Basavaraj Shivappa Giraganvi column: ಅಮೆರಿಕ ವಿಶ್ವಕ್ಕೆ ದೊಡ್ಡಣ್ಣ, ಆದರೆ ನಿಸರ್ಗಕ್ಕೆ ?
‘ವಿಶ್ವದ ದೊಡ್ಡಣ್ಣ’ ಎಂಬುದು ಅಮೆರಿಕಕ್ಕೆ ಸೇರಿಕೊಂಡಿರುವ ಹಣೆಪಟ್ಟಿ. ಅಮೆರಿಕೆಯ ಪಾತ್ರ ವಿಲ್ಲದೆ ವಿಶ್ವದ ಬಹುತೇಕ ಯಾವುದೇ ರಾಜತಾಂತ್ರಿಕ ಘಟನಾವಳಿ ಪ್ರಾರಂಭವಾಗುವುದಿಲ್ಲ ಅಥವಾ ಮುಕ್ತಾಯ ವಾಗುವುದಿಲ್ಲ ಎಂಬಷ್ಟರ ಮಟ್ಟಿಗೆ ಈ ಹಣೆಪಟ್ಟಿಗೆ ಮಹತ್ವವಿದೆ
Source : Vishwavani Daily News Paper
ಕಳಕಳಿ
ಬಸವರಾಜ ಶಿವಪ್ಪ ಗಿರಗಾಂವಿ
ಅಮೆರಿಕ ಎಂದಾಕ್ಷಣ ಅಲ್ಲಿಯ ಶ್ರೀಮಂತ ಬದುಕು, ನಿಸರ್ಗದಲ್ಲಿನ ಆಹ್ಲಾದಕರ ಸಿರಿ-ಸಂಪತ್ತು, ಸಮೃದ್ಧಿ, ಸುಂದರ ಪ್ರವಾಸಿ ತಾಣಗಳು ಮತ್ತು ವಿಶ್ವ ಪ್ರಸಿದ್ಧ ನಗರಗಳು ನೆನಪಿಗೆ ಬರುವುದು ಸ್ವಾಭಾವಿಕ. ಪ್ರಪಂಚದ ಬಹುತೇಕ ಜನರಿಗೆ ‘ಜೀವನದಲ್ಲಿ ಒಮ್ಮೆಯಾದರೂ ಅಮೆರಿಕದ ಪ್ರವಾಸ ವನ್ನು ಕೈಗೊಳ್ಳಬೇಕು’ ಎಂಬ ಬಯಕೆಯಿರುವುದುಂಟು.
ಮತ್ತೆ ಕೆಲವರಿಗೆ, ಅಲ್ಲಿನ ಸಮೃದ್ಧ -ಸುಂದರ-ಸ್ವಚ್ಛ-ಐಷಾರಾಮಿ ಬದುಕನ್ನು ಸವಿಯಲು ಅಲ್ಲಿಯೇ ವಾಸವಿರಬೇಕು ಎಂಬ ಆಸೆಯೂ ಇರುವುದುಂಟು. ಇಂಥ ಮೇಲ್ದರ್ಜೆಯ ಜೀವನವನ್ನು ಬಯಸಿ ಅಮೆರಿಕದಲ್ಲಿ ನೆಲೆಯೂರಿರುವ ಗಣ್ಯರಲ್ಲಿ ಭಾರತದ ಖ್ಯಾತ ಚಿತ್ರನಟಿ ಪ್ರಿಯಾಂಕಾ ಚೋಪ್ರಾ, ಸಂಶೋಧಕ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಪಾಲ್ ಅಲೆನ್, ಅರವತ್ತರ ದಶಕದಲ್ಲಿ ಹೆಸರಾಂತ ಚಿತ್ರನಟನಾಗಿದ್ದ ರಾಕ್ ಹಡ್ಸನ್, ಎಂಬತ್ತರ ದಶಕದ ಹೆಸರಾಂತ ಮತ್ತು ಅದ್ದೂರಿ ಚಿತ್ರ ನಿರ್ಮಾಪಕ ಜಾನ್ ಲ್ಯಾಂಡೀಸ್, ಖ್ಯಾತ ಗಾಯಕ ಆಬ್ರೆ ಡ್ರೇಕ್ ಗ್ರಹಾಂ ಮುಂತಾದವರು ಸೇರಿದ್ದಾರೆ. ಇವರೆಲ್ಲ ನೆಲೆಸಿರುವುದು ಅಲ್ಲಿನ ಲಾಸ್ ಏಂಜಲೀಸ್‌ನಲ್ಲಿ ಎಂಬುದು ನಿಮ್ಮ ಗಮನಕ್ಕೆ.
