Sunday, 8th September 2024

ನಮ್ಮ ಪೂರ್ವಜರ ದಾಯಾದಿಗಳು

ಹಿಂದಿರುಗಿ ನೋಡಿದಾಗ

ಭಾಷಣಗಳಲ್ಲಿ ಸಂಸ್ಕೃತ ಶ್ಲೋಕ, ಉಕ್ತಿ ಮತ್ತು ಘನಗಂಭೀರ ಶಬ್ದಗಳನ್ನು ಬಳಸಿದರೆ, ಆ ಭಾಷಣಕಾರ ಬುದ್ಧಿವಂತ ಮತ್ತು ಪಂಡಿತ ಎನ್ನುವ ಭಾವವಿದೆ. ಇದು ಯುರೋಪಿನ ಲ್ಯಾಟಿನ್ ಭಾಷೆಗೂ ಅನ್ವಯ. ಅಲ್ಲಿಯ ವಿದ್ವಜ್ಜನರು ಮತ್ತು ವಿಜ್ಞಾನಿಗಳಿಗೆ ತಮ್ಮ ಮಾತು-ಬರಹಗಳಲ್ಲಿ ಅವಕಾಶ ಸಿಕ್ಕಾಗೆಲ್ಲ
ಲ್ಯಾಟಿನ್ ಪದಪುಂಜಗಳನ್ನು ಬಳಸುವುದು ಒಂದು ಹೆಮ್ಮೆಯ ವಿಚಾರ. ಸರಳವಾಗಿ ಇಂಗ್ಲಿಷ್, ಫ್ರೆಂಚ್, ಡಚ್ ಭಾಷೆಯಲ್ಲಿ ಹೇಳಬಹುದಾದ ಪದ ಗಳನ್ನು ಲ್ಯಾಟಿನ್‌ನಲ್ಲಿ ಹೇಳಿದರಷ್ಟೇ ಒಂದು ಘನತೆ-ಮಾನ್ಯತೆ ಎನ್ನುವುದು ಅವರ ನಂಬಿಕೆ.

ಹಾಗಾಗಿ ವೈಜ್ಞಾನಿಕ ಪಾರಿಭಾಷಿಕ ಪದಗಳೆಲ್ಲ ಲ್ಯಾಟಿನ್‌ಮಯ! ಹೊಸದಾಗಿ ಏನನ್ನೇ ಕಂಡುಹಿಡಿದರೂ ಅದರ ನಾಮಕರಣಕ್ಕೆ ಲ್ಯಾಟಿನ್ ಮೂಲ ವನ್ನು ಅರಸುತ್ತಾರೆ. ಫ್ಲಾರೆಸ್ ದ್ವೀಪದಲ್ಲಿದ್ದ ಕುಬ್ಜ ಪೂರ್ವಜನನ್ನು ಸರಳವಾಗಿ ‘ಫ್ಲಾರೆಸ್ ಮ್ಯಾನ್’/‘ಫ್ಲಾರೆಸ್ ಮಾನವ’ ಎನ್ನಬಹುದಾಗಿತ್ತು. ಆದರೆ ಬದಲಿಗೆ ಅವರನ್ನು ‘ಹೋಮೋ ಫ್ಲಾರೆಸಿಯೆನ್ಸಿಸ್’ ಎಂದರು. ‘ಫ್ಲಾರೆಸ್ ದ್ವೀಪದ ಮನುಷ್ಯ’ ಎಂಬುದು ಇದರರ್ಥ. ‘ಹೋಮೋ’ ಎಂದರೆ ಲ್ಯಾಟಿನ್‌ ನಲ್ಲಿ ‘ಮನುಷ್ಯ’ ಎಂದರ್ಥ. ‘ಫ್ಲಾರೆಸಿಯೆನ್ಸಿಸ್’ ಎಂದರೆ ‘ಫ್ಲಾರೆಸ್ ದ್ವೀಪದವನು’ ಎನ್ನಬಹುದು.

