ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶ್ರೀಕೃಷ್ಣನನ್ನು ಕೆಣಕಿ, ಅವನ ರೌದ್ರರೂಪಕ್ಕೆ ಮಂಡಿಯೂರಿದ ಭೀಷ್ಮ ಪಿತಾಮಹರು

ಕೃಷ್ಣನ ನೊಸಲೊಡೆದು ನೆತ್ತರು ಚಿಮ್ಮಿತ್ತು. ಪಾರ್ಥಸಾರಥಿ ಕುದುರೆಗಳ ವಾಘೆಯನ್ನು ಕೈಬಿಟ್ಟ. ನೋವಿ ನಿಂದ ರಥದಿಂದ ಕೆಳಕ್ಕೆ ಜಿಗಿದ. ಪಾಂಡವ, ಕೌರವ ಸೇನೆ ದಿಗ್ಭ್ರಮೆಗೊಂಡಿತು. ಮುಂದೇನಾಗಬಹುದು? ಪ್ರಳಯವೇ, ಬೆಂಕಿಯ ಮಳೆಯೇ, ಚಂಡ ಮಾರುತವೇ, ಭೂಕಂಪನವೇ? ಅದೋ ಬಂತು, ಕೃಷ್ಣನ ಕೈಗೆ ಸುದರ್ಶನ ಚಕ್ರ. ಅಸುರಾರಿ, ಕೃಷ್ಣ ಮುರಾರಿ ಪ್ರಳಯ ಕಾಲದ ರುದ್ರನಾದ! ಕಣ್ಣುಗಳಲ್ಲಿ ಕಿಡಿಕಾರ ತೊಡಗಿದ.

ಶ್ರೀಕೃಷ್ಣನನ್ನು ಕೆಣಕಿ, ಅವನ ರೌದ್ರರೂಪಕ್ಕೆ ಮಂಡಿಯೂರಿದ ಭೀಷ್ಮ ಪಿತಾಮಹರು

ಒಂದೊಳ್ಳೆ ಮಾತು

rgururaj628@gmail.com

ಅಂದು ಪಿತಾಮಹ ಭೀಷ್ಮರು ಕಾದಾಡಿದ ಪರಿ ಹೇಗಿತ್ತೆಂದರೆ ಮಹಾಭಾರತ ಯುದ್ಧ ಹತ್ತೇ ದಿನಕ್ಕೆ ಮುಗಿದು ಹೋಗಬಹುದೇನೋ ಅನಿಸತೊಡಗಿತು ಉಭಯ ಬಣಗಳಿಗೆ! ಆದರೆ ಅರ್ಜುನ ಪ್ರಯೋ ಗಿಸಿದ ಬಾಣಗಳಿಂದ ತಪ್ಪಿಸಿಕೊಂಡು ಅವನೊಡನೆ ಕಾದಾಡುವುದು ಭೀಷ್ಮರಿಗೆ ಕಷ್ಟವೆನಿಸ ತೊಡಗಿತು.

ತಾನೇ ಮೊಮ್ಮಗನಿಗೆ ಹೇಳಿಕೊಟ್ಟಿದ್ದು! ಅಚ್ಚರಿಯ ವಿಷಯವೆಂದರೆ, ತಾನು ಯಾವುದೇ ಅಸ್ತ್ರ ವನ್ನು ಪ್ರಯೋಗಿಸಿದರೂ ಅದು ಅರ್ಜುನನನ್ನು ಘಾಸಿಗೊಳಿಸುತ್ತಿಲ್ಲ, ಭೀಷ್ಮರು ಕನಲಿದರು. ಅಜ್ಜ-ಮೊಮ್ಮಗನ ಯುದ್ಧವನ್ನು ಕಾಣುತ್ತ ನಸು ನಗುತ್ತಿದ್ದ ಕೃಷ್ಣ, ಪಾರ್ಥ ಸಾರಥಿಯಾಗಿ. ಭೀಷ್ಮರಿಗೆ ತಾನು ಸೋಲುತ್ತಿರುವುದರ ಗುಟ್ಟು ತಿಳಿಯಿತು.

ಓಹೋ, ಇದು ಇವನದೇ ಕೆಲಸ ಎಂದು ಕೃಷ್ಣನನ್ನೊಮ್ಮೆ ಕೆಣಕಬೇಕೆನಿಸಿತು. ಹೇಗೋ ರಣರಂಗ ದಲ್ಲಿ ತಾನು ಶಸ್ತ್ರವನ್ನು ಹಿಡಿಯುವುದಿಲ್ಲವೆಂದು ಕೃಷ್ಣನ ಕೈಯ್ಯಲ್ಲಿ ಸುದರ್ಶನ ಚಕ್ರವನ್ನು ಹಿಡಿಸುತ್ತೇನೆ ಎಂಬುದಾಗಿ ಪ್ರತಿಜ್ಞೆ ಈ ಹಿಂದೆಯೇ ಮಾಡಿಯಾಗಿತ್ತು. ನಾರಾಯಣನೇ ತನಗೆ ಪಾರಿತೋಷಕವಾಗಿ ಕೊಟ್ಟ ಅಸ್ತ್ರದಿಂದಲೇ ಅವನನ್ನು ಕಂಗೆಡಿಸುವುದು, ಅವನು ಕೊಟ್ಟದ್ದನ್ನು ಅವನಿಗೇ ಹಿಂದಿರುಗಿಸುವುದು.