‘ವಿಶ್ವದ ದೊಡ್ಡಣ್ಣ’ ಎಂಬುದು ಅಮೆರಿಕಕ್ಕೆ ಸೇರಿಕೊಂಡಿರುವ ಹಣೆಪಟ್ಟಿ. ಅಮೆರಿಕೆಯ ಪಾತ್ರ ವಿಲ್ಲದೆ ವಿಶ್ವದ ಬಹುತೇಕ ಯಾವುದೇ ರಾಜತಾಂತ್ರಿಕ ಘಟನಾವಳಿ ಪ್ರಾರಂಭವಾಗುವುದಿಲ್ಲ ಅಥವಾ ಮುಕ್ತಾಯವಾಗುವುದಿಲ್ಲ ಎಂಬಷ್ಟರ ಮಟ್ಟಿಗೆ ಈ ಹಣೆಪಟ್ಟಿಗೆ ಮಹತ್ವವಿದೆ. ಅಮೆರಿಕ ಕುರಿತಾಗಿ ಕೆಲ ದೇಶಗಳ ಅಭಿಪ್ರಾಯಗಳು ವಿಭಿನ್ನವಾಗಿವೆಯಾದರೂ, ವಿಶ್ವದ ಬಹುತೇಕ ರಾಷ್ಟ್ರ ಗಳು ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಲು ತವಕಿಸುತ್ತವೆ ಎಂಬುದು ಇಂದಿಗೂ ಕಾಣಬರುವ ವಾಸ್ತವ ಚಿತ್ರಣ.
ವಿಶ್ವದ ಹಲವು ದೇಶಗಳಿಗೆ, ಅದರಲ್ಲೂ ಬಡದೇಶಗಳಿಗೆ ಅಮೆರಿಕವು ಹಲವು ರೀತಿಯಲ್ಲಿ ಸಹಾಯ-ಸಹಕಾರ ನೀಡಿರುವುದು ಸುಳ್ಳೇನಲ್ಲ. ವಿಶ್ವದ ವಿವಿಧೆಡೆ, ಅಂದರೆ ಅಫ್ಗಾನಿಸ್ತಾನ, ಇರಾನ್, ಇರಾಕ್ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಶಾಂತಿ ಸ್ಥಾಪಿಸಲೆಂದು ಅಮೆರಿಕವು ಹಲವು ವರ್ಷಗಳ ಕಾಲ ತನ್ನ ಸೇನೆಯನ್ನು ನಿಯೋಜಿಸಿದ್ದುಂಟು. ಇದು ವಿಶ್ವವೇ ಒಪ್ಪುವಂಥ ಕಾರ್ಯವೇ ಸರಿ.
ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಹತ್ತು ಹಲವು ಸಂಘ-ಸಂಸ್ಥೆಗಳು ಅಮೆರಿಕದ ನೆಲದಲ್ಲೇ ನೆಲೆಯೂರಿವೆ ಮತ್ತು ಅಲ್ಲಿಂದಲೇ ಅವು ವಿಶ್ವದಾದ್ಯಂತ ನಿಯಂತ್ರಣವನ್ನು ಸಾಧಿಸು ತ್ತಿವೆ. ಇಷ್ಟೆಲ್ಲಾ ರಾಜತಾಂತ್ರಿಕ ಸಾರ್ವಭೌಮತ್ವ ಮತ್ತು ನಿಷ್ಠುರ ಕಾನೂನುಗಳನ್ನು ಹೊಂದಿರುವ ಅಮೆರಿಕದಂಥ ದೇಶಕ್ಕೆ ‘ವಿಶ್ವದ ದೊಡ್ಡಣ್ಣ’ ಎಂಬ ಹಣೆಪಟ್ಟಿ ದಕ್ಕಿರುವುದರಲ್ಲಿ ಅತಿಶಯವೇ ನಿಲ್ಲ.
ಆದರೆ ಅಮೆರಿಕವು ಇತ್ತಿತ್ತಲಾಗಿ ‘ಮಾನವ ನಿರ್ಮಿತ’ ಎನ್ನಬಹುದಾದ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಅಂದರೆ, ಭಯೋತ್ಪಾದನೆ, ಅಪರಾಧ, ಅಪಘಾತಗಳು, ವರ್ಣಭೇದ ಸಂಘರ್ಷ, ಅನಿವಾಸಿಗಳ ಸಾರ್ವಭೌಮತ್ವ, ಉದ್ಯೋಗ-ವ್ಯಾಪಾರ-ವಹಿವಾಟು ಕ್ಷೇತ್ರಗಳಲ್ಲಿನ ಸವಾಲು ಮತ್ತು ಸಂಕಷ್ಟಗಳು ಅಮೆರಿಕ ದೇಶಕ್ಕೆ ತಲೆನೋವಾಗಿ ಪರಿಣಮಿಸುತ್ತಿವೆ. ಅದರಲ್ಲೂ, ಭಾರತ ಸೇರಿದಂತೆ ಏಷ್ಯಾ ಖಂಡದ ರಾಷ್ಟ್ರಗಳ ಹಿಡಿತವು ಅಮೆರಿಕದಲ್ಲಿ ಹೆಚ್ಚುತ್ತಿದೆ ಎನ್ನಲಾಗಿದೆ.