Read E-Paper click here

ಹಾಗಾಗಿ, ವಿಶೇಷವಾಗಿ ವಿಜ್ಞಾನದ ಅಧ್ಯಯನಲ್ಲಿ ಈ ಲ್ಯಾಟಿನ್ ಪದಗಳು ಪಾಯಸದಲ್ಲಿನ ಕಲ್ಲುಗಳ ಹಾಗೋ, ದ್ರಾಕ್ಷಿ-ಗೋಡಂಬಿಯ ಹಾಗೋ ಓದುಗರಿಗೆ ಅನಿಸಬಹುದು. ಅದು ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ವಿಷಯಗ್ರಹಿಕೆಯ ದೃಷ್ಟಿಯಿಂದ, ಈ ಲ್ಯಾಟಿನ್ ಪದಗಳನ್ನು ಅರ್ಥ ಮಾಡಿ ಕೊಂಡು ಮುಂದುವರಿಯುವುದು ಅನಿವಾರ್ಯ. ಸುಮಾರು ಒಂದು-ಒಂದೂವರೆ ಲಕ್ಷ ವರ್ಷಗಳ ಹಿಂದೆ ಫ್ಲಾರೆಸ್ ಕುಬ್ಜಮಾನವ ಬದುಕಿದ್ದ ಎನ್ನುವುದು ಸದ್ಯದ ಆಧಾರದ ಮೇಲೆ ನಿರ್ಣಯವಾಗಿರುವ ಕಾಲಮಾನ.

ಇಂಡೋನೇಷ್ಯಾ ಪ್ರದೇಶದಲ್ಲಿ ಫ್ಲಾರೆಸ್ ಮಾನವ ರೂಪುಗೊಂಡಂತೆ ಜಗತ್ತಿನ ಇತರೆಡೆ ಇತರ ಮಾನವ ಪ್ರಭೇದಗಳು ರೂಪುಗೊಂಡಿದ್ದವು. ಅವುಗಳಲ್ಲಿ ‘ನಿಯಾಂದರ್ಥಾಲ್’ ಹಾಗೂ ‘ಡೆನಿಸೋವನ್’ ಮನುಷ್ಯರು ಮುಖ್ಯರಾದವರು. ಇವರನ್ನು ಬಿಟ್ಟರೆ ಉಳಿದವರು ನಾವು, ಅಂದರೆ ನಮ್ಮ ಪೂರ್ವಜ ರಾಗಿದ್ದವರು. ಒಂದರ್ಥದಲ್ಲಿ ಇವರೆಲ್ಲರೂ ದಾಯಾದಿಗಳು. ಹಾಗಾಗಿ ನಮ್ಮ ಪೂರ್ವಜರ ಈ ಮೂವರು ದಾಯಾದಿಗಳ ಬಗ್ಗೆ ಒಂದಷ್ಟು ತಿಳಿಯೋಣ.
ನಮ್ಮ ಪೂರ್ವಜರ ಮೂಳೆಗಳೆಲ್ಲ ಹೆಚ್ಚು ಕಡಿಮೆ ಒಂದೇ ತರಹ ಕಾಣುತ್ತವೆ. ಹಾಗಿರುವಾಗ ವಿಜ್ಞಾನಿಗಳು ಈ ದಾಯಾದಿಗಳನ್ನು ನಿಖರವಾಗಿ ಹೇಗೆ ಗುರುತಿಸುತ್ತಾರೆ ಎನ್ನುವ ಪ್ರಶ್ನೆ ಮೂಡುತ್ತದೆ.

