲ್ಲಿ ಅನುಮಾನವಿಲ್ಲ.

ಇರಲಿ, ಆದರೆ ಅದೇ ಗೌರಿಯ ಹತ್ಯೆಯನ್ನು ನ್ಯೂಯಾರ್ಕ್ ಟೈಮ್ಸ್ ಬಿಂಬಿಸಿದ ರೀತಿ ಮಾತ್ರ ಬೇರೆಯದೇ. ಅದರಲ್ಲಿ ಒಂದಂಶ ಸತ್ಯವೂ ಇಲ್ಲವೆನ್ನುವುದನ್ನು ಬಾಯ್ಬಿಟ್ಟು ಹೇಳಬೇಕಿಲ್ಲ. In India, Another Government Critic Is Silenced by Bullets ಇದು ಆ ದಿನದ ವರದಿಯ ಶೀರ್ಷಿಕೆಯಾಗಿತ್ತು. ಈ ವಾಕ್ಯವನ್ನು ಒಬ್ಬ ಹೊರ ದೇಶದವನಾಗಿ ಓದಿ ನೋಡಿ- ಅದರ ನಿರೂಪಣೆಯನ್ನು ಗ್ರಹಿಸಿ. ಹೀಗೆ ಉದಾಹರಣೆ ಕೊಡುತ್ತ ಹೋಗಬಹುದು.

ಇರಲಿ- ಈ ಪತ್ರಿಕೆಗಳೆಲ್ಲ ನಮ್ಮ ದೇಶದವಲ್ಲ. ಇವಕ್ಕೆಲ್ಲ ನಮ್ಮ ದೇಶದ ಬಗ್ಗೆ ಒಳ್ಳೆಯ ಮಾತನಾಡಬೇಕೆಂದು ಯಾವುದೇ ದರ್ದು ಇಲ್ಲ- ಎಲ್ಲವೂ ಅರ್ಥವಾಗುತ್ತದೆ. ಆದರೆ ಬೇಸರ ಅದಲ್ಲ. ಇಂತಹ ಸಂಪೂರ್ಣ ತಪ್ಪು ವರದಿ, ನೆರೇಷನ್ ಅನ್ನು ಈ ಮಾಧ್ಯಮಗಳಿಗೆ ತಯಾರು ಮಾಡಿ ಕೊಡುತ್ತಿರುವವರು ಯಾರು? ಇದೆಲ್ಲ ಫೀಡ್‌ಗಳನ್ನು ಕೊಡುವವರು ನಮ್ಮವರೇ ಎನ್ನುವುದು. ಇವರದೆಲ್ಲ ಒಂದು ದೊಡ್ಡ ಗ್ಯಾಂಗ್ ಇದೆ. ಇವರು ಇಂಥ ನೆರೇಷನ್ ಅನ್ನು ತಯಾರು ಮಾಡುವುದಷ್ಟೇ ಅಲ್ಲ. ಇವರದೊಂದು ಕಾರ್ಯಶೈಲಿ ಇದೆ.

ಈ ಗ್ಯಾಂಗಿನ ಒಬ್ಬರು ಇಂಥದ್ದನ್ನು ತಯಾರಿಸಿ ಈ ಅಂತಾರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ. ಅದನ್ನು ಇದೇ ಗ್ಯಾಂಗಿನ ಕೆಲವರು ತಕ್ಷಣ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿಕೊಳ್ಳುತ್ತಾರೆ. ಇನ್ನು ಉಳಿದವರು ಅಂತಾರಾಷ್ಟ್ರೀಯ ಪತ್ರಿಕೆಯಲ್ಲಿ ಭಾರತದ ಮಾನ ಹರಾಜಾಯ್ತು, ಅಲ್ಲಿ ಬಂದದ್ದೇ ಸತ್ಯ- ಬ್ಯಾ ಬ್ಯಾ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಹರಾಜು ಹಾಕಿದವರು ಇವರೇ ಆಗಿರುತ್ತಾರೆ. ಮೊನ್ನೆ ನಡೆದ ಹಿಜಾಬ್ ಘಟನೆಯ ಅಥವಾ ಹಿಂದಿನ ಯಾವುದೇ ಘಟನೆಯಿರಬಹುದು, ಇವರೆಲ್ಲರ ಕೃಪಾಕಟಾಕ್ಷದಿಂದ ಹೊರ ಜಗತ್ತಿಗೆ ಸಂಪೂರ್ಣ ಉಲ್ಟಾ ನೆರೇಷನ್ ಹೋಗಿದೆ- ಅದೆಲ್ಲದರ ಕ್ರೆಡಿಟ್ ಈ ಗ್ಯಾಂಗಿಗೆ ಸಲ್ಲಬೇಕು.