ಇದನ್ನೂ ಓದಿ: Roopa Gururaj Column: ತಾವೇ ನೀಡಿದ ವರದಿಂದ ಹತರಾದ ಮಧು ಕೈಟಭ

ಹಿಂದೆ ಪರಶುರಾಮಾವತಾರದಲ್ಲಿ ನಾರಾಯಣ ರೂಪಿಯಾದ ಮಹಾವಿಷ್ಣು ತನ್ನ ಶಿಷ್ಯತ್ವಕ್ಕೆ ಮೆಚ್ಚಿ ನೀಡಿದ ಅಮಿತಾಸ್ತ್ರವನ್ನು ಅರ್ಜುನನ ರಥದಲ್ಲಿ ಸಾರಥಿಯಾಗಿ ಕುಳಿತ ಅವನಿಗೇ ಹಿಂದಿರುಗಿಸುವುದು, ಅಂದರೆ ದೈವವನ್ನೇ ಕೆಣಕುವ ಸಾಹಸ. ಭೀಷ್ಮರು ತಡ ಮಾಡಲಿಲ್ಲ. ಆ ಅಸದ ಅಧಿದೇವತೆಯಾದ ನಾರಾಯಣನನ್ನು ಸ್ಮರಿಸಿ ಶ್ರೀಕೃಷ್ಣ ರೂಪಿಯಾದ ನಾರಾಯಣನ ಹಣೆಗೆ ಬಾಣವನ್ನು ಬಿಟ್ಟೇ ಬಿಟ್ಟರು.

ಕೃಷ್ಣನ ನೊಸಲೊಡೆದು ನೆತ್ತರು ಚಿಮ್ಮಿತ್ತು. ಪಾರ್ಥಸಾರಥಿ ಕುದುರೆಗಳ ವಾಘೆಯನ್ನು ಕೈಬಿಟ್ಟ. ನೋವಿನಿಂದ ರಥದಿಂದ ಕೆಳಕ್ಕೆ ಜಿಗಿದ. ಪಾಂಡವ, ಕೌರವ ಸೇನೆ ದಿಗ್ಭ್ರಮೆಗೊಂಡಿತು. ಮುಂದೇ ನಾಗಬಹುದು? ಪ್ರಳಯವೇ, ಬೆಂಕಿಯ ಮಳೆಯೇ, ಚಂಡ ಮಾರುತವೇ, ಭೂಕಂಪನವೇ? ಅದೋ ಬಂತು, ಕೃಷ್ಣನ ಕೈಗೆ ಸುದರ್ಶನ ಚಕ್ರ. ಅಸುರಾರಿ, ಕೃಷ್ಣ ಮುರಾರಿ ಪ್ರಳಯ ಕಾಲದ ರುದ್ರನಾದ! ಕಣ್ಣುಗಳಲ್ಲಿ ಕಿಡಿಕಾರತೊಡಗಿದ.

ಮುಂದೇನಾಗುವುದೋ..? ಎಂಬ ಭೀತಿ ಎಲ್ಲರಿಗೆ. ಒಂದು ಕ್ಷಣ ಭೀಷ್ಮರಿಗೂ ತಾನು ಮಾಡಿದ ಕೆಲಸ ಸ್ವಲ್ಪ ಹುಡುಗಾಟದ್ದಾಯ್ತು ಎನಿಸದೆ ಇರಲಿಲ್ಲ. ಭೀಷ್ಮರು ರಥದಿಂದಿಳಿದರು, ಮುನಿದು ನಿಂತ ಚಕ್ರಪಾಣಿಗೆ ಮಂಡಿಯೂರಿ ‘ಶ್ರೀಮನೋಹರ ಸ್ವಾಮಿ ಪರಾಕು...’ ಎಂದು ಸ್ತುತಿಸತೊಡಗಿದರು. ಆತ ಶ್ರೀಮನೋಹರ. ಶ್ರೀ ಎಂದರೆ ಲಕ್ಷ್ಮೀ ಎಂದರ್ಥ. ಸಮುದ್ರ ಮಥನದಲ್ಲಿ ಉದ್ಭವಿಸಿದ ಲಕ್ಷ್ಮೀ.