ಮೂಳೆಗಳ ಭೌತಿಕ ಗುಣಲಕ್ಷಣ ಗಳಿಗೆ ಆದ್ಯತೆ ನೀಡಿದಂತೆ, ಅವುಗಳ ವಂಶವಾಹಿಗಳ ಅಧ್ಯಯನಕ್ಕೂ ಪ್ರಾಧಾನ್ಯವನ್ನು ನೀಡುತ್ತಾರೆ. ವಯಸ್ಕ
ಮನುಷ್ಯನ ದೇಹವು ಸರಿಸುಮಾರು ೩೭.೨ ಲಕ್ಷಕೋಟಿ (ಟ್ರಿಲಿಯನ್) ಜೀವಕೋಶಗಳಿಂದಾಗಿದೆ. ಪ್ರತಿ ಜೀವಕೋಶದಲ್ಲಿ ಒಂದು ಕೋಶಬೀಜವಿದೆ. ಪ್ರತಿ ಕೋಶಬೀಜದ ಒಳಗೆ ೨೩ ಜೊತೆ ಕ್ರೋಮೋಸೋಮುಗಳು ಇರುತ್ತವೆ. ಕ್ರೋಮೋ ಸೋಮುಗಳೆಂದರೆ ವ್ಯಕ್ತಿಯ ಗುಣಲಕ್ಷಣಗಳನ್ನು ನಿರ್ಧರಿಸುವ ನೀಲಿನಕ್ಷೆಗಳು ಇದ್ದಂತೆ. ಇವುಗಳಲ್ಲಿ ತಂದೆ ಮತ್ತು ತಾಯಿಯ ಕಡೆಯಿಂದ ತಲಾ ೨೩ ಬಂದಿದ್ದು ಅವರಿಬ್ಬರ ಗುಣಲಕ್ಷಣಗಳೂ ಮಿಳಿತವಾಗಿರುತ್ತವೆ. ಪ್ರತಿ ಕ್ರೋಮೋ ಸೋಮ್ ಒಂದೊಂದು ‘ಮಣಿಗಳ ಹಾರ’ವಿದ್ದಂತೆ.

ಒಂದೊಂದು ‘ಮಣಿ’ಯೂ ಒಂದೊಂದು ‘ವಂಶವಾಹಿ’ ಅಥವಾ ‘ಜೀನ್’. ಇವು ನಮ್ಮ ಮೂಗು, ಚರ್ಮದ ಬಣ್ಣ ಹೇಗಿರಬೇಕು? ಕೂದಲು ನೆಟ್ಟಗಿರಬೇಕಾ ಗುಂಗುರಾಗಿರಬೇಕಾ? ಇತ್ಯಾದಿ ಗುಣಲಕ್ಷಣಗಳನ್ನು ಹೀಗೆಯೇ ಇರಬೇಕೆಂದು ಆe ಹೊರಡಿಸುವ ನಿರ್ಣಾಯಕ ರಚನೆಗಳು. ಅಂತೆಯೇ ದೇಹದ ಗುಣಲಕ್ಷಣಗಳು ನಿರ್ಧಾರವಾಗುತ್ತವೆ. ನಮ್ಮ ಒಡಲ ಜೀವಕೋಶಗಳೆಲ್ಲ ಮೃದು ಅಂಗಾಂಶಗಳಿಂದಾಗಿರುವ ಕಾರಣ ಬೇಗ ಕೊಳೆಯುತ್ತವೆ. ಆದರೆ ಗಟ್ಟಿ ರಚನೆಗಳಾದ ಮೂಳೆಗಳು ಸಾವಿರಾರು ವರ್ಷಗಳವರೆಗೆ ಹಾಳಾಗದೆ ಉಳಿಯಬಲ್ಲವು. ಅದರಲ್ಲೂ ಶೀತಲ ಹಾಗೂ ಒಣ ಪ್ರದೇಶದ ಗುಹೆಗಳಲ್ಲಿ ಸಂರಕ್ಷಣೆಯಾದ ಮೂಳೆಗಳಲ್ಲಿ ಕ್ರೋಮೋಸೋಮುಗಳು ಮೂಲರೂಪದಲ್ಲೇ ಉಳಿದಿರುವ ಸಾಧ್ಯತೆಯಿದೆ.

