Thursday, 19th September 2024

ಸಮತೋಲನ ಆಹಾರವೇ ಆರೋಗ್ಯದ ಮೂಲ

ತನ್ನಿಮಿತ್ತ

ರಾಜು ಭೂಶೆಟ್ಟಿ

1945ರಲ್ಲಿ ವಿಶ್ವಸಂಸ್ಥೆಯು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು. ಸಂಸ್ಥೆಯ ಸ್ಮರಣಾರ್ಥವಾಗಿ ಅಕ್ಟೋಬರ್-16ನ್ನು ವಿಶ್ವ ಆಹಾರ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಅವಶ್ಯ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೀರ್ಘ ಕಾಲ ದೊರೆಯದಿದ್ದಲ್ಲಿ ನ್ಯೂನಪೋಷಣೆ ಉಂಟಾಗುವುದು ಹಾಗೂ ಈ ನ್ಯೂನ ಪೋಷಣೆಯಿಂದ ನಾನಾ ರೀತಿಯ ನ್ಯೂನತಾ ಕಾಯಿಲೆಗಳು ಉಂಟಾಗುವುವು. ಆದ್ದರಿಂದ ವಿಶ್ವದ ಯಾವುದೇ ಮಗು ಅಥವಾ ವ್ಯಕ್ತಿ ನ್ಯೂನತಾ ಪೋಷಣೆಯಿಂದ, ಹಸಿವೆ ಯಿಂದ ಬಳಲಬಾರದು ಎಂಬ ಉದ್ದೇಶದಿಂದ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಅಂದಾಜು ಸುಮಾರು 821 ಮಿಲಿಯನ್ ಜನರು ತೀವ್ರವಾದ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

2015ರಲ್ಲಿ ಇಂತಹವರ ಸಂಖ್ಯೆಯನ್ನು ಅಂದಾಜು 785 ಮಿಲಿಯನ್‌ಗಿಂತ ಹೆಚ್ಚೆಂದು ದಾಖಲಿಸಲಾಗಿತ್ತು. ಅದರಲ್ಲೂ ವಿಶೇಷ ವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅಪೌಷ್ಠಿಕತೆಯಿಂದ ಬಳಲುವವರ ಸಂಖ್ಯೆ ತೀವ್ರವಾದ ಹೆಚ್ಚಳವಿದೆ. ಹಸಿವಿ ನಿಂದ ಬಳಲುತ್ತಿರುವವರಲ್ಲಿ ಶೇ. 60ರಷ್ಟು  ಜನ ಮಹಿಳೆಯರಾಗಿದ್ದಾರೆ. ಪ್ರತೀ ವರ್ಷ ೨೦ ಮಿಲಿಯನ್ ಶಿಶುಗಳು ಸಾಮಾನ್ಯ ಗಿಂತ ಕಡಿಮೆ ತೂಕದಿಂದ ಜನಿಸುತ್ತಿವೆ. ಅದರಲ್ಲಿ ಶೇ. 96.5ರಷ್ಟು ಶಿಶುಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜನಿಸು ತ್ತವೆ.

ಅಪೌಷ್ಠಿಕತೆಯ ಕಾರಣ ಐದು ವರ್ಷದೊಳಗಿನ ಮಕ್ಕಳ ಶೇ.50ರಷ್ಟು ಮರಣಗಳು ಸಂಭವಿಸುತ್ತವೆ. ನ್ಯೂನಪೋಷಣೆಯಿಂದ ಉಂಟಾಗುವ ಸಮಸ್ಯೆಗಳು – ಮಗುವಿನ ಮನಸ್ಸು ಓದಿನಲ್ಲಿ ತಲ್ಲೀನ ಆಗದಿದ್ದರೆ ಹಾಗೂ ಪದೇ ಪದೆ ಅನಾರೋಗ್ಯಕ್ಕೀಡಾ ಗುತ್ತಿದ್ದರೆ , ವಯಸ್ಸಿಗೆ ತಕ್ಕಂತೆ ತೂಕ ಮತ್ತು ಎತ್ತರ ಹೆಚ್ಚದೇ ಇರುವುದು, ಯಾವಾಗಲೂ ಸುಸ್ತು ಮತ್ತು ಸಿಟ್ಟಾಗಿರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗಾಳಿಪಟ ಹಾರಿಸುವ ವಯಸ್ಸಿನಲ್ಲಿ ಮಗುವು ಹಾಸಿಗೆ ಹಿಡಿದರೆ ಅದಕ್ಕೆ ಕಾರಣ ನ್ಯೂನಪೋಷಣೆ ಎಂದೇ ಹೇಳಬಹುದು.