ಇವೆಲ್ಲದರ ಮಧ್ಯೆ, ನಿಸರ್ಗ ಸೌಂದರ್ಯಕ್ಕೆ ಹೆಸರಾಗಿದ್ದ ಅಮೆರಿಕದಲ್ಲಿ ಇಂದು ನಿಸರ್ಗವೇ ಮುನಿಸಿ ಕೊಂಡಿರುವುದನ್ನು ಕಾಣುತ್ತಿದ್ದೇವೆ. ಅಲ್ಲಿನ ವಾಷಿಂಗ್ಟನ್, ನ್ಯೂಯಾರ್ಕ್ ನಂತರದ ಸುಪ್ರಸಿದ್ಧ ನಗರ ಲಾಸ್ ಏಂಜಲೀಸ್. ಅಂದಾಜು 40 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ನಗರ ಸ್ಥಾಪನೆ ಯಾಗಿದ್ದು 1781ರಲ್ಲಿ. ಪುರಾತನ ಕಾಲದ ಉದ್ಯಾನಗಳು, ಸ್ವಚ್ಛ ಸರೋವರಗಳು, ಚಾರಣ ಪ್ರಿಯರಿ ಗಾಗೇ ಇರುವ ಮೇರು ಪರ್ವತಗಳಿಂದಾಗಿ ನಿಸರ್ಗ ಸೌಂದರ್ಯವೇ ಈ ಪ್ರದೇಶದಲ್ಲಿ ಮೈಮುರಿದು ಕೊಂಡು ಬಿದ್ದಂತಿದೆ!
ಇದಕ್ಕೆ ಪುಟವಿಟ್ಟಂತೆ ಬೃಹದಾ ಕಾರದ ಮತ್ತು ಮನಮೋಹಕ ಕಟ್ಟಡಗಳು ಕೂಡ ಸಾಕಷ್ಟಿವೆ. ಹೀಗಾಗಿ ಕ್ಯಾಲಿಫೋರ್ನಿಯಾ ರಾಜ್ಯದ ಈ ಸುಂದರ ನಗರವು ವಿಶ್ವದ ಮನರಂಜನೆಯ ರಾಜಧಾನಿ ಯೆಂದು ಹೆಸರುವಾಸಿಯಾಗಿದೆ. ಲಾಸ್ ಏಂಜಲೀಸ್‌ನ ಪ್ರಕೃತಿಯ ಸೊಬಗಿಗೆ ಮನಸೋಲದ ವ್ಯಕ್ತಿಯೇ ಇಲ್ಲ. ಸೌಂದರ್ಯದ ತವರೂರಾಗಿರುವ ಈ ನಗರವು ವಿಜ್ಞಾನ, ವಾಣಿಜ್ಯ, ಕ್ರೀಡೆ, ಶಿಕ್ಷಣ, ಸಂಶೋಧನೆ, ಸಾಹಸ, ಚಿತ್ರಕಲೆ, ಸಾಹಿತ್ಯಿಕ ಚಟುವಟಿಕೆಗಳು ಮತ್ತು ದುಬಾರಿ ವೆಚ್ಚದ ಭವ್ಯ ಚಲನಚಿತ್ರ ಗಳಿಂದಾಗಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಜಗದ್ವಿಖ್ಯಾತ ‘ಹಾಲಿವುಡ್’ ಚಿತ್ರೋದ್ಯಮ ಇದೇ ನಗರದಲ್ಲಿ ನೆಲೆಯೂರಿದೆ ಮತ್ತು ಅದು ಲಾಸ್ ಏಂಜಲೀಸ್‌ನ ಮುಕುಟಕ್ಕೊಂದು ಗರಿಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ವಿಶ್ವದ ಸಾಕಷ್ಟು ಶ್ರೀಮಂತ ವ್ಯಕ್ತಿಗಳು ಈ ನಗರದಲ್ಲಿ ವಾಸಮಾಡಲು ಹಾತೊರೆಯುತ್ತಾರೆ. ‘ವಾಸಕ್ಕೆ ಉತ್ತಮ ವಾಗಿರುವ, ಸಕಲ ಸೌಕರ್ಯಗಳನ್ನೂ ಹೊಂದಿರುವ ನಗರ’ ಎಂಬ ಕೀರ್ತಿಯನ್ನು ಲಾಸ್ ಏಂಜ ಲೀಸ್ ಇತ್ತೀಚಿನ ವರೆಗೂ ಪಡೆದಿತ್ತು. ಇದರಿಂದಾಗಿ ಜನಸಾಂದ್ರತೆ ಹೆಚ್ಚುವಂತಾಗಿ ದುಬಾರಿ ನಗರವಾಗಿ ಲಾಸ್ ಏಂಜಲೀಸ್ ಹೊರ ಹೊಮ್ಮಿತು.