ಹಾಗಾಗಿ ವಿಜ್ಞಾನಿಗಳು ಇವುಗಳಲ್ಲಿನ ಕ್ರೋಮೋಸೋಮುಗಳನ್ನು ಎಚ್ಚರಿಕೆಯಿಂದ ಪ್ರತ್ಯೇಕಿಸಿ ಅಧ್ಯಯನ ಮಾಡುತ್ತಾರೆ. ಇಂಥ ಅಧ್ಯಯನದಿಂದ ನಮ್ಮ ಪೂರ್ವಜರ ದಾಯಾದಿಗಳನ್ನು ಪತ್ತೆ ಹಚ್ಚಬಹುದು. ಅಂಥ ಒಬ್ಬ ದಾಯಾದಿ ಫ್ಲಾರೆಸ್ ಕುಬ್ಜಮಾನವನ ಬಗ್ಗೆ ಈಗಾಗಲೇ ಒಂದಷ್ಟು ವಿಚಾರ ತಿಳಿದಿದ್ದೇವೆ. ಇಂಡೋನೇಷ್ಯಾದಲ್ಲಿ ಒಂದು ಮಾನವ ಪೂರ್ವಜ ಪ್ರಭೇದವು ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಮತ್ತೊಂದು ಪ್ರಭೇದವು ಯುರೇಷಿಯದಲ್ಲಿತ್ತು. ೧೮೫೬. ಜರ್ಮನಿಯ ೧೩ ಕಿ.ಮೀ. ಉದ್ದದ ನಿಯಾಂದರ್ಥಾಲ್ ಕಣಿವೆ.

ಅಲ್ಲಿ ಕ್ಲೀನ್ ಫೆಲ್ಡ್‌ಹಾಫರ್ ಗ್ರೋಟೋ ಎಂಬ ಸುಣ್ಣದ ಗಣಿಯಲ್ಲಿಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮಾನವರ ೧ ತಲೆ ಯೋಡು, ೨ ತೊಡೆಮೂಳೆ, ೩ ಬಲಗೈ ಮೂಳೆಗಳು, ೨ ಎಡಗೈ ಮೂಳೆಗಳು, ೧ ಟೊಂಕೆಲುಬು, ಭುಜಮೂಳೆ ಹಾಗೂ ಪಕ್ಕೆಲುಬುಗಳ ಚೂರುಗಳು ದೊರೆತವು. ಜೊಹಾನ್ ಕಾರ್ಲ್ ಫುಲ್‌ರಾಟ್ ಎಂಬ ಅಧ್ಯಾಪಕ ಇವನ್ನು ಸಂಗ್ರಹಿಸಿ ಹರ್ಮನ್ ಶಾಫ್ ಹಾಸೆನ್ ಎಂಬ ಅಂಗ ರಚನಾ ವಿಜ್ಞಾನಿಗೆ ನೀಡಿದ. ಇಬ್ಬರೂ ಸೇರಿ ೧೮೫೭ರಲ್ಲಿ ತಮ್ಮ ಅಧ್ಯಯನವನ್ನು ಪ್ರಕಟಿಸಿದರು. ನಂತರ ಹಲವೆಡೆ ಇಂಥ ಮೂಳೆಗಳು ದೊರೆತವು.

ಅವಕ್ಕೆ ನಾಮ ಕರಣ ಮಾಡಬೇಕಾಗಿತ್ತು. ಅವು ಮೊದಲ ಬಾರಿಗೆ ನಿಯಾಂದರ್ಥಾಲ್ ಕಣಿವೆಯಲ್ಲಿ ದೊರೆತಿದ್ದರಿಂದ, ಈ ಮೂಳೆಗಳ ಒಡೆಯರನ್ನು ‘ನಿಯಾಂದರ್ಥಾಲ್ ಮಾನವ’ ಎಂದರು. ಆದರೆ ಈ ಹೆಸರು ‘ಭವ್ಯ ವಾಗಿಲ್ಲ’ ಎನಿಸಿ ವಿಜ್ಞಾನಿಗಳು ಇವರಿಗೆ ‘ಹೋಮೋ ನಿಯಾಂದರ್ಥಾಲೆನ್ಸಿಸ್’ ಎಂದು ನಾಮಕರಣ ಮಾಡಿದರು (ಸಂಕ್ಷಿಪ್ತವಾಗಿ ‘ನಿಯಾಂದರ್ಥಾಲ್ಸ್’ ಎಂದೂ ಕರೆಯು ವುದುಂಟು). ನಿಯಾಂದರ್ಥಾಲ್ ಮಾನವರನ್ನು ಮೊದಲಿಗೆ
ನಿಯಾಂದರ್ಥಾಲ್ ಕಣಿವೆಯಲ್ಲಿ ಪತ್ತೆಹಚ್ಚಿದರೂ, ಈ ಸಂತತಿಯವರು ಅಟ್ಲಾಂಟಿಕ್ ಪ್ರದೇಶದಿಂದ ಮಧ್ಯ ಏಷ್ಯಾದವರೆಗೆ ವಾಸಿಸುತ್ತಿದ್ದರು. ಬೆಲ್ಜಿಯಂ, ಕ್ರೊಯೇಶಿಯ, ಫ್ರಾನ್ಸ್, ಇಟಲಿ, ಹಂಗರಿ, ಇಸ್ರೇಲ್, ಜೆಕ್, ಕ್ರಿಮಿಯಾ, ಉಜ್ಬೇಕಿಸ್ತಾನ್, ಇರಾಕ್, ನೆದರ್ಲೆಂಡ್ಸ್, ಗ್ರೀಸ್, ಸಿರಿಯ, ಸ್ಪೇನ್, ಸೈಬೀರಿಯವರೆಗೆ ಇವರ ಅಸ್ತಿತ್ವವಿದ್ದುದಕ್ಕೆ ಪುರಾವೆ ಗಳಿವೆ. ಯುರೋಪಿನ ಈ ಭಾಗ ಸದಾ ಶೀತಲಮಯ.