ಗರ್ಭಾವಸ್ಥೆಯಲ್ಲಿ ತಾಯಂದಿರು ರಕ್ತಹೀನತೆ ಹಾಗೂ ಹೊಂದಿರಬೇಕಾಗಿರುವುದಕ್ಕಿಂತ ಕಡಿಮೆ ತೂಕ ಹೊಂದಿದ್ದರೆ ಆ ಶಿಶು ಗಳಲ್ಲಿ ಅನಾರೋಗ್ಯಕರ ಭ್ರೂಣದ ಬೆಳವಣಿಗೆ, ಕಡಿಮೆ ಜನನದ ತೂಕ, ಅನುವಂಶಿಕವಲ್ಲದ ಜನ್ಮಜಾತ ಅಸಹಜತೆಗಳಿಗೆ ಕಾರಣವಾಗುತ್ತದೆ. ಆಹಾರ ಹಾಳಾಗದಿರಲಿ ಆಹಾರ ಉತ್ಪಾದಿಸಲು ಎಷ್ಟೊಂದು ಕಷ್ಟಗಳಿರುವಾಗ ಊಟವನ್ನು ಪ್ಲೇಟ್‌ನಲ್ಲಿಯೇ ಬಿಟ್ಟು ಹೋಗುವುದು ಎಷ್ಟು ಸೂಕ್ತ? ಪುಟ್ಟ ಮಕ್ಕಳಿರುವಾಗಲೇ ಅನ್ನವನ್ನು ಊಟ ಮಾಡದೇ ಬಿಟ್ಟರೆ ಬೇರೆಯವರ ಊಟವನ್ನು ಕಸಿದುಕೊಂಡಂತೆ. ಆದ್ದರಿಂದ ಚಿಕ್ಕ ಮಕ್ಕಳಿರುವಾಗಲೇ ಅವರಿಗೆ ಆಹಾರ ಉತ್ಪಾದನೆಯ ಹಿಂದಿರುವ ಕಷ್ಟಗಳನ್ನು ತಿಳಿಸಿ ಕೊಡಲು ಅವರನ್ನು ರಜೆ ಅವಽಯ ವೇಳೆಯಲ್ಲಿ ಗದ್ದೆಗಳಿಗೆ ಕರೆದುಕೊಂಡು ಹೋಗಿ ರೈತರು ಮಾಡುವ ಕೆಲಸಗಳನ್ನು ಅವರಿಗೆ ಮಾಡಲು ತಿಳಿಸಿದಾಗ, ಆಹಾರ ಉತ್ಪಾದನೆಯ ಹಿಂದಿರುವ ರೈತರ ಶ್ರಮದ ಅರಿವಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಊಟ ಚೆನ್ನಾಗಿಲ್ಲವೆಂದು ಕುಂಟು ನೆಪ ಹೇಳಿ ಆಹಾರವನ್ನು ಬಿಟ್ಟು ಕೈ ತೊಳೆದುಕೊಳ್ಳುವುದು ಇವೆಲ್ಲವೂ ನೋಡಲು ಚಿಕ್ಕ ವಿಷಯಗಳೆನಿಸಿದರು ಕೂಡ ಇದರಿಂದಾಗುತ್ತಿರುವ ನಷ್ಟ ಮಾತ್ರ ತುಂಬಾ ದೊಡ್ಡದು. ಹಣ, ಆಸ್ತಿ ಸಂಪತ್ತು ಇಲ್ಲದೇ ಬದುಕಬಹುದು. ಆದರೆ ಹೊಟ್ಟೆ ಹಸಿವನ್ನು ತಾಳಿಕೊಂಡು ಬದುಕಲು ಅಸಾಧ್ಯವೆಂಬುದನ್ನು ಅರಿಯ ಬೇಕಾಗಿದೆ.