ಗೌರಿ ಹತ್ಯೆಯಾದಾಗ ನ್ಯೂಯಾರ್ಕ್ ಟೈಮ್ಸಗೆ ಭಾರತದಲ್ಲಿ, ಮತ್ತೊಬ್ಬ ಸರಕಾರವನ್ನು ಪ್ರಶ್ನಿಸುವವರನ್ನು ಬುಲೆಟ್‌ಗಳಿಂದ ಮೌನ ಗೊಳಿಸಲಾಗಿದೆ ಎಂದು ಬರೆದು ಕೊಟ್ಟದ್ದು ಭಾರತದವರೇ ಆದ ಹರಿ ಕುಮಾರ್. ಆತ ಹತ್ಯೆಯ ಕೆಲವೇ ಘಂಟೆಗಳಲ್ಲಿ ದೆಹಲಿಯ ಕೂತು ಇಂಥದೊಂದು ನಿರೂಪಣೆಯನ್ನು ತಯಾರಿಸಿ ಅಮೆರಿಕಕ್ಕೆ ಕಳಿಸಿಕೊಟ್ಟಿದ್ದ. ನಾನು ಇಲ್ಲಿ ನ್ಯೂಯಾರ್ಕ್ ಟೈಮ್ಸ್ ಅನ್ನು ಸಾಚಾ ಎನ್ನುತ್ತಿಲ್ಲ. ಹೇಳಲು ಹೊರಟಿರುವುದು ನಮ್ಮವರ ಬಗ್ಗೆ.

ತುಂಬಾ ಹಳೆಯದೆಲ್ಲ ಬಿಡಿ. ತೀರಾ ಇತ್ತೀಚಿನ ಒಂದು ವಿಚಾರವನ್ನೇ ತೆಗೆದುಕೊಳ್ಳೋಣ. ಕೋವಿಡ್‌ನಲ್ಲಿ ಭಾರತದಲ್ಲಿ ಸತ್ತವರ ಸಂಖ್ಯೆ ಸರಕಾರ ಕೊಟ್ಟ ಲೆಕ್ಕಕ್ಕಿಂತ ಏಳರಿಂದ ಎಂಟು ಪಟ್ಟು ಜಾಸ್ತಿ ಎನ್ನುವ ವಿಚಾರ. WHO ಪ್ರತಿ ದೇಶದಲ್ಲಿ ಸಾಂಕ್ರಾಮಿಕಕ್ಕಿಂತ ಮೊದಲು ವರ್ಷವೊಂದಕ್ಕೆ ಸತ್ತವರ ಸಂಖ್ಯೆಯನ್ನು ಮತ್ತು ಸಾಂಕ್ರಾಮಿಕದಲ್ಲಿ ಒಟ್ಟು ಸತ್ತವರ ಸಂಖ್ಯೆಯನ್ನು ಪರಿಗಣಿಸಿ, ಅದರ ವ್ಯತ್ಯಾಸವನ್ನು ಅವರೆಲ್ಲ ಕೋವಿಡ್‌ನ ಸತ್ತಿದ್ದು ಎನ್ನುವ ಹಾರಿಕೆಯ ಲೆಕ್ಕಾಚಾರವನ್ನು ಕೆಲ ದಿನಗಳ ಹಿಂದೆ ಕೊಟ್ಟಿತ್ತು. ಸಾಂಕ್ರಾಮಿಕ ಅಮೆರಿಕವನ್ನು ಅಪ್ಪಳಿಸಿದಾಗ, ಅದರ ಭೀಕರತೆಯನ್ನು ಕಂಡಾಗ ನನ್ನಲ್ಲಿಯೂ ಇದು ಭಾರತದಲ್ಲಿ ಇನ್ನೆಷ್ಟು ಭೀಕರ ವಾಗಬಹುದು ಎನ್ನುವ ಭಯವನ್ನು ಹುಟ್ಟಿಹಾಕಿತ್ತು. ಅಮೆರಿಕ ಮತ್ತು ಭಾರತದ ಆರೋಗ್ಯ ವ್ಯವಸ್ಥೆ, ಬದುಕು ಇವೆರಡನ್ನೂ ಕಂಡವರಿಗೆ ಇಂಥದೊಂದು ಹೆದರಿಕೆ ಹುಟ್ಟುವುದು ಸಹಜ. ಅಮೆರಿಕದ ಅರೋಗ್ಯ ವ್ಯವಸ್ಥೆಯ ಮೇಲೆ ನನ್ನ ಅನುಮಾನಗಳಿಲ್ಲ.