ಹಾಗಾಗಿ ಈ ನಿಯಾಂದರ್ಥಾಲ್ ಮಾನವರು ಚಳಿಯ ಪರಿಸರಕ್ಕೆ ಅನುಗುಣವಾದ ಜೀವನಶೈಲಿಯನ್ನು ರೂಢಿಸಿಕೊಂಡಿದ್ದರು. ಇವರು ಸರಿಸುಮಾರು ನಮ್ಮಷ್ಟೇ ಎತ್ತರ ವಾಗಿದ್ದರೂ ನಮಗಿಂತಲೂ ಕಟ್ಟುಮಸ್ತಾಗಿದ್ದರು, ಭಾರವಾಗಿದ್ದರು, ಬಲಶಾಲಿಗಳಾಗಿದ್ದರು. ಅವರ ಮಿದುಳು ನಮ್ಮದಕ್ಕಿಂತಲೂ ದೊಡ್ದದಾಗಿತ್ತು. ನಿಯಾಂದಾರ್ಥಾಲ್ ಮಾನವರ ಮಿದುಳು ನಮ್ಮದಕ್ಕಿಂತ ದೊಡ್ಡದಿತ್ತೆಂದರೆ, ಅವರು ನಮಗಿಂತಲೂ ಬುದ್ಧಿವಂತರಾಗಿದ್ದರೆ ಎಂಬ ಪ್ರಶ್ನೆ ಏಳುತ್ತದೆ. ಅವರು ನಮ್ಮಂತೆ ಪರಮಾಣು ಬಾಂಬನ್ನು ಸೃಜಿಸಬಲ್ಲಂಥ ಬುದ್ಧಿವಂತರಾಗಿರಲಿಲ್ಲ. ಆದರೆ ಖಂಡಿತವಾಗಿಯೂ ಇತರ ಸಮಕಾಲೀನ ಮಾನವ ಪ್ರಭೇದ ಗಳಿಗಿಂತ ಬುದ್ಧಿವಂತರಾಗಿದ್ದರು.