ಅತ್ಯಂತ ಶಿಸ್ತುಬದ್ಧ ಕೃಷಿಗೆ ವಿಶ್ವದಲ್ಲೇ ಹೆಸರಾಗಿದೆ ಕ್ಯಾಲಿಫೋರ್ನಿಯಾ ರಾಜ್ಯ; ಇಲ್ಲಿನ ಮಣ್ಣು ಮತ್ತು ನೀರು ಒಳ್ಳೆಯ ಗುಣಮಟ್ಟದ್ದಾಗಿರುವುದರಿಂದ, ಇಲ್ಲಿನಕೃಷಿಕರು ಆರೋಗ್ಯದಾಯಕವಾದ ಮತ್ತು ಉತ್ಕೃಷ್ಟವಾದ ಫಸಲನ್ನು ಪಡೆಯುತ್ತಿರುವ ಅದೃಷ್ಟಶಾಲಿಗಳಾಗಿದ್ದಾರೆ. ಆದರೆ, ಲಾಸ್ ಏಂಜಲೀಸ್ ನಗರದಲ್ಲಿ ವಿಶ್ವದ ಶ್ರೀಮಂತ ವರ್ಗದ ಗಣನೀಯ ಭಾಗವು, ಅಮೆರಿಕೆಯ ಕಟ್ಟು ನಿಟ್ಟಾದ ಕಾನೂನಿನ ಅನ್ವಯವೇ ನೆಲೆಯೂರುತ್ತಿರುವುದರಿಂದ, ಜನದಟ್ಟಣೆ ಹೆಚ್ಚುತ್ತಿದೆ ಹಾಗೂ ಇದರಿಂದಾಗಿ ಅಕ್ಕಪಕ್ಕದ ಪ್ರದೇಶಗಳ ಕೃಷಿಭೂಮಿಯ ಪ್ರಮಾಣ ಕುಸಿಯುತ್ತಿದೆ ಎನ್ನಲಾಗಿದೆ.
ಪರಿಣಾಮವಾಗಿ ಪ್ರಕೃತಿಮಾತೆ ಮುನಿಸಿಕೊಂಡು, ಕಾಡ್ಗಿಚ್ಚಿನಂಥ ನೈಸರ್ಗಿಕ ಅವಘಡವು ಸಂಭವಿ ಸಿರಬಹುದೆಂದು ಅಂದಾಜಿಸಲಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಅಮರಿಕೊಂಡ ಕಾಡ್ಗಿಚ್ಚು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದು ದಿಟ. ಅದರ ಕೆನ್ನಾಲಿಗೆಗಳು ಅಲ್ಲಿನ ಸಕಲ ಜೀವರಾಶಿಗಳ ಬದುಕಿಗೆ ಭೀಕರತೆಯನ್ನು ತಂದೊಡ್ಡಿದ್ದನ್ನು ವಿಶ್ವದ ಜನರು ದೃಶ್ಯಮಾಧ್ಯಮಗಳ ಮೂಲಕ ಈಗಾಗಲೇ ಕಣ್ತುಂಬಿಕೊಂಡಿದ್ದಾರೆ.