ಅದು ಭಾರತಕ್ಕೆ ಹೋಲಿಸಿದರೆ ಬಹಳ ಮುಂದುವರಿದಿದೆ. ನಾನಿಲ್ಲಿ ಹೇಳುತ್ತಿರುವುದು ವ್ಯವಸ್ಥೆಯ ಬಗ್ಗೆ- ಡಾಕ್ಟರುಗಳ ಸಾಮರ್ಥ್ಯದ ಬಗ್ಗೆ ಅಲ್ಲ. ಆದರೆ ಕೋವಿಡ್ ಭಾರತವನ್ನು ಅಮೆರಿಕಕ್ಕೆ ಬಾಧಿಸಿದಷ್ಟು ಕಾಡಲಿಲ್ಲ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೇನಾ ದರೂ ಆಗಿದ್ದಿದ್ದರೆ ಭಾರತದ ಬೀದಿ ಬೀದಿಗಳಲ್ಲಿ ಹೆಣ ಉರುಳುತ್ತಿತ್ತು- ಅದು ಎಲ್ಲರಿಗೂ ಗೋಚರಿಸುತ್ತಿತ್ತು.

ಅಂತೆಯೇ ಭಾರತದ ಕೋವಿಡ್ ಸಾವಿನ ಸಂಖ್ಯೆಯ ಮೇಲೆ ಕೂಡ ಅನುಮಾನಗಳಿವೆ. ಹಾಗೆ ನೋಡಿದರೆ ಕೋವಿಡ್‌ನಿಂದಾಗಿ ಆದ ಸಾವಿನ ಲೆಕ್ಕ ಯಾವುದೇ ದೇಶದ್ದೂ ಸರಿಯಲ್ಲ. ಅದಕ್ಕಿಂತ ಹೆಚ್ಚಿಗೆ ಜನರು ಸತ್ತಿರುತ್ತಾರೆ. ಏಕೆಂದರೆ ರಿಪೋರ್ಟ್ ಆಗದ ಸಾವುಗಳ ಪಾಲು ಎಲ್ಲ ಕಡೆಯೂ ಇದ್ದೇ ಇರುತ್ತದೆ. ಆದರೆ ಸರಕಾರದ ಲೆಕ್ಕವೇ ಸುಳ್ಳು ಎಂದು ಒಂದು ಥಿಯೇರಿ ತೇಲಿಸಿಬಿಡುವುದಿದೆಯಲ್ಲ, ಅದು ಕೆಲವು ಆಯಾಮಗಳಿಂದ ಸತ್ಯವಿರಬಹುದೆಂದೆನ್ನಿಸಿದರೂ ಅದೇ ಸರಿಯೆನ್ನುವಂತಿಲ್ಲ.

ಏಕೆಂದರೆ ಅದೊಂದು ಮೆಥಮೆಟಿಕಲ್ ಮಾಡೆಲ. ಅತಿಹೆಚ್ಚು ಕೋವಿಡ್ ಸಾವು ದಾಖಲಾಗಿರುವುದು ಅಮೆರಿಕದಲ್ಲಿ. ಅದು ಬಿಟ್ಟರೆ ಎರಡನೆ ಯದು ಬ್ರೆಜಿಲ, ಮೂರನೆಯದು ಭಾರತ. ಅಸಲಿಗೆ ಭಾರತದಲ್ಲಿ ಅಮೆರಿಕಕ್ಕಿಂತ ಹೆಚ್ಚಿಗೆಯೇ ಕೋವಿಡ್ ಸಾವಾಗಿರಬಹುದು, ಲೆಕ್ಕಕ್ಕೆ ಸಿಕ್ಕಿರಲಿಕ್ಕಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ಇದೇ ವರದಿಯ ಪ್ರಕಾರ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯಿರುವ ಚೀನಾ ಸಾವಿನ ಸಂಖ್ಯೆಯಲ್ಲಿ ೮೭ನೇ ಸ್ಥಾನ!