ಬೆಂಕಿಯ ಬಳಕೆ ತಿಳಿದಿದ್ದ ಅವರು ಗುಹೆಗಳಲ್ಲಿ ತಮ್ಮದೇ ಆದ ‘ಒಲೆ’ಗಳನ್ನು ನಿರ್ಮಿಸಿಕೊಂಡಿದ್ದರು. ಆಹಾರವನ್ನು ಹುರಿಯುವುದು, ಬೇಯಿಸಿ
ತಿನ್ನುವುದು, ವೈವಿಧ್ಯಮಯ ಆಯುಧಗಳನ್ನು ಮಾಡುವುದು ಗೊತ್ತಿತ್ತು. ಮೌಸ್ಟೀರಿಯಾನ್ ಪ್ರದೇಶದಲ್ಲಿ ಕಲ್ಲುಗಳ ಆಯುಧ ತಯಾರಿಸುವ ‘ಕಾರ್ಖಾನೆ’ ಇದ್ದದ್ದು ಕಂಡು ಬಂದಿದೆ (ನಮ್ಮ ಬಳ್ಳಾರಿಯ ಸಂಗನಕಲ್ಲುವಿನಲ್ಲಿ ಇದ್ದಂತೆ). ಅವರು ಮಿಶ್ರಾಹಾರಿಗಳಾಗಿದ್ದರು. ನೆಲಜೀವಿ, ಸಮುದ್ರ ಜೀವಿ ಹಾಗೂ ನದಿಯಲ್ಲಿ ದೊರೆಯುತ್ತಿದ್ದ ಮೀನು, ಮೃದ್ವಂಗಿಗಳನ್ನು, ಹಾಗೆಯೇ ಗಡ್ಡೆ-ಗೆಣಸು, ಹಣ್ಣುಗಳನ್ನೂ ತಿನ್ನುತ್ತಿದ್ದರು. ಅವರ ಗುಹೆಯಲ್ಲಿ ಮ್ಯಾಮಥ್, ಹಿಮಚಿರತೆ, ಕರಡಿ, ಖಡ್ಗಮೃಗ, ಜಿಂಕೆ, ಸಿಂಹ, ಚಿರತೆ, ಹೈನಾ, ಹಕ್ಕಿಗಳ ಮೂಳೆಗಳು ದೊರೆತಿವೆ. ಅಂದರೆ ಇವನ್ನು ಅವರು ಬೇಟೆಯಾಡಿ, ಆಹಾರಕ್ಕೆ ಬಳಸುತ್ತಿದ್ದರು ಎನ್ನಬಹುದು.

ಅವರಿಗೆ ಆಹಾರ ಪದಾರ್ಥಗಳನ್ನು ಸಂರಕ್ಷಿಸುವುದು ಗೊತ್ತಿತ್ತು. ನಾನಾ ರೀತಿಯ ಮೂಲಿಕೆಗಳನ್ನು ಸಂಗ್ರಹಿಸಿದ್ದರು. ಬಹುಶಃ ಅವರದ್ದೇ ಆದ ‘ಗೃಹವೈದ್ಯ’ವು ಅಸ್ತಿತ್ವದಲ್ಲಿದ್ದಿರಬೇಕು. ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಪ್ರಾಣಿಗಳ ಚರ್ಮವನ್ನೇ ಉಡುಪನ್ನಾಗಿ ಬಳಸುತ್ತಿದ್ದರು. ಹಕ್ಕಿಗಳ ರೆಕ್ಕೆಪುಕ್ಕ, ಉಗುರು, ಮೂಳೆಗಳನ್ನು ಬಳಸಿ ಆಭರಣಗಳನ್ನು ಮಾಡಿಕೊಂಡಿದ್ದರು. ಗುಹೆಗಳ ಭಿತ್ತಿಯ ಮೇಲೆ ಸಮಕಾಲೀನ ವಿಚಾರಗಳ ವರ್ಣಚಿತ್ರ ಗಳನ್ನು ರಚಿಸಿದ್ದರು. ರೆಡ್ ಓಕರ್, ಐರನ್ ಆಕ್ಸೈಡ್ ಇತ್ಯಾದಿಗಳನ್ನು ಪ್ರಾಣಿಗಳ ಕೊಬ್ಬಿನಲ್ಲಿ ಬೆರೆಸಿ ಬಣ್ಣಗಳನ್ನು ತಯಾರಿಸುತ್ತಿದ್ದರು. ಕಪ್ಪುಬಣ್ಣಕ್ಕಾಗಿ ಮ್ಯಾಂಗನೀಸ್ ಆಕ್ಸೈಡನ್ನು ಬಳಸುತ್ತಿದ್ದರು.