ದೇವಾಧಿ ದೇವತೆಗಳು ಅವಳನ್ನು ಬಯಸಿದರೂ ತನ್ನ ಮನಸ್ಸನ್ನು ಗೆದ್ದ ಮಹಾವಿಷ್ಣುವಿಗೆ ಒಲಿದದ್ದು, ಇವನೇ ಅವನು. ಆದುದರಿಂದಲೇ ಶ್ರೀಮನೋಹರ ಸ್ವಾಮಿ ಪರಾಕು ಎಂಬ ಸ್ತುತಿ. ಸ್ತುತಿಪ್ರಿಯ, ‘ಸ್ತುತಿ ಪ್ರಿಯತೆ’ ಭಗವಂತನಲ್ಲಿರುವ ಗುಣ. ಅವನನ್ನು ಮಂತ್ರ, ನಾದ, ಗೀತ, ನೃತ್ಯ ಗಳಲ್ಲಿ ಮೈಮರೆತು ಸ್ತುತಿಸಿದರೆ ಅವನೊಲಿಯದಿದ್ದರೆ ಮತ್ತೆ ಕೇಳಿ!

ಈ ಗುಟ್ಟು ಭೀಷ್ಮ ಪಿತಾಮಹರಿಗೆ ಗೊತ್ತಿತ್ತು. ನೀನು ಭಗವಂತ ಸ್ವರೂಪ ಅನ್ನುವುದರಲ್ಲಿ ಸಂಶಯವೇ ಇಲ್ಲ, ಹಾಗಾಗಿ ನನ್ನ ಈ ಮಾನಸ ಪೂಜೆಯಲ್ಲಿ ನನ್ನ ಬದುಕಲ್ಲಿ ಮಾಡಿರಬಹುದಾದ ಅಪರಾಧಗಳನ್ನು ಮನ್ನಿಸೆಂದು ‘ಕರ ಚರಣ ಕೃತಂ ವಾ ಕಾಯಜಂ ಕರ್ಮಜಂ ವಾ ವಿಹಿತಂ ಅವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಎಂಬ ಆತ್ಮನಿವೇದನೆಯನ್ನು ನಿನ್ನಲ್ಲಿ ಮಾಡಿಕೊಂಡಿ ದ್ದೇನೆ.

ನಿನ್ನೆಲ್ಲಾ ರೂಪಗಳನ್ನು ನಾನು ಕಂಡವನು. ನಿನ್ನ ರೌದ್ರರೂಪವೊಂದನ್ನು ಕಾಣುವ ಆಸೆ ಯೊಂದಿತ್ತು ಅದಕ್ಕಾಗಿ ನಿನ್ನನ್ನು ಕೆಣಕಿದೆ. ತಾಯಿಯ ಹಣೆಗೆ ಮಗು ಒದ್ದರೆ ತಾಯಿ ಮಗುವನ್ನು ಅಪ್ಪಿಕೊಳ್ಳುತ್ತಾಳೆಯೇ ಹೊರತು, ಶಿಕ್ಷಿಸುವುದಕ್ಕೆಂತು ಸಾಧ್ಯ ಹೇಳು? ಇನ್ನು ಹೀಗೆ ಸಮಯವನ್ನು ಕಳೆಯುವುದರಲ್ಲಿ ಅರ್ಥವಿಲ್ಲ, ಶ್ರೀಕೃಷ್ಣಾ, ನನ್ನ ಕರ್ಮವನ್ನು ಮಾಡಲು ನನಗೆ ಅನುವು ಮಾಡಿಕೊಡು.

ಜಯಾಪಜಯಗಳು ನನ್ನದಲ್ಲ, ಅದು ನಿನ್ನ ನಿರ್ಧಾರ ಎಂಬ ಅರಿವು ನನಗಿದೆ. ಭೀಷ್ಮರ ಈ ಆತ್ಮನಿವೇದನೆಗೆ ಕೃಷ್ಣ ತಲೆದೂಗಿದ, ಭೀಷ್ಮರು ಮತ್ತೆ ರಥಾರೂಢರಾಗಿ ಧನುಸ್ಸನ್ನು ಎದೆಗೇರಿಸಿ ಕೊಂಡರು. ಸತ್ಸಂಗ ಸಂಗ್ರಹದಲ್ಲಿ ಸಿಕ್ಕ ಈ ಪ್ರಸಂಗ ಬದುಕಿನಲ್ಲಿ ಕೆಲವೊಮ್ಮೆ ನಮ್ಮಿಂದ ಅಪರಾಧಗಳಾದರೂ, ತಿದ್ದಿಕೊಳ್ಳುವುದಕ್ಕೆ ಅವಕಾಶವಿದೆ ಎಂಬುದನ್ನು ಸಾರುತ್ತದೆ.

ಪಶ್ಚಾತಾಪಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಎಂದು ನಾವು ತಿದ್ದಿಕೊಂಡು ಭಗವಂತನಿಗೆ ಶರಣಾಗುತ್ತಿವೋ, ಅಂದಿನಿಂದ ನಮ್ಮ ಮುಕ್ತಿಯೆಡಗಿನ ಹೆಜ್ಜೆಗಳು ಪ್ರಾರಂಭವಾಗುತ್ತದೆ. ಸರ್ವೇ ಜನಾ ಸುಖಿನೋ ಭವಂತು..!