WHO ವೆಬ್ಸೈಟ್ ನಲ್ಲಿಯೇ ಈ ಕ್ಷಣದಲ್ಲಿ ಹೋಗಿ ನೋಡಿದಾಗ ನನಗೆ ಕಾಣಿಸಿದ ಕೋವಿಡ್ ಸಾವಿನ ಸಂಖ್ಯೆ ಚೀನಾದಲ್ಲಿ ಹದಿನೈದು ಸಾವಿರ! ಇದೊಂದು ಪಾಯಿಂಟ್ ಸಾಕೆನ್ನಿಸುತ್ತದೆ. ಆದರೆ ಇಲ್ಲಿ ಹೇಳಲು ಹೊರಟದ್ದು ಅದಲ್ಲ. ಈ ದೇಶದ ಮರ್ಯಾದೆ ತೆಗೆಯುವ ಕಾಯಕವನ್ನೇ ಜೀವನವನ್ನಾಗಿಸಿಕೊಂಡ ಗ್ಯಾಂಗಿನವರ ಬಗ್ಗೆ. ಈ ಗ್ಯಾಂಗ್ ಮತ್ತೆ ಈಗ ಎಲ್ಲಿಲ್ಲದಷ್ಟು ಗೌಜಿ ಈ ವಿಷಯವನ್ನು ಇಟ್ಟು ಕೊಂಡು ಮಾಡುತ್ತಿವೆ. ಭಾರತ ಸರಕಾರ ಜಗತ್ತಿನ ಅತ್ಯಂತ ದೊಡ್ಡ ಸುಳ್ಳುಕೋರ ಎನ್ನುವಂತೆ ಸಾಲು ಸಾಲು ಲೇಖನಗಳು ತಯಾರಾಗಿ ಈಗ ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಇವರೆಲ್ಲ ಬರೆದು ಪ್ರಕಟಿಸುತ್ತಿದ್ದಾರೆ.

ಪತ್ರಕರ್ತರಾದವರು ದೇಶವನ್ನು, ಸರಕಾರವನ್ನು, ವ್ಯವಸ್ಥೆಯನ್ನು ಪ್ರಶ್ನಿಸಲೇಬೇಕು. ಅನ್ಯಾಯವಾದಲ್ಲಿಅದನ್ನು ತೋರ್ಪಡಿಸಲೇಬೇಕು. ಸರಿಯಿದ್ದದ್ದು ಹೇಳದಿದ್ದರೂ ಪರವಾಗಿಲ್ಲ, ಸರಿಯಿಲ್ಲದಿದ್ದನ್ನು ಹೇಳಲೇಬೇಕು. ಆದರೆ ಇವರೆಲ್ಲರ ಅವೈಜ್ಞಾನಿಕ ನೆರೇಷನ್ನುಗಳನ್ನು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಕಾರಿಕೊಳ್ಳುವುದಿದೆಯಲ್ಲ, ಅದು ಇವರೆಲ್ಲರ ಉದ್ದೇಶವನ್ನು ಪ್ರಶ್ನಿಸುತ್ತದೆ. ಅಂತೆಯೇ ಕಾಶ್ಮೀರ ಮೊದಲಾದಲ್ಲಿ ನಡೆದ ನರಮೇಧದ, ದೇಶದಗುವ ಉತ್ತಮ ಬೆಳವಣಿಗೆ, ಎಷ್ಟು ಜನರು ಬಡತನ ರೇಖೆಯಿಂದ ಹೊರಬಂದರು, ಎಷ್ಟು ಜನರಿಗೆ ಮನೆ ಕಟ್ಟಿಸಿಕೊಡಲಾಗಿದೆ, ಭಾರತದ ಜಿಡಿಪಿ ಹೇಗೆ ಸುಧಾರಿಸಿದೆ, ಇವೆಲ್ಲದರ ಬಗ್ಗೆ ಒಂದೇ ಸೊತ್ತದ ಇವರೆಲ್ಲರ ಕಾರ್ಯೋ ದ್ದೇಶ ಇಲ್ಲಿ ಪ್ರಶ್ನಿಸಲೇ ಬೇಕಾಗುತ್ತದೆ.

ಈ ಲೇಖನ ಓದಿಡುವಾಗ ನಿಮಗೆ ಬರ್ಖಾ ದತ್, ರಾಣಾ ಅಯೂಬ, ರಾಜದೀಪ್, ಅಜಿತ್ ಅಂಜುಮ, ಅಭಿಸಾರ್ ಶರ್ಮ, ಅರ್ಫಾ ಶೇರ್ವಾನಿ, ಪುಣ್ಯಾ ಬಾಜ ಪೆಯ, ವಿನೋದ್ ಕಾಪ್ರಿ, ರವೀಶ್ ಕುಮಾರ್, ರೋಹಿಣಿ ಸಿಂಗ್, ನಿಖಿಲ್ ವಾಗ್ಲೆ, ನಿಧಿ ರಾಜ್ದಾನ್, ಸ್ವಾತಿ ಚತುರ್ವೇದಿ, ಸಾಗರಿಕಾ ಘೋಷ್, ರನ್ವಿಜಯ್ ಸಿಂಗ್, ವಿಷ್ಣು ಸೋಮ್ ಇವರೆಲ್ಲರ ಹೆಸರು ನೆನಪಾದರೆ ಅದೆಲ್ಲ ಕೇವಲ ಕಾಕತಾಳೀಯ ವಾಗಿರಬಹುದು.