ಇದೇ ಕಾಲಮಾನದ ಸ್ಲೋವೇನಿಯಾದ ಗುಹೆಯಲ್ಲಿ ಕೊಳಲಿನಂತೆ ರಂಧ್ರಗಳನ್ನು ಮಾಡಿರುವ ಕರಡಿಯ ತೊಡೆಮೂಳೆ ದೊರೆತಿದೆ. ಇದು ಅಂದಿನ ಕಾಲದ ಕೊಳಲು ಆಗಿರಬಹುದು ಎಂದಿದ್ದಾರೆ ತಜ್ಞರು. ಅಂದರೆ ಅವರಿಗೆ ಪ್ರಾಥಮಿಕ ಸಂಗೀತ ಜ್ಞಾನವೂ ಇದ್ದಿರಬೇಕು. ಸರಿಸುಮಾರು ಮಾತನಾಡ ಬಲ್ಲವರಾಗಿದ್ದ ಅವರು ತಮ್ಮದೇ ಭಾಷೆ ರೂಪಿಸಿಕೊಂಡಿದ್ದು ಸಂವಹನ ನಡೆಸುತ್ತಿದ್ದಿರಬೇಕು, ರಾತ್ರಿಯಲ್ಲಿ ಬೆಂಕಿಯ ಸುತ್ತಲೂ ಹಾಡುತ್ತಾ ಕುಣಿಯುತ್ತಿದ್ದಿರಬೇಕು ಎನಿಸುತ್ತದೆ.

೧೦-೩೦ ಜನರ ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದ ನಿಯಾಂದರ್ಥಾಲ್ ಜನ ಬಹುಶಃ ಗುಹೆಯಿಂದ ಗುಹೆಗೆ ವಲಸೆ ಹೋಗುತ್ತಿದ್ದರು. ಇವರು ಒಳಸಂತಾನ
ವರ್ಧನೆ ನಡೆಸುತ್ತಿರಲಿಲ್ಲ. ಅಂದರೆ ಒಂದು ಗುಂಪಿನ ಹೆಣ್ಣುಮಗಳು, ಮತ್ತೊಂದು ಗುಂಪಿನ ಗಂಡಿನ ಜತೆ ವಾಸಿಸಲು ನಿರ್ಧರಿಸುತ್ತಿದ್ದಳು. ಹೀಗೆ ಹೋದ ಹೆಣ್ಣು ಗಂಡಿನ ವರ ಜತೆಯಲ್ಲಿಯೇ ವಾಸ ಮಾಡ ಬೇಕಾಗಿತ್ತು. ‘ತವರಿಗೆ’ ಮತ್ತೆ ಹಿಂದಿರುಗಲು ಅವಕಾಶವಿರುತ್ತಿರಲಿಲ್ಲ. ಬಹುಶಃ ಲಿಂಗಭೇದ ಭಾವವಿಲ್ಲದೆ ಎಲ್ಲರೂ ಬೇಟೆ ಯಲ್ಲಿ ತೊಡಗುತ್ತಿದ್ದರು. ಸದಾ ಅಪಾಯ ಕಾರಿ ಪರಿಸರದಲ್ಲಿ ವಾಸಿಸಬೇಕಾಗಿದ್ದರಿಂದ ಸರಿಸುಮಾರು ಶೇ.೮೦ರಷ್ಟು ಜನರು
೪೦ ವರ್ಷವಾಗುವ ಮೊದಲೇ ಮರಣಿಸು ತ್ತಿದ್ದರು. ಇವರು ಮೃತರನ್ನು ಹೂಳುವ ಮೂಲಕ ಶವಸಂಸ್ಕಾರವನ್ನು ಮಾಡುತ್ತಿದ್ದರು.

೧,೦೦,೦೦೦-೬೦,೦೦೦ ವರ್ಷಗಳ ಹಿಂದೆ ನಿಯಾಂದ ರ್ಥಾಲ್ ಮಾನವರಿಗೂ ನಮ್ಮ ಪೂರ್ವಜರಿಗೂ ರಕ್ತಸಂಬಂಧವೇರ್ಪಟ್ಟು ಅವರ ವಂಶವಾಹಿಗಳು ನಮ್ಮ ಪೂರ್ವಜರ ಒಡಲಲ್ಲೂ ಸೇರಿಕೊಂಡವು. ಇಂದಿನ ಯುರೇಷಿಯದಲ್ಲಿ ವಾಸವಾಗಿರುವವರು, ಆಸ್ಟ್ರೇಲಿಯಾದ ದೇಶೀಯರು, ಮೆಲನೇಷಿ ಯನ್ನರು, ಅಮೆರಿಕದ ದೇಶೀಯರು ಹಾಗೂ ಉತ್ತರ ಆಫ್ರಿಕನ್ನರ ಶೇ.೧-೪ರಷ್ಟು ವಂಶವಾಹಿಗಳು ನಿಯಾಂದರ್ಥಾಲ್ ಮಾನವರದ್ದಾಗಿದೆ. ಸಹಾರ ಮರು
ಭೂಮಿಗಿಂತ ಆಚೆಯಿರುವ ಆಫ್ರಿಕನ್ನರಲ್ಲಿ ಕೇವಲ ಶೇ.೦.೩ ರಷ್ಟು ವಂಶವಾಹಿಗಳು ನಿಯಾಂದರ್ಥಾಲ್ ಜನರದ್ದು ಎನ್ನಲಾಗಿದೆ.