ಐಷಾರಾಮಿ ಬದುಕಿಗೆಂದು ಅಲ್ಲಿ ನೆಲೆಯೂರಿದ್ದ ಗಣನೀಯ ಸಂಖ್ಯೆಯ ಮಂದಿ, ಕೋಟ್ಯಂತರ ಮೌಲ್ಯದ ತಮ್ಮ ಸ್ವತ್ತು-ಸವಲತ್ತುಗಳನ್ನು ತೊರೆದು, ಜೀವರಕ್ಷಣೆಗಾಗಿ ಹೊರಗೆ ಧಾವಿಸಿದ್ದಾರೆ. ಈ ಪ್ರದೇಶದಲ್ಲಿ ಸಂಭವಿಸಿದ ಸಾವು-ನೋವುಗಳು ಸ್ಪಷ್ಟವಾಗಿನ್ನೂ ತಿಳಿದಿಲ್ಲವಾದರೂ, ಅಮೆರಿಕದ ಚರಿತ್ರೆಯಲ್ಲಿ ಸಂಭವಿಸಿದ ಅತ್ಯಂತ ಭೀಕರ ಕಾಡ್ಗಿಚ್ಚು ಇದೆಂದು ಸಾಬೀತಾಗಿದೆ.
ಕಾಡ್ಗಿಚ್ಚಿಗೆ ನಿಖರ ಕಾರಣ ವಿನ್ನೂ ತಿಳಿದುಬಂದಿಲ್ಲ ವಾದರೂ, ಅತಿರೇಕದ ಮಾನವ ಚಟುವಟಿಕೆ, ವಿಷಪೂರಿತ ಗಾಳಿಯ ಪ್ರಮಾಣದಲ್ಲಿನ ಹೆಚ್ಚಳ, ಮಳೆಯಾಗದೆ ತಾಂಡವವಾಡುತ್ತಿದ್ದ ಶುಷ್ಕ ವಾತಾವರಣ ಮುಂತಾದವೂ ಈ ದುರಂತಕ್ಕೆ ಕಾರಣವಾಗಿವೆ ಎಂದು ಅಂದಾಜಿ ಸಲಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿ ರುವ ಅಮೆರಿಕಕ್ಕೆ ಇಂಥ ಪರಿಸ್ಥಿತಿ ಬರಬಾರ ದಿತ್ತು ಎಂಬುದು ಬಹುತೇಕರ ಅಂಬೋಣ.
ನಿಸರ್ಗದ ಮುಂದೆ ಯಾರೂ, ಯಾವ ದೊಡ್ಡಸ್ತಿಕೆಯೂ, ಹಣೆ ಪಟ್ಟಿಯೂ ನಿಲ್ಲುವುದಿಲ್ಲ ಎಂಬುದು ಅಮೆರಿಕದಲ್ಲಿನ ಈ ದುರಂತದಿಂದ ದೃಢಪಟ್ಟಿದೆ. ಮನು ಕುಲದ ಆರೋಗ್ಯದಾಯಕ ಮತ್ತು ಕ್ಷೇಮ ಕರ ಬದುಕಿಗೆ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ್ದು ಬಹುಮುಖ್ಯ; ಈ ಸಮತೋಲನಕ್ಕೆ ಸಂಪದ್ಭರಿತವಾದ ಅರಣ್ಯ, ಬೆಟ್ಟ- ಗುಡ್ಡಗಳು ಬೇಕೇ ಬೇಕು. ಅಮೆರಿಕದಲ್ಲಿ ಈ ಎಲ್ಲವೂ ಇದ್ದರೂ, ಸಂರಕ್ಷಣೆ ಮತ್ತು ಮುಂಜಾಗ್ರತೆಯ ನಿಟ್ಟಿನಲ್ಲಿ ಅಲ್ಲಿನ ಆಡಳಿತವರ್ಗ ಎಡವಿ ತೇನೋ? ಅದೇನೇ ಇರಲಿ, ಪ್ರಕೃತಿಮಾತೆಯ ಈ ಮುನಿಸು ತಕ್ಷಣ ನಿಲ್ಲಲಿ, ಅಲ್ಲಿನ ವಾಡಿಕೆಯ ಜೀವನ ಚಟುವಟಿಕೆಗೆ ಮತ್ತೊಮ್ಮೆ ಚಾಲನೆ ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿ ಸೋಣ.
ಮಾತ್ರವಲ್ಲದೆ, ಇಂಥ ದುರ್ಘಟನೆ ವಿಶ್ವದ ಮತ್ತಿನ್ನಾವ ಕಡೆಯೂ ಸಂಭವಿಸದಂತಾಗಲು ಆಯಾ ಪ್ರದೇಶ ದವರಿಗೆ ಇದು ಪಾಠವಾಗಲಿ ಎಂದು ಆಶಿಸೋಣ.
(ಲೇಖಕರು ಕೃಷಿ ತಜ್ಞರು ಹಾಗೂ
ಸಹಾಯಕ ಮಹಾ ಪ್ರಬಂಧಕರು)
ಇದನ್ನೂ ಓದಿ: Basavaraja Shivappa Giraganvi Column: ತಾಂತ್ರಿಕ ಜ್ಞಾನದ ಕೊರತೆ