ಇನ್ನು ಮದುವೆ ಸಮಾರಂಭಗಳನ್ನು ನೋಡಿದಾಗ ಅಲ್ಲಿ ಪ್ರತಿ ವರ್ಷ ಟನ್‌ಗಟ್ಟಲೇ ಪ್ರಮಾಣದ ಆಹಾರ ಕಸದ ತೊಟ್ಟಿಗೆ ಸೇರು ತ್ತಿರುವುದನ್ನು ನೋಡಿದಾಗ ಎಂಥವರ ಹೃದಯ ಕಲುಕದೇ ಇರದು. ನಮ್ಮ ತಟ್ಟೆಗೆ ಬರುವ ಒಂದು ಬಟ್ಟಲು ಅನ್ನವಾಗಲು ನೆಲ, ಜಲ, ಪೋಷಕಾಂಶಗಳು ಮುಂತಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಾಗಿರುತ್ತದೆಂಬುದು ಪ್ರತಿಯೊಬ್ಬರೂ ಯೋಚಿಸಲೇ ಬೇಕು. ನಾವು ವ್ಯರ್ಥವಾಗದಂತೆ ಉಳಿಸುವ ಆಹಾರವು ನಮ್ಮ ಭವಿಷ್ಯದ ಜನಾಂಗದ ಭವಿಷ್ಯನಿಧಿ.

ಆಹಾರ ವಸ್ತುಗಳು ಪೋಲಾಗುವುದು ಉತ್ಪಾದನೆಯ ಸಂಪನ್ಮೂಲಗಳಾದ ಭೂಮಿ, ನೀರು, ಶಕ್ತಿಯ ಅಪವ್ಯಯವನ್ನು ಪ್ರತಿನಿಧಿ ಸುತ್ತದೆ. ಆಹಾರ ಪೋಲು ಮಾಡುವುದೆಂದರೆ ಆರ್ಥಿಕ ಅಪವ್ಯಯ ಮಾಡಿದಂತೆ. ಆಹಾರ ವಸ್ತುಗಳ ಹಿತ, ಮಿತ ಬಳಕೆ  ಅಭಿ ವೃದ್ಧಿಗೆ ಪೂರಕ. ರೈತ ಬೆವರಿಳಿಸಿ ಬೆಳೆದ ಆಹಾರ ಹಸಿದ ಜನರನ್ನು ತಲುಪಿ ಹಸಿವು ಮುಕ್ತ ಜಗತ್ತನ್ನು ಸಾಧಿಸುವಲ್ಲಿ ಕೆಲವು ಮಹತ್ವದ ಅಂಶಗಳತ್ತ ನಾವೆಲ್ಲಾ ಚಿಂತನೆ ಮಾಡಬೇಕಾಗಿದೆ. ಇತ್ತೀಚಿಗೆ ಆಹಾರ ಪದ್ಧತಿಯಲ್ಲಿನ ತೀವ್ರವಾದ ಬದಲಾವಣೆ ಯಿಂದಾಗಿ ನಾರು ಅಂಶವಿರುವ ಆಹಾರ ಸೇವಿಸುವುದರ ಬದಲು ಸಂಸ್ಕರಿಸಿದ ಆಹಾರ ಸೇವನೆ ಅದರಲ್ಲೂ ಮುಖ್ಯವಾಗಿ ಅತೀ ಹೆಚ್ಚು ಪಿಷ್ಟ, ಗ್ಲುಕೋಸ್, ಕೊಬ್ಬಿನಾಂಶವಿರುವ ಆಹಾರ ಸೇವನೆಯಿಂದಾಗಿ ಮಕ್ಕಳಿಂದ – ವಯಸ್ಕರವರೆಗೆ ಬಹಳಷ್ಟು ಸಂಖ್ಯೆ ಯಲ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ತೂಕ, ಬೊಜ್ಜು, ಸಕ್ಕರೆ ಕಾಯಿಲೆಗಳಿಂದ ಬಳಲಿ ಇವುಗಳಿಂದ ಉಂಟಾಗುವ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ.

ಕೊನೆಯದಾಗಿ – ಸಮತೋಲನ ಆಹಾರ ಸೇವನೆ ಮೂಲಕ, ಒಂದು ಅನ್ನದ ಅಗಳು ಕೂಡ ಆಹಾರ ವ್ಯರ್ಥವಾಗದಂತೆ ಬಳಸುವ ಕಡೆಗೆ ಗಮನ ಕೊಟ್ಟು ವಿಶ್ವದಾದ್ಯಂತ ಯಾವುದೇ ಮಗು ಹಸಿನಿಂದ ನರಳದಂತೆ ಜಾಗ್ರತೆವಹಿಸೋಣ ಅದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಭಾವಿಸೋಣ.

Leave a Reply

Your email address will not be published. Required fields are marked *