ಏಕೆಂದರೆ ಅವರು ಭೌಗೋಳಿಕವಾಗಿ ದೂರವಿದ್ದರು. ನಿಯಾಂದರ್ಥಾಲ್ ವೈ-ಕ್ರೋಮೋಸೋಮ್ (ತಂದೆಯ ಮೂಲಕ ಹರಿದುಬರುವ ಪುರುಷಲಕ್ಷಣದ ವಂಶವಾಹಿಗಳು) ಹಾಗೂ ನಿಯಾಂದರ್ಥಾಲ್ ಮೈಟೋಕಾಂಡ್ರಿಯಲ್ ಡಿಎನ್‌ಎ (ತಾಯಿಯ ಮೂಲಕ ಹರಿದುಬರುವ ವಂಶವಾಹಿಗಳು) ಆಧುನಿಕ ಮನುಷ್ಯರಲ್ಲಿ ಅಂದರೆ, ಪ್ರಸ್ತುತ ಮಾನವ ಜನಾಂಗದಲ್ಲಿ ಕಂಡುಬರುತ್ತಿಲ್ಲ. ಹಾಗೆಯೇ ನಿಯಾಂದಾರ್ಥಾಲ್ ಹೆಣ್ಣಿನ ಜನನಕ್ಕೆ ಕಾರಣವಾದ ಎಕ್ಸ್-ಕ್ರೋಮೋ ಸೋಮ್ ಸಹ ಆಧುನಿಕ ಮನುಷ್ಯರಲ್ಲಿ ಕಂಡುಬರುತ್ತಿಲ್ಲ.

ಹಾಗಾಗಿ ನಿಯಾಂದಾರ್ಥಾಲ್ ಹಾಗೂ ನಮ್ಮ ಪೂರ್ವಜರ ಸಂಪರ್ಕದಿಂದ ಹುಟ್ಟಿದ ಮಕ್ಕಳಿಗೆ ಮರುಸಂತಾನ ಪಡೆಯುವ ಸಾಮರ್ಥ್ಯವಿರಲಿಲ್ಲ/ಗೌಣವಾಗಿತ್ತು ಎನಿಸು ತ್ತದೆ. ಹಾಗೆಯೇ ನಿಯಾಂದರ್ಥಾಲ್ ಮತ್ತು ಆಧುನಿಕ ಮಾನವನ ನಡುವಿನ ಸಂಬಂಧದಿಂದ ಹುಟ್ಟಿದ ಹೊಸ ಜೀವಿಯು ಕಾಲನ ಪ್ರವಾಹದಲ್ಲಿ ನಾಮಾವಶೇಷ ವಾಗುವುದು ಅನಿವಾರ್ಯವಾಗಿತ್ತು. ಆದರೆ ನಿಯಾಂದರ್ಥಾಲ್ ಮಾನವನ ಕಾಯಲಕ್ಷಣಗಳಲ್ಲಿ ಕೆಲವು ನಮ್ಮಲ್ಲಿ
ಇಂದಿಗೂ ಉಳಿದುಬಂದಿರುವುದು, ಈ ಎರಡೂ ಪ್ರಭೇದ ಗಳ ನಡುವೆ ಸಂತಾನವರ್ಧನೆ ನಡೆದಿತ್ತು ಎನ್ನುವುದಕ್ಕೆ ಪುರಾವೆಯಾಗಿದೆ.

Leave a Reply

Your email address will not be published. Required fields are marked *

error: Content is protected !!